ರೆಪೊ ದರ ಇಳಿಕೆ: ಜನರ ಕಿಸೆ ತುಂಬಿಸುವ ಕಸರತ್ತು

Upayuktha
0


ಆರ್‌
ಬಿಐ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಪರಾಮರ್ಶೆ ಸಮಿತಿ ಶುಕ್ರವಾರ ಮುಕ್ತಾಯಗೊಂಡ ಸಭೆಯಲ್ಲಿರೆಪೊ ದರದಲ್ಲಿ 25 ಮೂಲಾಂಶ ಅಂದರೆ ಶೇ.0.25 ರಷ್ಟು ಇಳಿಕೆ ಮಾಡಲು ನಿರ್ಧರಿಸಿದೆ.  ಈ ಮೂಲಕ ಪ್ರಸ್ತುತ ಶೇ. 6.5 ರಿಂದ ಶೇ.6.25 ಕ್ಕೆ ಇಳಿಕೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ ನಡೆ.


ರೆಪೊ ದರ ಎಂದರೇನು?

ರೆಪೊ ದರವು ಬ್ಯಾಂಕುಗಳು ಯಾವುದೇ ಹಣದ ಕೊರತೆಯ ಸಂದರ್ಭದಲ್ಲಿ ಆರ್ ಬಿ ಐ ನಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವಾಗಿದೆ. ರೆಪೋ ದರವು ದೇಶದ ಹಣಕಾಸು ನೀತಿಯ ಪ್ರಮುಖ ಅಂಶವಾಗಿದೆ. ಮಾರುಕಟ್ಟೆಯ ಬಡ್ಡಿ ದರವು ನೇರವಾಗಿ ರೆಪೋ ದರವನ್ನು ಅವಲಂಬಿಸುತ್ತದೆ. ರೆಪೊ ದರ ಇಳಿಕೆಯಾದಾಗ, ವಾಣಿಜ್ಯ ಬ್ಯಾಂಕ್‌ಗಳು ಕೇಂದ್ರೀಯ ಬ್ಯಾಂಕ್‌ನಿಂದ ಪಡೆಯುವ ಸಾಲವು ಅಗ್ಗವಾಗುತ್ತದೆ. 


ಪ್ರತಿಯಾಗಿ, ವಾಣಿಜ್ಯ ಬ್ಯಾಂಕುಗಳು ತಮ್ಮ ಸಾಲದ ದರಗಳನ್ನು ಕಡಿಮೆ ಮಾಡುತ್ತವೆ. ಹೀಗಾಗಿ, ಸಾಮಾನ್ಯ ಜನರು ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲವನ್ನು ಪಡೆದಾಗ, ಪರಿಣಾಮಕಾರಿ ಬಡ್ಡಿ ದರವು ಕಡಿಮೆಗುತ್ತದೆ ಮತ್ತು ಅವರು ಪಡೆದ ಸಾಲಕ್ಕೆ ಕಡಿಮೆ ಬಡ್ಡಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.


ಕೇಂದ್ರ ಬ್ಯಾಂಕ್ ರೆಪೊ ದರವನ್ನು ತಗ್ಗಿಸಿ ಬ್ಯಾಂಕುಗಳು ಸಾಲತೆ ಗೆದುಕೊಳ್ಳಲು ಪ್ರೋತ್ಸಾಹಿಸುತ್ತದೆ. ಪರಿಣಾಮವಾಗಿ ದ್ರವ್ಯತೆಯ ಪ್ರಮಾಣ ಹೆಚ್ಚಿ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಇಂತಹ ಹೆಜ್ಜೆಯು ಆರ್ಥಿಕ ಬೆಳವಣಿಗೆಯ ಮೇಲೆ ಮಹತ್ತರ ಪಾತ್ರ ವಹಿಸುತ್ತದೆ.


2020 ರಲ್ಲಿ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ರೆಪೋ ದರವನ್ನು ಶೇ.0.40ರಷ್ಟು ಇಳಿಸಿತ್ತು. ನಂತರ ಸುಮಾರು ಐದು ವರ್ಷದಿಂದ ಬಡ್ಡಿದರವನ್ನು ಇಳಿಸಿಲ್ಲ. ಕಳೆದ ಸುಮಾರು ಎರಡು ವರ್ಷಗಳಿಂದ ರೆಪೋ ದರ ಸ್ಥಿರವಾಗಿ ಶೇ.6.5ರಲ್ಲೇ ಇತ್ತು. 


ಈಗ ನಮ್ಮ ಆರ್ಥಿಕತೆಯಲ್ಲಿ ನಿಧಾನಗತಿಯ ಲಕ್ಷಣಗಳು ಕಂಡುಬರುತ್ತಿದೆ. ಈ ಹಂತದಲ್ಲಿ ಕೇಂದ್ರೀಯ ಬ್ಯಾಂಕು ಹೆಚ್ಚು ಸ್ನೇಹಪರ ಹಣಕಾಸು ನೀತಿಯನ್ನು ಜಾರಿಗೊಳಿಸುವ ಮೂಲಕ ಆರ್ಥಿಕತೆಯ ವೇಗವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಹೀಗಾಗಿ ರೆಪೋ ದರ ಕಡಿತದ ನಿರ್ಧಾರ ಬಂದಿದೆ. 


ಆರ್ಥಿಕ ಬೆಳವಣಿಗೆಗೆ ಪ್ರಚೋದನೆ.

ಸಾಂಕ್ರಾಮಿಕ ರೋಗದ ನಂತರದ ಹೆಚ್ಚಿದ ಬಡ್ಡಿದರಗಳು, ದುರ್ಬಲ ಬಳಕೆ ಮತ್ತು ನಿಧಾನಗತಿಯ ಬಂಡವಾಳ ವೆಚ್ಚಗಳಿಂದ  ಆರ್ಥಿಕತೆಯು ನಿಧಾನಗತಿಯ ಬೆಳವಣಿಗೆಯ ದರವನ್ನು ದಾಖಲಿಸಿದೆ. ಜನವರಿ 17 ರಂದು ಬಿಡುಗಡೆಯಾದ ಜಾಗತಿಕ ಆರ್ಥಿಕ ಮುನ್ನೋಟ ವರದಿ (WEO)ಯ ಪ್ರಕಾರ "ವಿಭಿನ್ನ ಮತ್ತು ಅನಿಶ್ಚಿತ" ಬೆಳವಣಿಗೆಯ ಜಾಗತಿಕ ಹಿನ್ನೆಲೆ ಮತ್ತು ಭಾರತದ ಸ್ಥಿರವಾದ ಕಾರ್ಯಕ್ಷಮತೆಯನ್ನು ಗಮನಿಸಿದರೆ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದೆ. 


ಮಾರುಕಟ್ಟೆಯಲ್ಲಿ ಬೇಡಿಕೆಯ ಮಟ್ಟವನ್ನು ಹೆಚ್ಚಿಸುವ ಆಶಯದೊಂದಿಗೆ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಯಲ್ಲಿ ಬಂಪರ್ ರಿಯಾತಿ ಘೋಷಣೆ ಮಾಡಿದೆ ಮತ್ತು ಇದೀಗ ರೆಪೋ ದರದಲ್ಲಿ ಇಳಿಕೆ ಆರ್ಥಿಕ ವಲಯದಲ್ಲಿ ಧನಾತ್ಮಕ ಸಂಚಲವನ್ನು ಮೂಡಿಸಲಿದೆ.


ಮಧ್ಯಮ ವರ್ಗಕ್ಕೆ ಬಂಪರ್

2025-26ನೇ ಸಾಲಿನ ಬಜೆಟಿನಲ್ಲಿ ರೂ.12 ಲಕ್ಷದವರೆಗೆ ಆದಾಯ ಇರುವವರಿಗೆ ಶೂನ್ಯ ತೆರಿಗೆಯನ್ನು ಘೋಷಿಸಿದ್ದರು. ಇದೀಗ ರೆಪೋ ದರವನ್ನು ಇಳಿಕೆ ಮಾಡುವ ಮೂಲಕ ಕಡಿಮೆ ಬಡ್ಡಿಗೆ ಬ್ಯಾಂಕ್ ಸಾಲವೂ ದೊರೆಯಲಿದೆ.


ಸಮೀಕ್ಷೆಯೊಂದರ ಪ್ರಕಾರ ದೇಶದ ಜನಸಂಖ್ಯೆಯಲ್ಲಿ ಶೇ.31ರಷ್ಟು ಮಂದಿ ಮಧ್ಯಮ ವರ್ಗದವರಾಗಿದ್ದಾರೆ. 2031 ರ ವೇಳೆಗೆ ಇವರ ಸಂಖ್ಯೆ ಶೇ.38ಕ್ಕೆ ಮತ್ತು 2047 ರ ವೇಳೆಗೆ ಶೇ.60ಕ್ಕೆ ಏರಲಿದೆ. ಬೆಳೆಯುತ್ತಿರುವ ಗಾತ್ರ ಮತ್ತು ಪ್ರಭಾವದಿಂದ ಭಾರತದಲ್ಲಿ ಮಧ್ಯಮವರ್ಗವು ಬದಲಾವಣೆ ಮತ್ತು ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. 


ಭಾರತದ ಖಾಸಗಿ ಬಳಕೆಯು ಜಿಡಿಪಿ ಯ ಸುಮಾರು ಶೇ.60 ರಷ್ಟಿದೆ ಮತ್ತು 2000 ರಿಂದ ಖಾಸಗೀ ಬಳಕೆಯ ಬೆಳವಣಿಗೆಯು ಭಾರತದ ಬೆಳವಣಿಗೆಯ ಶೇ. 70 ರಷ್ಟಿದೆ. 2030ರ ವೇಳೆಗೆ ಭಾರತದ ಆರ್ಥಿಕತೆಯು ಮಧ್ಯಮ ವರ್ಗದವರು ನಡೆಸುವ ಆರ್ಥಿಕತೆಯಾಗಿ ಬದಲಾಗಲಿದೆ.


ಜನರ ಕಿಸೆ ತುಂಬಿಸುವ ಕಸರತ್ತು.

ಬಜೆಟ್ ಕುರಿತಂತೆ ಮಾತನಾಡುತ್ತಾ ಮೋದಿಯವರು “ಬಜೆಟ್ ಸಾಮಾನ್ಯವಾಗಿ ಸರಕಾರದ ಖಜಾನೆ ಹೇಗೆ ತುಂಬಿಸುವುದೆಂಬುದನ್ನು ಆಲೋಚಿಸುತ್ತದೆ. ಆದರೆ ಈ ಬಾರಿ ಜನರ ಕಿಸೆಯನ್ನು ಹೇಗೆ ತುಂಬಿಸುವುದು ಮತ್ತು ಅವರು ದೇಶದ ಅಭಿವೃದ್ಧಿಯಲ್ಲಿ ಹೇಗೆ ಪಾಲುದಾರರಾಗಬಲ್ಲರು ಎಂಬುದನ್ನು ಬಜೆಟ್ ಸೂಚಿಸುತ್ತದೆ. 


ಈ ಬಜೆಟ್ ಉಳಿತಾಯ, ಹೂಡಿಕೆ, ಬಳಕೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲಿದೆಯಲ್ಲದೆ ಜನಸಾಮಾನ್ಯರ ಬಲವರ್ಧನೆಗೆ ನೆರವಾಗಲಿದೆ” ಎಂದು ನುಡಿದರು. ಈ ಸಾಲಿನ ಬಜೆಟ್ ದೇಶದ ಜನಸಂಖ್ಯೆಯಲ್ಲಿ ಮಧ್ಯಮ ವರ್ಗದವರ ಪ್ರಮುಖ ಪಾತ್ರವನ್ನು ಗುರುತಿಸುತ್ತದೆ.  ಆದಾಯ ತೆರಿಗೆ ಮಿತಿ ಏರಿಸಿರುವ ಕಾರಣ ಸುಮಾರು ಒಂದು ಕೋಟಿ ತೆರಿಗೆದಾರರಿಗೆ ಅನುಕೂಲವಾಗಲಿದೆ.


ತೆರಿಗೆ ರಿಯಾಯಿತಿ ಬೆನ್ನಲ್ಲೇ ಅದಕ್ಕೆ ಪೂರಕವಾಗಿ   ರೆಪೋ ದರದ ಇಳಿಕೆ ಮಧ್ಯಮವರ್ಗಕ್ಕೆ ಚೇತೋಹಾರಿಯಾಗಲಿದೆ. ರೆಪೊ ದರ ಇಳಿಕೆಯಾದಾಗ ಸಹಜವಾಗಿ ಬಡ್ಡಿದರವೂ ಇಳಿಕೆಯಾಗುತ್ತದೆ. ಬ್ಯಾಂಕುಗಳಿಂದ ಪಡೆದಿರುವ ವಾಹನ, ಗೃಹ ಸಾಲಗಳ ಮಾಸಿಕ ಕಂತು ಇಳಿಕೆಯಾಗಿ ಆರ್ಥಿಕತೆಯಲ್ಲಿ ಹಣದ ಪ್ರಮಾಣ ಜಾಸ್ತಿಯಾಗುತ್ತದೆ. ಅಂದರೆ ಜನರ ಕೈಯಲ್ಲಿ ಹಣ ಓಡಾಡುತ್ತದೆ, ಮಾರುಕಟ್ಟೆಯಲ್ಲಿ ಖರೀದಿಯೂ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಆರ್ಥಿಕ ಚಟುವಟಿಕೆಗಳಿಗೆ ಹುಮ್ಮಸ್ಸು ಬರುತ್ತದೆ.


“ಅನಿಮಲ್ ಸ್ಪಿರಿಟ್” ಪ್ರಚೋದಕ.

’ಅನಿಮಲ್ ಸ್ಪಿರಿಟ್ಸ್’ ಎನ್ನುವುದು ಜೆ.ಎಂ. ಕೀನ್ಸ್ 1936 ರಲ್ಲಿ ಪ್ರಕಟಿಸಿದ “ದಿ ಜನರಲ್ ಥಿಯರಿ ಆಫ್ ಎಂಪ್ಲಾಯ್ಮೆಂಟ್, ಇಂಟರೆಸ್ಟ್ ಅಂಡ್ ಮನಿ”  ಎಂಬ ಪುಸ್ತಕದಲ್ಲಿ ಮಾನವ ನಡವಳಿಕೆಯ ಮೇಲೆ ಪ್ರಭಾವ ಬೀರುವ ಪ್ರವೃತ್ತಿಗಳು ಮತ್ತು ಭಾವನೆಗಳನ್ನು ವಿವರಿಸಲು ಬಳಸಿದ್ದಾರೆ. "ಪ್ರಾಣಿ ಶಕ್ತಿಗಳು" ಹೂಡಿಕೆಯ ಬೆಲೆಗಳು ಆಂತರಿಕ ಮೌಲ್ಯಕ್ಕಿಂತ ಹೆಚ್ಚಾಗಿ ಮಾನವ ಭಾವನೆಯ ಆಧಾರದ ಮೇಲೆ ಏರಿಕೆ ಮತ್ತು ಕುಸಿತದ ಪ್ರವೃತ್ತಿಯನ್ನು ಸೂಚಿಸುತ್ತದೆ.


ಪ್ರಾಣಿ ಶಕ್ತಿಗಳು ಆತ್ಮವಿಶ್ವಾಸ, ಭರವಸೆ, ಭಯ ಮತ್ತು ನಿರಾಶಾವಾದದ ಭಾವನೆಗಳನ್ನು ಪ್ರತಿನಿಧಿಸುತ್ತವೆ. ಇದು ಆರ್ಥಿಕ ಬೆಳವಣಿಗೆಯನ್ನು ಪ್ರಚೋದಿಸಬಹುದು ಅಥವಾ ಅಡ್ಡಿಪಡಿಸುವ ಮೂಲಕ ಹಣಕಾಸಿನ ನಿರ್ಧಾರದ ಮೇಲೆ ಪರಿಣಾಮ ಬೀರಬಹುದು. ಉತ್ಸಾಹವು ಅಧಿಕವಾಗಿದ್ದಾಗ ಆರ್ಥಿಕತೆಯಲ್ಲಿ ಭಾಗವಹಿಸುವವರಲ್ಲಿ ವಿಶ್ವಾಸವು ಹೆಚ್ಚಿ ಬೆಳವಣಿಗೆಗೆ ಪೂರಕವಾಗುತ್ತದೆ. 


ಕೇಂದ್ರ ಬಜೆಟ್ ನ ಆದಾಯ ತೆರಿಗೆ ಮಿತಿಯ ಹೆಚ್ಚಳ ಹಾಗೂ ರೆಪೋ ದರ ಇಳಿಕೆ ಭಾರತೀಯ ಆರ್ಥಿಕತೆಯ ಬೆಳವಣಿಗೆಯ ಪ್ರಕ್ರಿಯೆಗೆ ಧನಾತ್ಮಕ ಪ್ರಚೋದನೆಯನ್ನು ನೀಡಿ “ಅನಿಮಲ್ ಸ್ಪಿರಿಟ್” ನ್ನು  ಪುನರುಜ್ಜೀವನಗೊಳಿಸಲಿದೆ.


ಜಾಣ್ಮೆಯ ಹೆಜ್ಜೆ

ವಿಶ್ವದ ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಆಶಾದಾಯಕವಾಗಿಯೇ ಇದೆ. ವಿಶ್ವಬ್ಯಾಂಕ್‌, ಐಎಂಎಫ್‌ ಸೇರಿದಂತೆ ಜಾಗತಿಕ ಸಂಸ್ಥೆಗಳು ಭಾರತದ ಆರ್ಥಿಕತೆ ಆಶಾದಾಯಕವಾಗಿದೆ ಎಂದೇ ಮುನ್ನೋಟವನ್ನು ನೀಡಿವೆ. 


ಆರ್ಥಿಕವಾಗಿ ಸದೃಢ ರಾಷ್ಟ್ರವಾಗಿ ಮುಂದುವರಿಯುತ್ತಿರುವ ಭಾರತ ಯಾವುದೇ ಒಂದು ಪ್ರತಿಗಾಮಿ ನಿರ್ಧಾರ ತೆಗೆದುಕೊಂಡರೂ ಅದು ಆರ್ಥಿಕತೆಗೆ ನೇರ ಹೊಡೆತ ನೀಡುವ ಸಾಧ್ಯತೆ ಇದೆ. ಆದುದರಿಂದ ಬೆಳವಣಿಗೆಗೆ ಅಡ್ಡಿಯಾಗದಂತೆ ಹಣದುಬ್ಬರದ ನಿಯಂತ್ರಣದೊಂದಿಗೆ ಬೆಳವಣಿಗೆಗೆ ಪೂರಕವಾದ ಕೇಂದ್ರೀಯ ಬ್ಯಾಂಕಿನ ಹೊಣೆಯರಿತ ಚಾಣಾಕ್ಷ ಹೆಜ್ಜೆಗಳು ಹಣಕಾಸು ಮಾರುಕಟ್ಟೆಯ ಸ್ಥಿರತೆಗೂ ಪೂರಕವಾಗಿದೆ.


-ಡಾ.ಎ.ಜಯ ಕುಮಾರ ಶೆಟ್ಟಿ.

ನಿವೃತ್ತ ಪ್ರಾಂಶುಪಾಲರು ಹಾಗೂ ಅರ್ಥಶಾಸ್ತ್ರ ಪ್ರಾದ್ಯಾಪಕರು,

ಶ್ರೀ.ಧ.ಮಂ.ಕಾಲೇಜು (ಸ್ವಾಯತ್ತ), ಉಜಿರೆ.

                                                 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top