ಭಾರತವು ವೈದಿಕ ಆರ್ಷ ಪರಂಪರೆಯ ಜ್ಞಾನದಿಂದ ಸಮೃದ್ಧವಾದ ದೇಶವಾಗಿದೆ. ಅನಾದಿಯಾದ ಈ ಆರ್ಷ ಜ್ಞಾನಪರಂಪರೆಯನ್ನು ಅನಂತ ಕಾಲವರೆಗೆ ಒಯ್ಯುವುದು ಭಾರತೀಯನ ಆದ್ಯಕರ್ತವ್ಯವಾಗಿದೆ. ಉರಿಯುತ್ತಿರುವ ದೀಪಕ್ಕೆ ಹಾತೆ ಮಿಡತೆಗಳ ಹಾವಳಿ, ಮಸಿಕಟ್ಟುವುದು, ಎಣ್ಣೆ ಇಂಗುವುದು ಕಡಿಮೆಯಾದಾಗ ದೀಪಜ್ವಾಲೆಯು ಮಂದವಾಗುವುದು. ಮತ್ತೆ ಎಣ್ಣೆ ಎರೆದು, ಮಸಿ ತೆಗೆದು ದೀಪವನ್ನು ರಕ್ಷಿಸಿದರೆ ದೀಪವು ಪುನಃ ಪ್ರಕಾಶಮಾನವಾಗಿ ಉರಿಯುವುದು. ಭಾರತೀಯ ಜ್ಞಾನಪರಂಪರೆಗೂ ಮಂದದೀಪದ ದುಃಸ್ಥಿತಿ ಬಂದೊದಗಿದಾಗ ಮತ್ತೆ ಈ ಜ್ಞಾನದೀವಿಗೆಗೆ ಎಣ್ಣೆ ಎರೆದು, ತಪ್ಪು ವ್ಯಾಖ್ಯೆಗಳ ಮಸಿ ಝಾಡಿಸಿ ದೀಪದ ರಕ್ಷಣೆಗಾಗಿ ಧರೆಗಿಳಿದ ಜೀವೋತ್ತಮ ವಾಯುತತ್ತ್ವವೇ ಶ್ರೀಮನ್ಮಧ್ವಾಚಾರ್ಯರು.
ಋಗಾದಿ ನಾಲ್ಕುವೇದಗಳು, ವೇದಾಂಗಗಳು, ರಾಮಾಯಣ-ಮಹಾಭಾರತ-ಪುರಾಣಗಳು, ಭಗವದ್ಗೀತೆ, ಬ್ರಹ್ಮಸೂತ್ರಗಳು, ತಂತ್ರಾಗಮಗಳು, ಧರ್ಮಶಾಸ್ತ್ರಗಳು ಹೀಗೆ ಅನೇಕ ಆರ್ಷಸಾಹಿತ್ಯಗಳು ಭಾತೀಯತೆಯ ಮೂಲ ಬೇರುಗಳು. ಇವುಗಳ ಕೇವಲ ಶಾಬ್ದಿಕವಾದ ಅಸ್ತಿತ್ವದಿಂದ ಹೇಳುವಂತಹ ಪ್ರಯೋಜನವಾಗಲೀ ಹೆಚ್ಚು ಗಾರಿಕೆಯಾಗಲೀ ಇರಲಾರದು. ಇವುಗಳ ಅರ್ಥದ ಎಚ್ಚರದಿಂದ ನಿಜವಾದ ಪ್ರಯೋಜನ ದೊರಕುವುದು. ಇವುಗಳಿಗೆ ಹಾನಿಯಾದಾಗ ಅರ್ಥವಾಗದೇ ಹೊದಾಗ ಈ ಎಲ್ಲಾ ಪ್ರಕಾರದ ಸಾಹಿತ್ಯಗಳಿಗೂ ಭಾಷ್ಯವನ್ನು ರಚಿಸಿ ವ್ಯಾಖಾನ ಮಾಡುವ ಮೂಲಕ ಮತ್ತೆ ಭಾರತೀಯ ವಿಚಾರ ಸಂಪ್ರದಾಯವನ್ನು ಹಳಿಗೆ ತಂದವರು ಶ್ರೀಮನ್ಮಧ್ವಾಚಾರ್ಯರು.
ಭಾರತೀಯ ಪರಂಪರೆಯಲ್ಲಿ ಪುರುಷಾರ್ಥಚತುಷ್ಟಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ಅದರಲ್ಲೂ ಮೋಕ್ಷ ಪರಮಪುರುಷಾರ್ಥ ಎಂದು ಕರೆಯಲ್ಪಟ್ಟಿದೆ. ಧರ್ಮ-ಅರ್ಥ-ಕಾಮಗಳು ಮೋಕ್ಷಕ್ಕೋಸ್ಕರನೇ ಇರುವವು. ಈ ಮೋಕ್ಷಕ್ಕೆ ಪರಮಾತ್ಮನಲ್ಲಿ ಭಕ್ತಿಯೊಂದಿಗೆ ನಿರಂತರ ಧರ್ಮಾಚರಣೆ ಮತ್ತು ಜ್ಞಾನವೇ ಕಾರಣ. ಧರ್ಮ ಮತ್ತು ಜ್ಞಾನ ಉಂಟಾಗಬೇಕಾದರೆ ವೇದ ಇತಿಹಾಸ ಪುರಾಣ ಮೊದಲಾದುವುಗಳ ಜ್ಞಾನ ಅತ್ಯಾವಶ್ಯಕ. ಆದ್ದರಿಂದಲೇ ಮೋಕ್ಷೋಪಿಯಾಗಿ ಲೋಕೋಪಕಾರಕ್ಕಾಗಿ ಮಧ್ವಾಚಾರ್ಯರು ಋಗ್ವೇದ ಮಹಾಭಾರತ ಮೊದಲಾದುವುಗಳಿಗೆ ಭಾಷ್ಯಬರೆದು ಜನತೆಗೆ ಅವುಗಳ ಸರಿಯಾದ ಜ್ಞಾನ ಒದಗುವಂತೆ ಮಾಡಿದರು.
ಭಾರತದಲ್ಲಿ ಅನೇಕ ಆಚಾರ್ಯರುಗಳು ಜನ್ಮ ತಳೆದಿದ್ದರೂ ಕರ್ನಾಟಕದ ಕನ್ನಡಿಗ ಏಕೈಕ ವೇದಾಂತ ಆಚಾರ್ಯರು ಭಾಷ್ಯಕಾರರು ಎಂಬ ಕೀರ್ತಿ ಕೇವಲ ಮಧ್ವಾಚಾರ್ಯರಿಗೆ ಮಾತ್ರ ಸಲ್ಲುತ್ತದೆ. ಕ್ರಿ.ಶ. ಹನ್ನೆರಡನೇ ಶತಮಾನದಲ್ಲಿ ದಕ್ಷಿಣಕರ್ನಾಟಕದ ಉಡುಪಿಯ ಬೆಳ್ಳೆ ಗ್ರಾಮದ ಪಾಜಕ ಎಂಬ ಪುಟ್ಟ ಹಳ್ಳಿಯಲ್ಲಿ ನಡಿಲ್ಲಾಯ ದಂಪತಿಗಳಿಗೆ ಮಗನಾಗಿ ಜನಿಸಿ ವಾಸುದೇವ ಎಂಬ ಬಾಲ್ಯನಾಮದಿಂದ ಅಂಕಿತರಾಗಿದ್ದರು.
ತುಂಬಾ ಪ್ರಾಚೀನ ಕಾಲದಿಂದಲೂ ಉಡುಪಿಯಲ್ಲಿ ದೂರ್ವಾಸರೇ ಮೊದಲಾದ ಅಪರೋಕ್ಷಜ್ಞಾನಿಗಳ ಸನ್ಯಾಸಿ ಪರಂಪರೆಯಿತ್ತು. ಆಕಾಲದಲ್ಲಿ ಈ ಪರಂಪರೆಯಲ್ಲಿ ಯತಿಗಳಾಗಿದ್ದವರು ಅಚ್ಯುತಪ್ರಜ್ಞಾಚಾರ್ಯರು(ಅಚ್ಯುತಪ್ರೇಕ್ಷಾಚಾರ್ಯರು ಎಂದೂ ಕರೆಯುತ್ತಾರೆ) ಅವರಿಂದ ಆರಂಭಿಕಗ್ರಂಥಗಳ ಪಾಠ ಕೇಳಿ, ಬಾಲ್ಯದಲ್ಲೇ ವಿರಕ್ತರಾಗಿ ಅವರಿಂದಲೇ ಸನ್ಯಾಸ ದೀಕ್ಷೆಯನ್ನು ಪಡೆದು ಪೂರ್ಣಪ್ರಜ್ಞ ಎಂಬ ಅಭಿಧಾನವನ್ನು ಪಡೆದು ಮುಂದೆ ವೇದಾಂತ ಸಿಂಹಾಸನದಲ್ಲಿ ಅಭಿಷಿಕ್ತರಾದಾಗ ಶ್ರೀ ಆನಂದತೀರ್ಥ ಎಂಬ ಅಭಿಧಾನವನ್ನೂ ಪಡೆದಿದ್ದಾರೆ. ಮುಂದೆ ವೈದಿಕಕಾವ್ಯನಾಮವಾಗಿ ’ಮಧ್ವ’ ಎಂಬ ಹೆಸರನ್ನೂ ತಾವೇ ಪಡೆದಿದ್ದಾರೆ.
ವೇದಕ್ಕೆ ಅರ್ಥ ಹೇಳುವಲ್ಲಿ ಪದಗಳಿಗೆ ಸಾಮಾನ್ಯವಾಗಿ ಲೋಕಪ್ರಸಿದ್ಧಿಯಿಂದ ತೋರಿ ಬರುವ ಅರ್ಥವನ್ನೇ ಎಲ್ಲರೂ ಹೇಳುತ್ತಾರೆ. ಆದರೆ ಈ ಅರ್ಥವನ್ನು ಗ್ರಹಿಸಿದ ವಿದೇಶಿಗರು ವೇದಗಳ ಬಗ್ಗೆ ತೀರಾ ಕೆಳಮಟ್ಟದ ಅರ್ಥವನ್ನು ಗ್ರಹಿಸಿ ಮೂದಲಿಸುವಂತಾಯಿತು. ವೇದಗಳ ಗಾಂಭೀರ್ಯಕ್ಕೆ ಎಳ್ಲಷ್ಟೂ ಬೆಲೆಯಿಲ್ಲದಂತಾಗಿ ವೇದಗಳನ್ನು ಜಾನಪದ ಸಾಹಿತ್ಯ ಎಂಬಂತೆ ಕಂಡರು. ಕೆಲವರು ಯಜ್ಞ-ಯಾಗಾದಿಗಳನ್ನು ಮಾಡಲಿಕ್ಕೆ ಬ್ರಾಹ್ಮಣರು ಮಾಡಿಕೊಂಡತಹಾ ವ್ಯೂಹಗಳು ಎಂದರು. ಆದರೆ ವೇದಗಳಿಗೆ ಅಧ್ಯಾತ್ಮಪರವಾದ ಅರ್ಥ ಇದೆ ಎಂದು ಹೇಳಿ ಅದನ್ನು ತೋರಿಸಿಕೊಟ್ಟವರು ಮಧ್ವಾಚಾರ್ಯರು. ಆದರೆ ಆಚಾರ್ಯರ ಯಾವುದೇ ಗ್ರಂಥಗಳನ್ನು ಅವಲೋಕಿಸಿದ ಮಂದಿ ಮಾತ್ರ ಬಹಳ ಕಡಿಮೆ. ಆಚಾರ್ಯರು ತೋರಿಸಿದ ಸಾಹಸವನ್ನು ಬೇರಾರೂ ಮಾಡಿಲ್ಲ. ಈ ನಿಟ್ಟಿನಲ್ಲಿ ಆಚಾರ್ಯರ ಕೊಡುಗೆ ಅತ್ಯಂತ ಅಪೂರ್ವವಾಗಿದೆ.
ಮಧ್ವಾಚಾರ್ಯರು ತಮ್ಮೆಲ್ಲಾ ವಿಚಾರಗಳಿಗೆ ಪ್ರಾಚೀನವಾದ ಶ್ರುತಿ ಸ್ಮೃತಿಗಳನ್ನೇ ಆಧಾರವಾಗಿ ಕೊಟ್ಟಿದ್ದರೂ ಮಧ್ವಾಚಾರ್ಯರಿಂದ ಒಂದು ಹೊಸಕ್ರಾಂತಿಯಂತಹಾ ಕಾರ್ಯವೇ ಆಗಿದೆ. ಅಧ್ಯಾತ್ಮ ಚಿಂತನೆಯಲ್ಲಿ ಹೊಸದೊಂದು ದಿಕ್ಕು ಸಿಕ್ಕಿತು. ವೈಷ್ಣವ ಸಂಪ್ರದಾಯಕ್ಕೆ ಹೊಸ ಬಲ ಬಂದಿತು. ಪುರಾಣಗಳನ್ನು ಸಮರ್ಥಿಸಿಕೊಳ್ಳಲು ಮಧ್ವಾಚಾರ್ಯರ ಕೊಡುಗೆಯಂತೂ ಅಪಾರ. ಪೂರ್ವಮೀಮಾಂಶಕರೇ ಮೊದಲಾದವರಿಂದ ವೇದಗಳ ಪ್ರಾಮಾಣ್ಯ ತಕ್ಕಮಟ್ಟಿಗೆ ಸಾಧಿತವಾಗಿದ್ದರೂ ಪುರಾಣದ ಪ್ರಾಮಾಣ್ಯದ ಗೋಜಿಗೆ ಯಾರೂ ಹೋಗಿರಲಿಲ್ಲ. ಪುರಾಣಗಳಲ್ಲಿ ಪರಮಾತ್ಮನೆನಿಸಿದ ನಾರಾಯಣನಿಗೂ ತನ್ನ ಅನೇಕ ಅವತಾರಗಲಲ್ಲಿ ಕೃಷ್ಣನಿಗೆ ಕಾಮ-ರಾಗಗಳು, ರಾಮನಿಗೆ ದುಃ ಖ-ಅಜ್ಞಾನಗಳು, ನರಸಿಂಹ ಪರಶುರಾಮ ರಿಗೆ ಕ್ರೋಧ, ಬುದ್ಧನಲ್ಲಿ ವೇದವಿರೋಧ ಹೀಗೆ ಅನೇಕ ದೋಷಗಳು ಭಗವಂತನಲ್ಲೂ ಇದೆ. ತಾನೇ ದೋಷಿಯಾಗಿದ್ದು, ಹೇಗೆ ದೇವರು ಎನಿಸಿಕೊಳ್ಲುತ್ತಾನೆ? ಭಕ್ತರನ್ನು ಈ ರಾಗ-ದ್ವೇಷ-ಮದ-ಮತ್ಸರರೂಪವಾದ ಬಂಧದಿಂದ ಹೇಗೆ ಬಿಡುಗಡೆಗೊಳಿಸುತ್ತಾನೆ ? ಎಂದು ದೇವರ ಮೇಲೆಯೇ ದೊಡ್ಡದಾದ ಆಕ್ಷೇಪ ಬರುತ್ತದೆ. ಇಂತಹಾ ಅನೇಕ ಸನ್ನಿವೇಶಗಳು ಎದುರಾದಾಗ ಅದಕ್ಕೆಲ್ಲದಕ್ಕೂ ಸಮರ್ಥವಾಗಿ ಆಧಾರ ಸಹಿತವಾಗಿ ಉತ್ತರವಿತ್ತವರು ಮಧ್ವಾಚಾರ್ಯರು ಮಾತ್ರ. ಒಬ್ಬಳು ಹೆಣ್ಣು ಏಕಕಾಕಲದಲ್ಲೇ ಅನೇಕ ಗಂಡಂದಿರನ್ನು ಪಡೆಯಲು ಹೇಗೆ ಸಾಧ್ಯ ಎಂದು ದ್ರೌಪದಿಯ ಚಿತ್ರಣದ ಮೇಲೆ ಆಕ್ಷೇಪ, ರಾಮನು ಸೀತೆಯನ್ನು ಪರಿತ್ಯಾಗ ಮಾಡಿದ ಸನ್ನಿವೇಶ, ವಾಲಿವಧೆಯ ಪ್ರಸಂಗ ಕೃಷ್ಣ ನಡೆಸಿದ ಗೋಪಿಕಾ ವಸ್ತ್ರಾಪಹಾರ ಹೀಗೆ ಅನೇಕ ಪ್ರಸಂಗಗಳಲ್ಲಿ ಆಚಾರ್ಯರ ಕೊಡುಗೆ ಅತ್ಯಂತ ಅವಿಸ್ಮರಣೀಯ. ಆಚಾರ್ಯರ ಗ್ರಂಥವಿಲ್ಲದೇ ಈ ಯಾವುದೇ ಆಕ್ಷೇಪಗಳನ್ನು ಸಮರ್ಥವಾಗಿ ಎದುರಿಸಲಾಗದು. ನಿಜವಾಗಿ ಹಿಂದೂಧರ್ಮದ ಮೇಲೆ ಬರುವ ಆಕ್ಷೇಪಗಳಿಗೆ ಸಮರ್ಥವಾದ ಉತ್ತರಗಳನ್ನು ನೀಡಿ ಶಾಶ್ವತವಾಗಿ ಹಿಂದೂಧರ್ಮದ ರಕ್ಷಣೆಯನ್ನು ಮಾಡಿದವರು ಆಚಾರ್ಯಮಧ್ವರು. ಆಚಾರ್ಯರ ಗ್ರಂಥಗಳ ಪುಷ್ಕಳ ಜ್ಞಾನ ಪಡೆದವನು ಹಿಂದೂ ಧರ್ಮದ ಮೇಲೆ ಬರುವ ಯಾವುದೇ ಆಕ್ಷೇಪಗಳನ್ನೂ ಸಮರ್ಥವಾಗಿ ಎದುರಿಸಿಯಾನು.
ಶ್ರೀಮಧ್ವಾಚಾರ್ಯರು ಸಾರಸ್ವತಲೋಕಕ್ಕೆ ನೀಡಿದ ಕೊಡುಗೆ ಅಪಾರ. ಸುಮಾರು 51ರಷ್ಟು (ಅಥವಾ 40) ಗ್ರಂಥಗಳು ಈಗಾಗಲೇ ದೊರಕಿವೆ. ವೇದಾಂತವೆನಿಸಿದ ಬ್ರಹ್ಮಸೂತ್ರಗಳ ಮೇಲಿನ ಭಾಷ್ಯ-ವ್ಯಾಖ್ಯಾನಗಳಿವೆ. ಪುರಾಣ-ಇತಿಹಾಸಗಳ ಕುರಿತು ತಾತ್ಪರ್ಯನಿರ್ಣಯಗಳಿವೆ. ಹತ್ತು ಉಪನಿಷತ್ತುಗಳಿಗೆ ಭಾಷ್ಯವಿದೆ. ಭಗವದ್ಗೀತೆಯ ಕುರಿತು ಎರಡೆರಡು ಉದ್ಗ್ರಂಥಗಳನ್ನು ಬರೆದಿದ್ದಾರೆ. ಸಾಮಾನ್ಯ ವೈದಿಕನ ನಿತ್ಯಾನುಷ್ಠಾನದ ಶಾಸ್ತ್ರೀಯ ಕಾರ್ಯಸೂಚಿಯ ಕೈಪಿಡಿಯಿದೆ. ದೇವಸ್ಥಾನದ ಸಮಗ್ರ ಆಗುಹೋಗುಗಳಬಗ್ಗೆಯೂ ಅತ್ಯದ್ಭುತವಾದ ಗ್ರಂಥವೂ ರಚಿಸಲ್ಪಟ್ಟಿದೆ. ಅನೇಕ ವಾದಗ್ರಂಥಗಳನ್ನು ನೀಡಿದ್ದಾರೆ ಜ್ಯೋತಿಷ್ಯಗ್ರಂಥವನ್ನೂ ಬರೆದಿದ್ದಾರೆ. ಕರ್ನಾಟಕದ ದಾಸಸಾಹಿತ್ಯಪರಂಪರೆಗೆ ಆಚಾರ್ಯಮಧ್ವರೇ ಮೂಲಸ್ಫೂರ್ತಿಯಾಗಿದ್ದಾರೆ. ಯಾಕೆಂದರೆ ಸ್ವಯಂ ತಾನೇ ಸಂಸ್ಕೃತದಲ್ಲಿ ತಾಳ ಲಯಬದ್ಧವಾದ ಅನೇಕ ಪದ್ಯಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವಂತೂ ತಾಳವಾದ್ಯಕ್ಕೆ ಪೂರಕವಾಗಿದ್ದು ಕುಣಿಯಲೂ ಅನುಕೂಲಕರವಾಗಿದೆ. ಸ್ವಯಂ ತನ್ನ ಶಿಷ್ಯರಾದ ಶ್ರೀ ನರಹರಿತೀರ್ಥರಿಂದ ಕನ್ನಡದ ಪದ್ಯಗಳನ್ನು ರಚಿಸುವಲ್ಲಿ ಪ್ರೇರಕರಾಗಿದ್ದರು. ತನ್ಮೂಲಕ ಕರ್ನಾಟಕದಲ್ಲಿ ದಾಸಸಾಹಿತ್ಯ ಹುಟ್ಟಿ ಬೆಳೆಯಲು ಮಧ್ವಾಚಾರ್ಯರೇ ಕಾರಣ ಕರ್ತರು.
ಅಧ್ಯಾತ್ಮದ ವಿಮರ್ಶೆ ಎಂದಾಗ ಜಗತ್ತು ಸತ್ಯವೋ ಸುಳ್ಳೋ, ಜೀವಾತ್ಮಪರಮಾಥ್ಮರ ಸ್ವರೂಪವೇನು? ಮೋಕ್ಷದ ಸ್ವರೂಪ, ಮೋಕ್ಷಕಾರಣ, ಕರ್ಮ ಸಿದ್ಧಾಂತ, ಜಗತ್ತಿನ ಸೃಷ್ಠಿ -ಸ್ಥಿತಿ-ಲಯಗಳು ಇತ್ಯಾದಿ ವಿಚಾರಗಳು ಶಾಸ್ತ್ರೀಯ ರೀತಿಯಲ್ಲಿ ವಿಮರ್ಶಿಸಲ್ಪಡುತ್ತವೆ. ಮಧ್ವಾಚಾರ್ಯರು ಪ್ರತಿಪಾದಿಸುವಂತೆ ಜಗತ್ತು ಸತ್ಯವಾಗಿದೆ. ಕಣ್ಣಿಗೆ ಕಂಡದ್ದನ್ನು ಸುಮ್ಮನೆ ಸುಳ್ಲು ಎನ್ನುವಂತಿಲ್ಲ.
ಜೀವಾತ್ಮರು ಅನಾದಿ ಮಾತ್ತು ಅನಂತ. ಪ್ರತಿಯೊಬ್ಬ ಜೀವನ ಸ್ವರೂಪವೂ ಪ್ರತಿಯೊಂದು ಜೀವನ ಸ್ವಭಾವಕ್ಕಿಂತಲೂ ವಿಲಕ್ಷಣ, ಒಬ್ಬರಂತೆ ಮತ್ತೊಬ್ಬನಲ್ಲ. ಜೀವರ ಇಂತಹಾ ಸ್ವಭಾವವನ್ನು ಯಾರುಗೂ ವ್ಯತ್ಯಾಸಗೊಳಿಸಲು ಸಾಧ್ಯವಿಲ್ಲ. ಜೀವಾತ್ಮರು ಹಿಂದೆಯೂ ಇಂದೂ ಮುಂದೂ ಎಂದೆಂದೂ ಪರಮಾತ್ಮನಿಗಿಂತ ಭಿನ್ನರೇ ಆಗಿರುತ್ತಾರೆ. ಪರಮಾತ್ಮಾ ಎಂದಿಗೂ ಒಬ್ಬನೇ ಆಗಿರುತ್ತಾನೆ ಅವನೇ ವಿಷ್ಭು, ಹರಿ, ನಾರಾಯಣ ಮುಂತಾದ ಎಲ್ಲಾ ಹೆಸರಿನಿಂದಲೂ ಕರೆಯಲ್ಪಡುತ್ತಾನೆ. ಜೀವಾತ್ಮನ ಸ್ವರೂಪ ಸುಖದ ಆವಿರ್ಭಾವವೇ ಮೋಕ್ಷ. ಜೀವಾತ್ಮನಿಗೆ ಅಂಟಿದ ಅಜ್ಞಾನದ ಪರದೆಯನ್ನು ತೆಗೆದು ಭಗವಂತ ಆತನಿಗೆ ಮೋಕ್ಷವನ್ನು ಕೊಡುತ್ತಾನೆ. ಸ್ವತಃ ಬರುವಂತದ್ದಲ್ಲ. ಜೀವನಿಗೆ ಬಮ್ಧಕವಾಗಿರುವುದು ಅವನು ಮಾಡಿದ ಕರ್ಮಗಳೇ. ತಾನು ಎಸಗಿದ ಪಾಪ ಅಥವಾ ಪುಣ್ಯ ಯಾವುದೇ ರೂಪವಾದ ಕರ್ಮಗಳಿಗೂ ಫಲವನ್ನು ಅನುಭವಿಸಿ ತೀರಿಸಲೇ ಬೇಕು ಇಂತಹಾ ಕರ್ಮ ಪ್ರಾರಬ್ಧ ಸಂಚಿತ ಮತ್ತು ಆಗಾನಿ ಎಂದು ಮೂರು ಬಗೆ. ಪ್ರತಿಯೊಬ್ಬನ ಸುಖದುಃಖಗಳಿಗೂ ಕಾರಣ ಈ ಕರ್ಮವೇ ಆಗಿದೆ. ಈ ಕರ್ಮದ ಬಂಧನವನ್ನು ಬಿಡಿಸಿ ಸ್ವರೂಪ ಸುಖದ ಆವಿರ್ಭಾವವಾಗುವುದೇ ಮೋಕ್ಷ. ಜಗತ್ತಿನ ಎಲ್ಲಾ ಆಗುಹೋಗುಗಳಿಗೂ ಹರಿಯೊಬ್ಬನೇ ಕಾರಣ. ಆದ್ದರಿಂದ ಸೃಷ್ಠಿಸ್ಥಿತಿ-ಲಯ-ನಿಯಮನ- ಜ್ಞಾನ-ಅಜ್ಞಾನ-ಬಂಧ-ಮೋಕ್ಷಗಳಿಗೆಲ್ಲಾ ಅವನೇ ಕಾರಣ. ಚತುರ್ಮುಖಬ್ರಹ್ಮ ದೇವರು ಸೃಷ್ಟಿ ಮಾಡುತ್ತಾರಾದರೂ ಅವರೊಳಗಿದ್ದು ಮಾಡಿಸುವವನು ಹರಿಯೇ ಆಗಿದ್ದಾನೆ. ಹೀಗೆ ಎಲ್ಲಾ ದೇವತೆಗಳಲ್ಲಿದ್ದು ಆಯಾ ಕಾರ್ಯಗಳನ್ನು ಒಬ್ಬನೇ ದೇವ ಮಾಡುತ್ತಾನೆ. ಆದ್ದರಿಂದ ಮಧ್ವಾಚಾರ್ಯರದ್ದು ಏಕದೇವ ವಾದವಾಗಿದೆ, ಬಹುದೇವತಾ ವಾದವಾಗಿದೆ. ಎಲ್ಲರಿಗೂ ದೇವನೊಬ್ಬನೇ ಆದರೆ ಅವಾಂತರ ದೇವತೆಗಳು ಅಥವಾ ಅಭಿಮಾನಿ ದೇವತೆಗಳು ಹಲವರು.
ಈ ಎಲ್ಲಾ ಪ್ರಮೇಯಗಳಿಗೂ ಆಧಾರವಾಗಿ ಮೂರು ಪ್ರಮಾಣಗಳನ್ನು ಆಚಾರ್ಯರು ನೀಡಿದ್ದಾರೆ- ಪ್ರತ್ಯಕ್ಷ, ಆಗಮ ಮತ್ತು ಶಬ್ದ. ಇಂದ್ರಿಯಕ್ಕೆ ಗೋಚರವಾಗುವ ವಿಷಯಗಳಲ್ಲಿ ಪ್ರತ್ಯಕ್ಷವೇ ಮುಖ್ಯಪ್ರಮಾಣ. ಅತೀಂದ್ರಿಯ ಅಂದರೆ ಕಣ್ಣಿಗೆ ಕಾಣಿಸದ ವಿಷಯಗಳಲ್ಲಿಆಗಮ ಎಂದರೆ ಶಾಸ್ತ್ರಗಳೇ ಆಧಾರ. ಅನುಮಾನ ಎಂದರೆ ಯುಕ್ತಿ. ಇದಕ್ಕೆ ಪ್ರತ್ಯಕ್ಷ ಮತ್ತು ಆಗಮಗಳ ಸಹಾಯ ಬೇಕಾಗುವುದು.
ಉಡುಪಿಯಲ್ಲಿ ಶ್ರೀ ಮಧ್ವಾಚಾರ್ಯರ ಕುರುಹುಗಳು- ಶ್ರೀಕೃಷ್ಣಮಠ ಮತ್ತು ಅನಂತೆಷ್ವರ ದೇವಳಗಳು ಮಾತ್ರವಲ್ಲದೇ ಉಡುಪಿಯ ಸುತ್ತುಮುತ್ತಲುಗಳಲ್ಲಿ ಹನ್ನೆರಡನೇ ಶತಮಾನದ ಆಚಾರ್ಯರ ಕುರುಹುಗಳು ಇಂದಿಗೂ ಇವೆ. ಅಷ್ಟಮಠದ ಪಟ್ಟದ ದೇವರು ಮಾತ್ರವಲ್ಲದೇ ಪಾಜಕದಲ್ಲಿ ಆಚಾರ್ಯರು ಹುಟ್ಟಿದ ಮನೆ, ಅಕ್ಷರಾಭ್ಯಾಸದ ಶಿಲೆ, ವಾಸುದೇವತೀರ್ಥ, ಒಣಗಿದ ಕೋಲನ್ನು ಚಿಗುರಿಸಿ ಮರ ಮಾಡಿದ ಸ್ಥಳ, ಹುಣಸೇ ಬೀಜವನ್ನು ಬಂಗಾರದ ನಾಣ್ಯವಾಗಿಸಿದ ಮರದ ಸ್ಥಳ, ಹಾಲು ಮೊಸರಿನ ಪಾತ್ರೆಗಳಿಗೆ ಮುಚ್ಚಿಟ್ಟಿದ್ದ ಚಪ್ಪಡಿ ಕಲ್ಲು, ಬಾಲ್ಯದಲ್ಲಿ ಮಣಿಮಂಥನೆಂಬ ಸರ್ಪಾಸುರನನ್ನು ಕೊಂದ ಸ್ಥಳ. ಕುಂಜಾರುಗಿರಿ ದೇವಸ್ಥಾನ, ಕಲ್ಲಿನ ಮೇಲೆ ಪಡಿಮೂಡಿದ ಆಚಾರ್ಯರ ಪಾದದ ಗುರುತು, ಕಾಪುವಿನ ಬಳಿ ಆಚಾರ್ಯರು ದಂಡದಿಂದ ನಿರ್ಮಿಸಿದ ನೀರಿನ ಸೆಲೆಯ ಸರೋವರ, ಕೃಷ್ಣನನ್ನು ಪಡೆದ ವಡಭಾಂಡೇಶ್ವರ ಸಮುದ್ರತೀರ, ಕ್ರೋಢ ಶಂಕರನಾರಾಯಣ ದೇವಸ್ಥಾನ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ, ಬಾಲ್ಯದಲ್ಲಿ ಭೂತಗ್ರಹದ ದರ್ಶನವಾದ ಕುಕ್ಕಿಕಟ್ಟೆ ಸಮೀಪದ ಸಂದೊಳಿಗೆ ಪಾಡಿ, ನಯಂಪಳ್ಳಿಯ ಮಡಿಮಲ್ಲಿಕಾರ್ಜುನ ದೇವಸ್ಥಾನ, ಚಿಟ್ಪಾಡಿಯ ಬೀಡಿನ ಬಲ್ಲಾಳರ ಮನೆಯ ಅರ್ಚ್ಯಾವಿಗ್ರಹ ಹೀಗೆ ಉಡುಪಿಯ ಒಳಗೇಹತ್ತು ಹಲವು ಸ್ಥಳಗಳು ಇಂದಿಗೂ ಆಚಾರ್ಯರ ಸ್ಮಾರಕಗಳಾಗಿವೆ. ಆಚಾರ್ಯಮಧ್ವರ ಮೂಲಗ್ರಂಥಗಳ ಸುಮಾರು ಎಂಟುನೂರು ವರ್ಷಗಳಷ್ಟು ಹಳೆಯ ತಾಡವಾಲೆಗಳು ಇಂದಿಗೂ ಶ್ರೀ ಪಲಿಮಾರುಮಠದಲ್ಲಿ ಸುರಕ್ಷಿತವಾಗಿವೆ. ಇವಲ್ಲದೇ ಉಡುಪಿಗಿಂತ ಹೊರಗೂ ಹಲವು ಸ್ಥಳಗಳು ಇಂದಿಗೂ ಅನುಸ್ಮರಣೆಯಲ್ಲಿದ್ದು ಶ್ರದ್ಧಾವಂತರು ಇಂದಿಗೂ ಈ ಸ್ಥಲಗಳಿಗೆ ವರ್ಷೊಕ್ಕೊಂದು ಬಾರಿಯಂತೆ ಯಾತ್ರೆ ಮಾಡುತ್ತಾರೆ. ಪ್ರಾಯಃ ಇನ್ನ್ಯಾವುದೇ ಆಚಾರ್ಯರಷ್ಟು ಪ್ರಾಚೀನ ವ್ಯಕ್ತಿಯ ಜೀವಿತದ ಕುರಿತಾದ ಇಷ್ಟೊಂದು ಕುರುಹುಗಳು ಸಿಗಲಾರವು.
ಆಚಾರ್ಯರ ಸಾಕ್ಷಾತ್ ಅಷ್ಟ ಮಠದ ಶಿಷ್ಯರು ಮತ್ತು ಅವರ ಮಠ.
ಶ್ರೀ ಶ್ರೀ ಹೃಷೀಕೇಶತೀರ್ಥರು- ಪಲಿಮಾರು ಮಠ
ಶ್ರೀಶ್ರೀ ನರಹರಿತೀರ್ಥರು- ಅದಮಾರು ಮಠ
ಶ್ರಿಶ್ರೀ ಜನಾರ್ದನತೀರ್ಥರು- ಕೃಷ್ಣಾಪುರಮಠ
ಶ್ರೀಶ್ರೀ ಉಪೇಂದ್ರತೀರ್ಥರು - ಪುತ್ತಿಗೆ ಮಠ
ಶ್ರೀಶ್ರೀ ವಾಮನತೀರ್ಥರು - ಶೀರೂರುಮಠ
ಶ್ರಿಶ್ರೀ ವಿಷ್ಣುತೀರ್ಥರು- ಸೋದೆ ಮಠ
ಶ್ರೀಶ್ರೀ ರಾಮತೀರ್ಥರು- ಕಾಣಿಯೂರುಮಠ
ಶ್ರೀಶ್ರೀ ಅಧೋಕ್ಷಜತೀರ್ಥರು- ಪೇಜಾವರ ಮಠ
ಯಾವ ಮಠದಲ್ಲಿ ಯಾವ ದೇವರು?
ಆಚಾರ್ಯರು ತಮ್ಮ ಎಂಟೂ ಶಿಷ್ಯರಿಗೆ ಪ್ರತ್ಯೇಕ ದೇವರ ಪೂಜಾ ವಿಗ್ರಹಗಳನ್ನು ನೀಡಿದ್ದಾರೆ
ಪಲಿಮಾರು ಮಠ- ರಾಮ ದೇವರು
ಅದಮಾರು ಮಠ- ಚತುರ್ಭುಜಕಾಲಿಂಗಮರ್ದನ೦.
ಕೃಷ್ಣಾಪುರ ಮಠ- ದ್ವಿಭುಜಕಾಳಿಂಗಮರ್ದನ
ಪುತ್ತಿಗೆ ಮಠ- ವಿಟ್ಠಲ
ಶೀರೂರುಮಠ- ವಿಟ್ಠಲ
ಸೋದೆಮಠ - ವರಾಹ
ಕಾಣಿಯೂರುಮಠ- ನರಸಿಂಹ
ಪೇಜಾವರಮಠ- ವಿಠಲ
ಇಷ್ಟೇ ಅಲ್ಲದೇ ಶ್ರೀಮಧ್ವಾಚಾರ್ಯರಿಗೆ ಅನೇಕ ಶಿಷ್ಯರು ಸನ್ಯಾಸಿಗಳು ಮತ್ತು ಗೃಹಸ್ಥರೂ ಇದ್ದರು. ಅವರಲ್ಲಿ ಉತ್ತರದೇಶದ ಊರ್ವರು ಯತಿಗಳು ಪದ್ಮನಾಭತೀರ್ಥರು ಪ್ರಮುಖರಾಗಿದ್ದರು. ಅವರಿಗೆ ರಾಮದೇವರ ಪ್ರತೀಕವನ್ನೂ ಆಚಾರ್ಯರು ಅನುಗ್ರಹಿಸಿದ್ದರು.
ಇನ್ನೂ ಜೀವಂತ ಮಧ್ವಾಚಾರ್ಯರು
ಮಧ್ವಾಚಾರ್ಯರು ಸಾಮಾನ್ಯಜನರಿಗೂ ಕಾಣುವಂತೆ ಲೌಕಿಕಕಾರ್ಯಗಳನ್ನು ನೆರವೇರಿಸುತ್ತಿದ್ದದ್ದು ಸುಮಾರು 12ನೇ ಶತಮಾನದಲ್ಲಿ ಅಂದರೆ ಇಂದಿಗೆ ಸುಮಾರು 800 ವರ್ಷಗಳ ಪೂರ್ವದಲ್ಲಿ. ಆ ಕಾಲದವರು ಯಾರೂ ಕೂಡಾ ಇಂದಿಗೆ ಬದುಕಿಲ್ಲ. ಹಾಗೆಯೇ ಮಧ್ವಾಚಾರ್ಯರೂ ಇಂದಿಗೆ ಇಲ್ಲ, ಅವರು ಕಾಲವಶರಾಗಿದ್ದಾರೆ ಎಂದು ಭಾವಿಸುವವರೇ ಅಧಿಕ. ಕೆಲವು ಪಠ್ಯಪುಸ್ತಕಗಳಲ್ಲೂ ಹಾಗೆಯೇ ಮುದ್ರಿತವಾಗಿದೆ. ಆದರೆ ವಾಸ್ತವದಲ್ಲಿ ಆಚಾರ್ಯರು ಕಾಲವಾಗಿರುವುದು ಉಲ್ಲೇಖವಿಲ್ಲ ಮಾತ್ರವಲ್ಲ, ಅವರು ಎಪ್ಪತೊಂಬತ್ತರ ಹರೆಯದ ಕೊನೆಯಲ್ಲಿ ಶ್ರೀವೇದವ್ಯಾಸ ದೇವರ ಸೇವೆಗಾಗಿ ಬದರಿಗೆ ತೆರಳಿದರು ರೂಪ್ಯಪೀಠಪುರಕ್ಷೇತ್ರಮಹಾತ್ಯಂ ಎಂಬ ಗ್ರಂಥದಲ್ಲಿ ಹೇಳಿದೆ.
ಇಂದಿಗೂ ಆಚಾರ್ಯಮಧ್ವರು ಮೂಲಬದರಿಯಲ್ಲಿ ಶ್ರೀವೇದವ್ಯಾಸದೇವರ ಸೇವೆಯಲ್ಲಿ ತತ್ಪರರಾಗಿದ್ದಾರೆ. ಜ್ಞಾನಭಕ್ತಿವೈರಾಗ್ಯಾದಿ ಸದ್ಗುಣಭರಿತರಿಗೆ ಆಚಾರ್ಯರು ಕಾಣಲಾರರು ಎಂದು ಹೇಳಲಾಗದು. ಉಡುಪಿಯ ಅನಂತಾಸನ ದೇವಾಲಯದ ಮುಂದಿನ ಎಡ ಭಾಗದಲ್ಲಿ "ಆಚಾರ್ಯ ಮಧ್ವರು ಅದೃಶ್ಯರಾಗಿ ಇರುವ ಸ್ಥಳ" ಸ್ಥಳ ಎಂಬ ಫಲಕವೊಂದಿದೆ. ಆದರೆ ಅಲ್ಲಿ ಆಚಾರ್ಯರು ಅದೃಶ್ಯರಾದರು ಎಂಬ ಅಭಿಪ್ರಾಯವಲ್ಲ. ಅದೃಶ್ಯೋ ರೂಪ್ಯ ಪೀಠಽಸ್ತಿ ದೃಶ್ಯಸ್ತು ಬದರೀ ತಟೇ ಎಂಬ ಸಂಪ್ರದಾಯ ಪದ್ಧತಿ ಎಂಬ ಗ್ರಂಥದ ಮಾತಿನಂತೆ ಅದೃಶ್ಯ ಸನ್ನಿಧಾನ ಉಡುಪಿಯ ಅನಂತಾಸನ ದೇವಳದಲ್ಲಿ ಇದೆ ಎಂದಷ್ಟೇ ಅರ್ಥ. ಈ ಸ್ಥಳದಲ್ಲಿ ಶ್ರೀಮಧ್ವಾಛಾರ್ಯರು ಐತರೇಯ ಉಪನಿಷತ್ತಿನ ಪ್ರವಚನವನ್ನು ಶಿಷ್ಯರಿಗೆ ಮಾಡುತ್ತಿರುವಾಗ ಪುಷ್ಪವೃಷ್ಟಿಯಾಗಿ ಆಚಾರ್ಯರು ಆ ಪುಷ್ಪದ ರಾಶಿಯಲ್ಲಿ ಮುಳುಗಿದ್ದರು. ಮತ್ತೆ ಪುಷ್ಪರಾಶಿಯನ್ನು ಸರಿಸಿ ನೋಡುವಾಗ ಆಚಾರ್ಯರ ಕಂಠದಲ್ಲಿ ದಿವುಅವಾದ ಪುಷ್ಪಮಾಲೆಯೊಂದು ಶೋಭಿಸುತ್ತಿತ್ತು ಎಂದು ಆಚಾರ್ಯ ಮಧ್ವರ ಸಮಕಾಲೀನ ಅವರಜೀವನಚರಿತ್ರೆಯ ಕೃತಿಗಳಾದ ಶ್ರೀಮಧ್ವವಿಜಯ ಮತ್ತು ಭಾವಪ್ರಕಾಶಿಕಾ ಎಂಬ ಗ್ರಂಥಗಳು ತಿಳಿಸಿವೆ. ಆದ್ದರಿಂದ ಆಚಾರ್ಯರು ಅದೃಶ್ಯರಾಗಿ ಹೋಗಿಲ್ಲ.
ಆಚಾರ್ಯರಿಗೆ ಇದ್ದ ಸಾಮಾಜಿಕ ಕಾಳಜಿ
ಆಚಾರ್ಯರ ನಡೆ ನುಡಿಗಳನ್ನು ಕಣ್ಣಾರೆ ಕಂಡು ಗ್ರಂಥರೂಪವನ್ನು ಕೊಟ್ಟ ಮಹನೀಯರು ಕಾಸರಗೋಡಿನ ಶ್ರೀ ನಾರಾಯಣ ಪಂಡಿತರು. ಆಚಾರ್ಯರು ಉಡುಪಿಯ ಪರಿಅಸರದಲ್ಲಿ ಮಾತ್ರವಲ್ಲದೇ ಇಡಿಯ ಭಾರತದಲ್ಲಿ ಸಂಚರಿಸಿದ್ದರ ಬಗ್ಗೆ ಸ್ಥೂಲವಾದ ಪರಿಚಯವನ್ನು ಮಾಡಿಸುತ್ತಾ ಬೇರೆ ಬೇರೆ ಕಡೆಗಳಲ್ಲಿ ನಡೆಸಿದ ಮಹತ್ಕಾರ್ಯಗಳನ್ನು ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಅನೇಕ ಕಡೆ ಆಚಾರ್ಯರ ಸಾಮಾಜಿಕ ಕಾಳಜಿಯು ಅಭಿವ್ಯಕ್ತವಾಗಿದೆ. ಅವುಗಳಲ್ಲಿ ಇವತ್ತಿನ ಕಳಸಾ ಎಂಬ ಊರುಗೆ ಆಚಾರ್ಯರು ಬಂದ ಬಗ್ಗೆ ಉಲ್ಲೇಖವಿದೆ. ಅಲ್ಲಿ ಬಂದಾಗ ಜನರೆಲ್ಲಾ ಸೇರಿ ಅತ್ಯಂತ ಶ್ರಮದಿಂದ ದೊಡ್ದದಾದ ಬಂಡೆಕಲ್ಲನ್ನು ದೂರ ಸರಿಸುವ ಕೆಲಸದಲ್ಲಿ ವ್ಯರ್ಥಶ್ರಮವನ್ನು ಮಾಡುತ್ತಿದ್ದರು. ಅವರನ್ನು ಕಂಡು ಮರುಕಗೊಂಡ ಆಚಾರ್ಯರು ವಿಚಾರಿಸಲಾಗಿ ತಿಳಿಯಿತು. ಅಲ್ಲೇ ಪಕ್ಕದಲ್ಲಿ ನದಿಯೊಂದು (ತುಂಗಾ ಅಥವಾ ಭದ್ರಾ) ಹರಿಯುತ್ತಿದೆ. ಅದರ ಪ್ರವಾಹ ಗದ್ದೆ ತೋಟಗಳಿಗೆ ನುಗ್ಗಿ ಬೆಳೆಹಾನಿ ಆಗುತ್ತಿದೆ. ಅದ್ರ ಪ್ರವಾಹವನ್ನು ತಡೆದು ತಿರುಗಿಸುವುದಕ್ಕಾಗಿ ಈ ಬಂಡೆಯನ್ನು ಅತ್ತ ಸರಿಸುತ್ತಿದ್ದಾರೆ ಎಂದು. ಆಗ ಆ ಜನರ ಕ್ಷ್ಟ ಪರಿಹಾರಕ್ಕಾಗಿ ಆಚಾರ್ಯರು ಒಂದೇ ಕೈಯಿಂದ ಆ ಕಲ್ಲನ್ನು ನಿರ್ದಿಷ್ಟ ಸ್ಥಳಕ್ಕೆ ತಂದಿಟ್ಟು ಸಾಹಸವನ್ನು ತೋರಿದ್ದಾರೆ ಎಂದು ಮಧ್ವವಿಜಯ ಗ್ರಂಥ ಉಲ್ಲೇಖಿಸಿದೆ.
ಇದು ಕೇವಲ ಉಳ್ಳೇಖ ಮಾತ್ರವಲ್ಲದೇ ಇಂದಿಗೂ ನದಿಯ ಮಧ್ಯದಲ್ಲಿ ಆ ದೊಡ್ದ ಬಂಡೆ ಕಲ್ಲಿದ್ದು, ಅದರ ಮೇಲೆ ಪೂರ್ವಕಾಲದಲ್ಲಿ ಸಂಸ್ಕೃತದಲ್ಲಿ ಬರೆದಿಟ್ಟ ಶಾಸನವನ್ನು ಇಂದೂ ನಾವು ಕಾಣ ಬಹುದು- "ಮಧ್ವಾಚಾರ್ಯೈಃ ಏಕೇನೈವ ಹಸ್ತೇನ ಆನೀಯ ಸ್ಥಾಪಿತಾ ಶಿಲಾ" ಎಂದು.
ಹೀಗೆ ಸಮಗ್ರ ವೈದಿಕ ಸಾಹಿತ್ಯವನ್ನು ಸರಿಯಾಗಿ ಬಲ್ಲ ಹಿರಿಯ ಜ್ಞಾನಿ, ತಪಸ್ವೀ, ಭಾರತದ ವಾಙ್ಮಯವನ್ನು ದಾರಿ ತಪ್ಪದಂತೆ ರಕ್ಷಿಸಿದ ಮಹಾ ಲೋಕೋಪಕಾರಿ, ನಿಜಾರ್ಥದ ವಿಶ್ವಗುರು, ಹಿರಿದೈವ ವಾಯುವೇ ಧರೆಗಿಳಿದ ರೂಪ ಆಚಾರ್ಯ ಮಧ್ವರು ಸಾಮಾನ್ಯ ಲೋಕಕ್ಕೆ ಕೊನೆಯ ದರ್ಶನವನ್ನು ಇತ್ತ ದಿನ ಇಂದು ಮಕರ ಮಾಸದ ಮಾಘಮಾಸದ ಶುದ್ಧ ನವಮಿ- ಮಧ್ವನವಮೀ.
- ಡಾ. ಷಣ್ಮುಖ ಹೆಬ್ಬಾರ್,
ಪ್ರಾಧ್ಯಾಪಕರು,
ಎಸ್.ಎಮ್.ಎಸ್.ಪಿ. ಸಂಸ್ಕೃತ ಕಾಲೇಜು, ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ