ಮಂಗಳೂರು ಲಿಟ್ ಫೆಸ್ಟ್ 7ನೇ ಆವೃತ್ತಿ ಮೊದಲ ದಿನ ಕೊನೆಯ ಸಂವಾದ
ಮಂಗಳೂರು: ಪ್ರಜಾಪ್ರಭುತ್ವದ ಯಶಸ್ಸಿಗೆ ಜನರ ಪಾಲುದಾರಿಕೆ ಅತೀ ಅಗತ್ಯ. ಕೇಂದ್ರ ಸರಕಾರವು ಎಲ್ಲ ರಾಜ್ಯಗಳನ್ನು ಒಂದೇ ರೀತಿಯಾಗಿ ನೋಡುತ್ತದೆಯೇ ಹೊರತು, ಯಾವುದೇ ರಾಜ್ಯಕ್ಕೆ ತಾರತಮ್ಯದ ಧೋರಣೆಯಿಂದ ನೋಡುವುದಿಲ್ಲ. ರಾಜ್ಯದ ಸಂಸದರ ಸಂಖ್ಯೆ ಆಧರಿಸಿ ತಾರತಮ್ಯ ಮಾಡುವುದಿಲ್ಲ ಎಂದು ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದರು.
ಭಾರತ್ ಫೌಂಡೇಶನ್ ಆಯೋಜಿಸಿರುವ ಮಂಗಳೂರು ಲಿಟ್ ಫೆಸ್ಟ್‌ನ 7ನೇ ಆವೃತ್ತಿಯ ಮೊದಲ ದಿನದ ಕೊನೆಯ ಅಧಿವೇಶನದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಆಡಳಿತ ಎಂಬ ವಿಚಾರದಲ್ಲಿ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿರಿಯ ಪತ್ರಕರ್ತ ಜೈದೀಪ್ ಶೆಣೈ ಸಂವಾದವನ್ನು ನಡೆಸಿಕೊಟ್ಟರು.
ಜನರು ತಮ್ಮ ಹಕ್ಕುಗಳನ್ನಷ್ಟೇ ಗಮನಿಸದೆ ಪ್ರಜಾಪ್ರಭುತ್ವದ ಎಲ್ಲ ಪ್ರಕ್ರಿಯೆಗಳಲ್ಲಿ ಸಹಭಾಗಿತ್ವ ಹೊಂದಿದರೆ ಅದು ಸಂಪೂರ್ಣ ಯಶಸ್ವಿಯಾಗುತ್ತದೆ. ಸಹಭಾಗಿತ್ವ ನೀಡುವುದು ಮೂಲಭೂತ ಕರ್ತವ್ಯವೂ ಹೌದು. ಹೆಚ್ಚು ಹೆಚ್ಚು ವಿದ್ಯಾವಂತರಾದ ಯುವ ಜನತೆ ರಾಜಕೀಯ ಪ್ರವೇಶಿಸಬೇಕು. ಪಂಚಾಯತ್ ಮಟ್ಟದ ರಾಜಕೀಯದ ಮೂಲಕ ಪ್ರಜಾಪ್ರಭುತ್ವದ ಸಕ್ರಿಯ ಸಹಭಾಗಿತ್ವಕ್ಕೆ ಪ್ರವೇಶಿಸಬೇಕು ಎಂದು ಅಣ್ಣಾಮಲೈ ಕರೆ ನೀಡಿದರು.
ರಾಜಕೀಯವನ್ನು ಅರ್ಥಮಾಡಿಕೊಳ್ಳುವುದು ಬೇರೆ, ಚುನಾಯಿತ ಪ್ರತಿನಿಧಿಯಾಗಿ ಕೆಲಸ ಮಾಡುವುದು ಬೇರೆ. ಅದೇ ರೀತಿ ಸಿದ್ಧಾಂತಕ್ಕೆ ಬದ್ಧರಾಗಿ ವರ್ತಿಸುವುದು ಬೇರೆ. ಈ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿದುಕೊಂಡು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಪ್ರಧಾನಿ ನರೆಂದ್ರ ಮೋದಿಯವರು ಈ ವಿಷಯಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಸ್ವತಃ ಅನುಸರಿಸಿ ತೋರಿಸಿದ್ದಾರೆ. ಅವರು ನಮಗೆ ಜೀವಂತ ಮಾದರಿಯಾಗಿದ್ದಾರೆ ಎಂದರು ಅಣ್ಣಾಮಲೈ.
ದೇಶದಲ್ಲೀಗ ನವ ಮಧ್ಯಮ ವರ್ಗದ ಜನಸಂಖ್ಯೆ ಹೆಚ್ಚಾಗುತ್ತಿದೆ. ಅಂದರೆ ಆರ್ಥಿಕ ಅಭಿವೃದ್ಧಿಯ ಫಲಗಳು ಅವರನ್ನು ತಲುಪುತ್ತಿವೆ. ಈ ವರ್ಗದ ಆಶೋತ್ತರಗಳು, ನಿರೀಕ್ಷೆಗಳು ಹೆಚ್ಚುತ್ತಿವೆ. ಅದೇ ವೇಳೆಗೆ ಹಿರಿಯ ನಾಗರಿಕರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಅವರ ಆರೋಗ್ಯಪಾಲನೆ ಕೂಡ ಸವಾಲಾಗುತ್ತಿದೆ. ಇದು ಯಾವುದೇ ದೇಶಕ್ಕೆ ಒಂದಲ್ಲ ಒಂದು ಹಂತದಲ್ಲಿ ಎದುರಾಗುತ್ತದೆ. ಇವನ್ನೆಲ್ಲ ಒಂದು ಪ್ರಜಾಸತ್ತಾತ್ಮಕ ದೇಶವಾಗಿ ಭಾರತ ನಿರ್ವಹಿಸಬೇಕಾಗಿದೆ ಎಂದು ಅಣ್ಣಾಮಲೈ ನುಡಿದರು.
ತಮಿಳುನಾಡಿನ ಕಾಂಚೀಪುರಂ ಸಮೀಪದ ಹಲ್ಳಿಯೊಂದರ ಉದಾಹರಣೆ ನೀಡಿದ ಅವರು, 1200 ವರ್ಷಗಳ ಹಿಂದೆಯೇ ಅಲ್ಲಿ ಜನರ ಸಕ್ರಿಯ ಸಹಭಾಗಿತ್ವದ ಪ್ರಜಾಪ್ರಭುತ್ವದ ವ್ಯವಸ್ತೆ ಇತ್ತು ಎಂದು ಹೇಳಿದರು. ತಳಮಟ್ಟದಲ್ಲಿ ಪ್ರಜಾಪ್ರಭುತ್ವ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಇತ್ತು. ಅದೇನು ವಿದೇಶದಿಂದ ಬಂದ ಹೊಸ ಕಲ್ಪನೆಯಲ್ಲ ಎಂದರು.
ದೇಶದಲ್ಲಿ ವಿಐಪಿ ಸಂಸ್ಕೃತಿಗೆ ಅವಕಾಶವಿಲ್ಲ. ಅದು ಇರಲೂಬಾರದು ಎನ್ನುವುದೇ ಪ್ರಧಾನಿ ಮೋದಿ ಅವರ ಧೋರಣೆ. ಅದಕ್ಕಾಗಿಯೇ ಅವರು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಜನರ ಜತೆ ಬೆರೆಯುವ ಯಾವ ಅವಕಾಶಗಳನ್ನೂ ಅವರು ಬಿಡುವುದಿಲ್ಲ. ರಾಜಕೀಯ ಪ್ರವೇಶಿಸುವ ಹೊಸಬರಿಗೆ ಜನಸಂಪರ್ಕದ ಪಾಠವನ್ನು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಅವರು ಪ್ರಾಯೋಗಿಕವಾಗಿ ಅನುಸರಿಸಿ ತೋರಿಸಿದ್ದಾರೆ ಎಮದು ಅಣ್ಣಾಮಲೈ ಹೇಳಿದರು.
ಹೊಂದಾಣಿಕೆ ರಾಜಕೀಯ ಎಂಬ ಬಣ್ಣನೆ ಸಲ್ಲ:
ಕರ್ನಾಟಕದಲ್ಲಿ ನಡೆಯುತ್ತಿದೆ ಎನ್ನಲಾಗುವ ರಾಜಿ ರಾಜಕೀಯ- ಹೊಂದಾಣಿಕೆ ರಾಜಕೀಯದ ಬಗ್ಗೆ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸುತ್ತ, ಪ್ರಾಥಮಿಕವಾಗಿ ರಾಜಕೀಯ ಎಂಬುದು ಒಂದಲ್ಲ ಒಂದು ರೀತಿಯ ಹೊಂದಾಣಿಕೆಯ ವ್ಯವಸ್ಥೆಯೊಂದಿಗೇ ಸಾಗಬೇಕಿದೆ. ವೈಯಕ್ತಿಕ ದ್ವೇಷಕ್ಕೆ ರಾಜಕೀಯದಲ್ಲಿ ಅವಕಾಶ ಇರಕೂಡದು. ಪ್ರಧಾನಿ ಮೋದಿ ಅವರು 2014ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೂ ಮೊದಲ ಅವಧಿಯಲ್ಲಿ 370ನೇ ವಿಧಿ ರದ್ದು ಮಾಡಲಿಲ್ಲ. ಸೂಕ್ತ ಸಮಯ, ಹದಗೊಂಡ ವಾತಾವರಣಕ್ಕಾಗಿ ಕಾದು 2019ರ ಆಗಸ್ಟ್‌ನಲ್ಲಿ ರದ್ದುಮಾಡಿದರು. ಇದೂ ಸಹ ಹೊಂದಾಣಿಕೆ ರಾಜಕೀಯವೇ ಆಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಅವಧಿಯಲ್ಲಿ ತಮಿಳುನಾಡಿನ ಡಿಎಂಕೆ ಜತೆಗೆ ಮೈತ್ರಿ ಮಾಡಿಕೊಂಡಿದ್ದರು. ಜಮ್ಮು- ಕಾಶ್ಮೀರದಲ್ಲಿ ಒಂದು ಹಂತದಲ್ಲಿ ಬಿಜೆಪಿ ಆಡಳಿತ ಸರಕಾರದ ಭಾಗವಾಗಿರದಿದ್ದರೆ 370ನೇ ವಿಧಿ ರದ್ದು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದೂ ಸಹ ಹೊಂದಾಣಿಕೆ ರಾಜಕೀಯದ ಒಂದು ಕಾರ್ಯತಂತ್ರವೇ ಆಗಿತ್ತು. ಹಾಗಾಗಿ ರಾಜಿ ರಾಜಕೀಯ ಎನ್ನುವ ಬಿಂಬಿಸುವಿಕೆ ಸರಿಯಲ್ಲ ಎಂದು ಅಣ್ಣಾಮಲೈ ಪ್ರತಿಪಾದಿಸಿದರು.
ಅಂಬೇಡ್ಕರ್ ಅವರು ರಚಿಸಿದ ಮೂಲ ಸಂವಿಧಾನದಲ್ಲಿ ಸೋಶಿಯಲಿಸ್ಟ್ ಮತ್ತು ಸೆಕ್ಯುಲರ್ ಎಂಬ ಪದಗಳಿರಲಿಲ್ಲ. ಅವುಗಳನ್ನು ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ 42ನೇ ತಿದ್ದುಪಡಿಯಲ್ಲಿ ಅವುಗಳನ್ನು ಸೇರಿಸಿದರು. ವಾಸ್ತವದಲ್ಲಿ ಅಂಬೇಡ್ಕರ್ ಅವರ ಅಭಿಮತದ ಪ್ರಕಾರ, ಭಾರತದ ಸಾಮಾಜಿಕ ವ್ಯವಸ್ಥೆ ಸಹಜವಾಗಿಯೇ ಸೆಕ್ಯುಲರ್ ಆಗಿದೆ. ಹಿಂದೂ ಜೀವನ ವಿಧಾನವೇ ಎಲ್ಲರನ್ನು ಒಳಗೊಂಡಿರುವಂಥದ್ದು. ಹಾಗಾಗಿ ಅಂಬೇಡ್ಕರ್ ಆ ಪದ ಸೇರಿಸಲು ಒಪ್ಪಿರಲಿಲ್ಲ ಎಂದು ಅಣ್ಣಾಮಲೈ ನೆನಪಿಸಿದರು.
ಹಿಂದಿ ವಿವಾದ:
ಹಿಂದಿ ರಾಷ್ಟ್ರಭಾಷೆ ಎಂಬ ವಿವಾದ ಬೇಕಿಲ್ಲ. ಹಿಂದಿನ ಎರಡು ರಾಷ್ಟ್ರೀಯ ಶಿಕ್ಷಣ ನೀತಿಗಳಲ್ಲಿ ಎರಡು ಭಾಷೆಗಳ ನೀತಿ ಅಳವಡಿಸಿ ಹಿಂದಿಯನ್ನು ಕಡ್ಡಾಯ ಮಾಡಿದ್ದರು. ಆದರೆ ಮೋದಿ ಸರಕಾರ ಬಂದ ನಂತರ ಜಾರಿಗೊಳಿಸಲಾದ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮೂರು ಭಾಷೆಗಳ ಅಧ್ಯಯನ ನೀತಿ ಅಳವಡಿಸಲಾಗಿದೆ. ಯಾವುದೇ ಭಾಷೆಯನ್ನು ರಾಷ್ಟಭಾಷೆ ಎಂದು ಕರೆದಿಲ್ಲ ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದರು.
ತಮಿಳುನಾಡಿನ ಜನತೆ ಮೂಲತಃ ದೇಶಭಕ್ತರು. ಮಾಜಿ ರಕ್ಷಣಾ ಪಡೆಗಳ ಮುಖ್ಯಸ್ಥರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಾಗ ರಾಜ್ಯದ ಜನತೆ ತೋರಿದ ದೇಶಪ್ರೇಮ ಅಗಾಧವಾಗಿತ್ತು. ರಾಜ್ಯವನ್ನು ಆಳಿದ ಎರಡು ದ್ರಾವಿಡ ಪಕ್ಷಗಳು ಜನರನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ ಅಷ್ಟೆ. ಒಂದಲ್ಲ ಒಂದು ದಿನ ಈ ಪರಿಸ್ಥಿತಿ ಬದಲಾಗಬೇಕು, ಆಗಿಯೇ ಆಗುತ್ತದೆ ಎಂದು ಅವರು ನುಡಿದರು.
ಸೆಕ್ಯುಲರ್ ಎಂದು ಹೇಳಿಕೊಂಡು ಹಿಂದೂ ದೇವಸ್ಥಾನಗಳ ಮೇಲೆ ಮಾತ್ರ ಸರಕಾರದ ನಿಯಂತ್ರಣ ಯಾಕೆ ಎಂಬ ಪ್ರೇಕ್ಷಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ದಿನವೇ ದೇವಸ್ಥಾನಗಳ ಮೇಲೆ ಸರಕಾರದ ನಿಯಂತ್ರಣದ ಕಾಯ್ದೆಯನ್ನು ರದ್ದುಪಡಿಸಲಾಗುತ್ತದೆ ಎಂದು ಉತ್ತರಿಸಿದರು.
ಅಣ್ಣಾಮಲೈ ಅವರ ಜನಪ್ರಿಯತೆ ಎಷ್ಟು ಎಂಬುದನ್ನು ಕಿಕ್ಕಿರಿದು ತುಂಬಿದ್ದ ಸಭಾಂಗಣವೇ ಸಾಕ್ಷಿ ನುಡಿಯಿತು. ಅದರಲ್ಲೂ ವಿದ್ಯಾರ್ಥಿಗಳು, ಯುವ ಜನತೆಯ ಸಂಖ್ಯೆ ಅಧಿಕವಾಗಿತ್ತು. ಆಸನಗಳು ಭರ್ತಿಯಾಗಿ ಅಷ್ಟೇ ಸಂಖ್ಯೆಯ ಕುತೂಹಲಿ ಪ್ರೇಕ್ಷಕರು ನಿಂತುಕೊಂಡು ಅಣ್ಣಾಮಲೈ ಅವರ ಜತೆಗಿನ ಸಂವಾದವನ್ನು ಆಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ