ವಿದ್ಯಾರ್ಥಿಗಳು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರೂಪುಗೊಳ್ಳಬೇಕು

Upayuktha
0

ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಪುರಸ್ಕಾರ ವಿತರಿಸಿದರು.


ಉಜಿರೆ: ಮಾನವ ಸಂಪನ್ಮೂಲ ದೇಶದ ಅಮೂಲ್ಯ ಸಂಪತ್ತು ಆಗಿದ್ದು ಇಂದಿನ ವಿದ್ಯಾರ್ಥಿಗಳೆ ಮುಂದಿನ ಪ್ರಜೆಗಳಾಗುವುದರಿಂದ  ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.


ಅವರು ಮಂಗಳವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ಆಯೋಜಿಸಿದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ವಿಜೇತರಿಗೆ ಪುರಸ್ಕಾರ ವಿತರಿಸಿ ಮಾತನಾಡಿದರು.


ಬಡತನ ಶಾಪವಲ್ಲ, ಸಿರಿತನ ವರವಲ್ಲ ಎಂದು ಹೇಳಿದ ಅವರು, ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಸತ್ಯ, ನ್ಯಾಯ, ನೀತಿ, ದಯೆ, ಅನುಕಂಪ, ಸೇವೆ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಬಹುಮುಖಿ ಸೇವೆಯನ್ನು  ಶ್ಲಾಘಿಸಿದ ಅವರು ಚರ್ತುರ್ವಿಧ ದಾನಪರಂಪರೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಅವರು ಆಯೋಜಿಸಿದ ಇಂದಿನ ಸಮಾರಂಭ ವಿ.ವಿ.ಯ. ಘಟಿಕೋತ್ಸವಕ್ಕಿಂತಲೂ ಮಹತ್ವಪೂರ್ಣವಾಗಿ ಮೂಡಿ ಬಂದಿದೆ ಎಂದು ಸಂತಸವ್ಯಕ್ತಪಡಿಸಿದರು.


ಶುಭಾಶಂಸನೆ ಮಾಡಿದ ಚಲನಚಿತ್ರ ನಿರ್ದೇಶಕ ವಿ. ಮನೋಹರ್ ಮಾತನಾಡಿ, ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಬಾಲ್ಯದಿಂದಲೆ ವಿದ್ಯೆಯೊಂದಿಗೆ ವಿನಯ, ಮಾನವೀಯತೆ, ಗುರು-ಹಿರಿಯರನ್ನು ಗೌರವಿಸುವುದು, ವಿವೇಕ ಇತ್ಯಾದಿಗಳನ್ನು ಕಲಿಸಿಕೊಡಬೇಕು. ವಿದ್ಯಾರ್ಥಿಗಳು ಅಹಂಕಾರ ಮತ್ತು ಅಸೂಯೆ ದೂರಮಾಡಿದಾಗ ಉನ್ನತ ಸಾಧನೆ ಸಾಧ್ಯವಾಗುತ್ತದೆ ಎಂದರು. ತನ್ಮೂಲಕ ಸುಮನಸರಾಗಬೇಕು ಎಂದು ಅವರು ಹಾರೈಸಿದರು.


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಿಕ್ಷಕರು ಹಾಗೂ ರಕ್ಷಕರು ಕಥೆಗಳ ಮೂಲಕ ಮಕ್ಕಳಿಗೆ ಉತ್ತಮ ಸಂದೇಶ, ಮಾರ್ಗದರ್ಶನ ನೀಡಬೇಕು ಎಂದರು. ಪಂಚೇಂದ್ರಿಯಗಳ ನಿಯಂತ್ರಣದಿಂದ ಎಲ್ಲರೂ ಸುಮನಸರಾಗಬಹುದು ಎಂದು ಹೇಳಿದರು.


ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿದ್ದರು.

ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಧನ್ಯವಾದವಿತ್ತರು. ಯೋಗ ನಿರ್ದೇಶಕ ಶಶಿಕಾಂತ ಜೈನ್ ಸ್ವಾಗತಿಸಿದರು. ರಾಘವೇಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.


   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top