ಮಂಗಳೂರು: ಆತ್ಮ ವಿಶ್ವಾಸದೊಂದಿಗೆ ನಮ್ಮ ದೇಶವನ್ನು ಆತ್ಮ ನಿರ್ಭರತೆಯತ್ತ ಕೊಂಡೊಯ್ಯುವ 2025-26 ರ ಬಜೆಟನ್ನು ನೀಡಿರುವ ಕೇಂದ್ರ ವಿತ್ತ ಮಂತ್ರಿ ಶ್ರೀಮತಿ ನಿರ್ಮಲ ಸೀತಾರಾಮನ್ ರನ್ನು ದೇಶದ ಸಮಸ್ತ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ವಿಧಾನ ಪರಿಷತ್ತಿನ ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದ್ದಾರೆ.
ಮಧ್ಯಮ ವರ್ಗದ ಹಿತಾಸಕ್ತಿಯನ್ನು ಪರಿಗಣಿಸಿ ತೆರಿಗೆಯನ್ನು ಸರಳೀಕರಿಸಿ 1 ಲಕ್ಷ ಕೋಟಿಗೂ ಹೆಚ್ಚಿನ ರಿಲೀಫ್ ನೀಡಿರುವ ಸ್ವಾಗತಾರ್ಹ ಬಜೆಟ್. ಬದಲಾದ ವಿಶ್ವ ನಾಯಕತ್ವ, ಬದಲಾಗಬಹುದಾದ ವಿಶ್ವ ವ್ಯಾಪಾರದ ನಿಯಮಗಳು, ನಮ್ಮ ದೇಶದ ಹಿತಾಸಕ್ತಿಯನ್ನು ಕಾಪಾಡುವ ಅನಿವಾರ್ಯತೆಯನ್ನು ಗಮನದಲ್ಲಿ ಇರಿಸಿ ಆತ್ಮ ನಿರ್ಭರತೆಯತ್ತ ವಿಶೇಷ ಆದ್ಯತೆಯಿಂದ ಕೃಷಿ, ಶಿಕ್ಷಣ, ಸಂಶೋಧನೆ, ಕೌಶಲ್ಯ ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರಗತಿಶೀಲ ಬಜೆಟ್ ಇದಾಗಿದೆ.
2014ರಲ್ಲಿ ಕೇವಲ 2.5 ಲಕ್ಷಕ್ಕೆ ಸೀಮಿತವಾಗಿದ್ದ ಆದಾಯ ತೆರಿಗೆಯ ವ್ಯಾಪ್ತಿ ಯನ್ನು ಕೇವಲ 12 ವರ್ಷಗಳ ಅವಧಿಯಲ್ಲಿ 12ಲಕ್ಷಕ್ಕೆ (+ Rs75000/-) ಏರಿಸಿ ಮಧ್ಯಮ ವರ್ಗದ ಬಹು ವರ್ಷಗಳ ಕನಸನ್ನು ನನಸುಗೊಳಿಸಿದ ಶ್ಲಾಘನೀಯ ಬಜೆಟ್. ಪರೋಕ್ಷ ತೆರಿಗೆಗಳ ಇನ್ನಷ್ಟು ಸರಳಗೊಳಿಸುವ ಪ್ರಯತ್ನ ಇರುವ ಭವಿಷ್ಯದ ಸ್ಪಷ್ಟ ದೃಷ್ಟಿ ಕೋನವಿರುವ ಬಜೆಟ್ ಎಂದು ಕ್ಯಾ. ಕಾರ್ಣಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸರಕಾರದ ಕೈಯಲ್ಲಿ ಹಣ ಇರಿಸಿ ದುಂದುವೆಚ್ಚ ಮಾಡುವುದಕ್ಕಿಂತ ಜನತೆಯ ಕೈಯಲ್ಲಿ ಹೆಚ್ಚು ಹಣವಿರುವಂತೆ ಮಾಡಿ ಉಳಿತಾಯ, ಹೂಡಿಕೆ ಹಾಗೂ ಅಗತ್ಯವಸ್ತುಗಳಿಗಾಗಿ ವೆಚ್ಚ ಮಾಡಲು ಅವಕಾಶ ನೀಡಿ ಆರ್ಥಿಕ ಪ್ರಗತಿಯನ್ನು ಪ್ರೋತ್ಸಾಹಿಸುವ ಆಶಾ ದಾಯಕ ಬಜೆಟ್ ಎಂದು ಅವರು ಹೇಳಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ