ಹೆಗ್ಗೋಡು ನೀನಾಸಂ ರಸಗ್ರಹಣ ಸಂಸ್ಕೃತಿ ಶಿಬಿರ ಹಾಗೂ ನಾಟಕಗಳ ತಿರುಗಾಟದ ಪ್ರಥಮ ಪ್ರಯೋಗಗಳಿಗೆ ನಾನು ಹಲವಾರು ಬಾರಿ ಸಾಕ್ಷಿಯಾಗಿದ್ದೇನೆ. ಹಾಗೇ ಹೋದಾಗ ನಾನು ನನ್ನ ಗೆಳೆಯರಾದ ಸಂಗಮೇಶ ಬದಾಮಿ, ರಾಜಶೇಖರ ಗಣಾಚಾರಿ, ಮಂಗಳೂರಿನ ಡಿಸೋಜಾ (ಇವರು ತುಳುವಿನಲ್ಲಿ ಬರೆಯುತ್ತಿದ್ದರು ಆಗ) ಕುಂಬಾರ ಹಾಗೂ ಜೋಸೆಫ್ ಅವರ ಜೊತೆ ಒಂದು ಬಾರಿ (ಅದು ಬಹುಶಃ 1992 ಅಥವಾ 93 ಇರಬೇಕು) ಸಾಗರದ ಲೋಕೋಪಯೋಗಿ ಕಛೇರಿಗೆ ಹೋಗಿ ನಾ. ಡಿಸೋಜಾ ಅವರನ್ನು ಭೇಟಿ ಮಾಡಿದ್ದಿದೆ. ಅಲ್ಲಿ ಅವರು ಆಗ ಬಹುಶಃ ಟೈಪಿಸ್ಟ್ ಆಗಿದ್ದರು ಅಂತ ನೆನಪು.ಬಹಳ ಸರಳ ಸೌಜನ್ಯ ತುಂಬಿದ ವ್ಯಕ್ತಿ. ಅವರು ನಮ್ಮನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಪುಟ್ಟ ಮನೆಯಲ್ಲಿ ಅವರ ವಾಸ. ಬಹಳ ಸರಳ ಬದುಕು ಅವರದಾಗಿತ್ತು. ಅವರ ಆಫೀಸಿನಲ್ಲಿ ಅವರ ಬಗ್ಗೆ ಒಬ್ಬ ಅಸಹನೆ ವ್ಯಕ್ತಪಡಿಸಿದ್ದೂ ಇದೆ. ಇಂಥವರು ಎಲ್ಲ ಕಡೆಯೂ ಇರುತ್ತಾರೆ. ಅದಕ್ಕೂ ಅವರ ಚಂದದ ನಗುವೇ ಉತ್ತರವಾಗಿತ್ತು.
ಡಿಸೋಜಾ ಅವರು ಏನೆಂದು ಅವರ ಬರವಣಿಗೆ ಸಾಮಥ್ಯ೯ದ ಅರಿವಿಲ್ಲದ ಜೀವಿಗಳು ಇವು. ಇನ್ನೊಂದು ಅವರು ಲೋಕೋಪಯೋಗಿ ಇಲಾಖೆ,ಆಣೆಕಟ್ಟುಗಳ ನಿರ್ಮಾಣ, ಪುನರ್ವಸತಿ ಮುಂತಾದ ಕಡೆಗಳಲ್ಲಿ ಅವರು ನೌಕರಿ ಮಾಡಿದರೂ ಕೂಡ ಒಂದು ಪೈಸೆ ಕೂಡ ಅವರು ಲಂಚ ಮುಟ್ಟಲಿಲ್ಲ. ಇದು ಕೂಡ ಅವರ ಸಹೊದ್ಯೋಗಿಗಳಿಗೆ ಇವರು ಎಂಥ ಉಪಯೋಗವಿಲ್ಲದ ವ್ಯಕ್ತಿ ಎಂದು ಅನಿಸಿರಬೇಕು. ಆದರೆ ಇವರ ಕಥೆ ಕಾದಂಬರಿಗಳ ಮೂಲಕ ಅವರು ತುಂಬ ಎತ್ತರಕ್ಕೇರಿದರು. ಅವರು ಸ್ವತಃ ಅನುಭವಿಸಿದ್ದ ನೋವು ಅದು' ಮುಳುಗಡೆ' ಕಾದಂಬರಿಯಾಗಿ ಮೂಡಿ ಬಂತು. ಅವರ ಕುಂಜಾಲು ಕಣಿವೆ ಹೂವು ಬಹು ಸುಂದರ. ಹನ್ನೆರಡು ವರ್ಷಕ್ಕೆ ಅಪರೂಪವಾಗಿ ಅರಳುವ ಒಂದು ಹೂವನ್ನು ಇಟ್ಟುಕೊಂಡು ಅವರು ಬರೆದ ಕಥೆ ಬಲು ಜನಪ್ರಿಯವಾಗಿತ್ತು. ಅವರ ಬರಹ ಹೆಚ್ಚಾಗಿ 'ತರಂಗ'ದಲ್ಲಿ ಪ್ರಕಟವಾಯಿತು. ನಂತರ ಬೇರೆ ಎಲ್ಲ ಪತ್ರಿಕೆ ವಿಶೇಷಾಂಕಗಳಲ್ಲಿಯೂ ಮೂಡಿ ಬಂದವು.
ಹೆಗ್ಗೊಡಿನಲ್ಲಿ ಯು ಆರ್ ಅನಂತಮೂರ್ತಿ, ಕೆ.ವಿ ಸುಬ್ಬಣ್ಣ, ಬಿ ಸಿ ರಾಮಚಂದ್ರಶರ್ಮ, ಬಿ ವಿ ಕಾರಂತ, ಕೀರ್ತಿನಾಥ ಕುರ್ತಕೋಟಿ, ಡಿ ಆರ್ ನಾಗರಾಜ, ಕಿರಂ ನಾಗರಾಜ, ಗಿರೀಶ ಕಾಸರವಳ್ಳಿ, ಕೆ ವಿ ಅಕ್ಷರ, ವೈದೇಹಿ ಮೊದಲಾದವರ ಒಡನಾಟ ಸಿಕ್ಕಿದ್ದರೂ ಕೂಡ ನನಗೆ ಡಿಸೋಜಾ ಹೃದಯದ ತುಂಬ ಆವರಿಸಿಕೊಂಡು ಬಿಟ್ಟಿದ್ದರು. ಈಗ ಅವರ ನಿರ್ಗಮನದೊಂದಿಗೆ ಎಲ್ಲ ನೆನಪುಗಳು ಬಿಚ್ಚಿಕೊಳ್ಳುತ್ತಿವೆ. ಕನ್ನಡಕ್ಕೆ ನಾ ಡಿಸೋಜಾ ಅವರು ಒಂದು ಪ್ರತ್ಯೇಕ ಸುಂದರ ದ್ವೀಪದಂತೆಯೇ ಯಾರ ನೆರಳು ಸೋಂಕದಂತೆ ತಮ್ಮದೇ ಶೈಲಿಯಲ್ಲಿ ಬೆಳೆದರು.
ಹೆಗ್ಗೊಡು ನೀನಾಸಂ ಆಗ ನಾಟಕಗಳ ತಿರುಗಾಟ ನಡೆಸುತ್ತಿತ್ತು. (ಈಗಲೂ ಅದು ಮುಂದುವರೆದಿದೆ, ಆದರೆ ಮೊದಲಿದ್ದ ಖದರು ಭರಾಟೆ ಈಗ ಇಲ್ಲ ಎನ್ನಿಸುತ್ತದೆ) ಅದು ಬಹಳ ಜನಪ್ರಿಯತೆಯನ್ನು ಕೂಡ ಪಡೆದಿತ್ತು. ಏಣಗಿ ನಟರಾಜ ಅವರ ಅಭಿನಯ ನೋಡುವುದೇ ಒಂದು ರೀತಿಯ ಖುಷಿ ಕೊಡುತ್ತಿತ್ತು. ಆಗ ಏಣಗಿ ಅಭಿನಯದ 'ಪುಂಟಿಲಾ' ನಾಟಕ ಬಹಳ ಅದ್ಭುತವಾಗಿ ಮೂಡಿ ಬಂದ ಗಳಿಗೆ ಅದು. ಇದನ್ನು ಜಂಬೆ ಅವರು ನಿರ್ದೇಶಿಸಿದ್ದರು. ಪ್ರಸನ್ನ, ಚಿದಂಬರರಾವ ಜಂಬೆ, ಬಿ ವಿ ಕಾರಂತ, ಕೆ ಜಿ ಕೃಷ್ಣಮೂರ್ತಿ... ದಿಗ್ಗಜರ ನಿರ್ದೇಶನ. 'ಪುತಿನ'ರ ಕಾವ್ಯ ನಾಟಕ, ಬಿ ವಿ ಕಾರಂತರ 'ಗೋಕುಲ ನಿರ್ಗಮನ' ಒಂದು 'ದೃಶ್ಯಕಾವ್ಯ'ದ ಅನುಭವ ನೀಡಿತ್ತು. ಇಡೀ ವಿಶ್ವದ ರಂಗಾಸಕ್ತರನ್ನು ತನ್ನಡೆಗೆ ಸೆಳೆಯುವಂತೆ ಮಾಡಿತ್ತು ಸುಬ್ಬಣ್ಣ ಅವರ ಹೆಗ್ಗೋಡು. ನಾನು ಆಗ ತಿರುಗಾಟದ ನಾಟಕಗಳ ಪ್ರಥಮ ಪ್ರದರ್ಶನದ ವಿಮರ್ಶೆಯನ್ನು 'ಸಂಯುಕ್ತ ಕರ್ನಾಟಕ' ಪತ್ರಿಕೆಗೆ ಬರೆಯುತ್ತಿದ್ದೆ. ಅದನ್ನು ಗಮನಿಸಿದ್ದರೆಂದು ಕಾಣುತ್ತದೆ, ನಾ ಡಿಸೋಜಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಈ ವಿಷಯ ಹೇಳಿದಾಗ ನಾನು ಅಚ್ಚರಿಗೊಂಡಿದ್ದೆ.
ಆಗ ಹೆಗ್ಗೋಡಿನಲ್ಲಿ ನಮ್ಮ ಸಂಗಮೇಶ ಬದಾಮಿ ಅವರ ತಮ್ಮ ವಾಯ್ಡಿ ಬದಾಮಿ(ತಮ್ಯಾ) ರಂಗ ತರಬೇತಿ ಪಡೆಯುತ್ತಿದ್ದ ದಿನಗಳು ಅವು. ಮುಂದೆ ವಾಯ್ ಡಿ ಬದಾಮಿ ತಿರುಗಾಟದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿ, ಅನೇಕ ನಾಟಕಗಳನ್ನು ಸಾಣೇಹಳ್ಳಿ ಶಿವಸಂಚಾರಕ್ಕಾಗಿ ನಿರ್ದೇಶನ ಮಾಡಿದರು. ಅವರ ಪತ್ನಿ ಮುಂಜುಳಾ ಬದಾಮಿ ಕೂಡ ನಿನಾಸಂ ಕಲಾವಿದೆ. ಇವರು ನಂತರ ನಾಟಕಗಳನ್ನು ತೆಗೆದುಕೊಂಡು ಅನೇಕ ರಾಜ್ಯಗಳನ್ನು, ದೇಶಗಳನ್ನು ಸುತ್ತಿ ಬಂದಿದ್ದಾರೆ. ಈಗಲೂ ಕೂಡ ರಂಗ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಪರಿಸರ ಹೋರಾಟದಲ್ಲಿಯೂ ನಾ ಡಿಸೋಜಾ ಮುಂಚೂಣಿಯಲ್ಲಿದ್ದರು. ಮಲೆನಾಡಿನಲ್ಲಿ ಕಲ್ಲು ಗಣಿಗಾರಿಕೆ ವಿರುದ್ಧ ಅವರು ಸಮಾನ ಮನಸ್ಕರೊಡನೆ ಸೇರಿ ಹೋರಾಟ ಮಾಡಿದ್ದರು. ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯಲು ಸರ್ಕಾರ ನಿರ್ಧರಿಸಿದಾಗಲೂ ಬೀದಿಗಿಳಿದಿದ್ದರು.
'ರೈತನನ್ನು ತಾನು ಬೆಳೆಯುತ್ತಿದ್ದ ಭೂಮಿಯ ಮೇಲಿನ ಕಾರ್ಖಾನೆಯ ಕಾವಲುಗಾರನನ್ನಾಗಿ ನಿಲ್ಲಿಸುವುದು ಇಂದಿನ ದುಸ್ಥಿತಿಯ ರೂಪಕ' ಎಂದು ನಾರ್ಬರ್ಟ ಡಿಸೋಜಾ ಹೇಳಿದ ಮಾತು ಎಂದಿಗೂ ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ರಾಜಕಾರಣಿಗಳು ತಮ್ಮ ಸ್ವಾರ್ಥಕೊಸ್ಕರ ಯಾವುದೇ ಕೆಲಸ ಮಾಡಲು ಹಿಂಜರಿಯುದಿಲ್ಲ. ಅದನ್ನು ಬರಹಗಾರರು,ಚಿಂತಕರು, ಪರಿಸರವಾದಿಗಳು ವಿರೋಧಿಸಬೇಕು. ರಾಜಕಾರಣಿಗಳೊಂದಿಗೆ ಕೈ ಜೋಡಿಸಿ ಸಮಾಜದ ಸ್ವಾಸ್ಥ್ಯ ಹಾಳುಗೆಡುವಬಾರದು ಎಂಬುದು ಅವರ ಧೋರಣೆಯಾಗಿತ್ತು. ಅವರು ಮಾನವತೆಯನ್ನು ಸದಾ ಪ್ರೀತಿಸಿದರು. ಅವರು ಎಷ್ಟೊಂದು ಬರೆದರು, ಎಷ್ಟೋ ಪ್ರಶಸ್ತಿಗಳು, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರನ್ನು ಹುಡುಕಿಕೊಂಡು ಬಂದವು. ಆದರೂ ಅವರು ಅದನ್ನು ತಲೆಗೇರಿಸಿಕೊಂಡಿರಲಿಲ್ಲ. ಮೃದು ಮಾತಿನ ಸರದಾರರು ಅವರು, ಆದರೆ ಕೆಲವು ಸಂಗತಿಗಳಿಗೆ ಅವರು ಸದಾ ಬದ್ಧರಾಗಿದ್ದರು. ಕೋಮುದ್ವೇಷಗಳಿಂದ ಜನಾಂಗಗಳಲ್ಲಿ ಪರಸ್ಪರ ಅಪನಂಬಿಕೆ ಉಂಟಾಗುತ್ತದೆ, ಅದಕ್ಕಾಗಿ ನಾವೆಲ್ಲ ಒಂದೇ ಎಂಬ ಭಾವನೆಯಿಂದ ಬಾಳೋಣ ಅಂತ ಅವರು ನೀಡಿದ ಕರೆ, ಅದು ಯಾವ ಕಾಲಕ್ಕೂ ಅನ್ವಯಿಸುತ್ತದೆ. ಅವರ ಜನಪರ ನಿಲುವು ಸದಾ ಎಲ್ಲರನ್ನೂ ಕಾಪಿಟ್ಟಿತ್ತು.
ಅವರ 'ಮುಳುಗಡೆ' ಕಾದಂಬರಿ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರ ಕೈಯಲ್ಲಿ 'ದ್ವೀಪ'ವಾಗಿ ಅರಳಿತು. ಅದರಲ್ಲಿ ಸೌಂದಯ೯ ಅವರ ಅಭಿನಯ ಸದಾ ಕಾಲ ನೆನಪಿನಲ್ಲಿ ಉಳಿಯುವಂಥದ್ದು. ಸೌಂದರ್ಯ ಅವರೇ ಈ ಸಿನೇಮಾ ನಿರ್ಮಿಸಿದ್ದರು. ಅವರ 'ದ್ವೀಪ' ಹಾಗೂ 'ಕಾಡಿನ ಬೆಂಕಿ' ಎರಡೂ ರಾಷ್ಟ ಪ್ರಶಸ್ತಿ ಪಡೆದ ಚಿತ್ರಗಳಾಗಿದ್ದವು. ಅವರಂತೆ ಮಲೆನಾಡಿನ ಬಗ್ಗೆ ಬರೆದವರು ತುಂಬ ಕಡಿಮೆ. ಅವರು 81 ಕಾದಂಬರಿಗಳನ್ನು ಬರೆದಿದ್ದಾರೆ. ಮಕ್ಕಳಿಗಾಗಿಯೇ 25 ಕಾದಂಬರಿಗಳನ್ನು ಬರೆದ ಹೆಮ್ಮೆ ಅವರದು. ಸುಮಾರು 500 ಕಥೆಗಳನ್ನು, ನಾಟಕಗಳನ್ನು, ಅನೇಕ ಲೇಖನಗಳನ್ನು ಬರೆದ ಹೆಮ್ಮೆ ಅವರದ್ದು. ಮುಳುಗಡೆ ಅವರ ಜೀವನದಲ್ಲಿ ಹಾಸು ಹೊಕ್ಕಾಗಿತ್ತು. ಮಕ್ಕಳಿಗಾಗಿ ಅವರು 'ಮುಳುಗಡೆಯ ಊರಿಗೆ ಬಂದವರು' ಕಾದಂಬರಿ ಬರೆದರು. ಇದಕ್ಕೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ದೊರಕಿತ್ತು.
ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣದ ವೇಳೆಯಲ್ಲಿ ಅಲ್ಲಿಯೇ ಇದ್ದ ಅವರು ಶರಾವತಿ ಕಣಿವೆ ತಲ್ಲಣಗಳನ್ನು ಖುದ್ದಾಗಿ ನೋಡಿದ್ದರು. ಅವುಗಳೇ ಅವರ ಕಥೆ ಕಾದಂಬರಿಗಳಾಗಿ ಬಂದವು. ಆಗ 112 ಗ್ರಾಮಗಳು ಮುಳುಗಿದವು, ತೊಂಭತ್ತು ಸಾವಿರ ಜನರು ಸ್ಥಳಾಂತರಗೊಂಡಿದ್ದರು. ಜನರ ಜೀವನದಲ್ಲಿ ಏನಾದರೂ ಸುಧಾರಣೆ ಆಗಬಹುದು ಎಂದು ನಂಬಿದ್ದರು. ಆದರೆ ಅದಾವುದು ಆಗದೇ ಹೋಯಿತು ಎಂದಿದ್ದರು ಡಿಸೋಜಾ. ಅವರೆಲ್ಲರೂ ಪಾತ್ರಗಳಾಗಿ ಅಸಹಾಯಕತೆಯಿಂದ ಇವರ ಕಥೆಗಳಲ್ಲಿ ಬಂದು ಮಾತನಾಡಿದರು!
ಕಾಗೋಡು ಸತ್ಯಾಗ್ರಹ 'ನಾಡಿ' ಅವರ ಮೇಲೆ ತುಂಬ ಪ್ರಭಾವ ಬೀರಿತು. ಗೇಣಿ ಭತ್ತ ಅಳೆದು ಕೊಡುವ ಕೊಳಗದ ಬಗ್ಗೆ ಬರೆದ ಅವರ 'ಕೊಳಗ' ಕಾದಂಬರಿಯು ಇಡೀ ಮಲೆನಾಡಿನ ರೈತರ ಕೈಯಲ್ಲಿ ತೊಡಿಸಿದ ಕೊಳಗದ ರೂಪಕವಾಗಿದೆ ಇದು.
ಮಲೆನಾಡಿನ 'ಮಳೆ' ನಾಡಿ ಅವರ ಪ್ರಮುಖ ಸಂಗಾತಿಯಾಗಿತ್ತು. ಅದು ಅವರ ಕಥೆ ಕಾದಂಬರಿ ನಾಟಕಗಳಲ್ಲಿ ಸದಾ ಪಾತ್ರ ವಹಿಸುತ್ತಿತ್ತು. ಮಳೆಯೊಂದಿಗೆ ಜೋಗದೊಂದಿಗೆ ಬೆಳೆದರು ಡಿಸೋಜಾ, ಇದಲ್ಲದೇ ಇವರೊಂದಿಗೆ ಇವರ ಪಾತ್ರಗಳೂ ಕೂಡ ಸಮಾಜದ ಬೆಳವಣಿಗೆಗೆ, ಕುಂದು ಕೊರತೆಗಳನ್ನು ನಿವಾರಿಸಲು ತುಂಬ ಮಹತ್ವದ ಪಾತ್ರ ವಹಿಸಿದವು!
ನನ್ನ ಮಟ್ಟಿಗೆ 'ನಾಡಿ' ಕರುನಾಡಿನ 'ಜೀವಜಲ'ದ ನಿಜ 'ಜೀವನಾಡಿ'ಯಾಗಿದ್ದರು. ಅವರು ಸದಾ 'ನೀರಿನ ಮಟ್ಟವನ್ನು ಅಳೆಯುವ ಮನುಷ್ಯನಿ'ಗಾಗಿ ದಾರಿ ಕಾಯುತ್ತಿದ್ದರು.
ಬಹಳ ಸೌಮ್ಯ ವ್ಯಕ್ತಿತ್ವದ ಸೌಜನ್ಯ ವ್ಯಕ್ತಿ 'ನಾಡಿ' ಅವರು ಎಂದಿಗೂ ಚರ್ಚಗಳಿಗೆ ಹೋಗಲಿಲ್ಲ. ಆದರೆ ಅವರ ಮನೆಯವರಿಗೆ ಅವರ ಆಚರಣೆಗಳಿಗೆ ಎಂದೂ' ಅಡ್ಡಿ ಪಡಿಸಲಿಲ್ಲ. 'ನಾಡಿ' ಅವರನ್ನು ನಾಡು ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೈಭವದಿಂದ ಮೆರೆಸಿ ತಾನೂ ಖುಷಿ ಪಟ್ಟಿತು. ಆದರೂ ಅವರಿಗೆ ಇನ್ನೂ ಸಿಗಬೇಕಾದ ಅನೇಕ ಪುರಸ್ಕಾರಗಳು ಸಿಗದೇ ಹೋದದ್ದು ಸ್ವತಃ ಡಿಸೋಜ ಅವರಿಗೆ ಏನೂ ಅನಿಸಿರಲಿಕ್ಕಿಲ್ಲ, ಆದರೆ ಅನೇಕರನ್ನು ಆ ನೋವು ಸದಾ ಕಾಡುತ್ತಿರುತ್ತದೆ.
ಬಹುಶಃ ನಾ. ಡಿ'ಸೋಜಾ ಅಂತಹ ಸೌಜನ್ಯಯುತ ವ್ಯಕ್ತಿಗಳನ್ನು ಪುನಃ ನಾಡು ಪಡೆಯಲಾರದು.
- ಶ್ರೀನಿವಾಸ ಜಾಲವಾದಿ, ಸುರಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ