ಮಹಾಭಾರತದಲ್ಲಿ ಬರುವ ವಿಶಿಷ್ಟ ಪಾತ್ರಗಳಲ್ಲಿ ಮದ್ರ ದೇಶದ ಶಲ್ಯನ ಪಾತ್ರವೂ ಒಂದು.
ಮಹಾಭಾರತವನ್ನು ವರ್ತಮಾನದ ಕಣ್ಣಿನಿಂದ ಗ್ರಹಿಸಿ, ಕಲ್ಪಿಸಿ, ಪರ್ವ ಎನ್ನುವ ಶೀರ್ಷಿಕೆಯಲ್ಲಿ, ರೋಚಕ ಕಾದಂಬರಿಯನ್ನಾಗಿಸಿದ ಎಸ್ ಎಲ್ ಭೈರಪ್ಪನವರು, ತಮ್ಮ ಪರ್ವ ಕಾದಂಬರಿಯಲ್ಲಿ ಶಲ್ಯನಿಗೆ ಮೊದಲ ಅಧ್ಯಾಯದಲ್ಲೇ ಆದ್ಯತೆ ಕೊಟ್ಟು, ಸ್ವಗತದ ಮಾತಿನ ಶೈಲಿಯಲ್ಲಿ ಸ್ವ ವಿವರಣೆಯ ಆಧಾರ್ ಕಾರ್ಡ್‌ನೊಂದಿಗೆ ಕಾದಂಬರಿ ಪ್ರಾರಂಭಿಸಿದ್ದಾರೆ.
ಕುಮಾರವ್ಯಾಸನ ಮಹಾಭಾರತದ ಕರ್ಣಾಟ ಭಾರತ ಕಥಾಮಂಜರಿಯಲ್ಲಿ ಶಲ್ಯ ಮದ್ರ ದೇಶದ ಅಧಿಪತಿ. ಮಾದ್ರಿಯ ಸಹೋದರ (ಮಾದ್ರಿ ನಕುಲ ಮತ್ತು ಸಹದೇವರ ತಾಯಿ). ಗದೆಯಲ್ಲಿ ನಿಪುಣ ಮತ್ತು ಅಸಾಧಾರಣ ಯೋಧ.
ಮಹಾಭಾರತದಲ್ಲಿ, ಶಲ್ಯನನ್ನು ದುರ್ಯೋಧನನು ಕೌರವ ಪಕ್ಷ ಪರವಾಗಿ ಯುದ್ಧ ಮಾಡಲು ಆಮಿಷ ಒಡ್ಡಿ, ಪಕ್ಷಾಂತರ ಮಾಡಿಸುವ ಒಂದು ರಾಜಕೀಯ ಪ್ರಸಂಗ ಇದೆ. ತನ್ನ ತಂಗಿಯ ಮಕ್ಕಳೇ ಪಾಂಡವರಾಗಿದ್ದರೂ, ರಾಜಕೀಯ ಆಮಿಷಕ್ಕೆ ಒಳಗಾದ ಶಲ್ಯರು ಕೌರವನ ಪಕ್ಷಕ್ಕೆ ಹೋಗಿ, ಕುಟುಂಬದ ಅಳಿಯರ ವಿರುದ್ದ ನಿಲ್ಲುವುದು ಒಂದು ವಿಶೇಷ. ಶಲ್ಯರ ಈ ನೆಡೆ, ಆಸ್ತಿ, ಅಧಿಕಾರ, ಆಮಿಷಗಳು ಬಂದಾಗ ಎಲ್ಲಾ ಕಾಲದಲ್ಲೂ ಕುಟುಂಬ ವಿಚಾರಕ್ಕಿಂತ ರಾಜಕೀಯ ವಿಚಾರವೇ ಹೆಚ್ಚು ಬಲಯುತವಾದುದು ಎಂದು ಕಾಣಿಸುವಂತಿದೆ.
ಕುರುಕ್ಷೇತ್ರದಲ್ಲಿ ದುರ್ಯೋಧನನು ಕರ್ಣನ ಸಾರಥಿಯಾಗಿ ಕಾರ್ಯ ನಿರ್ವಹಿಸಲು ಶಲ್ಯನನ್ನು ಒಪ್ಪಿಸುವ ಪ್ರಯತ್ನದ ಇನ್ನೊಂದು ಸನ್ನಿವೇಶ ಬರುತ್ತೆ. ಒಂದು ದಿನದ ಮಟ್ಟಿಗೆ ಕರ್ಣನ ಸಾರಥಿಯಾಗಲು ಶಲ್ಯ ಒಪ್ಪುತ್ತಾನೆ. ಯಾಕೆ ಒಪ್ಪುತ್ತಾನೆ ಎನ್ನುವುದು ಮತ್ತು ಒಪ್ಪುವ ಮುನ್ನ ಶಲ್ಯ ವಿಧಿಸುವ ಷರತ್ತುಗಳೇನು? ಎನ್ನುವುದು ಕುತೂಹಲ!!!.
ಕೌರವ ಸೇನೆಯ ಸೇನಾಧಿಪತಿಯಾಗಬೇಕಾದಷ್ಟು ಸಾಮರ್ಥ್ಯ, ಯೋಗ್ಯತೆ ಹೊಂದಿದ್ದ ಶಲ್ಯನನ್ನು, ಅದೇಕೆ ಕರ್ಣ ತನ್ನ ಸಾರಥಿಯಾಗಿ ಮಾಡುವಂತೆ ಕೌರವನಿಗೆ ಕೇಳಿದ? ಅದೂ ಒಂದು ಕುತೂಹಲ!!!.
ಕೇವಲ ಒಂದು ಬಾಣ, ಕರ್ಣ-ಶಲ್ಯ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿದ್ದು ಹೇಗೆ? ಭಿನ್ನಾಭಿಪ್ರಾಯದ ನಡುವೆಯೂ ರಥದ ಡ್ರೈವರ್ ಆಗಿ ಶಲ್ಯ ಮುಂದುವರೆದಿದ್ದು ಹೇಗೆ?
ಕರ್ಣನ ಸಾರಥಿಯಾದ ಶಲ್ಯನು, ಇಡೀ ದಿನ ಕರ್ಣನಿಗೆ ಸಾರಥಿಯಾಗಿ ಮುಂದುವರೆದನೆ?
ಮುಂದೇನಾಯಿತು? ಅದು ಮತ್ತೊಂದು ರೋಚಕ ಕುತೂಹಲ!!!.
ಬನ್ನಿ, ಆ ಎಲ್ಲ ಕುತೂಹಲಗಳನ್ನು ತಣಿಸುವ ಮದ್ರ ದೇಶದ ಶಲ್ಯರ ಒಂದು ಬಯೋಪಿಕ್ ತಾಳಮದ್ದಳೆಯಲ್ಲಿದೆ, ನೋಡ್ಕೊಂಬರೋಣ.
ಯಾವುದೇ ಪೂರ್ವ ತಯಾರಿಯ ಸ್ಕ್ರಿಪ್ಟ್ ಇಲ್ಲದೆ, ವೇದಿಕೆಯಲ್ಲೇ ಸೃಷ್ಟಿಯಾಗುವ ಸಂಭಾಷಣೆಯಲ್ಲಿ, ತಾಳ ಮದ್ದಳೆಯ ಅರ್ಥಗಾರಿಕೆಯ ಮಾತುಗಳು ಜನಿಸುತ್ತವೆ.
ಹಾಗೆ, ಕ್ಲೈಮ್ಯಾಕ್ಸ್‌ನಲ್ಲಿ ಸೃಷ್ಟಿಯಾಗುವ ರೋಚಕ ಸನ್ನಿವೇಶ ಮತ್ತದರ ಆಶು ಸಂಭಾಷಣೆಗಳು... ನೋಡುಗರ ಅರಿವಿಗೇ ಬಾರದಂತೆ ನೋಡುಗರ ಕೈಯಲ್ಲಿ ಚಪ್ಪಾಳೆ ಹೊಡೆಸುತ್ತವೆ!!!
ಶಲ್ಯರ ಬಯೋಪಿಕ್ ತಾಳಮದ್ದಳೆ ನೆಡೆಯುವುದು ನಾಡಿದ್ದು ಶಿವರಾತ್ರಿಯ ದಿನ (26.02.2025) ಸಂಜೆ 7.30 ರಿಂದ 10.30 ವರೆಗೆ.
ಸ್ಥಳ: ಕೊಪ್ಪ ತಾಲ್ಲೂಕು, ನಾಗಲಾಪುರ ಸಮೀಪ, ಅದ್ದಡ ಗ್ರಾಮದ, ಚನ್ನಕಲ್ಲು ಶ್ರೀ ಚನ್ನಕೇಶ್ವರ ದೇವಸ್ಥಾನದಲ್ಲಿ.
**
ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ.
ಅಂತ ಕುಮಾರವ್ಯಾಸ ಕವಿ ಮಹಾಭಾರತದ ಶ್ರೇಷ್ಠತೆಯನ್ನು ಹೇಳುತ್ತಾನೆ.
ಅಂದರೆ, ಈ ಮಹಾಭಾರತದ ಒಂದು ಅಕ್ಷರವನ್ನು ಪ್ರೀತಿಯಿಂದ ಕೇಳಿದವರಿಗೆ ವೇದ ಪಾರಾಯಣದ ಫಲ, ಗಂಗಾದಿ ತೀರ್ಥಗಳಲ್ಲಿ ಸ್ನಾನ ಮಾಡಿದ ಫಲ, ದೊರೆಯುತ್ತದೆ ಎಂದು.
ಶಿವರಾತ್ರಿಯ ದಿನದಂದು ಮಹಾಕುಂಭದ ಗಂಗಾನದಿಯ ಸ್ನಾನ ಫಲ ಈ ಭಾರತ ಕತೆಯ ಅಕ್ಷರ ಕೇಳಿದಾಗ ಸಿಗುತ್ತೆ ಅಂದ್ರೆ... ಮತ್ತೇನು ಯೋಚನೆ ಮಾಡುವುದು ಬೇಡ, ನಾಡಿದ್ದು ಶಿವರಾತ್ರಿಯ ದಿನ ಸೀದ ನಾಗಲಾಪುರ ಚನ್ನಕೇಶ್ವರ ದೇವಸ್ಥಾನಕ್ಕೆ ಬನ್ನಿ. ತುಂಗಾ ನದಿಯ ಸಮೀಪದಲ್ಲಿನ ಚನ್ನಕೇಶವ ದೇವಾಲಯದ ಕಥಾಗಂಗೆಯಲ್ಲಿ ಮುಳುಗೇಳುವ!!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ