ಶ್ರೀನರಹರಿತೀರ್ಥರು ಶ್ರೀಮನ್ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರು. ಶ್ರೀಪದ್ಮನಾಭತೀರ್ಥರ ನಂತರ ಪೀಠವನ್ನು ಅಲಂಕರಿಸಿದ ಯತಿವರೇಣ್ಯರು. ಪ್ರಾಯಃ ಒರಿಸ್ಸಾ ಪ್ರಾಂತದ ಇವರು ಸಂನ್ಯಾಸದ ಅನಂತರ ಕಳಿಂಗ ರಾಜ್ಯವನ್ನು ಹನ್ನೆರಡು ವರ್ಷಗಳ ಕಾಲ ಆಳಿದ ಉಲ್ಲೇಖ ಅತ್ಯಂತ ಗಮನಾರ್ಹ.
ಶ್ರೀನರಹರಿತೀರ್ಥರ ಬಗ್ಗೆ ದೊರೆತಿರುವ ಶಾಸನಗಳ ಸಂಖ್ಯೆ ಅಪಾರವಾದುದು. ಮುದ್ರಿತ ಶಾಸನಗಳ ಸಂಖ್ಯೆಯೇ ಒಂಭತ್ತನ್ನು ಮೀರುತ್ತದೆ. ಇನ್ನು ಅಪ್ರಕಟಿತ ಶಾಸನಗಳು ಅಪಾರ ಸಂಖ್ಯೆಯಲ್ಲಿ ಸಿಂಹಾಚಲಪ್ರಾಂತದಲ್ಲಿ ದೊರೆಯುವ ಉಲ್ಲೇಖ ಅನೇಕ ಕಡೆ ಕಂಡು ಬರುತ್ತದೆ.
ಇವರಿಗೆ ಸಂಬಂಧಿಸಿದಂತೆ ದೊರೆಯುವ ಮೊದಲ ಶಾಸನದ ಕಾಲ ಕ್ರಿ. ಶ. 1264. ಕೊನೆಯ ಶಾಸನ ಕಾಲ ಕ್ರಿ. ಶ. 1294 ಎಂದರೆ ಒಟ್ಟು30 ವರ್ಷದಷ್ಟು ದೀರ್ಘ ಕಾಲದ ಅವಧಿ ಇವರ ಶಾಸನಗಳದ್ದು. ಇದು ಶ್ರೀನರಹರಿತೀರ್ಥರ ಪ್ರಭಾವ ಕಳಿಂಗ ದೇಶದಲ್ಲಿ ಎಷ್ಟು ಅಪಾರವಾಗಿತ್ತು ಎಂಬುದಕ್ಕೆ ದ್ಯೋತಕ. ಈ ಶಾಸನಗಳಿಂದಾಗಿ ಶ್ರೀಮಧ್ವಾಚಾರ್ಯರ ಕಾಲನಿರ್ಣಯ (1200-1279) ಶಕ್ಯವಾಗಿದೆ.
ಶ್ರೀಕೂರ್ಮಮ್ ಶಿಲಾಶಾಸನವು ಇವರ ಶಾಸನಗಳಲ್ಲಿ ಅತ್ಯಂತ ಪ್ರಮುಖ-ವಾದದ್ದು. ಅದರಲ್ಲಿ ಬಂದಿರುವ ಉಲ್ಲೇಖದಂತೆ ಶ್ರೀನರಹರಿತೀರ್ಥರು ಕಳಿಂಗ ದೇಶವನ್ನು ಅತ್ಯಂತ ಸಮರ್ಥವಾಗಿ ಪಾಲಿಸಿದ್ದಲ್ಲದೆ ಆಗೊಮ್ಮೆ ನಡೆದ ಯುದ್ಧದಲ್ಲಿ ಸಹ ಪಾಲ್ಗೊಂಡು ಜಯ ಸಾಧಿಸಿದ್ದರು ಎಂಬ ಅಪೂರ್ವ ಮಾಹಿತಿ ದೊರೆಯುತ್ತದೆ.
ಒಬ್ಬ ವೈಷ್ಣವಯತಿಯಾಗಿ ರಾಜ್ಯಭಾರ ಮಾಡಿದ ಏಕಮಾತ್ರ ಉಲ್ಲೇಖ ಶ್ರೀನರಹರಿತೀರ್ಥರದು ಎಂಬುದು ಉಲ್ಲೇಖ. ಇತರ ಪಂಥದ ಯಾವ ಯತಿಯೂ ಸಹ ಹೀಗೆ ರಾಜ್ಯಭಾರ ಮಾಡಿದ ಉಲ್ಲೇಖ ಕಂಡು ಬರುವುದಿಲ್ಲ ಎಂಬ ಸಹ ಗಮನಾರ್ಹ.
ಹೀಗೆ ತಮ್ಮ ಯತಿಶಿಷ್ಯರನ್ನು ರಾಜ್ಯಭಾರಕ್ಕೆ ತೊಡಗಿಸುವ ಮೂಲಕ ಶ್ರೀಮನ್ಮಧ್ವಾಚಾರ್ಯರು ತೋರಿದ ಸಮಾಜಮುಖಿಚಿಂತನೆ ಅತ್ಯಂತ ಅಪೂರ್ವವಾದದ್ದು. ಇದು `ವಿಪ್ರೋಽಪಿ ಯುಧ್ಯೇಂತ ಮಹಾಪ್ರಭಾವಃ' ಎಂಬ ಮಹಾಭಾರತದ ವಾಕ್ಯಕ್ಕೆ ಅತ್ಯುತ್ತಮ ನಿದರ್ಶನ.
ಶ್ರೀನರಹರಿತೀರ್ಥರು ಪೂರ್ವಾಶ್ರಮದಿಂದಲೂ ರಾಜಕೀಯದಲ್ಲೂ ಪರಿಣಿತರಾಗಿದ್ದ ಶ್ರೇಷ್ಠ ವಿದ್ವನ್ಮಣಿಗಳೂ ಆಗಿದ್ದರು. ಶ್ರೀಮದಾಚಾರ್ಯರ ಸಂಪರ್ಕದಿಂದಾಗಿ ವೀರವೈಷ್ಣವರೆನ್ನಿಸಿ ರಾಜಕೀಯ ಧುರೀಣರೂ ಆಗಿ ಮಾನ್ಯರಾದರು.
ಶ್ರೀನರಹರಿತೀರ್ಥರ ಕಲಶಪ್ರಾಯವಾದ ಸಾಧನೆ ಶ್ರೀಮದಾಚಾರ್ಯರ ಆದೇಶದಂತೆ ಕಳಿಂಗದೇಶದ ರಾಜಭಂಡಾರದಿಂದ ಶ್ರೀಮೂಲಸೀತಾರಾಮರ ಪ್ರತಿಮೆಗಳನ್ನು ತಂದು ಸಮರ್ಪಿಸಿದ್ದು. ಇದು ಶ್ರೀನರಹರಿತೀರ್ಥರು ಶ್ರೀಮದಾಚಾರ್ಯರಿಗೆ ಹಾಗೂ ಪರಂಪರೆಗೆ ಸಲ್ಲಿಸಿದ ಅತ್ಯಮೋಘವಾದ ಕಾಣಿಕೆಯಾಗಿದೆ.
ಸಸೀತಾಮೂಲರಾಮಾರ್ಚಾ ಕೋಶೇ ಗಜಪತೇಃ ಸ್ಥಿತಾ |
ಯೇನಾನೀತಾ ನಮಸ್ತಸ್ಮೈ ಶ್ರೀಮನ್ನೃಹರಿಭಿಕ್ಷವೇ ||
ನರಹರಿ, ರಘುಪತಿ, ರಘುಕುಲತಿಲಕ ಮೊದಲಾದ ಅಂಕಿತಗಳಿಂದ ಕನ್ನಡದಲ್ಲಿ ದೇವರನಾಮಗಳನ್ನು ರಚಿಸಿ ಶ್ರೀಹರಿದಾಸಸಾಹಿತ್ಯಕ್ಕೆ ನಾಂದಿ ಹಾಡಿದ ವಿಶಿಷ್ಟವಾದ ಹಿರಿಮೆಯೂ ಶ್ರೀನರಹರಿ ತೀರ್ಥರದಾಗಿದೆ. ಇದು ಶ್ರೀನರಹರಿತೀರ್ಥರ ವಿಶಿಷ್ಟವಾದ ಸಮಾಜಮುಖಿ ಚಿಂತನೆಗೂ ಸಂಗೀತ ಶಾಸ್ತ್ರದ ಪ್ರಾವೀಣ್ಯಕ್ಕೂ ಶ್ರೇಷ್ಠನಿದರ್ಶನ. ಅಲ್ಲದೆ ಕನ್ನಡ ಭಾಷೆಯ ವ್ಯಾಪ್ತಿ ಕಳಿಂಗ ದೇಶದವರೆಗೂ ವ್ಯಾಪಿಸಿದ್ದ ಐತಿಹಾಸಿಕ ದಾಖಲೆಯೂ ಆಗುತ್ತದೆ.
ಶ್ರೀನರಹರಿತೀರ್ಥರು ಶ್ರೀಕೂರ್ಮಂನಲ್ಲಿ ನರಸಿಂಹದೇವಾಲಯವೊಂದನ್ನು ನಿರ್ಮಿಸಿ ಅಲ್ಲಿ ಭವ್ಯವಾದ ಶ್ರೀನರಸಿಂಹ ವಿಗ್ರಹವನ್ನು ಪ್ರತಿಷ್ಠಾಪಿಸಿದ ವಿಷಯ ಶ್ರೀಕೂರ್ಮಂ ಶಿಲಾಶಾಸನದಲ್ಲಿಯೇ ಉಲ್ಲೇಖಿತವಾಗಿದೆ. ಅವರು ಸಂಚಾರ ಕ್ರಮೇಣ ಕರ್ನೂಲಿಗೆ ಆಗಮಿಸಿದ್ದಾಗ ಅಲ್ಲಿ ಶ್ರೀಆಂಜನೇಯ ಪ್ರತೀಕವನ್ನು ಪ್ರತಿಷ್ಠಾಪಿಸಿದ್ದು ಅದನ್ನು ಇಂದೂ ಕಾಣಬಹುದು.
ಅವರು ಹೊಸಪೇಟೆಯ ಬಳಿಯ ನಾರಾಯಣದೇವರ ಕೆರೆಗೆ ಆಗಮಿಸಿದ್ದಾಗ ಅಲ್ಲಿ ಸ್ವಪ್ನಲಬ್ಧವಾದ ಶ್ರೀಭೂಸಮೇತ ನಾರಾಯಣದೇವರನ್ನು ಪ್ರತಿಷ್ಠಾಪಿಸಿದರು. ಅದು ನಾರಾಯಣದೇವರ ಕೆರೆಯು ತುಂಗಭದ್ರಾ ಆಣೆಕಟ್ಟಿನ ಯೋಜನೆಯಲ್ಲಿ ಮುಳುಗಡೆಯಾದಾಗ ಮರಿಯಮ್ಮನಹಳ್ಳಿ ಎಂಬ ಸ್ಥಳಕ್ಕೆ ಸ್ಥಳಾಂತರ ಗೊಂಡಿದ್ದು ಅಲ್ಲಿ ಪೂಜೆಗೊಳ್ಳುತ್ತಿದೆ. ಅವರು ಮೊಳಕಾಲ್ಮೂರುವಿನ ಬಳಿಯ ಚಿಕ್ಕೇರಹಳ್ಳಿ ಎಂಬ ಸ್ಥಳವನ್ನು ಸಂದರ್ಶಿಸಿದಾಗ ಸ್ವಪ್ನಲಬ್ಧವಾದ ಜನಮೇಜಯ ಪ್ರತಿಷ್ಠಿತ ಎನ್ನಲಾದ ಶ್ರೀ ಆಂಜನೇಯ ಪ್ರತೀಕ ಲಭಿಸಿ ಅದನ್ನು ಪ್ರತಿಷ್ಠಾಪಿಸಿದರು.
ಭವ್ಯವಾದ ದೇವಸ್ಥಾನದಲ್ಲಿ ಅದು ಇಂದು ನಿತ್ಯಪೂಜೆಗೊಳ್ಳುತ್ತಿದೆ. ಹೀಗೆ ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರೊಬ್ಬರ ವ್ಯಾಪಕ ಸಂಚಾರ ಮೂರ್ತಿ ಪ್ರತಿಷ್ಠಾಪನೆಗಳಿಗೆ ಇವೆಲ್ಲವೂ ಸಾಕ್ಷಿಯಾಗಿ ನಿಲ್ಲುತ್ತವೆ.
ಶ್ರೀನರಹರಿತೀರ್ಥರ ವೃಂದಾವನ ಹಂಪೆಯ ವಿಜಯ ವಿಟ್ಠಲ ದೇವಸ್ಥಾನದ ಹಿಂಬದಿಯ ನಡುಗಡ್ಡೆ ಯೊಂದರಲ್ಲಿ ಇದೆ. ಇದು ಅವರು ಆನೆಗೊಂದಿ ಸಾಮ್ರಾಜ್ಯದೊಂದಿಗೆ ಹೊಂದಿದ್ದ ನಿಕಟ ಸಂಪರ್ಕಕ್ಕೆ ದ್ಯೋತಕವಾಗಿದೆ ಎನ್ನಬಹುದು.
ಕಳಿಂಗದೇಶದೊಂದಿಗೆ ಮೂರು ದಶಕಗಳ ಕಾಲ ರಾಜಕೀಯ ಮಾರ್ಗದರ್ಶಕರಾಗಿದ್ದ ಅವರು ಸಹಜವಾಗಿಯೇ ಆನೆಗೊಂದಿಯ ರಾಜ್ಯ ಸ್ಥಾಪನೆಯ ಮಹತ್ಕಾರ್ಯದಲ್ಲೂ ತಮ್ಮ ಸಲಹೆ-ಸೂಚನೆಗಳ ಮೂಲಕ ಸಕ್ರಿಯವಾಗಿ ಪ್ರೇರಕರಾಗಿದ್ದರು ಎಂದು ತಿಳಿಯಲು ಇದು ಗಮಕವಾಗಿದೆ ಎನ್ನಬಹುದು.
ಶ್ರೀನರಹರಿತೀರ್ಥರು ಸಿಂಹಾಚಲದೊಂದಿಗೆ ವಿಶೇಷ ಸಂಪರ್ಕಹೊಂದಿದ್ದ ವಿವರ ಅಲ್ಲಿ ಕಂಡುಬರುವ ಅನೇಕ ಶಾಸನಗಳಿಂದ ತಿಳಿದು ಬರುತ್ತದೆ. ಆ ಪ್ರಾಂತದಲ್ಲಿ ಅನೇಕ ಪ್ರಾಚೀನ ಮಾಧ್ವ ಕುಟುಂಬಗಳು ಕಂಡುಬರುತ್ತಿದ್ದು ಅದೆಲ್ಲಕ್ಕೂ ಶ್ರೀನರಹರಿತೀರ್ಥರ ಮುಖ್ಯ ಸ್ಫೂರ್ತಿಯನ್ನು ಗುರುತಿಸಬಹುದು.
ಅನಂತರ ಕಾಲದಲ್ಲಿ ಶ್ರೀಸತ್ಯಬೋಧರು, ಶ್ರೀಸತ್ಯಸಂಧರು ಮೊದಲಾದವರು ಆ ಪ್ರಾಂತದಲ್ಲಿ ಸಂಚಾರ ಮಾಡಿದ್ದಕ್ಕೆ ಅನೇಕ ಪುರಾವೆಗಳು ಉಪಲಬ್ಧವಿವೆ. ಅಂತೂ ಶ್ರೀನರಹರಿತೀರ್ಥರು ನಿಜ ಅರ್ಥದಲ್ಲಿ ಶ್ರೀಮಧ್ವಾಚಾರ್ಯರ ಪ್ರಿಯಶಿಷ್ಯರಾಗಿ ಅವರ ಸಿದ್ಧಾಂತವನ್ನು ವ್ಯಾಪಕವಾಗಿ ಪ್ರಸಾರ ಮಾಡಿದ್ದಕ್ಕೆ ಇವೆಲ್ಲಾ ಗಮಕವಾಗಿವೆ.
ಶ್ರೀನರಹರಿತೀರ್ಥರ ಕೃತಿಗಳು
ಶ್ರೀನರಹರಿತೀರ್ಥರು ಮಹಾತಪಸ್ವಿಗಳೂ, ವಿದ್ವಾಂಸರೂ ಆಗಿದ್ದಂತೆ ಶ್ರೇಷ್ಠಗ್ರಂಥಕಾರರೂ ಆಗಿದ್ದಾರೆ. ಗೀತಾಭಾಷ್ಯಭಾವಪ್ರಕಾಶಿಕೆ ಹಾಗೂ ಯಮಕಭಾರತಟೀಕೆ ಇಂದು ಉಪಲಬ್ಧವಿರುವ ಅವರ ಕೃತಿಗಳು. ಯಮಕಭಾರತಕ್ಕೆ ಶ್ಲೋಕರೂಪ ಹಾಗೂ ವಾಕ್ಯರೂಪ ಎಂಬುದಾಗಿ ಎರಡು ಬಗೆಯ ಟೀಕೆಗಳನ್ನು ಅವರು ರಚಿಸಿದ್ದು ಅವುಗಳಲ್ಲಿ ಶ್ಲೋಕರೂಪ ಟೀಕೆ ಪ್ರಕಾಶಿತವಾಗಿದೆ.
ಅವರು ವಾಕ್ಯರೂಪಟೀಕೆಯನ್ನು ರಚಿಸಿರುವ ಉಲ್ಲೇಖ ತಾಮ್ರಪರ್ಣೀ ಶ್ರೀನಿವಾಸಾಚಾರ್ಯರ ವಿರೋಧೋದ್ಧಾರ ಕೃತಿಯಲ್ಲಿ ಬಂದಿದೆ: `ಶ್ರೀಮನ್ನರಹರಿತೀರ್ಥಭಟ್ಟಾರಕೈರ್ಯಮಕ-ಭಾರತಟೀಕಾಯಾಂ ಶ್ರೀಕೃಷ್ಣಲೀಲಾಪ್ರಕಾಶಿಕಾಯಾಂ ವಾಕ್ಯರೂಪಾಯಾಮ್'. ಇವುಗಳಲ್ಲದೆ ಶ್ರೀಮದಾಚಾರ್ಯರ ದಶಪ್ರಕರಣಗಳಿಗೂ ಅವರು ಟೀಕೆ ರಚಿಸಿರುವಂತೆ ಕುಂಭಕೋಣದ ಗೋಪಾಲವಿಲಾಸ ಗ್ರಂಥಸೂಚಿಯಿಂದ ತಿಳಿಯುತ್ತದೆ.
ಶ್ರೀಜಯತೀರ್ಥರು ತಮ್ಮ ವಿಷ್ಣುತತ್ತ್ವ ವಿನಿರ್ಣಯ ಟೀಕಾ ಮತ್ತು ಕರ್ಮನಿರ್ಣಯ ಟೀಕೆಗಳಲ್ಲಿ ಪ್ರಸ್ತಾಪಿಸಿರುವ ಟೀಕೆಗಳು ಶ್ರೀನರಹರಿತೀರ್ಥರ ಕೃತಿಗಳು ಎಂಬುದಾಗಿ ಶ್ರೀರಾಘವೇಂದ್ರ ಸ್ವಾಮಿಗಳ ಮತ್ತು ಶ್ರೀಬಿದರಹಳ್ಳಿ ಶ್ರೀನಿವಾಸತೀರ್ಥರ ಟಿಪ್ಪಣಿಗಳಿಂದ ತಿಳಿಯುತ್ತದೆ. ಅವುಗಳ ಹಸ್ತಪ್ರತಿಗಳು ಉಪಲಬ್ಧವಾಗಿಲ್ಲ. ಶ್ರೀನರಹರಿತೀರ್ಥರು ನರಹರಿ, ರಘುಪತಿ, ರಘುಕುಲತಿಲಕ ಮೊದಲಾದ ಅಂಕಿತಗಳಿಂದ ಕೆಲವು ಕನ್ನಡ ಕೃತಿಗಳನ್ನು ರಚಿಸಿದ್ದು ಅವುಗಳನ್ನು ಹರಿದಾಸ ಸಾಹಿತ್ಯದ ಆದಿಕೃತಿಗಳು ಎಂದು ಭಾವಿಸಬಹುದು.
-ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ