ಕೃಷಿಯಲ್ಲಿ ಆಶಾವಾದ ಮತ್ತು ವಾಸ್ತವವಾದ: ಒಂದು ಜಿಜ್ಞಾಸೆ

Upayuktha
0


ತ್ತೀಚೆಗಿನ ದಿನಗಳಲ್ಲಿ ಕೃಷಿಕರು ಒಂದೆರಡು ಜನ ಸೇರಿರಲಿ, ಜಂಬ್ರಗಳಿರಲಿ, ಕೃಷಿ ಗುಂಪುಗಳಿರಲಿ, ಕೃಷಿಕರಿಗೆ ಸಂಬಂಧ ಪಟ್ಟ ವಾಟ್ಸಪ್ ಗುಂಪುಗಳೇ ಆಗಿರಲಿ ಅಥವಾ ಇನ್ನಾವುದೇ ಸಾಮಾಜಿಕ ಜಾಲತಾಣಗಳಿರಲಿ ಎಲ್ಲಾ ಕಡೆಯೂ ಚರ್ಚೆ ಅಥವಾ ಮಾತುಕತೆಯ ವಿಷಯ ಇರುವುದೇ ಈ ವರ್ಷದ ಅಡಿಕೆ ಬೆಳೆಯ ಇಳುವರಿಯ ಕುರಿತು. ಪ್ರತಿಯೊಬ್ಬನ ಮಾತಿನ ಧಾಟಿಯಲ್ಲಿ ವ್ಯಕ್ತವಾಗುವುದು ಮಾಮೂಲು ಇಳುವರಿಯ ಶೇಕಡ 30 ರಿಂದ 40 ಪಾಲು ಮಾತ್ರ. ಕೆಲವರಿಗೆ ಅಲ್ಪಸ್ವಲ್ಪ ಹೆಚ್ಚಿರಬಹುದು, ಕೆಲವರಿಗೆ ಇನ್ನೂ ಕಮ್ಮಿ ಇರಬಹುದು ಇದು ಈ ವರ್ಷದ ವಾಸ್ತವ.


ಕಳೆದ ಮೂರು ನಾಲ್ಕು ವರ್ಷಗಳಿಂದಲೇ ಚರ್ಚೆಯಾಗುತ್ತಾ ಇರುವ ವಿಷಯ ಎಲೆಚುಕ್ಕಿ ರೋಗ ಮತ್ತು ಸಿಂಗಾರ ಒಣಗುರೋಗ. ಈ ರೋಗಗಳ ಕುರಿತು ವಿಶ್ಲೇಷಣೆ ಹಲವರದ್ದು ಹಲವು ರೀತಿ. ಇವರಲ್ಲಿ ಆಶಾವಾದಿಗಳಾದವರು (ಪಾಸಿಟಿವ್ ಥಿಂಕಿಂಗ್) ಪ್ರಕೃತಿಯನ್ನು ಯುದ್ಧದ ಮೂಲಕ ಗೆದ್ದೇ ಗೆಲ್ಲುವೆನೆಂಬ ಆತ್ಮವಿಶ್ವಾಸದಿಂದ ಹಲವಾರು ರೀತಿಯ ಸಿಂಪಡಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದೆರಡು ವರ್ಷಗಳಲ್ಲಿ ಈ ರೋಗಗಳನ್ನು ಹತೋಟಿಗೆ ತರಬಲ್ಲೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಕೆಲವರು ರೋಗಗಳು ಇನ್ನು ಮುಂದೆ ಶಾಶ್ವತ. ಪ್ರಕೃತಿಯ ಬದಲಾವಣೆ ಇದಕ್ಕೆಲ್ಲ ಮೂಲ ಕಾರಣ. ಬದುಕಿಗೆ ಬೇರೆ ಮೂಲಗಳನ್ನು  ಯೋಚಿಸುವುದೇ ಪರಿಹಾರ ಅಂತ ಅಭಿಪ್ರಾಯಗಳನ್ನು ತಿಳಿಸುತ್ತಿರುತ್ತಾರೆ. ಇವರುಗಳು ನಿರಾಶಾವಾದಿಗಳೆಂದು (ನೆಗೆಟಿವ್ ಥಿಂಕಿಂಗ್) ಕರೆಸಿಕೊಳ್ಳುತ್ತಾರೆ.


ನನ್ನ ದೃಷ್ಟಿಯಲ್ಲಿ ವಾಸ್ತವವಾದವೆಂಬ ಮೂರನೇ ವಾದ ಒಂದಿದೆ. ಸಾಮಾನ್ಯವಾಗಿ ಇದನ್ನು ಒಪ್ಪಿಕೊಳ್ಳಲು ಎರಡು ವಾದಿಗಳಿಗೆ ಕಷ್ಟವಾಗಬಹುದು. ವಾಸ್ತವವಾದವೆಂದರೆ ಹೊಸತೇನೂ ಅಲ್ಲ. ಅದು ನಮ್ಮ ಪಾರಂಪರಿಕಕೃಷಿ ಮತ್ತು ಕುಟುಂಬ ಜೀವನ ಪದ್ಧತಿ. ಅದರ ಮರೆವೇ ನಮ್ಮ ಅನೇಕ ಸಮಸ್ಯೆಗಳಿಗೆ ಮೂಲ ಅಂತ ನನ್ನ ಅನಿಸಿಕೆ.


ನಮ್ಮ ದಕ್ಷಿಣ ಕನ್ನಡದಲ್ಲಿ ಎಕರೆಗೆ 10 ಕ್ವಿಂಟಾಲಿನಷ್ಟು ಭತ್ತ ವಾಸ್ತವ. ಅಧಿಕ ಇಳುವರಿಯ ಆಶಾವಾದಕ್ಕೆ ಹೊರಟ ನಮ್ಮಪ್ಪ ರೋಗಗಳ ಕಾರಣದಿಂದ ನಿರಂತರ ಸಿಂಪಡಣೆಯ ಕಾರಣದಿಂದ ಭತ್ತ ಇನ್ನು ಕಷ್ಟ ಅನ್ನುವ ಹಂತಕ್ಕೆ ಮುಟ್ಟಿ ಕೊನೆಗೆ ವಾಸ್ತವವಾದಿಗಳಾಗಿದ್ದರು. ಆನಂತರದ ದಿನಗಳಲ್ಲಿ ಎಲ್ಲಾ ವಾದಿಗಳು ಭತ್ತದ ಕೃಷಿಗೆ ವಿದಾಯ ಹೇಳಿದರು.


ಅಡಿಕೆ ಇಳುವರಿ ಏಳರಿಂದ ಎಂಟು ಕ್ವಿಂಟಾಲು ಹಳೆಯ ತೋಟಗಳಲ್ಲಿ, ಸುಮಾರು ಹತ್ತರಷ್ಟು ಹೊಸ ತೋಟಗಳಲ್ಲಿ ವಾಸ್ತವ. ಆಶಾವಾದಿಗಳು ಇದನ್ನು ದುಪ್ಪಟ್ಟಿನಷ್ಟು ಕೊಂಡು ಹೋಗಿದ್ದರು. ಇಲ್ಲಿ ಕಂಡ ಆದಾಯವೇ ಈಗಿನ ದುಃಖದ ಮೂಲ ಅಂತ ಒಪ್ಪಿಕೊಳ್ಳಲು ವಾಸ್ತವ ಅಡ್ಡಿ ಬರುತ್ತದೆ.


ಅಡಿಕೆ ತೋಟ ಎಬ್ಬಿಸಲು ಪಾರಂಪರಿಕ ಜ್ಞಾನವಿದೆ. ಎರಡು ಗುಡ್ಡಗಳ ಮಧ್ಯ, ದಕ್ಷಿಣದ ಸೂರ್ಯ ಬಿಸಿಲಿನ ತಡೆ, ಸುತ್ತು ಮುತ್ತಲು ನೆರಳಿಗಾಗಿ  ಒಂದಷ್ಟು ಕಾಡು, ಹದ ಬೇಸಿಗೆಯವರೆಗೆ ಹರಿನೀರಿನ ಸೌಲಭ್ಯ, ಅನಿವಾರ್ಯವಾದಲ್ಲಿ ಕೊನೆಯ ಹಂತದಲ್ಲಿ ಆಧುನಿಕ ತಂತ್ರಜ್ಞಾನದ ತೂತು ಬಾವಿಗಳ ನೀರು. ಇದು ವಾಸ್ತವ. ಆದರೆ ಆಶಾವಾದ ಎಲ್ಲಿ ಬೇಕಾದರೂ ತೋಟ ಎಬ್ಬಿಸೋದು, ಕಾಡು ಮರಗಳಿದ್ದರೆ ಗೊಬ್ಬರ ತಿನ್ನೋದು ಮತ್ತು ನೆರಳನ್ನು ನೀಡಿ ಅಡಿಕೆಯ ಆದಾಯವನ್ನು ಕಡಿಮೆಗೊಳಿಸುವುದು ಎಂಬ ಕಾರಣಕ್ಕೆ ನಿರ್ಮೂಲ ಗೊಳಿಸುವುದು. ತೂತು ಬಾವಿಗಳ ನೀರೇ ಕೃಷಿಯ ಮೂಲ.


ಯಾವುದೇ ಕೃಷಿಗೆ ಪೋಷಕಾಂಶಗಳ ಘನಿ ದನದ ಗೊಬ್ಬರ. ಇದು ವಾಸ್ತವ. ಅದಿಲ್ಲದೆಯೂ ಕೃಷಿ ಸಾಧಿಸಬಹುದು ಎಂಬುದು ಆಶಾವಾದ. ತಿಂಗಳು ತಿಂಗಳು ಸಿಂಪಡಣೆ ಎಂಬುದು ಅತ್ಯಂತ ದುಬಾರಿ ಮತ್ತು ಸುಲಭ ಸಾಧ್ಯ ಅಲ್ಲ ಎಂಬುದು ವಾಸ್ತವ. ಉಳಿಸಬೇಕಾದರೆ ಮಣಿಸಲೇಬೇಕು ಎಂಬುದು ಆಶಾವಾದ.


ಅನೇಕ ಆಧುನಿಕ ಅಭಿವೃದ್ಧಿಯ ವೇಗೋತ್ಕರ್ಷಕೆ ಸಿಕ್ಕಿ ಪ್ರಕೃತಿ ನಲುಗಿದಂತೆ, ಆಧುನಿಕ ಕೃಷಿ ಕೂಡ ಪ್ರಕೃತಿಯ ಬದಲಾವಣೆಯಲ್ಲಿ ತನ್ನ ಕೊಡುಗೆಯನ್ನು ಸಾಕಷ್ಟು ಪಾಲು ನೀಡಿದೆ ಎಂಬುದು ವಾಸ್ತವ. ಆದರೆ ಪ್ರಕೃತಿ ಇರುವುದೇ ತನ್ನಿಚ್ಛೆಗೆ ಬೇಕಾದಂತೆ ಅನುಭವಿಸಲು ಎಂಬುದು ಆಶಾವಾದ.


ಅಡಿಕೆಗೆ ಪರ್ಯಾಯವಾಗಿ ಇಂದು ಕಾಳು ಮೆಣಸಿನ ಕೃಷಿಯಲ್ಲಿ ನಾನಾ ತಂತ್ರಜ್ಞಾನಗಳು ಹೊರಹೊಮ್ಮುತ್ತಿದೆ. ಸಸ್ಯ ಜಗತ್ತಿನಲ್ಲಿ ಪರೋಪ ಜೀವಿ ಸಸ್ಯಗಳು ಎಂಬುದೊಂದಿದೆ. ಅವು ಮಣ್ಣಿನಿಂದ ಪೋಷಕಾಂಶಗಳನ್ನು ಹೀರಿಕೊಂಡಂತೆ ಗಾಳಿಯಿಂದಲೂ, ತನ್ನ ಆಶ್ರಯದಾತ ಜೀವಂತ ಮರಗಳಿಂದಲೂ ಬೇರುಗಳ ಮೂಲಕ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಅದರಲ್ಲಿ ಕಾಳು ಮೆಣಸು ಕೂಡಾ ಒಂದು. ಆದರೆ ಇತ್ತೀಚೆಗೆ ಕೃತಕಪೋಷಕಾಂಶಗಳನ್ನು ಸಿಂಪಡಣೆಯ ಮೂಲಕವಾಗಿ ನೀಡಿ ಸಿಮೆಂಟ್ ಕಂಬದ ಕೃಷಿ ಅಧಿಕ ಇಳುವರಿಯ ಆಶಾವಾದ. ಆದರೆ ಅಡಿಕೆಗೆ ಈಗ ನಮಗಾದ ಅನುಭವ ಮುಂದಿನ ದಿನಗಳಲ್ಲಿ ಕಾಳು ಮೆಣಸಿಗೆ ಬರಬಹುದು ಎಂಬ ಸಂಶಯ ವಾಸ್ತವ.


ಮಣ್ಣಿನ ಫಲವತ್ತತೆಗೆ ಸೊಪ್ಪು ದರಗು ಮುಂತಾದ ಸಾವಯವ ವಸ್ತುಗಳು ತೀರಾ ಅಗತ್ಯ ಎಂಬುದು ವಾಸ್ತವ. ಇವು ಕಡಿಮೆ ಇದ್ದರೂ ಕೃತಕ ಪೋಷಕಾಂಶಗಳು ಅದನ್ನು ತುಂಬಿಕೊಡಬಲ್ಲುದು ಎಂಬುದು ಆಶಾವಾದ.


ಕಳೆ ಎಂಬುದು ಕ್ರಾಂತಿ ಮಣ್ಣಿನ ಸತ್ವದ ಮೂಲ ಕೂಡ ಹೌದು. ಇದು ವಾಸ್ತವ. ಆದರೆ ಕಳೆನಾಶಕ (ವೀಡ್ ಮ್ಯಾಟ್‌ಗಳು ಇದಕ್ಕೆ ಹೊರತಲ್ಲ) ಅತ್ಯಂತ ಸುಲಭ, ಕಡಿಮೆ ಖರ್ಚು, ಪ್ರಕೃತಿಯ ಉದ್ದೇಶಕ್ಕೆ ಸಡ್ಡು ಇದು ಆಶಾವಾದ.


ಪ್ರಕೃತಿಗೆ ಮನುಷ್ಯನಷ್ಟೇ ಮುಖ್ಯ ಸಕಲ ಚರಾಚರ ಜೀವಿಗಳು ಎಂಬುದು ವಾಸ್ತವ. ಹಾಗಿರುವಾಗ ನೀರಿನ ಮೂಲಗಳನ್ನೆಲ್ಲಾ ಬಳಸಿಕೊಂಡು, ಮಣ್ಣಿನ ಸಹಜ ಫಲವತ್ತತೆಯ ಕಡೆಗೆ ಗಮನಕೊಡದೆ ಕೃಷಿ ಮಾಡಿದರೆ ತನ್ನಿಚ್ಛೆಯಂತೆ ಭೂಮಿ ಫಲವನ್ನು ಕೊಡಬೇಕು ಎಂದು ನಿರೀಕ್ಷಿಸಿದರೆ ತನಗೆ ಬೇಡವಾದದ್ದನ್ನು ಕಿತ್ತೊಗೆಯುವ ಸಾಮರ್ಥ್ಯ ಪ್ರಕೃತಿಗೆ ಇದೆ. ಅದನ್ನು ಅರಿತುಕೊಂಡು ಆ ದಿಕ್ಕಿನತ್ತ ನಮ್ಮ ಪಯಣವಾದರೆ ಆಶಾವಾದಕ್ಕೊಂದು ಅರ್ಥ ಬರಬಹುದು. ಮತ್ತೆ ವಾಸ್ತವದ ಕೃಷಿ ಮಾಡಿದರೆ ಪ್ರಕೃತಿ ನಮಗೆ ಒಲಿಯಲೂಬಹುದು. ಆ ದಿಕ್ಕಿನಲ್ಲಿ ಆಶಾವಾದ ಇರಲಿ. ತಪ್ಪುಗಳು ಆಗುವುದು ಸಹಜ. ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುವುದು ನಿಜ ಅರ್ಥದ ಆಶಾವಾದ. ಇದುವೇ ವಾಸ್ತವವಾದ.


- ಎ.ಪಿ. ಸದಾಶಿವ ಮರಿಕೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top