ನಾನು ತಿಳಿದುಕೊಂಡ ಮಟ್ಟಿಗೆ ಸಹಕಾರ ಕ್ಷೇತ್ರ ರಾಜಕೀಯದಿಂದ ದೂರವಿದ್ದಷ್ಟೂ ಸಹಕಾರದ ತತ್ವಗಳನ್ನು ಅಳವಡಿಸಿಕೊಳ್ಳಲು ಹೆಚ್ಚು ಪೂರಕವಾದ ಪರಿಸರ ಸೃಷ್ಟಿ ಮಾಡಬಹುದು ಅನ್ನುವುದು ಸಹಕಾರಿ ತತ್ವದಲ್ಲಿ ನಂಬಿಕೆ ಇರುವವರ ಲೆಕ್ಕಾಚಾರ. ಸಹಕಾರ ಮತ್ತು ಶಿಕ್ಷಣ ಕ್ಷೇತ್ರಗಳು ವಾಸ್ತವಿಕ ರಾಜಕೀಯದಿಂದ ದೂರವಿದ್ದಷ್ಟು ಹೆಚ್ಚು ಕಾಲದವರೆಗೆ ಆರೇೂಗ್ಯಕರವಾಗಿ ಉಸಿರಾಡಲು ಸಾಧ್ಯ. ಹಾಗಂತ ರಾಜಕೀಯ ವ್ಯಕ್ತಿಗಳು ಸಹಕಾರಿ ರಂಗಕ್ಕೆ ಬರ ಬಾರದು ಅನ್ನುವುದು ನನ್ನ ಅಭಿಪ್ರಾಯವಲ್ಲ. ಆದರೆ ಸಹಕಾರದಲ್ಲಿ ಅವರು ಕಾರ್ಯ ನಿರ್ವಹಿಸುವಾಗ ತಮ್ಮ ಪಕ್ಷಗಳ ರಾಜಕೀಯವನ್ನು ಸಹಕಾರದೊಳಗೆ ಎಳೆದು ತರಬಾರದು. ಇದರಿಂದಾಗಿ ಸಹಕಾರಿ ಸ್ವಾಸ್ಥ್ಯ ಖಂಡಿತವಾಗಿಯೂ ಕೆಟ್ಟು ಹೇೂಗಬಹುದು ಅನ್ನುವುದು ಸಹಕಾರಿ ತತ್ವದ ಬಹು ಮುಖ್ಯ ಕಾಳಜಿಯೂ ಹೌದು.
ನಾನು ಇದುವರೆಗೆ ಪ್ರತಿ ವರುಷವೂ ಹತ್ತು ಹಲವು ಸಹಕಾರ ಕಾರ್ಯಕ್ರಮದಲ್ಲಿ ದಿಕ್ಸೂಚಿ ಉಪನ್ಯಾಸ ನೀಡಲು ಹೇೂಗಿದ್ದೇನೆ. ಅಲ್ಲಿ ಎಲ್ಲಿಯೂ ಕೂಡಾ ರಾಜಕೀಯವನ್ನು ಎಳೆದು ತಂದವರನ್ನು ನಾನು ನೇೂಡಿಯೇ ಇಲ್ಲ. ಪ್ರತಿ ಕಾರ್ಯಕ್ರಮದಲ್ಲಿಯೂ ಜನಪ್ರತಿನಿಧಿಗಳು ಭಾಗವಹಿಸುತ್ತಿದ್ದರು. ಅವರು ಯಾರು ಕೂಡಾ ತಮ್ಮ ಪಕ್ಷವನ್ನು ಬಿಂಬಿಸಿಕೊಂಡಿದ್ದನ್ನು ನಾನು ನೇೂಡಿಲ್ಲ. ಇಂತಹ ಸಹಕಾರದ ಬದುಕಿನ ಕಾರ್ಯಕ್ರಮಗಳನ್ನು ನೇೂಡಿಯೇ ಖುಷಿಪಟ್ಟಿದ್ದೇನೆ. ಮಾತ್ರವಲ್ಲ ಸಹಕಾರ ರಂಗ ಮತ್ತು ಶಿಕ್ಷಣ ಕ್ಷೇತ್ರ ನಮ್ಮ ಇಡಿ ಸಮಾಜವನ್ನು ಸಮಗ್ರತೆಯ ನೆಲೆಯಲ್ಲಿ ಎತ್ತಿ ಸುಧಾರಿಸಬಲ್ಲ ಶಕ್ತಿಯುತವಾದ ಸಂಸ್ಥೆಗಳೆಂದು ನಂಬಿಕೆ ನಮ್ಮಲ್ಲಿ ಇತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯ ಕೆಲವೊಂದು ರೈತ ಸೇವಾ ಸಹಕಾರಿ ಸಂಸ್ಥೆಗಳ ಚುನಾವಣಾ ಫಲಿತಾಂಶವನ್ನು ಪತ್ರಿಕೆಯಲ್ಲಿ ಪ್ರಕಟಿಸುವಾಗ ಗೆದ್ದ ಅಭ್ಯರ್ಥಿಗಳು ತಮ್ಮ ಗೆಲುವನ್ನು ತಮ್ಮ ತಮ್ಮ ಪಕ್ಷಗಳಿಗೆ ಆಪ೯ಣೆಮಾಡಿಕೊಳ್ಳುವುದರ ಜೊತೆಗೆ ತಮ್ಮ ಪಕ್ಷಗಳ ಗೆಲುವು ಅನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳುವುದನ್ನು ನೇೂಡಿದರೆ ಇಂದು ಸಹಕಾರಿ ರಂಗದಲ್ಲಿ ನಡೆದ ಚುನಾವಣೆಯೊ ಅಥವಾ ರಾಜಕೀಯ ಪಕ್ಷಗಳು ತಮ್ಮ ಚಿಹ್ನೆಗಳನ್ನು ಬಳಸಿ ಸಹಕಾರಿ ರಂಗದಲ್ಲಿ ನಡೆಸಿದ ಚುನಾವಣಾ ಫಲಿತಾಂಶವೊ ಅನ್ನುವ ಸಂಶಯ ಮೂಡಲು ಕಾರಣವಾಗಿದೆ. ಈ ಸಹಕಾರಿ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಗೆಲುವು ನಮ್ಮ ಪಕ್ಷಕ್ಕೆ ಬಂದಿದೆ. ಇದು ಸಹಕಾರಿ ರಂಗಕ್ಕೆ ಹೇಳಿಸಿದ ಸುದ್ದಿ ಅಲ್ಲ.
ನಿಮ್ಮ ಹೃದಯದಲ್ಲಿ ನಿಮ್ಮ ನಿಮ್ಮ ಪಕ್ಷಗಳ ಕುರಿತಾಗಿ ಗೌರವ ಅಭಿಮಾನವಿರಲಿ. ಆದರೆ ಅದನ್ನು ಸಹಕಾರಿ ಸಂಸ್ಥೆಯ ಒಳಗೆ ಪ್ರಕಟಿಸುವ ಅಗತ್ಯವಿಲ್ಲ ಅನ್ನುವುದು ನನ್ನ ಖಚಿತವಾದ ಅಭಿಪ್ರಾಯ. ಮಾತ್ರವಲ್ಲ ಒಂದು ವೇಳೆ ಇಂತಹ ಸಹಕಾರಿ ಸಂಸ್ಥೆಗಳಲ್ಲಿ ಯಾವುದೊ ಅವ್ಯವಹಾರವೊ ಅಥವಾ ಮುಳುಗಿಯೇ ಹೇೂಯಿತು ಅಂದರೆ ಇದರ ಜವಾಬ್ದಾರಿಯನ್ನು ಇಂತಹ ರಾಜಕೀಯ ಪಕ್ಷಗಳು ಸಾಂಘಿಕವಾಗಿ ವಹಿಸಿಕೊಳ್ಳಲು ಸಿದ್ಧರಿದ್ದಾರೆಯೇ ಅನ್ನುವುದು ಇನ್ನೊಂದು ಪ್ರಶ್ನೆ. ಅಂತೂ ಸಹಕಾರಿ ವ್ಯವಸ್ಥೆ ರಾಜಕೀಯ ಪಕ್ಷಗಳ ಹೆಸರಿನಿಂದ ದೂರ ನಿಲ್ಲವುದು ಸಹಕಾರ ವ್ಯವಸ್ಥೆಯ ಆರೇೂಗ್ಯ ಪೂರ್ಣ ಬೆಳವಣಿಗೆಯ ದೃಷ್ಟಿಯಿಂದ ಅತೀ ಅಗತ್ಯವಿದೆ ಅನ್ನುವುದು ನಮ್ಮೆಲ್ಲರ ಅನಿಸಿಕೆ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ