* ಓಂಕಾರ ಆಶ್ರಮದ ಶ್ರೀ ಮಧುಸೂದನಾನಂದ ಪುರಿ ಸ್ವಾಮೀಜಿ ಸಂದೇಶ
* ಶ್ರೀ ಪುರಂದರ, ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ
* ಶ್ರೀ ಅನುಗ್ರಹ ಸಂಗೀತ ವಿದ್ಯಾಲಯದ ರಜತ ಮಹೋತ್ಸವ ವಿಧ್ಯುಕ್ತ ಆರಂಭ
* ಶ್ರೀ ಗುರುಪೂರ್ಣಿಮಾರ್ಚನಂ- ಕೃತಿ ಲೋಕಾರ್ಪಣೆ
ಬೆಂಗಳೂರು: ಅಂತರಂಗದ ಸ್ವರೂಪ ದರ್ಶನ ಮಾಡಿಸಲು ಶಾಸ್ತ್ರೀಯ ಸಂಗೀತ ಪ್ರೇರಕ ಶಕ್ತಿಯಾಗಿದೆ ಎಂದು ಓಂಕಾರ ಆಶ್ರಮದ ಶ್ರೀ ಮಧುಸೂದನಾನಂದ ಪುರಿ ಸ್ವಾಮೀಜಿ ಸಂದೇಶ ನೀಡಿದರು.
ನಗರದ ಶ್ರೀ ಅನುಗ್ರಹ ಸಂಗೀತ ಮಹಾ ವಿದ್ಯಾಲಯದ 25ನೇ ವರ್ಷದ ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಮತ್ತು ಶ್ರೀ ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವ ದ ಅಂಗವಾಗಿ ನಗರದ ಬಸವನಗುಡಿಯ ಪುತ್ತಿಗೆ ಮಠದಲ್ಲಿ ಹಮ್ಮಿಕೊಂಡಿರುವ 3 ದಿನಗಳ ಸಂಗೀತ- ನೃತ್ಯ ಮಹೋತ್ಸವವನ್ನು ಶುಕ್ರವಾರ ಸಂಜೆ ವಿಧ್ಯುಕ್ತವಾಗಿ ಉದ್ಘಾಟಿಸಿ ಅವರು ಅನುಗ್ರಹ ಭಾಷಣ ನೀಡಿದರು.
ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ಸಾರಥ್ಯದಲ್ಲಿ ಕಳೆದ 25 ವರ್ಷಗಳಿಂದ ಬೆಂಗಳೂರು ಮತ್ತು ತುಮಕೂರಿನಲ್ಲಿ ಶ್ರೀ ಪುರಂದರ, ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ ಮತ್ತು ಈ ಹಿನ್ನೆಲೆಯಲ್ಲಿ 1 ತಿಂಗಳು ಆಸಕ್ತರಿಗೆ ದೇವರನಾಮ ಕಲಿಕೆ ಉಚಿತ ಶಿಬಿರ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಸೇವೆಯಾಗಿದೆ ಎಂದರು.
ಒತ್ತಡದ ಜೀವನವೇ ಇಂದು ಎಲ್ಲರನ್ನು ಆವರಿಸಿದೆ. ಬಹುತೇಕ ಜನರು ಹಣದ ಹಿಂದೆ ಓಡುತ್ತ ಇದ್ದಾರೆ. ಗುಣಗಳನ್ನು ಕಾಣುವ ಮನೋಭಾವ ಕಡಿಮೆ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಶಾಸ್ತ್ರೀಯ ಸಂಗೀತವು ನಮ್ಮೆಲ್ಲರ ಅಂತರಂಗದ ನಿಜ ಸ್ವರೂಪದ ದರ್ಶನ ಮಾಡಿಸಿ, ಧನ್ಯತೆ ಮೂಡಿಸುತ್ತದೆ. ಸಂಗೀತದಿಂದ ಮನಕ್ಕೆ ಶಾಂತಿ, ನೆಮ್ಮದಿ ದೊರಕುತ್ತದೆ. ನೂರಾರು ಕಾಯಿಲೆಗಳೂ ಸಂಗೀತವೇ ರಾಮಬಾಣವಾಗಿದೆ ಎಂದು ಸ್ವಾಮೀಜಿ ನುಡಿದರು.
ಶ್ರೀಕಂಠ ಭಟ್ಟರಿಂದ ಸಾಹಸದ ಕಾರ್ಯ:
ಕರ್ನಾಟಕ ಶಾಸ್ತ್ರೀಯ ಸಂಗೀತದ ಹಿರಿಯ ವಿದ್ವಾಂಸ ಶೃಂಗೇರಿ ಎಚ್.ಎಸ್. ನಾಗರಾಜ್ ಮಾತನಾಡಿ, 25 ವರ್ಷ ಒಂದು ಸಂಗೀತ ಸಂಸ್ಥೆಯನ್ನು ಮುನ್ನಡೆಸುವುದು ಎಂದರೆ ಅದು ಸಾಹಸದ ಮಾತೇ ಸರಿ. ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ಶತಮಾನೋತ್ಸವ ಕಾಣುವಂತಾಗಲಿ ಎಂದು ಹಾರೈಸಿದರು. ವಿದ್ವಾನ್ ಶ್ರೀಕಂಠ ಶಿವಮೊಗ್ಗದಲ್ಲಿ ಕಲಿತು, ಬೆಂಗಳೂರು- ತುಮಕೂರಿನಲ್ಲಿ ನೂರಾರು ಶಿಷ್ಯರಿಗೆ 3 ದಶಕದಿಂದ ಸಂಗೀತ ಪಾಠ ಮಾಡುತ್ತಿದ್ದಾರೆ. ಅವರ ಸೇವೆ ಸಾರ್ಥಕವಾಗಿದೆ. ಅವರ ಶಿಷ್ಯವರ್ಗದಿಂದ ನಮ್ಮ ಶಾಸ್ತ್ರೀಯ ಸಂಗೀತವು ಸಾವಿರಾರು ಮನೆ- ಮನಗಳನ್ನು ಬೆಳಗಲಿ ಎಂದು ಆಶಿಸಿದರು.
ಗುರುಪೂರ್ಣಿಮಾರ್ಚನಂ- ಲೋಕಾರ್ಪಣೆ:
ರಜತ ಮಹೋತ್ಸವದ ನೆನಪಿಗಾಗಿ ಶ್ರೀ ಅನುಗ್ರಹ ಸಂಗೀತ ವಿದ್ಯಾಲಯ ಪ್ರಕಟಿಸಿದ ಶ್ರೀ ಗುರುಪೂರ್ಣಿಮಾರ್ಚನಂ- ಕೃತಿಯನ್ನು ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ವಂದೇ ಮಾತರಂ- ಸಂಪೂರ್ಣ ಸಾಹಿತ್ಯದ ಸಾಮೂಹಿಕ ಗಾಯನ ಹೃನ್ಮನ ಸೆಳೆಯಿತು.
ವಿಶೇಷ ಸನ್ಮಾನ: ಇದೇ ಸಂದರ್ಭ ಖ್ಯಾತ ಜ್ಯೋತಿಷಿ ಮತ್ತು ಅಂಕಣಕಾರ ರಾಜಗುರು ದ್ವಾರಕಾನಾಥ್ ಮತ್ತು ಇಂಜಿನಿಯರ್, ಕಲಾ ಪೋಷಕ ಶೇಷಾದ್ರಿ ಅವರಿಗೆ ಸನ್ಮಾನಿಸಲಾಯಿತು. ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್, ವಸುಮತಿ ಭಟ್ ಮತ್ತು ಸುಬ್ಬುಕೃಷ್ಣ ಹಾಜರಿದ್ದರು. ಗಾಯನ ಮತ್ತು ವೀಣಾ ವಾದನದಲ್ಲಿ ಮುತ್ತುಸ್ವಾಮಿ ದೀಕ್ಷಿತರ ನೊಟ್ಟು ಸ್ವರಗಳ ಪ್ರಸ್ತುತಿ, ವಿದುಷಿಯರಾದ ದೀಪ್ತಿ ಪ್ರಸಾದ ಮತ್ತು ರಮಾ ಪ್ರಸನ್ನ ಅವರ ನೇತೃತ್ವದಲ್ಲಿ ಏಕಕಾಲದಲ್ಲಿ 25 ವೀಣಾ ಕಲಾವಿದರಿಂದ ವೀಣಾ ವಾದನ ಝೇಂಕಾರ ಮನೋಜ್ಞವಾಗಿತ್ತು.
ನವರತ್ನ ಮಾಲಿಕೆ ಗಾಯನ ಶನಿವಾರ
ವಿದ್ಯಾಲಯದ 2ನೇ ದಿನದ ಕಾರ್ಯಕ್ರಮದ ಅಂಗವಾಗಿ ಬಸವನಗುಡಿ ಶ್ರೀ ಪುತ್ತಿಗೆ ಮಠದಲ್ಲಿ ಫೆ. 15ರ ಬೆಳಗ್ಗೆ 10ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ದೇವರನಾಮ, ಮಧ್ಯಾಹ್ನ 12ಕ್ಕೆ ಶ್ರೀ ಪುರಂದರ ದಾಸರ ನವರತ್ನ ಮಾಲಿಕೆಯ ಗೋಷ್ಠಿ ಗಾಯನ ನಡೆಯಲಿದೆ. ವಿದ್ವಾನ್ ಜೆ,ಎಸ್. ಶ್ರೀಕಂಠ ಭಟ್ ನೇತೃತ್ವ ವಹಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ