ನೇತಾಜಿ ಸುಭಾಷ್ ಚಂದ್ರ ಬೋಸ್- ಅಪ್ರತಿಮ ಕ್ರಾಂತಿಕಾರಿ ಸ್ವಾತಂತ್ರ್ಯ ಸೇನಾನಿ

Upayuktha
0


ಜೈ ಹಿಂದ್- ಈ ಘೋಷಣೆ ಕೇಳಿದೊಡನೆ ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯನ ಮೈ- ಮನ ಹೆಮ್ಮೆ ಮತ್ತು ರಾಷ್ಟ್ರಭಕ್ತಿಯಿಂದ ಪುಟಿದೇಳುತ್ತದಲ್ಲವೇ?


ಬ್ರಿಟೀಷ್ ವಸಾಹತುಶಾಹಿ ಆಡಳಿತವನ್ನು ಪ್ರತಿಭಟಿಸಿ, ಭಾರತೀಯರಲ್ಲಿ ಏಕತಾ ಭಾವವನ್ನು ಎಚ್ಚರಿಸಲು ಈ ಘೋಷಣೆಯನ್ನು ಹುಟ್ಟುಹಾಕಿದವರು ಸುಭಾಷ್ ಚಂದ್ರ ಬೋಸ್. ಇವರೊಬ್ಬ ದೇಶಭಕ್ತ, ರಾಷ್ಟ್ರೀಯತಾವಾದಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮತ್ತು ಪ್ರಮುಖ ಕ್ರಾಂತಿಕಾರಿ ನಾಯಕ.


ಇವರು 1897ರ ಜನವರಿ 23 ನೇ ತಾರೀಖಿನಂದು, ಒರಿಸ್ಸಾದ ಕಟಕ್‌ನಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ತಾಯಿ ಪ್ರಭಾವತಿ ಬೋಸ್ ಮತ್ತು ತಂದೆ ಜಾನಕಿನಾಥ ಬೋಸ್. ತಂದೆ ವಕೀಲರಾಗಿದ್ದರು.


ಬಾಲ್ಯವನ್ನು ಹುಟ್ಟೂರಿನಲ್ಲಿಯೇ ಕಳೆದು ನಂತರ ಇಂಗ್ಲೀಷ್ ಪದ್ಧತಿಯ ವಿದ್ಯಾಭ್ಯಾಸ ಮಾಡಿ, ಕಲ್ಕತ್ತಾದಲ್ಲಿ ತತ್ವಶಾಸ್ತ್ರದಲ್ಲಿ ಪದವಿ ಪಡೆದರು. 


ತದನಂತರ, 1919ರಲ್ಲಿ ಇಂಗ್ಲೆಂಡಿಗೆ ಹೋಗಿ ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆಯನ್ನು ತೆಗೆದುಕೊಂಡರು. ಕೇವಲ ಎಂಟೇ ತಿಂಗಳಲ್ಲಿ ತಯಾರಾಗಿ, ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದು ಆಯ್ಕೆಯಾದರು. ಆದರೆ ಬ್ರಿಟಿಷರ ಕೆಳಗೆ ಕೆಲಸ ಮಾಡಲು ಒಪ್ಪದ ಸುಭಾಷರು ಸೇವೆಯನ್ನು ನಿರಾಕರಿಸಿದರು.


1921 ರಲ್ಲಿ ಭಾರತಕ್ಕೆ ಮರಳಿ “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ “ಸೇರಿ, ರಾಷ್ಟ್ರೀಯತಾವಾದಿ ಚಳುವಳಿಯಲ್ಲಿ ತೊಡಗಿಸಿಕೊಂಡರು. ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ 'ಸ್ವರಾಜ್' ಪತ್ರಿಕೆಯನ್ನು ಪ್ರಾರಂಭಿಸಿದರು. ಬ್ರಿಟಿಷರ ವಿರುದ್ಧದ ಹೋರಾಟ ಮತ್ತು ಅಸಹಕಾರ ಚಳುವಳಿಗಳ ಕಾರಣಕ್ಕಾಗಿ ಇವರು ಹಲವಾರು ಬಾರಿ ಸೆರೆಮನೆ ವಾಸ ಅನುಭವಿಸಬೇಕಾಯಿತು.


ಅಂತೆಯೇ 1925ರಿಂದ 1927 ರವರೆಗೆ ಬೋಸರು ಮ್ಯಾಂಡಲೆಯ ಸೆರೆಮನೆಯಲ್ಲಿ ಬಂಧಿಯಾಗಿದ್ದರು.  ಬಿಡುಗಡೆಯ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ, ನಂತರ 1938 ರಲ್ಲಿ ಅದರ ಅಧ್ಯಕ್ಷರಾದರು. ಆದರೆ ಇತರ ನಾಯಕರೊಂದಿಗಿನ ಭಿನ್ನಾಭಿಪ್ರಾಯಗಳಿಂದ ಅವರಿಗೆ ಅಲ್ಲಿ ಮುಂದುವರಿಯಲಾಗಲಿಲ್ಲ.


1941 ರ ಏಪ್ರಿಲ್ ನಲ್ಲಿ ಸುಭಾಷರು ನಾಜಿ ಜರ್ಮನಿಗೆ ತೆರಳಿದರು. ಅದು ಎರಡನೇ ವಿಶ್ವ ಮಹಾಯುದ್ಧದ ಸಮಯ (1939 ರಿಂದ 1945). "ಶತ್ರುವಿನ ಶತೃ ಮಿತ್ರ”- ಎಂಬ ಉತ್ತಮ ಅವಕಾಶವನ್ನು ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬಳಸಿಕೊಳ್ಳಬೇಕೆಂದು ಮನಗಂಡ ಸುಭಾಷರು, ಬ್ರಿಟಿಷರ ಸಮಾನ ಶತ್ರುಗಳಾಗಿದ್ದ ನಾಜಿ ಜರ್ಮನಿ, ಜಪಾನ್ ಮತ್ತು ಅಂದಿನ ಸಂಯುಕ್ತ ಸೋವಿಯತ್ ರಷ್ಯಾ ಒಕ್ಕೂಟಗಳ ಬೆಂಬಲ ಪಡೆದರು. ಹಾಗೆಯೇ ಅಲ್ಲಿ ಸಾವಿರಾರು ಭಾರತೀಯ ಕಮಾಂಡೋಗಳನ್ನು ತಯಾರುಮಾಡಿದರು.


ಮುಂದೆ 1942 ರಲ್ಲಿ ಮೋಹನ್ ಸಿಂಗ್ ರಿಂದ ಸ್ಥಾಪಿತವಾಗಿದ್ದ ಆಝಾದ್ ಹಿಂದ್ ಫೌಜ್ ಭಾರತೀಯ ರಾಷ್ಟ್ರೀಯ ಸೇನೆ ಅಥವಾ Indian National Army INA) ಅನ್ನು ಅಕ್ಟೋಬರ್ 21 1943 ರಂದು, ಪುನರುಜ್ಜೀವನಗೊಳಿಸಿ ಬ್ರಿಟೀಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾತಂತ್ರ್ಯ ಪಡೆಯಲು ಸೈನಿಕರನ್ನು ಹುರಿದುಂಬಿಸಲು “ ವಿಜಯಶಾಲಿ ಮತ್ತು ಸ್ವತಂತ್ರ ಭಾರತ” ದ ಆಕಾಂಕ್ಷೆ ಹೊತ್ತ ಜೈ ಹಿಂದ್ ಘೊಷಣೆಯನ್ನು ಹುಟ್ಟುಹಾಕಿದರು.



ಇದು ಕೇವಲ ಘೋಷಣೆಯಾಗಿರಲಿಲ್ಲ. ಭಾರತೀಯರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಲು ದೃಢಸಂಕಲ್ಪ ಹೊಂದಿ ಸಿದ್ಧರಾಗಿದ್ದಾರೆ ಎಂಬ ಪ್ರಬಲ ಸಂದೇಶವನ್ನು ಬ್ರಿಟಿಷರಿಗೆ ರವಾನಿಸಿ ಹೋರಾಟವನ್ನು ಮತ್ತಷ್ಟು ಬಲಗೊಳಿಸಿತು. ಬೋಸರ ನಾಯಕತ್ವ ಮತ್ತು ಬ್ರಿಟಿಷರ ವಿರುದ್ಧದ ಇವರ ಹೋರಾಟದ ಕೆಚ್ಚು ಇವುಗಳನ್ನು ಮನಗಂಡ ಸೈನಿಕರು ಇವರನ್ನು ಪ್ರೀತಿಯಿಂದ ನೇತಾಜಿ (ಗೌರವಾನ್ವಿತ ನಾಯಕ) ಎಂದು ಕರೆದರು.


1944 ರ ವೇಳೆಯಲ್ಲಿ ಮಣಿಪುರದ ಮೊರಾಂಗ್ ನಲ್ಲಿ INA ಪ್ರಧಾನ ಕಛೇರಿಯನ್ನು ಹೊಂದಿತ್ತು. ಏಪ್ರಿಲ್ 14, 1944 ರಂದು ನೇತಾಜಿಯವರ INA, ಭಾರತೀಯ ಇತಿಹಾಸದಲ್ಲಿ ಮೊದಲ ಬಾರಿಗೆ "ಮುಕ್ತ ಭಾರತದ ಮೊದಲ ತ್ರಿವರ್ಣ ಧ್ವಜ"ವನ್ನು ಇಲ್ಲಿ ಹಾರಿಸಿತು.


ಕ್ರಾಂತಿಕಾರಿ ನಾಯಕರಾಗಿದ್ದ ಸುಭಾಷ್ ಚಂದ್ರ ಬೋಸರಿಗೆ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆಯಬೇಕೆಂದು ಪ್ರತಿಪಾದಿಸುತ್ತಿದ್ದ  ಗಾಂಧೀಜಿಯವರ ತತ್ವದಲ್ಲಿ ನಂಬಿಕೆಯಿರಲಿಲ್ಲ.


1944 ರ ಜುಲೈ 4 ರಂದು ಅಂದಿನ ಬರ್ಮಾದಲ್ಲಿ INA ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂಬ ಕರೆ ನೀಡಿ ಯುವ ಜನತೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸಿದರು. ಇದೊಂದು ಐತಿಹಾಸಿಕ ಕರೆಯಾಗಿ ಜನ ಮಾನಸದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ.


1920ರಿಂದ 1942 ರ ವರೆಗಿನ ಭಾರತೀಯ ಸ್ವಾತಂತ್ರ್ಯ ಚಳುವಳಿಯನ್ನು ಕುರಿತಾಗಿ ಬರೆದಿದ್ದ ಇವರ ಪುಸ್ತಕ ದಿ ಇಂಡಿಯನ್ ಸ್ಟ್ರಗಲ್ ಪುಸ್ತಕವನ್ನು ಬ್ರಿಟಿಷ್ ವಸಾಹತುಶಾಹಿ ಸರಕಾರವು ನಿಷೇಧಿಸಿತು. ಭಾರತ ಸ್ವತಂತ್ರವಾದ ತರುವಾಯ 1948 ರಲ್ಲಿ ಈ ಪುಸ್ತವನ್ನು ಪ್ರಕಟಿಸಲಾಯಿತು.


ಈ ಪುಸ್ತಕದಲ್ಲಿ1920 ರ ದಶಕದ ಆರಂಭದ ಅಸಹಕಾರ ಮತ್ತು ಖಿಲಾಫತ್ ಚಳುವಳಿಗಳಿಂದ ಹಿಡಿದು 1940 ರ ದಶಕದ ಆರಂಭದ ಕ್ವಿಟ್ ಇಂಡಿಯಾ  ಮತ್ತು ಆಜಾದ್ ಹಿಂದ್ ಚಳುವಳಿಗಳ ವರೆಗಿನ ಭಾರತೀಯ ಸ್ವಾತಂತ್ರ್ಯ ಹೋರಾಟದ ವಿಶ್ಲೇಷಣೆಗಳಿವೆ. 


ನೇತಾಜಿ ಆಗಸ್ಟ್ 18, 1945 ರಂದು ನಿಧನರಾದರು ಎಂದು ಹೇಳಲಾಗುತ್ತದೆ. ಈ ಅಪ್ರತಿಮ ಸ್ವಾತಂತ್ರ್ಯಹೋರಾಟಗಾರ, ಮಹಾನ್ ನಾಯಕನಿಗೆ ಸಲ್ಲಬೇಕಿದ್ದ ಮಾನ್ಯತೆ, ಗೌರವವನ್ನು ಮಾತ್ರ ಭಾರತ ಸಲ್ಲಿಸದಿದ್ದದ್ದು ನಿಜಕ್ಕೂ ದುರದೃಷ್ಟಕರ.


ಭಾರತ ಸ್ವಾತಂತ್ರ್ಯ ಹೋರಾಟಕ್ಕಾಗಿ ಗಾಂಧಿ,ನೆಹರು ಗಳಂತೆಯೇ ದುಡಿದ ಸುಭಾಷರು ನೆನಪಿನಿಂದಳಿದ ನಾಯಕ -Forgotten Hero ಆಗಿ ಬಿಟ್ಟರು.




- ಜ್ಯೋತಿ ಪ್ರಸಾದ್

ಹವ್ಯಾಸಿ ಲೇಖಕಿ ಮತ್ತು ಕವಯಿತ್ರಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top