ನರೇಟಿವ್ಸ್ ಎಂಬುದು ಕಟ್ಟಲು ಮತ್ತು ಕೆಡಹಲು ಎರಡಕ್ಕೂ ಬಳಕೆಯಾಗುವ ಪ್ರಚಾರದ ಅಸ್ತ್ರ: ವಿಕ್ರಮ್ ಸೂದ್

Upayuktha
0

  • ಮಂಗಳೂರು ಲಿಟ್‌ ಫೆಸ್ಟ್‌ 7ನೇ ಆವೃತ್ತಿಯ ಮೊದಲ ಅಧಿವೇಶನ
  • ಭಾರತೀಯ ಗುಪ್ತಚರ ಸಂಸ್ಥೆ 'ರಾ'ದ ಮಾಜಿ ನಿರ್ದೇಶಕರಾದ ವಿಕ್ರಮ್ ಸೂದ್ ಅವರ ಜತೆಗೆ ಸಂವಾದ

 



ಮಂಗಳೂರು: ನಿರೂಪಣಾ ಕಥಾನಕಗಳು ಅಥವಾ ನರೇಟಿವ್ಸ್ ಅನ್ನುವುದು ಒಂದು ಬಗೆಯ ಪ್ರಚಾರ ಸಮರದ ಕಲೆಯಾಗಿದೆ. ಇದನ್ನು ರಚನಾತ್ಮಕ ಅಥವಾ ವಿಘಟನಾತ್ಮಕ ಉದ್ದೇಶಗಳಿಗೆ ಬಳಸಲು ಸಾಧ್ಯವಿದೆ. ಬಹುತೇಕ ಸಂದರ್ಭಗಳಲ್ಲಿ ರಚನಾತ್ಮಕ ಉದ್ದೇಶಗಳಿಗಿಂತ ವಿಭಜನಾತ್ಮಕ ಉದ್ದೇಶಗಳಿಗೆ ಬಳಕೆಯಾಗುವುದೇ ಹೆಚ್ಚು ಎಂದು ಭಾರತೀಯ ಗುಪ್ತಚರ ಸಂಸ್ಥೆ 'ರಾ' ದ (R&AW) ಮಾಜಿ ಮುಖ್ಯಸ್ಥರಾದ ವಿಕ್ರಮ್ ಸೂದ್ ಹೇಳಿದರು.


ಮಂಗಳೂರು ಲಿಟ್ ಫೆಸ್ಟ್‌ನ 7ನೇ ಆವೃತ್ತಿಯ ಮೊದಲ ದಿನದ ಎರಡನೇ ಸಂವಾದದಲ್ಲಿ ಭಾಗವಹಿಸಿ ಆರ್ಟ್ ಅಂಡ್ ಕ್ರಾಫ್ಟ್ ಆಫ್ ಬಿಲ್ಡಿಂಗ್ ಅಂಡ್ ಡಿಸ್‌ಮ್ಯಾಂಟ್ಲಿಂಗ್ ನೆರೇಟಿವ್ಸ್ (ನರೇಟಿವ್‌ಗಳನ್ನು ಕಟ್ಟುವ ಮತ್ತು ಕೆಡಹುವ ಕಲೆ ಮತ್ತು ಕುಶಲ ಕಲೆ) ಎಂಬ ವಿಷಯದಲ್ಲಿ ಅವರು ಮಾತನಾಡಿದರು. ಆರ್ಗನೈಸರ್ ಪತ್ರಿಕೆಯ ಮಾಜಿ ಸಂಪಾದಕರು ಹಾಗೂ ಸಂವಾದ ಪತ್ರಿಕೆಯ ಹಾಲಿ ಸಂಪಾದಕರಾದ ಪ್ರಶಾಂತ್ ವೈದ್ಯರಾಜ್ ಈ ಸಂವಾದವನ್ನು ನಿರ್ವಹಣೆ ಮಾಡಿದರು.


ನರೇಟಿವ್‌ಗಳನ್ನು ಸಾಮಾನ್ಯ ವ್ಯಕ್ತಿಯಾಗಿ ಗುರುತಿಸುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರಿಸಿದ ವಿಕ್ರಮ್ ಸೂದ್, ಸಿಎಎ ಜಾರಿ ವಿಚಾರ, ಮೋದಿ ಸರಕಾರ ಮುಸ್ಲಿಂ ವಿರೋಧಿ ಎಂಬ ಅಪಪ್ರಚಾರ, ಕಾಶ್ಮೀರದ ಮಾನವ ಹಕ್ಕುಗಳ ವಿಚಾರಗಳಲ್ಲಿ ಸರಕಾರದ ವಿರುದ್ಧ ನಡೆಸಲಾದ ಅಪಪ್ರಚಾರಗಳು ಇದಕ್ಕೆ ಉದಾಹರಣೆಯಾಗಿ ಉಲ್ಲೇಖಿಸಬಹುದು. ಇದಕ್ಕೆ ಬಳಸಿದ ಟೂಲ್ಸ್‌, ಮತ್ತು ವಿಧಾನಗಳನ್ನು ಗಮನಿಸಬೇಕು ಎಂದು ಅವರು ನುಡಿದರು.


ಇರಾಕ್- ಇರಾನ್‌ ಯುದ್ಧ, ಜಾರ್ಜ್ ಬುಷ್ ಕಾಲದಲ್ಲಿ ನಡೆದ ಅಮೆರಿಕ- ಇರಾಕ್ ಯುದ್ಧದ ಸಂದರ್ಭದಲ್ಲಿ ನಡೆದ ಪ್ರಚಾರ ಸಮರಗಳು ನರೇಟಿವ್ಸ್‌ಗಳ ಮಹತ್ವವನ್ನು ಸಾರುತ್ತವೆ. ಏನು ಮಾಡಬೇಕು, ಫಲಿತಾಂಶ ಏನಾಗಬೇಕು ಎಂಬ ಗುರಿ ಇಟ್ಟುಕೊಂಡು ನಡೆಸುವ ಪ್ರಚಾರ ಸಮರವಿದು ಎಂದು ಅವರು ವಿವರಿಸಿದರು.


ಸಿಎಎ ಜಾರಿ ವಿಚಾರದಲ್ಲಿ, 370ನೇ ವಿಧಿ ರದ್ದತಿ ಸಂದರ್ಭದಲ್ಲಿ ಭಾರತೀಯ ವ್ಯವಸ್ಥೆಯಲ್ಲಿ ಒಡಕು ಹುಟ್ಟಿಸುವುದು, ಸುಧಾರಣೆ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು ವಿರೋಧಿಗಳ ಉದ್ದೇಶವಾಗಿತ್ತು. ಅದರಲ್ಲಿ ಅವರು ಒಂದು ಹಂತದ ಯಶಸ್ಸು ಸಾಧಿಸಿದ್ದಾರೆ. ಜಗತ್ತಿನ ಅತಿದೊಡ್ಡ ಆರ್ಥಿಕತೆಯಾಗುವ ಭಾರತದ ಮಹತ್ವಾಕಾಂಕ್ಷೆಯನ್ನು ಹತ್ತಿಕ್ಕುವ ಯತ್ನವೇ ಈ ನರೇಟಿವ್‌ಗಳು ಎಂದು ಸೂದ್ ನುಡಿದರು.


ಅಮೆರಿಕದ ಆಡಳಿತ ವ್ಯವಸ್ಥೆ ಹೇಗೆ ವಿವಿಧ ದೇಶಗಳ ಆಂತರಿಕ ವಿಚಾರಗಳಲ್ಲಿ ನರೇಟಿವ್‌ಗಳ ಮೂಲಕ ಹೇಗೆ ಹಸ್ತಕ್ಷೇಪ ನಡೆಸುತ್ತದೆ ಎಂಬುದನ್ನು ವಿವರಿಸುವಿರಾ? ಎಂಬ ಪ್ರಶ್ನೆಗೆ ಅವರು, ಇಂಟರ್ನೆಟ್, ಟಿವಿ, ರೇಡಿಯೋ- ಸಂವಹನದ ವಿವಿಧ ವ್ಯವಸ್ಥೆಗಳನ್ನು ಬಳಸಿಕೊಂಡು ಪ್ರಚಾರ ಮತ್ತು ಅಪಪ್ರಚಾರಕ್ಕೆ ನರೇಟಿವ್ ಗಳನ್ನು ಬಳಸಲಾಗುತ್ತಿದೆ ಎಂದರು.



ಡ್ರೋನ್‌ ನಂತಹ ಆಧುನಿಕ ತಂತ್ರಜ್ಞಾನದ ಮೂಲಕ ಮಿಲಿಟರಿ ಶಕ್ತಿ ವರ್ಧನೆ ಮಾಡಿಕೊಳ್ಳುವುದು ಒಮದು ಬಗೆಯಾದರೆ, ಆಹಾರದ ಕೊರತೆ ನೀಗಲು ಕೃತಕ ಆಹಾರ ನೀಡಲಾಗುತ್ತಿದೆ ಎಂಬುದು ಒಂದು ಬಗೆಯ ನರೇಟಿವ್. ಜನಸಂಖ್ಯೆ ಕಡಿಮೆ ಮಾಡಲು ಕೋವಿಡ್ ಅಸ್ತ್ರವನ್ನು ಬಳಕೆ ಮಡಲಾಗಿದೆ ಅನ್ನುವುದೂ ಒಂದು ನರೇಟಿವ್. ಆದರೆ ಇವೆಲ್ಲ ಎಷ್ಟು ಶಕ್ತಿಶಾಲಿ ಎಂಬುದು ಪರಿಗಣನೆಗೆ ಬರುತ್ತದೆ.


ನಾನು ನನ್ನದೇ ರೀತಿಯಲ್ಲಿ ಇನ್ನೊಬ್ಬರನ್ನು ಕೌಂಟರ್ ಮಾಡಬಹುದು. ಸೋಶಿಯಲ್ ಮೀಡಿಯಾದ ಬಳಕೆ ಮತ್ತು ದುರ್ಬಳಕೆ ಕೂಡ ಇದೇ ಉದ್ದೇಶದಿಂದ ಮಾಡಲಾಗುತ್ತದೆ. ಗ್ರಹಿಕೆಯನ್ನು ಆಧರಿಸಿದ ಸತ್ಯದ ಪ್ರತಿಪಾದನೆಯೇ ನರೇಟಿವ್ ಎಂದು ವಿಕ್ರಮ್ ಸೂದ್ ವಿವರಿಸಿದರು.


ಅಮೆರಿಕವನ್ನು ಕಟ್ಟಿದವರು ಶ್ರೀಮಂತರು. ಈಗಲೂ ಇದೇ ವರ್ಗದವರು ಆ ದೇಶವನ್ನು ಆಳುತ್ತಾರೆ. ಭಾರತವು ವಾಣಿಜ್ಯಾತ್ಮಕವಾಗಿ ಔದ್ಯಮಿಕವಾಗಿ ಬಲಿಷ್ಠವಾಗಿದೆ. ಇದನ್ನು ಹತ್ತಿಕ್ಕಬೇಕಾದರೆ ಅಮೆರಿಕದಂತಹ ದೇಶವೊಂದು ಭಾರತದಲ್ಲಿ ಮನರಂಜನಾ ಉದ್ಯಮವಾಗಿ ಬಲಿಷ್ಠವಾಗಿರುವ ಬಾಲಿವುಡ್  ಅನ್ನು ಬಳಸುತ್ತಾ ಬಂದಿದೆ. ಜಗತ್ತಿಗೆ ಕಥಾನಕವನ್ನು ಹೇಳುವ ಮೂಲಕ ಸ್ವಯಂ ತೃಪ್ತಿ ಪಡೆಯುವ ಮನಸ್ಥಿತಿ- ನರೇಟಿವ್‌ಗಳ ಸೃಷ್ಟಿಗೆ ಕಾರಣ. ಆರ್ಥಿಕ ಹಿತಾಸಕ್ತಿ, ರಾಜಕೀಯ ಹಿತಾಸಕ್ತಿ, ಮಿಲಿಟರಿ ಹಿತಾಸಕ್ತಿಗಳನ್ನು ಆಧರಿಸಿ ನರೇಟಿವ್ ಗಳು ಸೃಷ್ಟಿಯಾಗುತ್ತವೆ ಎಂದು ಸೂದ್ ಮಾಹಿತಿ ನೀಡಿದರು.


ಸರಕಾರ ಉದ್ಯೋಗ ಕೊಡಲಾಗದು, ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಿಸಬಹುದು. ಖಾಸಗಿ ಕ್ಷೇತ್ರಗಳಿಂದಲೇ ಉದ್ಯೋಗ ಸೃಷ್ಟಿಯಾಗಬೇಕು. ಉದ್ಯೋಗ ಸೃಷ್ಟಿಸುವುದು ಸರಕಾರದ ಕೆಲಸವಲ್ಲ. 


ಅಧಿಕಾರ ಬದಲಾವಣೆಯಾಗಲು ವರ್ಷಗಟ್ಟಲೆ ಪ್ರಯತ್ನ ಬೇಕು. ಚೀನಾದಂತಹ ದೇಶವು ಬಡ ರಾಷ್ಟ್ರಗಳಿಗೆ ಸಾಲ ನೀಡಿ ಆ ದೇಶವನ್ನೇ ಕಬಳಿಸುವ ತಂತ್ರ ಅನುಸರಿಸುತ್ತಿದೆ.


ಭಾರತ ಅದೇ ರೀತಿಯ ನರೇಟಿವ್‌ ಗಳನ್ನು ಸೃಷ್ಟಿಸಬಹುದೇ? ವಸುಧೈವ ಕುಟುಂಬಕಂ ಅನ್ನುವುದು ನಮ್ಮ ಸಿದ್ಧಾಂತ. ಹೀಗಿರುವಾಗ ಚೀನಾ ಅಥವಾ ಯುರೋಪ್ ರಾಷ್ಟ್ರಗಳ ಮಾದರಿಯ ನರೆಟಿವ್‌ ಗಳನ್ನು ಕಟ್ಟಲು ಸಾಧ್ಯವೇ? ಇಲ್ಲ ಎಂಬುದೇ ನಮ್ಮ ಉತ್ತರ.


ವಿದೇಶಗಳಲ್ಲಿ ಕ್ರಿಶ್ಚಿಯಾನಿಟಿ ಮತ್ತು ಭಾಷೆ ಮಹತ್ವದ ಸ್ಥಾನ ಪಡೆದಿವೆ. ಭಾರತದಲ್ಲಿ ಹಲವು ಭಾಷೆ, ಹಲವು ವೈವಿಧ್ಯಗಳಿವೆ. ನಮ್ಮಲ್ಲಿ ಆ ತಂತ್ರಗಳು ಬಳಕೆಗೆ ಬರುವುದಿಲ್ಲ. ಗುಪ್ತಚರ ಸಂಸ್ಥೆಗಳು ಮಾಡುವುದು ನರೇಟಿವ್ ಕೆಲಸ. ಹಿತಾಸಕ್ತಿಗಳನ್ನು ಆಧರಿಸಿ ಕೆಲಸ ಮಾಡುವುದು ಅವುಗಳ ನಿಯೋಜಿತ ಕಾರ್ಯಗಳಲ್ಲಿ ಒಂದು. ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳ ಪ್ಲಾಂಟಿಂಗ್ ಕೂಡ ಇಂಥವುಗಳಲ್ಲಿ ಸೇರಿದೆ.


ಯಾವುದೇ ದೇಶದಲ್ಲಿ ಗಲಭೆಗಳು ತಾನಾಗಿಯೇ ನಡೆಯುತ್ತವೆಯೇ? ಅವುಗಳಿಗೆ ಯಾರು ಹಣ ಕೊಡುತ್ತಾರೆ? ಯಾರು ಸಂಘಟಿಸುತ್ತಾರೆ? ಅವುಗಳ ಹಿಂದೆ ಒಂದು ಸಂಘಟಿತ ಸ್ಥಾಪಿತ ಹಿತಾಸಕ್ತಿ ಇರುತ್ತದೆ. ಪಶ್ಚಿಮದ ರಾಷ್ಟ್ರಗಳ ರಾಷ್ಟ್ರೀಯತೆ ಇತರ ದೇಶಗಳಿಗೆ ಸೂಕ್ತವಲ್ಲ. ಭಾರತದ ರಾಷ್ಟ್ರೀಯತೆ ಎಂದರೆ ಹಿಂದುತ್ವ, ಹಿಂದೂ ರಾಷ್ಟ್ರ ಎಂಬ ವಿಚಾರಗಳೇ ಮುನ್ನೆಲೆಗೆ ಬರುತ್ತವೆ.


ವಕ್ಫ್‌  ಮಂಡಳಿಯಿಂದ ದೇಶದ ಭೂಮಿ ಕಬಳಿಕೆಯ ವಿಚಾರವನ್ನು ಮುನ್ನೆಲೆಗೆ ತಂದಿರುವುದು ಇಂತಹ ನರೇಟಿವ್ ಹಿತಾಸಕ್ತಿಗಳೇ ಎಂಬುದನ್ನು ಗಮನಿಸಬೇಕು ಎಂದು ಸೂದ್ ನುಡಿದರು.


ಪ್ರೇಕ್ಷಕರ ಜತೆ ಸಂವಾದ:

ಪ್ರೇಕ್ಷಕರ ಪರವಾಗಿ ಪ್ರಕಾಶ್ ಬೆಳವಾಡಿ ಸಂವಾದದಲ್ಲಿ ಭಾಗವಹಿಸಿದರು. ನಮ್ಮ ದೇಶದ ಹಿತಾಸಕ್ತಿಗೆ ವಿರುದ್ಧ ನರೇಟಿವ್‌ಗಳನ್ನು ಎದುರಿಸಬೇಕು. ಇದಕ್ಕಾಗಿ ದೇಶದ ಜನತೆ ಒಗ್ಗಟ್ಟಾಗಿರಬೇಕು ಎಂಬ ಸಂದೇಶವನ್ನು ಸೂದ್ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top