ಫೆಬ್ರವರಿ 02 : ಅಂತರರಾಷ್ಟ್ರೀಯ ಜೌಗು ಭೂಮಿ ದಿನ

Upayuktha
0


 "ಮ್ಮ ಸಾಮಾನ್ಯ ಭವಿಷ್ಯಕ್ಕಾಗಿ ತೇವಭೂಮಿಗಳನ್ನು ರಕ್ಷಿಸುವುದು". [ PROTECTING WETLANDS FOR OUR COMMON FUTURE ]  ಇದು 2025 ರ ವಿಶ್ವ ತೇವಭೂಮಿ ದಿನದ ಘೋಷಾ ವಾಕ್ಯವಾಗಿದ್ದು ಈ ದಿನವನ್ನು ಫೆಬ್ರವರಿ 2, 2025 ರಂದು ಆಚರಿಸಲಾಗುತ್ತಿದೆ. ಭೂಮಿ ನಮ್ಮ ಮನೆ. ಬ್ರಹ್ಮಾಂಡದಲ್ಲಿ ಇದೊಂದು ವಿಶಿಷ್ಟ ಗ್ರಹ. ಕಾರಣ ಇಲ್ಲಿ ಜೀವಿಗಳು ಬದುಕಿ ಬಾಳಲು ಅಗತ್ಯವಾದ ಗಾಳಿ ಇದೆ, ಬೆಳಕಿದೆ. 


ಜೀವನಾಧಾರ ಜೀವಜಲ (ನೀರು) ಇಲ್ಲಿದೆ. ಜೀವಿಗಳ ಬದುಕಿಗೆ ಅಗತ್ಯವೆನಿಸುವಷ್ಟು ಮಾತ್ರ ಉಷ್ಣಾಂಶ ಇಲ್ಲಿದೆ. ಈ ರೀತಿ ಹಲವು ವೈವಿಧ್ಯಮಯ ಸನ್ನಿವೇಶಗಳನ್ನು ನಮ್ಮ ಭೂಮಿ ಹೊಂದಿದೆ. ನಾವು ಭೂಮಿಯ ಹಲವು ಭೂ ವಿಧಗಳನ್ನು ಕಾಣಬಹುದಾಗಿದೆ. ಮರುಭೂಮಿ, ಫಲವತ್ತಾದ ಭೂಮಿ, ಅರಣ್ಯ ಭೂಮಿ, ಖನಿಜಾಂಶಯುಕ್ತ ಭೂಮಿ, ಇಳಿಜಾರು ಕಣಿವೆ ಪ್ರದೇಶದ ಭೂಮಿ, ಜೌಗು ಭೂಮಿ (ತೇವಾಂಶಭರಿತ ಭೂಮಿ ) ಇತ್ಯಾದಿ.


ಅಂತರ ರಾಷ್ಟ್ರೀಯ ಜೌಗು ಭೂಮಿಯ ದಿನ ( ಇಂಟರ್ ನ್ಯಾಷನಲ್ ವೆಟ್ ಲ್ಯಾಂಡ್ ಡೇ) ಎಂದು ಫೆಬ್ರವರಿ 2 ನೇ ತಾರೀಖಿನಂದು ನಮ್ಮ ಭಾರತವೂ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಜೌಗು ನೆಲ ಅಥವಾ ಜೌಗು ಭೂಮಿ ಎಂದರೆ ಅದು ಕೃಷಿಗೂ ಯೋಗ್ಯವಲ್ಲ ಮತ್ತು ಜನ ಜೀವನಕ್ಕೂ ಯೋಗ್ಯವಲ್ಲವೆಂದು ನಿರ್ಲಕ್ಷ್ಯ ಮಾಡಲಾಗುತ್ತದೆ. ಆದರೆ ಹಾಗೆ ನಿರ್ಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ ನೀರಿರುವ ಜೌಗು ಭೂಮಿಗಳು ಹಲವು ವಿಧದ ಅಪರೂಪದ ಸಸ್ಯಗಳಿಗೆ ಹಾಗೂ ಜಲಜೀವಿಗಳಿಗೆ ಆಶ್ರಯತಾಣವಾಗಿವೆ. 


ಇವು ಜೈವಿಕ ವೈವಿಧ್ಯತೆಯ ತಾಣವೆಂದೇ ಹೇಳಬಹುದು. ಇಂಥ ಭೂಮಿಗಳಲ್ಲಿ ಅನೇಕ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ ಇಂದು ಈ ಜೌಗು ಭೂಮಿಯು ಬೃಹತ್ ಪ್ರಮಾಣದ ಕಾರ್ಖಾನೆಗಳಿಂದ ಹೊರಬರುವ ರಾಸಾಯನಿಕ ತ್ಯಾಜ್ಯಗಳಿಂದ, ಆಧುನಿಕ ನಗರೀಕರಣದಿಂದ, ಇನ್ನೂ ಮುಂತಾದ ಮಾನವನ ಚಟುವಟಿಕೆಗಳಿಂದ ಹಾಗೂ ನೈಸರ್ಗಿಕ ವಿಕೋಪಗಳಿಂದ ಇಂಥ ಜೌಗು ಪ್ರದೇಶಗಳು ಹಾಳಾಗುತ್ತಿವೆ. ಇಂಥ ಪ್ರದೇಶಗಳ ಮೌಲ್ಯವನ್ನು ಮತ್ತು ಅದರ ಪ್ರಯೋಜನಕಾರಿ ಅಂಶಗಳ ಕುರಿತಂತೆ ಅರಿವು ಮೂಡಿಸುವುದು ಹಾಗೂ ಅದರ ಸಂರಕ್ಷಣೆ ಮಾಡುವುದು ಅಂತರ ರಾಷ್ಟ್ರೀಯ ಜೌಗು ಭೂಮಿ ದಿನದ ಮುಖ್ಯ ಉದ್ದೇಶವಾಗಿದೆ. 


 "ನಮ್ಮ ಸಾಮಾನ್ಯ ಭವಿಷ್ಯಕ್ಕಾಗಿ ತೇವಭೂಮಿಗಳನ್ನು ರಕ್ಷಿಸುವುದು".

ಇದು ನಮ್ಮ ಬದುಕನ್ನು ಉತ್ತಮಪಡಿಸುವಲ್ಲಿ ಜೌಗು ಪ್ರದೇಶಗಳು ವಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ.  ಪ್ರವಾಹ ರಕ್ಷಣೆ, ಶುದ್ಧ ನೀರು, ಜೀವವೈವಿಧ್ಯ ಮತ್ತು ಮನರಂಜನಾ ಅವಕಾಶಗಳಿಗೆ ಜೌಗು ಪ್ರದೇಶಗಳು ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಇವೆಲ್ಲವೂ ಮಾನವನ ಆರೋಗ್ಯ ಮತ್ತು ಸಮೃದ್ಧಿಗೆ ಅವಶ್ಯಕವಾಗಿದೆ.


ಪ್ರಸ್ತುತ ದಿನಗಳಲ್ಲಿ ನಾವು ಕುಡಿಯುವ ನೀರಿನ ಅಭಾವವನ್ನೇ ಎದುರಿಸುತ್ತಿದ್ದೇವೆ. ಇದರಿಂದ ಭವಿಷ್ಯದಲ್ಲಿ ಭೂಮಿ ಮೇಲಿರುವ ಪ್ರತಿಯೊಂದು ಜೀವಿಯೂ ಅಪಾಯವನ್ನು ಎದುರಿಸುವ ಪರಿಸ್ಥಿತಿ ಬರಬಹುದು. ನಾವು ಈಗಾಗಲೇ ತಿಳಿದಿರುವಂತೆ ಭೂಮಿಯ ಮೇಲೆ ಸಿಹಿ ನೀರಿನ ಪ್ರಮಾಣ ಕಡಿಮೆ ಇದೆ. ಸಿಹಿ ನೀರು ಮನುಷ್ಯನಿಂದ ಹಿಡಿದು ಪ್ರತಿಯೊಂದು ಜೀವಿಗೂ ತುಂಬಾ ಮುಖ್ಯವಾಗಿದೆ. 


ಇದನ್ನು ಸಂರಕ್ಷಿಸುವ ಸಲುವಾಗಿ ನಾವೆಲ್ಲ ಈ ಅಂತರರಾಷ್ಟ್ರೀಯ ಜೌಗು ದಿನವನ್ನು ಆಚರಿಸುವ ಮೂಲಕ ಈ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ಜೌಗು ಪ್ರದೇಶಗಳು ನಶಿಸುತ್ತಿರುವುದನ್ನು ಜೀವ ವೈವಿಧ್ಯತೆಯ ವಿನಾಶವೆಂದೇ ಪರಿಗಣಿಸಿದ ಹಲವು ರಾಷ್ಟ್ರಗಳು 1971ರ ಫೆಬ್ರವರಿ 2 ರಂದು ಕ್ಯಾಸ್ಪಿಯನ್ ಸಮುದ್ರ ತೀರದಲ್ಲಿರುವ ಇರಾನ್ ನಗರದ ಜೌಗು ಪ್ರದೇಶ ರಾಮ್ಸರ್‌ನಲ್ಲಿ ವೆಟ್ ಲ್ಯಾಂಡ್ ಸಭೆ [ RAMSAR CONVENTION ] ನಡೆಸಿದವು. 


ಜೌಗು ಪ್ರದೇಶಗಳ ಸಂರಕ್ಷಣೆಗಾಗಿ ಹಲವು ರಾಷ್ಟ್ರಗಳು ಅಂತರರಾಷ್ಟ್ರೀಯ ಒಪ್ಪಂದ ಮಾಡಿಕೊಂಡವು. 1991 ರಿಂದ ಜೌಗು ಭೂಮಿ ಅಥವಾ ಪ್ರದೇಶಗಳ ಪ್ರಾಮುಖ್ಯತೆ ಮತ್ತು ಮೌಲ್ಯದ ಬಗ್ಗೆ‌ ಸಾರ್ವಜನಿಕರಲ್ಲಿ ಅರಿವು ಮೂಡಿಸಲು *ಅಂತರರಾಷ್ಟ್ರೀಯ ಜೌಗು ಪ್ರದೇಶ ದಿನ * { INTERNATIONAL WETLAND DAY } ವನ್ನು ಫೆಬ್ರವರಿ 2 ರಂದು ಪ್ರತೀ ವರ್ಷವೂ ಆಚರಿಸುವರು.


ಮುಂದಾದವು ಜೌಗು ಭೂಪ್ರದೇಶಗಳು ( ವೆಟ್ ಲ್ಯಾಂಡ್) ಹಿನ್ನೀರಿನ ಪ್ರದೇಶ, ಕೆರೆ, ಸರೋವರ, ಕೊಳಗಳು, ನದಿ, ಅಂತರ್ ಜಲ ತೇವಾಂಶಯುಕ್ತ ಹುಲ್ಲುಗಾವ ಲುಗಳು, ಕೆಸರು ನೆಲ, ಓಯಸಿಸ್ ಗಳು, ನದಿ ಮುಖಜ ಭೂಮಿ, ಅಳಿವೆಗಳು, ಪ್ರವಾಹ ಪ್ರದೇಶಗಳು, ಮ್ಯಾಂಗ್ರೂವ್ ಗಳಂತಹ ಕರಾವಳಿ ಪ್ರದೇಶಗಳು, ಹವಳದ ದಂಡೆಗಳು, ಮತ್ತು ಮಾನವ ನಿರ್ಮಿತ ಪ್ರದೇಶಗಳಾದ ಮೀನುಸಾಕಣಾ ಕಟ್ಟೆಗಳು, ಭತ್ತದ ಗದ್ದೆಗಳು, ಜಲಾಶಯಗಳು ಮತ್ತು ಉಪ್ಪಿನ ಇಂಗು ಗುಂಡಿಗಳು ಮಳೆ ನೀರು ಕೊಯ್ಲು ಸ್ಥಳಗಳನ್ನು ಒಳಗೊಂಡಿವೆ.


ಜೌಗು ಭೂಮಿಗಳ ಸಂರಕ್ಷಣೆಯನ್ನು ನಾವೇಕೆ ಮಾಡಬೇಕು ? ಜೌಗು ಭೂಮಿಗಳು ಅತ್ಯಂತ ವೈವಿಧ್ಯಮಯ ಮತ್ತು ಉತ್ಪಾದಕ ಪರಿಸರ ವ್ಯವಸ್ಥೆಗಳಲ್ಲಿ ಸೇರಿವೆ. ಇವು ಅಗತ್ಯ ಸೇವೆಗಳನ್ನು ಒದಗಿಸುತ್ತವೆ ಮತ್ತು ನಮಗೆ ಶುದ್ಧ ನೀರನ್ನು ಪೂರೈಸುತ್ತವೆ. ಜೌಗು ಭೂಮಿಗಳು ನೀರನ್ನು ಸಂಗ್ರಹಿಸಿ ಸ್ವಚ್ಛಗೊಳಿಸುತ್ತವೆ. ನಾವು ಕುಡಿಯಲು ಬಳಸುವ ಸಿಹಿನೀರನ್ನು ಹಿಡಿದಿಟ್ಟು ಕೊಳ್ಳುತ್ತವೆ ಮತ್ತು ಅದನ್ನು ನಮಗೆ ಒದಗಿ ಸುತ್ತವೆ. 


ಇವು ನೈಸರ್ಗಿಕವಾಗಿ ಮಾಲಿನ್ಯಕಾರ ಕಗಳನ್ನು ಶೋಧಿಸುತ್ತವೆ. ನಾವು ಸುರಕ್ಷಿತವಾಗಿ ಕುಡಿಯಬಹುದಾದ ನೀರನ್ನು ಒದಗಿಸುತ್ತವೆ. ಆಕ್ವಾಕಲ್ಚರ್ ( ಜಲಚರ ಸಾಕಣೆ) ವೇಗವಾಗಿ ಬೆಳೆಯುತ್ತಿರುವ ಆಹಾರ ಉತ್ಪಾದನಾ ಕ್ಷೇತ್ರ ವಾಗಿದೆ. ಇದರಿಂದ ಮತ್ಸೋದ್ಯಮ ಕ್ಷೇತ್ರವು ಆರ್ಥಿಕ ಸಬಲತೆಯನ್ನು ಸಾಧಿಸುತ್ತದೆ. ಜೌಗು ಭೂಮಿಗಳು ಶಾಶ್ವತವಾಗಿ ಪೂರ್ಣ ಪ್ರಮಾಣದ ನೀರಿನಿಂದ ತೇವಾಂಶಯುಕ್ತವಾಗಿರುತ್ತವೆ. 


ತೇವಾಂಶಯುಕ್ತ ಭೂಮಿ ಮಾನವನ ಉಳಿವಿಗೆ ಅತ್ಯಗತ್ಯವಾಗಿದೆ. ಜೌಗು ಭೂಮಿಗಳು ಜೈವಿಕ ವೈವಿಧ್ಯತೆಯ ತೊಟ್ಟಿಲುಗಳಾಗಿವೆ. ಇವುಗಳ ಮೇಲೆ ಅಸಂಖ್ಯಾತ ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳು ತಮ್ಮ ಉಳಿವಿಗಾಗಿ ಅವಲಂಬಿಸಿವೆ. ಸಿಹಿನೀರಿನ ಪೂರೈಕೆ, ಆಹಾರ ಮತ್ತು ಕಟ್ಟಡ ಸಾಮಗ್ರಿಗಳು ಮತ್ತು ಜೀವವೈವಿಧ್ಯತೆಯಿಂದ ಹಿಡಿದು ಪ್ರವಾಹ ನಿಯಂತ್ರಣ, ಅಂತರ್ಜಲ ಮರುಪೂರಣ, ಹವಾಮಾನ ಬದಲಾವಣೆಯನ್ನು ತಗ್ಗಿಸುವಿಕೆವರೆಗಿನ ಅಸಂಖ್ಯಾತ ಪ್ರಯೋಜನಗಳು ಇವೆ. 


ಈ ಎಲ್ಲ ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಸುವುದಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಬಹುದು. ಸರ್ಕಾರಿ ಹಾಗೂ ಖಾಸಗಿ ಸಂಘ ಸಂಸ್ಥೆಗಳು, ಪ್ರೌಢ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ಹಂತದಲ್ಲಿ ವಿಶ್ವ ಜೌಗು ಭೂಮಿಯ ದಿನದ ಕುರಿತು ವಿಚಾರ ಸಂಕಿರಣ, ಭಾಷಣ, ವಿಚಾರಗೋಷ್ಠಿ, ಉಪನ್ಯಾಸ, ಪೋಸ್ಟರ್ ಪ್ರದರ್ಶನ, ಸ್ತಬ್ಧಚಿತ್ರ ಪ್ರದರ್ಶನ, ಜೌಗು ಪ್ರದೇಶದ ಚಲನಚಿತ್ರ, ಕಲೆ ಮತ್ತು ರಸಪ್ರಶ್ನೆ, ಚಿತ್ರಕಲೆ, ಛಾಯಾಗ್ರಹಣ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತವೆ. ಆ ಮೂಲಕ ಜೌಗು ಭೂಮಿಯ ಉಳಿವಿಗಾಗಿ ಜಾಗೃತಿ ಮೂಡಿಸಿ ಅದರ ಅಗತ್ಯವನ್ನು ಒತ್ತಿ ಹೇಳುತ್ತವೆ.


-ಕೆ.ಎನ್. ಚಿದಾನಂದ, ಹಾಸನ.

                                                   



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top