ಮಹಿಳೆಯರ ಸಂರಕ್ಷಣೆ ಕಾಯ್ದೆ ಸಮರ್ಪಕ ಜಾರಿ ಮಾಡಿ: ನ್ಯಾ. ಕಿರಣ್ ಎಸ್ ಗಂಗಣ್ಣನವರ್

Upayuktha
0


  

ಉಡುಪಿ: ಕೌಟುಂಬಿಕ ಹಿಂಸೆಯಿಂದ ಸಂತ್ರಸ್ತರಾಗುವ ಮಹಿಳೆಯರನ್ನು ರಕ್ಷಿಸುವ ಸಲುವಾಗಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಈ ಕಾಯಿದೆಯಡಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಅಧಿಕಾರಿಗಳು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಟಾನ ಮಾಡುವುದರೊಂದಿಗೆ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕಿರಣ್ ಎಸ್ ಗಂಗಣ್ಣನವರ್ ಹೇಳಿದರು.


ಅವರು ಮಂಗಳವಾರ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮೂರನೇ ಮಹಡಿಯ ಕಾನ್ಪರೆನ್ಸ್ ಹಾಲ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕೌಂಟುಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ಕಾಯ್ದೆಯ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರ ಕುರಿತ ಎರಡು ದಿನಗಳ ಓರಿಯೆಂಟೇಶನ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ದೈನಂದಿನ ಜೀವನದಲ್ಲಿ ಸಮಾಜ ಹಾಗೂ ಕುಟುಂಬಗಳಲ್ಲಿ ಅನೇಕ ರೀತಿಯಲ್ಲಿ ಬದಲಾವಣೆಗಳಾಗುವುದನ್ನು ನಾವು ಕಾಣುತ್ತಿದ್ದೇವೆ. ಬದಲಾವಣೆ ಪ್ರಕೃತಿಯ ನಿಯಮ. ಈ ಪರಿಸ್ಥಿತಿಗೆ ಒಗ್ಗಿಕೊಂಡು ಬದುಕು ಸಾಗಿಸುವುದು ಜೀವಿಯ ಅಸ್ತಿತ್ವಕ್ಕೆ ಇರುವ ಸವಾಲಾಗಿದೆ ಎಂದರು. 


ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಭಾಗೀದಾರರುಗಳು ಕೌಟುಂಬಿಕ ಹಿಂಸೆಯ ಪ್ರಕರಣಗಳ ನೈಜತೆಯನ್ನು ಹತ್ತಿರದಿಂದ ಗಮನಿಸಿರುವುದರೊಂದಿಗೆ ಸಮಸ್ಯೆಗಳನ್ನು ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಅರಿತಿರುತ್ತಾರೆ. ಕೌಟುಂಬಿಕ ಕಲಹ, ಹಿಂಸೆಗಳನ್ನು ಅನುಭವಿಸಿದ ಸಂತ್ರಸ್ತ ಮಹಿಳೆಯರಿಗೆ ಧೈರ್ಯ, ಸ್ಥೈರ್ಯ ನೆಮ್ಮದಿಗಳನ್ನು ಯಾವ ರೀತಿಯಲ್ಲಿ ತುಂಬಬಹುದು ಎಂಬುದನ್ನು ಭಾಗೀದಾರರು ಅರಿತುಕೊಳ್ಳಲು ಈ ಕಾರ್ಯಾಗಾರವು ಪ್ರಯೋಜನಕಾರಿದೆ ಎಂದರು.


ಕೆಲವು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೂ ಅದರ ಅರಿವೇ ಅವರಿಗೆ ಇರುವುದಿಲ್ಲ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ಸಮಯದಲ್ಲಿ ಸಮಾಲೋಚನೆ ಹಾಗೂ ಸಲಹೆ ದೊರೆತರೆ ಆಗುವ ಅನಾಹುತವನ್ನು ತಪ್ಪಿಸುವುದರ ಜೊತೆಗೆ ಅವರುಗಳಿಗೆ ರಕ್ಷಣೆ ಮತ್ತು ಸೂಕ್ತ ವಾತಾವರಣವನ್ನು ಕಲ್ಪಿಸಿದಾಗ ಕೌಟುಂಬಿಕ ದೌರ್ಜನ್ಯದಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಭಾಗೀದಾರ ಇಲಾಖೆಗಳು ಕ್ರಮ ವಹಿಸಬೇಕು ಎಂದರು. 


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಸಂವಿಧಾನವನ್ನು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಆಶಯದಂತೆ ವಿಸ್ತ್ರತವಾಗಿ ರಚಿಸಲಾಗಿದೆ. ಮಹಿಳೆಯರು ತಮ್ಮ ಕೌಟುಂಬಿಕ ಹಾಗೂ ಸಾಮಾಜಿಕ ಜೀವನದಲ್ಲಿ ಎದುರಾಗುವ ಮಾನಸಿಕ, ದೈಹಿಕ, ಆರ್ಥಿಕ ಸಮಸ್ಯೆಗಳನ್ನು ಎದುರಿಸಲಾಗದೇ ಪ್ರಾಣಕಳೆದುಕೊಳ್ಳುವ ಹಂತಕ್ಕೂ ತಲುಪುತ್ತಾರೆ. ಇವೆಲ್ಲವನ್ನು ಮನಗಂಡು ಮಹಿಳೆಯರ ಮೇಲೆ ಆಗುವ ದೌಜ್ಯನ್ಯವನ್ನು ತಡೆಗಟ್ಟಿ ಅವರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ -2005 ಅನ್ನು ಜಾರಿಗೆ ತರಲಾಗಿದೆ ಎಂದರು.


ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ರೊನಾಲ್ಡ್ ಪ್ರವೀಣ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಕೌಂಟುಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯಿದೆಯ ಸ್ವರೂಪ, ಕಾಯ್ದೆಯ ಅನುಷ್ಠಾನಕ್ಕಾಗಿ ಸರ್ಕಾರದಿಂದ ಕೈಗೊಂಡಿರುವ ಕ್ರಮಗಳು, ನ್ಯಾಯಾಲಯದ ಆದೇಶಗಳ ಅನುಷ್ಠಾನ, ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರಿಗೆ ಸಮಾಲೋಚನೆ ನೀಡುವ ವಿಧಿ ವಿಧಾನಗಳ ಕುರಿತು, ಕಾನೂನಿನಡಿ ಮಹಿಳೆಯರಿಗೆ ಲಭ್ಯವಿರುವ ಪರಿಹಾರಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು. 


ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಪಿ.ಆರ್, ಡಿವೈಎಸ್‍ಪಿ ಪ್ರಭು ಡಿ.ಟಿ, ಉಡುಪಿ ತಾಲೂಕು ಶಿಶು ಯೋಜನಾಧಿಖಾರಿ ಕುಮಾರ್, ಮುಖ್ಯ ಕಾನೂನು ನೆರವು ಅಭಿರಕ್ಷಕ ರಾಜು ಪೂಜಾರಿ, ಸಾಂತ್ವನ ಕೇಂದ್ರ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸಖಿ ಒನ್ ಸ್ಟಾಪ್ ಸೆಂಟರ್, ಡಿಡಿಪಿಯು, ಆರೋಗ್ಯ ಇಲಾಖೆಯ ಭಾಗೀದಾರರುಗಳು, ಕಾನೂನು ಅಭಿಯೋಜಕರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಸಂಯೋಜಕಿ ಶಾರದಾ ನಿರೂಪಿಸಿ, ಜಿಲ್ಲಾ ನಿರೂಪಣಾ ಅಧಿಕಾರಿ ಅನುರಾಧ ಹಾದಿಮನೆ ವಂದಿಸಿದರು. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top