ಯಕ್ಷಗಾನ ಪ್ರದರ್ಶನ ಅನುಮತಿ ನಿಯಮ ಸರಳೀಕರಿಸಲು ಪ್ರಯತ್ನ:
ಅರುಣ್ ಜಾರ್ಕಳಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನಿಸಿ ಶಾಸಕ ಸುನೀಲ್ ಕುಮಾರ್
ಹಿರ್ಗಾನ ಶ್ರೀಕುಂದೇಶ್ವರ ಕ್ಷೇತ್ರದಲ್ಲಿ ಹಾಸ್ಯಗಾರ ಅರುಣ್ ಕುಮಾರ್ ಜಾರ್ಕಳ ಅವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಯಕ್ಷಗಾನ ನಮ್ಮ ಸಂಸ್ಕೃತಿ. ನಮ್ಮ ಅಸ್ಮಿತೆಗೆ ಧಕ್ಕೆಯಾಗುವ ನಿಯಮಗಳನ್ನು ಸಡಿಲಿಸಿ, ಯಕ್ಷಗಾನ ಪ್ರದರ್ಶನಗಳಿಗೆ ಯಾವುದೇ ಅಡೆತಡೆ ಇಲ್ಲದೆ ಅನುಮತಿ ನೀಡುವ ಬೇಡಿಕೆಯನ್ನು ಈಡೇರಿಕೆಗೆ ಸರಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು ಹಾಸ್ಯ ಕಲಾವಿದ ಅರುಣ್ ಕುಮಾರ್ ಜಾರ್ಕಳ ಅವರ ತಾಯಿಯ ಹೆಸರಲ್ಲಿ ಮಂಜೂರಾದ ಅಕ್ರಮ ಸಕ್ರಮ ಜಾಗ ತಡೆ ಹಿಡಿದಿರುವ ಕುರಿತು ಪರಿಶೀಲನೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದರು.
ಧಾರ್ಮಿಕವಾಗಿ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಋಷಿಯಂತೆ ಬದುಕನ್ನು ಸವೆಸಿದ ದಿ.ರಾಘವೇಂದ್ರ ಭಟ್ಟರ ನೆನಪಲ್ಲಿ ಕ್ಷೇತ್ರದ ವತಿಯಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಗೆ ಯಕ್ಷಗಾನ ರಂಗದಲ್ಲಿಯೇ ವಿಶಿಷ್ಟ ಮನ್ನಣೆ, ಗೌರವ ಇದೆ ಎಂದು ಪ್ರಸಿದ್ದ ಯಕ್ಷಗಾನ ಕಲಾವಿದ ನ್ಯಾಯವಾದಿ ಶ್ರೀರಮಣಾಚಾರ್ ಹೇಳಿದರು. ರಾತ್ರಿ ಹತ್ತು ಗಂಟೆ ಮೇಲೆ ಯಕ್ಷಗಾನವನ್ನು ಪ್ರದರ್ಶಿಸುವುದು ಕಾನೂನಿನ ತೊಡಕಾಗಿ ಪರಿಣಮಿಸಿದೆ. ತಲೆ ತಲಾಂತರಗಳಿಂದ ಪ್ರದರ್ಶನವಾಗುತ್ತಿರುವ ಯಕ್ಷಗಾನ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಹಲವು ಅನುಮತಿ ಪಡೆಯುವ ವ್ವಯಸ್ಥೆಯನ್ನು ಸರಳೀಕರಿಸುವಂತೆ ಮನವಿ ಮಾಡಿದರು.
ಕುಂದೇಶ್ವರ ಸಮ್ಮಾನ್ ಸ್ವೀಕರಿಸಿದ ಅರುಣ್ ಕುಮಾರ್ ಜಾರ್ಕಳ ಮಾತನಾಡಿ, ಅತಿಯಾದ ನೋವು ಇದ್ದವರು ಮಾತ್ರ ಇತರರನ್ನು ನಗಿಸಲು ಸಾಧ್ಯ, ಅವರು ಹಾಸ್ಯದ ಮೂಲಕ ಖುಷಿ ಕೊಡಬಲ್ಲರು ಎಂದ ಅವರು. ಬದುಕಿನ ಕಟು ಸತ್ಯವೇ ಹಾಸ್ಯ ಎಂದು ವಿಶ್ಲೇಷಿಸಿದರು.
ತೆಲಂಗಾಣ ಮೂಲದ ನಾನು ಹುಟ್ಟಿ ಬೆಳೆದದ್ದು ತುಳುನಾಡಿನಲ್ಲಿ. ಜಾರ್ಕಳದಲ್ಲಿ ತಾಯಿಯ ಹೆಸರಲ್ಲಿ ಅಕ್ರಮ ಸಕ್ರಮ ಜಾಗ ಮಂಜೂರಾಗಿದೆ. ಆದರೆ ತಾಯಿ ತೀರಿ ಹೋಗಿದ್ದಾರೆ, ಈಗ ಜಾಗ ನೀಡುತ್ತಿಲ್ಲ. 266 ಸನ್ಮಾನ ಸ್ವೀಕರಿಸಿದ್ದೇನೆ ಆದರೆ ಕುಂದೇಶ್ವರ ಸನ್ಮಾನ ಘೋಷಣೆಯಾದ ಬಳಿಕ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರವೇ ಬಂದಿದ. ಯಕ್ಷಗಾನ ಶೆಟ್ರುಗಳಿಗೆ ಮತ್ತು ಭಟ್ರುಗಳಿಗೆ ಮಾತ್ರ ಎಂಬ ಮಾತಿದೆ. ಆದರೆ ಯಕ್ಷಗಾನ ರಂಗದಲ್ಲಿ ಹಾಗಿಲ್ಲ. ತೆಲುಗಿನವ, ತಮಿಳಿನವ ಎಂದೆಣಿಸದೆ, ವಶೀಲಿ ಬಾಜಿ ಇಲ್ಲದೆ ಇಲ್ಲದೆ ಈ ರಂಗದವರು ನಮ್ಮನ್ನೆಲ್ಲ ಬೆಳೆಸಿ ಗೌರವಿಸಿದ್ದಾರೆ ಎಂದರು.
ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಅಭಿನಂದಿಸಿ ಮಾತನಾಡಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಗಂಗಾ ರಾಘವೇಂದ್ರ ಭಟ್, ಧರ್ಮದರ್ಶಿಗಳಾದ ಕೃಷ್ಣರಾಜೇಂದ್ರ ಭಟ್, ರವೀಂದ್ರ ಭಟ್, ಸುಧೀಂದ್ರ ಭಟ್, ಯಕ್ಷಕೂಟದ ಸಂಚಾಲಕ ಎಲ್ಲೂರು ರಾಮಚಂದ್ರ ರಾವ್, ಸಿದ್ಧಕಟ್ಟೆ ವೈಭವ್ ಮೆಡಿಕಲ್ಸ್‌ನ ಸಚ್ಚಿದಾನಂದ ಎಡಮಲೆ, ನವೀನ್ ಟಿ.ಆರ್., ನ್ಯೂಸ್ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಬರೆಪ್ಪಾಡಿ, ನಿರ್ದೇಶಕ ಅರುಣ್ ಮಾಂಜ, ಬೆಂಕಿನಾಥ ಮೇಳದ ಸಂಚಾಲಕ ಸುರೇಂದ್ರನಾಥ ಮಲ್ಲಿ, ಬ್ರಹ್ಮವಾಹಕ ಕದ್ರಿ ಕೃಷ್ಣ ಭಟ್,ಉದ್ಯಮಿಗಳಾದ ಕುಂಜತ್ತೋಡಿ ವಾಸುದೇವ ಅಲೆವೂರಾಯ, ರವಿಕಾಂತ ಭಟ್, ಬಜಗೋಳಿ ಸರಕಾರಿ ಕಾಲೇಜು ಪ್ರಾಂಶುಪಾಲ ಕೆ.ಪಿ.ಲಕ್ಷ್ಮೀನಾರಾಯಣ, ರಂಜಿನಿ ಉಪಸ್ಥಿತರಿದ್ದರು.
ವರ್ಷಾವಧಿ ಉತ್ಸವಳ ಕುಂದೇಶ್ವರ ಕ್ಷೇತ್ರದಲ್ಲಿ ರಂಗಪೂಜೆ, ಸುತ್ತುಬಲಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು, ರಕ್ತೇಶ್ವರಿ ನೇಮ ಭಕ್ತಿ ಸಂಭ್ರಮದಿಂದ ನಡೆಯಿತು. ಬೆಂಕಿನಾಥೇಶ್ವರ ಮೇಳದಿಂದ ಶ್ರೀದೇವಿ ಅಗ್ನಿ ಕಲ್ಲುರ್ಟಿ ಯಕ್ಷಗಾನ ಬಯಲಾಟ ನಡೆಯಿತು. ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ದಕ ಫೋಟೋಗ್ರಾಫರ್ ಅಸೋಸಿಯೇಶನ್ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಉದ್ಯಮಿಗಳಾದ ಬೋಳ ಅಜಿತ್ ಕಾಮತ್, ಸಿರಿಯಣ್ಣ ಶೆಟ್ಟಿ ಮೊದಲಾದವರು ಆಗಮಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ