ಮಂಗಳೂರು: ಗೋವು ನಮ್ಮೆಲ್ಲರ ಮಾತೆ. ನಾವೆಲ್ಲರೂ ಗೋವಿನ ಮಕ್ಕಳಂತೆ. ತಾಯಿಯ ಎದೆ ಬಗೆದು ರಕ್ತ ಹೀರುವುದನ್ನು ಕಂಡೂ ಯಾವುದಾದರೂ ಮಕ್ಕಳು ಸಹಿಸಿಕೊಳ್ಳುವುದುಂಟೇ? ಶ್ರೀ ಕಾಶಿ ಮಠದ ಶ್ರೀ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರು ತೀವ್ರ ದುಃಖದಿಂದ ಸಮಾಜಕ್ಕೆ ಸರ್ಕಾರಕ್ಕೆ ಕೇಳಿದ ಪ್ರಶ್ನೆ ಇದು.
ಶ್ರೀ ಪೇಜಾವರ ಶ್ರೀಗಳು ಜನವರಿ 23 ರಿಂದ 29ರ ವರೆಗೆ ಗೋವುಗಳ ಮೇಲಿನ ಹಿಂಸೆ ದೌರ್ಜನ್ಯಗಳ ಅಂತ್ಯಕ್ಕಾಗಿ ಪ್ರಾರ್ಥಿಸಿ ಕರೆನೀಡಿರುವ ಕೋಟಿ ವಿಷ್ಣು ಸಹಸ್ರನಾಮ, ಶಿವ ಪಂಚಾಕ್ಷರ ಜಪ ಅಭಿಯಾನದ ಕುರಿತು ವಿವರಿಸಿ ಅವರ ಸಹಯೋಗವನ್ನೂ ಪಡೆಯುವ ಬಗ್ಗೆ ಮಂಗಳೂರಿನ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಪೇಜಾವರ ಮಠದ ಪ್ರತಿನಿಧಿಗಳು ಮಂಗಳವಾರ ಸಂಜೆ ತಮ್ಮನ್ನು ಭೇಟಿಯಾದಾಗ ಬಹಳ ಹೊತ್ತು ಅತ್ಯಂತ ಭಾವುಕರಾಗಿ ಶ್ರೀಗಳು ಮಾತನಾಡಿದರು.
ಮಹಾಭಾರತ ಅತ್ಯಂತ ಸ್ಪಷ್ಟವಾಗಿ ಗೋ ಸಂತತಿ ಸಮೃದ್ಧಿ ಸುಖ ನೆಮ್ಮದಿಯಿಂದ ಇದ್ದರೆ ಸಮಾಜಕ್ಕೆ ಯಾವ ರೀತಿ ಸಂಪತ್ತಾದೀತು; ಅದೇ ಗೋವುಗಳು ನೋವು ಹಿಂಸೆ ಅನುಭವಿಸಿದರೆ ಅದೆಂಥ ವಿಪತ್ತು ಸಮಾಜ ಎದುರಿಸಬೇಕಾದೀತು ಎಂದು ನಮಗೆ ತಿಳಿಸಿಕೊಟ್ಟಿದೆ. ಆದ್ದರಿಂದ ಗೋವಿನ ಆರ್ತನಾದ ಕೊನೆಯಾಗಲೇಬೇಕು. ಆಳುವ ಸರ್ಕಾರಗಳು ಕಾನೂನು ವ್ಯವಸ್ಥೆಗಳು ಗೋವಿನ ರಕ್ಷಣೆಯ ವಿಚಾರದಲ್ಲಿ ಸಂವೇದನಾ ಶೀಲತೆಯನ್ನೇ ಕಳೆದುಕೊಂಡರೂ ಸಮಾಜ ಮಾತ್ರ ಗೋಕುಲ ರಕ್ಷಣೆಯ ಕಾರ್ಯದಲ್ಲಿ ಸಂವೇದನೆ ಕಳೆದುಕೊಂಡು ಉದಾಸೀನ ಮಾಡಲೇಬಾರದು. ಹಾಗಾದಲ್ಲಿ ಅದಕ್ಕಿಂತ ದೊಡ್ಡ ಕೃತಘ್ನತೆ ಬೇರೊಂದಿಲ್ಲ ಎಂದು ಶ್ರೀಗಳು ಎಚ್ಚರಿಸಿದರು.
ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಇದನ್ನು ಮಟ್ಟಹಾಕುವುದು ದೊಡ್ಡ ಸಂಗತಿ ಅಲ್ಲ ಆದರೆ. ಅವರಿಗೆ ದೇವರೇ ಬುದ್ದಿ ಕೊಡಬೇಕಷ್ಟೆ ಎಂದು ಬೇಸರ ವ್ಯಕ್ತಪಡಿಸಿದರು. ಧರ್ಮಪೀಠದಲ್ಲಿ ಕುಳಿತುಕೊಂಡು ಕೆಲವೊಂದು ವಿಚಾರಗಳನ್ನು ನಾವು ಮಾತಾಡಬಾರದು. ಅದು ಧರ್ಮಬಾಹಿರವಾದೀತು.... (ಶ್ರೀಗಳ ಕಣ್ಣಲ್ಲಿ ನೀರು, ಬಾಯಲ್ಲಿ ಮಾತು ಹೊರಡದೇ ಕೆಲಕ್ಷಣ ಗದ್ಗದಿತರಾಗಿ ಮೌನ... ಬಳಿಕ ಮುಂದುವರಿದ ಮಾತು) ಆದರೆ ಸದ್ಯ ನಾಡಿನಲ್ಲಿ ನಡೆಯುತ್ತಿರುವ ಗೋವಿನ ಮೇಲಿನ ಅಮಾನುಷ ಕ್ರೌರ್ಯವನ್ನು ಕಾಣುವಾಗ ತೀವ್ರ ದುಃಖವಾಗುತ್ತಿದೆ. ಅದೇನು ಆಪತ್ತು ಈ ನಾಡಿಗೆ ಕಾದಿದೆಯೋ ಎಂದು ಆತಂಕವೂ ಆಗ್ತಾ ಇದೆ ಆದ್ದರಿಂದ ನಾವೆಲ್ಲರೂ ಗೋವಿನ ಹಿತಕ್ಕಾಗಿ ದೇವರಿಗೆ ಮೊರೆ ಹೋಗಬೇಕಾಗಿದೆ; ಎಲ್ಲರಿಗೂ ದೇವರು ಸದ್ಭುದ್ದಿ ಕೊಡಲಿ ಎಂದು ಆಶಿಸಿದರು.
ಅಭಿಯಾನಕ್ಕೆ ನಾಡಿನಾದ್ಯಂತ ಅನೇಕ ಮಠಾಧೀಶರ ಬೆಂಬಲ
ಪೇಜಾವರ ಶ್ರೀಗಳು ಜನವರಿ 23 ರಿಂದ 29 ರವರೆಗೆ ಕರೆ ನೀಡಿರುವ ಕೋಟಿ ವಿಷ್ಣುಸಹಸ್ರನಾಮ ಮತ್ತು ಶಿವಪಂಚಾಕ್ಷರ ಜಪ ಅಭಿಯಾನಕ್ಕೆ ಉಡುಪಿ ಅಷ್ಟಮಠಾಧೀಶರು, ಮಂತ್ರಾಲಯ, ಉತ್ತರಾದಿ, ಸುಬ್ರಹ್ಮಣ್ಯ, ರಾಮಚಂದ್ರಾಪುರ, ಆದಿಚುಂಚನಗಿರಿ, ಗುರುಪುರ, ಮಾಣಿಲ, ಆರ್ಯ ಈಡಿಗ ಸಂಸ್ಥಾನ, ವ್ಯಾಸರಾಜ ಮಠ, ಶ್ರೀಪಾದರಾಜ ಮಠ, ಕಣ್ವ ಮಠ, ಕೂಡ್ಲಿ ಶಂಕರ ಮಠ, ಚಿತ್ರಾಪುರ, ಬನ್ನಂಜೆ, ಕರಿಂಜ, ಭಂಡಾರಕೇರಿ, ಎಡತೊರೆ, ಆನೆಗೊಂದಿ ಬೆಳಗಾವಿ ಬೆಕ್ಕಿನಕಲ್ಮಠ, ಭೀಮನಕಟ್ಟೆ, ಬಾಳಗಾರು ಮೊದಲಾದ ಸಂಸ್ಥಾನಗಳ ಸ್ವಾಮೀಜಿಯವರು ಬೆಂಬಲ ವ್ಯಕ್ತಪಡಿಸಿದ್ದು ತಮ್ಮ ತಮ್ಮ ಶಿಷ್ಯರು ಭಕ್ತರಿಗೆ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸುವುದಾಗಿ ತಿಳಿಸಿದ್ದು ಇನ್ನೂ ಅನೇಕ ಮಠಾಧೀಶರು ಸಹಯೋಗ ನೀಡಲಿದ್ದಾರೆ ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ