ನಮ್ಮ ದೇಶ ಅನೇಕ ಸಾಧು ಸಂತರಿಗೆ ಜನ್ಮ ನೀಡಿದ ಪುಣ್ಯ ಭೂಮಿ. ಭಾರತ ದೇಶದಲ್ಲಿ ಸಾಧು ಸಂತರು ಹುಟ್ಟಿದಷ್ಟು ಬೇರೆಲ್ಲೂ ಹುಟ್ಟಿಲ್ಲ ಎನ್ನಬಹುದು. ನಮ್ಮ ಹಿಂದೂ ಧರ್ಮ ಆಚಾರ ವಿಚಾರಗಳು, ಉದಾತ್ತ ವಿಚಾರಗಳು ಬೇರೆಲ್ಲೂ ಇಲ್ಲ ಎಂತಲೇ ಹೇಳಬಹುದು.
ಸ್ವಾಮಿ ವಿವೇಕಾನಂದರು 12 ಜನೇವರಿ 1863ರಲ್ಲಿ ಕಲ್ಕತ್ತೆಯಲ್ಲಿ ಜನಿಸಿದರು. ಇಂದು ಅವರ ಜಯಂತಿ.
ಅವರು ಕುದುರೆಯ ಸಾರೋಟಿನಲ್ಲಿ ಶಾಲೆಗೆ ಹೋಗುತ್ತಿದ್ದರು. ಅವರ ತಂದೆ ಅವರನ್ನು ದೊಡ್ಡವನಾದ ಮೇಲೆ ಏನಾಗುತ್ತಿ? ಅಂದು ಕೇಳಿದಾಗ, ಅವರು ಥಟ್ಟನೇ ಹೇಳಿದರಂತೆ. "ಅಪ್ಪಾಜಿ ನಾನು ಸಾರಥಿಯಾಗುವೆ" ಅಂದರಂತೆ. ಅವರ ತಂದೆಗೆ ಕೋಪ ಬಂತಂತೆ, ಆಗ ಅವರ ತಾಯಿ ಹೇಳಿದರಂತೆ, "ನನ್ನ ಮಗ ಶ್ರೀಕೃಷ್ಣನಂತೇ ಜಗವನ್ನೇ ಮುನ್ನಡೆಸುವ ಸಾರಥಿಯಾಗುತ್ತಾನೆ" ಎಂದರಂತೆ.
ಮುಂದೊಂದು ದಿನ ಆ ಮಾತು ನಿಜವಾಯ್ತು. ಅವರು ಜಗತ್ತಿಗೆ ಆದರ್ಶಪ್ರಾಯರಾಗಿ ಸಾರಥಿಯಾದರು... ಯುವಕರಿಗೇ "ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲಬೇಡಿ" ಎಂಬ ಸಂದೇಶ ಸಾರಿದರು.
ಸ್ವಾಮಿ ವಿವೇಕಾನಂದರು 1893 ರಲ್ಲಿ ಪ್ರಥಮವಾಗಿ ಅಮೇರಿಕಾ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಹಿಂದೂ ಧರ್ಮದ ಬಗ್ಗೆ ಮಾತನಾಡಿ ಜನಜಾಗೃತಿ ಮೂಡಿಸಿದರು.
ಅವರ ಒಂದೇ ಒಂದು ಉಕ್ತಿ "ನನ್ನ ಅಣ್ಣತಮ್ಮಂದಿರೇ, ನನ್ನ ಅಕ್ಕತಂಗಿಯರೇ" ಜನರನ್ನು ಆಶ್ಚರ್ಯಚಕಿತಗೊಳಿಸಿತು. ಬೇರೆ ದೇಶದ ಜನರೂ ಕೂಡ ನಮ್ಮನ್ನೂ ಹೀಗೇ ಕರೆಯಬಹುದಾ ಎಂಬುದು ಅವರ ಚಿಂತನೆಯಾಯಿತು. ಜನರಲ್ಲಿ ಭ್ರಾತೃತ್ವದ ಬೀಜ ಬಿತ್ತಿದ್ದರು. ಹಿಂದೂ ಧರ್ಮದ ಹೃದಯ ವೈಶಾಲ್ಯತೆಯ ಮೆರಗು ತೋರಿಸಿದರು. ಹಿಂದೂ ಧರ್ಮದ ಉತ್ತಮ ವಿಚಾರಗಳನ್ನು ಅನಾವರಣಗೊಳಿಸಿ ಹಿಂದೂ ಧರ್ಮದ ವಿಶ್ವ ಪ್ರೇಮವನ್ನು ತೋರಿಸಿಕೊಟ್ಟರು.
ಅವರು ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದರು.
ಅವರ ಕೆಲವು ಮಾತುಗಳು ಇಲ್ಲಿವೆ.
*ನೀವು ನಿಮ್ಮ ಸ್ವ ಇಚ್ಛೆಯಿಂದ ಬೆಳೆಯಬೇಕು. ಯಾರೂ ನಿಮಗೆ ಕಲಿಸಲು ಸಾಧ್ಯವಿಲ್ಲ,
*ಯಾರೂ ನಿಮ್ಮನ್ನು ಆಧ್ಯಾತ್ಮಿಕರನ್ನಾಗಿ ಮಾಡಲು ಸಾಧ್ಯವಿಲ್ಲ. ನಿಮ್ಮ ಸ್ವಂತ ಆತ್ಮವನ್ನು ಹೊರತುಪಡಿಸಿ ಬೇರಾರೂ ಉತ್ತಮ ಗುರುವಲ್ಲ.
*ಬಲವೇ ಜೀವನ, ದೌರ್ಬಲ್ಯವೇ ಸಾವು. ವಿಸ್ತರಣೆಯೇ ಜೀವನ, ಸಂಕೋಚನವೇ ಸಾವು. ಪ್ರೀತಿಯೇ ಜೀವನ, ದ್ವೇಷವೇ ಸಾವು.
*ನೀವು ಏನಾಗಬೇಕೆಂದು ಭಾವಿಸುತ್ತೀರೋ ಅದರ ಮೇಲೆ ಗಮನವಿರಲಿ. ನೀವು ನಿಮ್ಮನ್ನು ದುರ್ಬಲರೆಂದು ಭಾವಿಸಿದರೆ, ನೀವು ದುರ್ಬಲರಾಗುತ್ತೀರಿ; ನೀವು ನಿಮ್ಮನ್ನು ಬಲಶಾಲಿ ಎಂದು ಭಾವಿಸಿದರೆ, ನೀವು ದೇಶವನ್ನೇ ಆಳುತ್ತೀರಿ.
ಉದಾತ್ತ ವಿಚಾರ ಹೊಂದಿದ ಮಹಾನ್ ಸಂತ ಇವರು.
ಒಮ್ಮೆ ಅವರನ್ನು ಒಬ್ಬ ಯುವತಿ ಭೇಟಿಯಾದಳಂತೆ. ನೀವು ನನ್ನ ಮದುವೆ ಮಾಡಿಕೊಳ್ಳಿ. ನನಗೆ ನಿಮ್ಮ ಗುಣಗಳು ತುಂಬಾ ಹಿಡಿಸಿವೆ. ನಿಮ್ಮಂಥ ಪುತ್ರನನ್ನು ಪಡೆಯುವ ಅಸೆಯಿದೆ ಎಂದಳಂತೆ. ಆಗ ಅವರು ಪುತ್ರನನ್ನು ಪಡೆಯಲು ಮದುವೆಯಾಗಬೇಕಿಲ್ಲ. ನೀವು ನನ್ನನ್ನೇ ನಿಮ್ಮ ಪುತ್ರನೆಂದು ಭಾವಿಸಿರಿ. ಆಗ ನಿಮಗೂ ಸಂತೋಷವಾಗುತ್ತದೆ ಎಂದರಂತೆ.
ಈ ಮಹಾನ್ ಸಂತ ಇನ್ನಷ್ಟು ದಿನ ಬದುಕಬೇಕಾಗಿತ್ತು. ಆದರೆ ಅವರು ಜುಲೈ 4,1902 ರಲ್ಲಿ ಈ ಲೋಕ ತ್ಯಜಿಸಿದರು. ಈ ಲೋಕವೇ ನೆನಪಿಡುವಂಥ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು.
-ರೇಖಾ ಮುತಾಲಿಕ್, ಬಾಗಲಕೋಟ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ