ಭವಿಷ್ಯದ ಇಂಧನ ಬೇಡಿಕೆ ಪೂರೈಸಲು ಸಿದ್ಧತೆ; ಸಂಪೂರ್ಣ ಗ್ರೀನ್ ಎನರ್ಜಿ ಬಳಕೆಗೆ ಭಾರತ ಆದ್ಯತೆ

Chandrashekhara Kulamarva
0

ಮಂಗಳೂರು ಲಿಟ್‌ ಫೆಸ್ಟ್‌ 7ನೇ ಆವೃತ್ತಿ- ಮೊದಲನೇ ಅಧಿವೇಶನದಲ್ಲಿ ಕೇಂದ್ರ ಸಚಿವ ಹರ್ ದೀಪ್ ಸಿಂಗ್ ಪುರಿ





ಮಂಗಳೂರು: ಭಾರತದಲ್ಲಿ ಶೇ 67ರಷ್ಟು ಮಂದಿ ವಾಹನಗಳಿಗೆ ಇಂಧನ ಬಳಕೆ ಮಾಡುತ್ತಾರೆ. ಭಾರತಕ್ಕೆ ಪ್ರತಿದಿನ 6ರಿಂದ 7 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ದಿನಕ್ಕೆ ಬೇಕಾಗುತ್ತದೆ. 20 ವರ್ಷಗಳ ದೂರಾಲೋಚನೆಯೊಂದಿಗೆ ಇಂಧನ ಭದ್ರತೆಯ ಯೋಜನೆಗಳನ್ನು ರೂಪಿಸಬೇಕಾಗಿದೆ. ಜಗತ್ತಿನ ಒಟ್ಟಾರೆ ಇಂಧನ ಬೇಡಿಕೆಯ ಶೇ 25ರಷ್ಟು ಭಾರತದಿಂದಲೇ ಬರುತ್ತದೆ. ಈ ಇಂಧನದ ಬಳಕೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ಭವಿಷ್ಯದ ಬೇಡಿಕೆಗಳನ್ನು ಪೂರೈಸಲು ಈಗಿನಿಂದಲೇ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ. ಅದಕ್ಕೆ ನಾವು ಸಮರ್ಥವಾಗಿರಬೇಕು ಎಂದು ಕೇಂದ್ರ ಇಂಧನ ಸಚಿವ ಹರ್‍‌ದೀಪ್ ಸಿಂಗ್ ಪುರಿ ಹೇಳಿದರು.


ಭಾರತ್ ಫೌಂಡೇಶನ್ ಆಯೋಜಿಸಿರುವ 7ನೇ ಆವೃತ್ತಿಯ ಮಂಗಳೂರು ಲಿಟ್‌ ಫೆಸ್ಟ್‌ನ ಮೊದಲ ದಿನದ ಮೊದಲ ಅಧಿವೇಶನದ ಸಂವಾದದಲ್ಲಿ ಪಾಲ್ಗೊಂಡು 'ಬದುಕಿನ ಭದ್ರತೆ ಮತ್ತು ಹವಾಮಾನ ಬದಲಾವಣೆಯ ಸುರಕ್ಷತೆಗಾಗಿ ಇಂಧನ' (ಎನರ್ಜಿ ಫಾರ್ ಸರ್ವೈವಲ್ ಸೆಕ್ಯುರಿಟಿ ಅಂಡ್ ಕ್ಲೈಮೇಟ್ ಚೇಂಜ್) ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.


ಒಟ್ಟಾರೆ ಜಾಗತಿಕ ಅನಿಲದ ಬೇಡಿಕೆಯಲ್ಲಿ ಶೇ. 50% ರಷ್ಟು ಭಾರತದಿಂದಲೇ ಬರುತ್ತದೆ. ವಿಶ್ವದಲ್ಲಿ ಕಚ್ಚಾತೈಲದ ಕೊರತೆಯಿಲ್ಲ. ಆದರೆ ಆಮದು ವೆಚ್ಚ ಹೆಚ್ಚುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಚ್ಚಾತೈಲವನ್ನು ಪಡೆಯುವುದೇ ಒಂದು ಸವಾಲು. ಒಪೆಕ್ ಹೊರತಾದ ರಾಷ್ಟ್ರಗಳಿಂದಲೂ ಕಚ್ಚಾ ತೈಲದ ಪೂರೈಕೆ ಆಗುತ್ತಿದೆ. ಬ್ರೆಜಿಲ್ ದಿನವೊಂದಕ್ಕೆ 3 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಉತ್ಪಾದಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.


ಕಚ್ಚಾತೈಲದ ಕೊರತೆ ಇಲ್ಲ:

ಯುರೋಪ್ ದೇಶಗಳಿಂದ ಪ್ರತಿದಿನ 13 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಮಾರುಕಟ್ಟೆಗೆ ಬರುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ದಿನೇ ದಿನೇ ಹೆಚ್ಚು ಹೆಚ್ಚು ಕಚ್ಚಾತೈಲ ಪೂರೈಕೆ ಆಗುತ್ತಿದೆ. ಹೀಗಾಗಿ ಕಚ್ಚಾತೈಲದ ಕೊರತೆ ಇಲ್ಲ. ಆದರೆ ಶಕ್ತಿ ಮೂಲಗಳ ವೈವಿಧ್ಯತೆ ಬೇಕಾಗಿದೆ. ಒಂದೇ ಮೂಲವನ್ನು ಹೆಚ್ಚು ಅವಲಂಬಿಸಿರಬಾರದು. ಇಂಧನ ಭದ್ರತೆಗಾಗಿ ಏನು ಮಾಡಿದ್ದೇವೆ ಎಂಬುದು ಮುಖ್ಯ. ಎನರ್ಜಿ ಇಲ್ಲದೆ ಒಂದು ದಿನವೂ ಕಳೆಯಲು ಸಾಧ್ಯವಿಲ್ಲ. ಕಳೆದ 10 ವರ್ಷಗಳಿಂದ ಲಭ್ಯವಿರುವ ಎನರ್ಜಿ ಕೊರತೆಯಾಗಿಲ್ಲ ಎಂದು ಅವರು ಹೇಳಿದರು.


ಕಳೆದ ಮೂರು ವರ್ಷಗಳಿಂದ ದೇಶದಲ್ಲಿ ಇಂಧನದ ಬೆಲೆ ಕಡಿಮೆಯಾಗಿದೆ. ಈಗಿನ ಸರಕಾರ ತೈಲ ಇಂಧನದ ಮೇಲೆ ಎಕ್ಸೈಸ್ ಡ್ಯೂಟಿ ಕಡಿಮೆ ಮಾಡಿದೆ. ಅಲ್ಲದೆ ಬೆಲೆಯನ್ನೂ ಕಡಿಮೆ ಮಾಡಿದೆ. ಬಿಜೆಪಿ ಆಡಳಿತದ ರಾಜ್ಯಗಳು ವ್ಯಾಟ್ ಕಡಿಮೆ ಮಾಡಿವೆ. ಶೇ 20ರಷ್ಟು ಜೈವಿಕ ಇಂಧನ (ಬಯೋ ಫ್ಯುಯೆಲ್) ಉತ್ಪಾದನೆಯ ಟಾರ್ಗೆಟ್ ಈಗಾಗಲೇ ಸಾಧಿತವಾಗಿದೆ. ಭಾರತದಲ್ಲಿ ಗ್ರೀನ್ ಹೈಡ್ರೋಜನ್ ಸ್ಟೋರೇಜ್- ಸಾಮರ್ಥ್ಯ ವೃದ್ಧಿಸಿದೆ.

ಪರಿಸರ ಸ್ನೇಹಿ, ಅಗ್ಗದ ಸೌರ ವಿದ್ಯುತ್ ಉತ್ಪಾದನೆಯ ಪ್ರಮಾಣ ವೃದ್ಧಿಸುತ್ತಿದೆ. ಗ್ರೀನ್ ಹೈಡ್ರೋಜನ್ ಅನ್ನು ಸ್ಥಳೀಯ ಬೇಡಿಕೆ, ಸ್ಥಳೀಯ ಉತ್ಪಾದನೆ, ಸ್ಥಳೀಯ ಪೂರೈಕೆ ಆಧಾರದಲ್ಲಿ ಅಭಿವೃದ್ಧಿಪಡಿಸಬೇಕಿದೆ ಎಂದು ಅವರು ವಿವರಿಸಿದರು.


ಎನರ್ಜಿ ಸೆಕ್ಯುರಿಟಿ, ಕ್ಲೈಮೇಟ್ ಚೇಂಜ್ - ಹಸಿರು ಪರಿವರ್ತನೆ- ಗ್ರೀನ್ ಟ್ರಾನ್ಸಿಷನ್ ಗುರಿ ಸಾಧನೆಗೆ ಹಲವು ಆಯಾಮದ ಪ್ರಯತ್ನಗಳು ನಡೆಯುತ್ತಿವೆ. ಸಿಬಿಜಿ (ಕಂಪ್ರೆಸ್ಡ್‌ ಬಯೋ ಗ್ಯಾಸ್) ಪ್ಲಾಂಟ್‌ಗಳ ಸ್ಥಾಪನೆಯಾಗುತ್ತಿದೆ. ಒಟ್ಟಾರೆ ಅನಿಲ ಬೇಡಿಕೆಯ ಶೇ 16ರಷ್ಟನ್ನು ಸಿಎನ್‌ಜಿ ಯಿಂದ ಪೂರೈಸಲಾಗುತ್ತಿದೆ.



ಕ್ಲೀನ್ ಕುಕಿಂಗ್ ಗ್ಯಾಸ್- ಸ್ವಚ್ಛ ಅಡುಗೆ ಅನಿಲವನ್ನು ಎಲ್ಲ ಜನತೆಗೆ ಎಲ್‌ಪಿಜಿ ಸಿಲಿಂಡರ್ ಮೂಲಕ ತಲುಪಿಸಲಾಗುತ್ತಿದೆ. ಉಜ್ವಲಾ ಯೋಜನೆಯಡಿ ಅಡುಗೆ ಅನಿಲ ಪಡೆಯುವವರ ಪೈಕಿ ನಾಲ್ಕು ಜನರ ಕುಟುಂಬಕ್ಕೆ ಕೇವಲ 5 ರೂ ಖರ್ಚಾಗುತ್ತದ ಅಷ್ಟೆ. ಉಜ್ವಲಾ ಯೋಜನೆಯ ಫಲಾನುಭವಿ ಅಲ್ಲದವರು ದಿನಕ್ಕೆ 16 ರೂ ವೆಚ್ಚದಲ್ಲಿ ಸ್ವಚ್ಛ ಅಡುಗೆ ಅನಿಲ ಪಡೆಯುತ್ತಿದ್ದಾರೆ. 


ದೇಶದಲ್ಲೀಗ ಒಟ್ಟು 140 ಮಿಲಿಯನ್ ಎಲ್ ಪಿಜಿ ಸಂಪರ್ಕ ನೀಡಲಾಗಿದೆ. ಶೇ. 67ರಷ್ಟು ಜನರು ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಪಡೆಯುತ್ತಾರೆ. 


ದೇಶದಲ್ಲಿ ವರ್ಷಕ್ಕೆ 260-270 ಮಿಲಿಯನ್ ಮೆಟ್ರಿಕ್ ಟನ್ ಇಂಧನ ಸಂಸ್ಕರಣೆ ಸಾಮರ್ಥ್ಯ ಹೊಂದಲಾಗಿದೆ. ಬ್ರೆಜಿಲ್ 3 ಮಿಲಿಯನ್ ಬ್ಯಾರೆಲ್ ಪ್ರತಿದಿನ ಉತ್ಪಾದನೆ ಮಾಡುತ್ತಿದೆ. ಸುರಿನಾಮ್, ಗಯಾನಾ, ಕೆನಡಾ ಕೂಡ ಕಚ್ಚಾತೈಲ ಉತ್ಪಾದನೆ ಮಾಡುತ್ತಿವೆ.


ಕಳೆದ ಮೂರು ವರ್ಷಗಳಲ್ಲಿ ಇಂಧನ ಬೆಲೆ ಕಡಿಮೆಯಾದ ಜಗತ್ತಿನ ಒಂದು ದೇಶವೆಂದರೆ ಭಾರತ ಮಾತ್ರ. ಕಳೆದ ಮೂರು ವರ್ಷಗಳಲ್ಲಿ ಸಿಎನ್‌ಜಿ ಉತ್ಪಾದನೆ ಶೇ. 6 ರಿಂದ 15 ಏರಿಕೆಯಾಗಿದೆ. ಮೋದಿ ಸರಕಾರ ಬಂದಾಗ ಗೃಹಬಳಕೆಗೆ  14 ಕೋಟಿ ಎಲ್‌ಪಿಜಿ ಸಂಪರ್ಕವಿತ್ತು. ಈಗ ಈ ಸಂಖ್ಯೆ 33.3 ಕೋಟಿಗೆ ಏರಿಕೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಆದ ಬದಲಾವಣೆಯಿದು ಎಂಬುದನ್ನು ಸಚಿವರು ಉಲ್ಲೇಖಿಸಿದರು.


ಆರ್ಥಿಕ ಬೆಳವಣಿಗೆಯಿಂದ ಜನರ ಜೀವನ ಮಟ್ಟ ಹೆಚ್ಚಾಗುತ್ತಿದೆ. ತಲಾ ಆದಾಯ- ಹೆಚ್ಚಾಗಬೇಕು. 2047 ಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಬೇಕು. ಆಗ ತಾನಾಗಿಯೇ ತಲಾ ಆದಾಯ ಹೆಚ್ಚುತ್ತದೆ. ಬೆಟರ್ ಹೆಲ್ತ್‌ ಕೇರ್, ಬೆಟರ್ ಎನರ್ಜಿ ಕನ್ಸಂಪ್ಷನ್- ಮಾಲಿನ್ಯ ನಿವಾರಣೆ- ಇವು ಮೂರೂ ಒಂದಕ್ಕೊಂದು ಸಂಬಂಧ ಹೊಂದಿವೆ. ಈಸ್ ಆಫ್ ಲಿವಿಂಗ್- ತ್ವರಿತವಾಗಿ ಆಗುತ್ತಿದೆ. ಡಿಜಿಟಲ್ ವಹಿವಾಟು ಏರುತ್ತಿದೆ ಎಂದು ನುಡಿದರು.


ದೇಶದ ಹಿತ ಮುಖ್ಯ:

ಬಯೋಫ್ಯುಯೆಲ್ ಬಳಕೆ 20%ಗೆ ಹೆಚ್ಚಾಗಬೇಕು. 2026ರ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲದ ಬೆಲೆ  ಕಡಿಮೆ ಆಗಲಿದೆ. ಒಎನ್‌ಜಿಸಿ ಪ್ರತಿದಿನ 45000 ಬ್ಯಾರೆಲ್ ಅನಿಲ ಉತ್ಪಾದನೆ ಮಾಡುತ್ತಿದೆ. ಗ್ರೀನ್ ಎನರ್ಜಿ ಇನ್ನಷ್ಟು ಸಂಶೋಧನೆ ಆಗಬೇಕು. ಪ್ರಜಾಸತ್ತಾತ್ಮಕ ಸರಕಾರದ ಮೊದಲ ಆದ್ಯತೆ ತನ್ನ ಬಳಕೆದಾರರ ಕಡೆಗೆ ಇರಬೇಕು. ರಷ್ಯಾದ ತೈಲ ಖರೀದಿಯಿಂದ ಬೆಲೆ ಸ್ಥಿರತೆ. ಎಲ್ಲಿಂದ ಕಡಿಮೆ ಬೆಲೆಗೆ ಸಿಗುತ್ತದೋ ಅಲ್ಲಿಂದ ಖರೀದಿಸಲು ನಾವು ಸ್ವತಂತ್ರರು. ಆ ವಿಚಾರದಲ್ಲಿ ಯಾವುದೇ ಇತರ ದೇಶದ ಒತ್ತಡಕ್ಕೆ ಬಗ್ಗುವುದಿಲ್ಲ ಎಂದು ಅವರು ಹೇಳಿದರು.


ಇಂಧನ ಬೆಲೆ ನಿಗದಿ ಹೇಗೆ?

ಉತ್ಪಾದನಾ ವೆಚ್ಚ (ಪ್ರತಿ ಬ್ಯಾರೆಲ್‌ಗೆ) + ಸಾಗಣೆ ವೆಚ್ಚ+ ಇನ್ಶೂರೆನ್ಸ್ ವೆಚ್ಚ+ ಟ್ಯಾಕ್ಟ್ ಆಧರಿಸಿ ಬೆಲೆ ನಿಗದಿ ಮಾಡಲಾಗುತ್ತದೆ. ಒಂದು ಬ್ಯಾರೆಲ್ ತೈಲ ಹೊರ ತೆಗೆಯಲು 6-8 ಡಾಲರ್ ಬೇಕಾಗಬಹುದು. ಇತರ ಹಲವು ಸಂಗತಿಗಳು ಬೆಲೆ ನಿಗದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.


ವಿಂಡ್, ಸೋಲಾರ್, ಸಿಬಿಜಿ, ನ್ಯಾಚುರಲ್ ಗ್ಯಾಸ್ ಇತ್ಯಾದಿ- ವಿವಿಧ ಶಕ್ತಿ ಮೂಲಗಳು ಈಗ ಲಭ್ಯ. ದೇಶದ ಒಟ್ಟು ವಾಹನಗಳಲ್ಲಿ 70% ವಾಹನ ಸಂಚಾರ 2-3 ವೀಲರ್ಸ್ ಆಗಿವೆ. ಇತ್ತೀಚೆಗೆ  ಬ್ಯಾಟರಿ ಚಾಲಿತ ವಾಹನಗಳು ಹೆಚ್ಚುತ್ತಿವೆ.


ದೇಶದಲ್ಲಿ ಈಗ ಒಟ್ಟು 1,000 ಕಿ.ಮೀ ಮೆಟ್ರೋ ಸಂಚಾರ ಆರಂಭವಾಗಿದೆ. ಶೀಘ್ರವೇ ಇನ್ನೂ 1000 ಕಿಮೀ ಮೆಟ್ರೋ ಸಂಚಾರ ಸೇರ್ಪಡೆಯಾಗಲಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುಧಾರಣೆ ಆಗುತ್ತಿದೆ. ಪಿಎಂ ಸೂರ್ಯಘರ್ ಯೋಜನೆ- ಗೃಹಬಳಕೆ ವಿದ್ಯುತ್ ಉತ್ಪಾದನೆಯಲ್ಲಿ ಕ್ರಾಂತಿ ಮಾಡಿದೆ. ಇವಿ ಚಾರ್ಜಿಂಗ್ ಸ್ಟೇಷನ್‌ಗಳು ಹೆಚ್ಚಾಗುತ್ತಿದೆ. ಹೈಬ್ರಿಡ್ ಕಾರುಗಳು ಬರುತ್ತಿವೆ. ಬ್ಯಾಟರಿ, ಬಯೋಫ್ಯುಯೆಲ್ ಬಳಕೆ ಮಾಡುವ ವಾಹನಗಳ ಅಭಿವೃದ್ಧಿ ಆಗುತ್ತಿದೆ.


ಅರಬ್ ದೇಶಗಳ ಜತೆಗೆ ಭಾರತದ ಸಂಪರ್ಕ ತೈಲ ಮತ್ತು ಅನಿಲಕ್ಕಾಗಿ ಮಾತ್ರ ಇದೆಯೇ? ಬೇರೆ ಸಂಪರ್ಕವೂ ಇದೆಯೇ? ರಾಜತಾಂತ್ರಿಕ ಸಂಪರ್ಕದಿಂದ ಬೆಲೆ ತಗ್ಗಿಸಲು ಸಾಧ್ಯವೆ? ಎಂಬ ಪ್ರೇಕ್ಷಕರ ಪ್ರಶ್ನೆಗೆ- ನಮ್ಮ ಬಾಂಧವ್ಯ ಬಹಳ ಹಳೆಯದು. ಭಾರತ ಪ್ರಾಚೀನ ನಾಗರಿಕತೆ. ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತ- ಗಲ್ಫ್ ರಾಷ್ಟ್ರಗಳ ಸಂಬಂಧ ಶತಮಾನಗಳ ಹಳೆಯದು. ಬರೀ ತೈಲಕ್ಕೆ ಮಾತ್ರ ಸೀಮಿತವಲ್ಲ ಎಂದು ಸಚಿವರು ಉತ್ತರಿಸಿದರು.


ಇಂಡಿಯಾ ಎನರ್ಜಿ ವೀಕ್- ಗೋವಾದಲ್ಲಿ ಕಾಯಂ ಪ್ರದರ್ಶನದ ವ್ಯವಸ್ಥೆ ಮಾಡಲಾಗುತ್ತಿದೆ. ಯುವಕರಿಗೆ ಇದನ್ನು ತಲುಪಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವನ್ನು ಪ್ರಧಾನಿ ಮೋದಿಯವರು ನೀಡಿದ್ದಾರೆ. ಇದಕ್ಕೆ ಯಾವುದೇ ವೆಚ್ಚ ಮಾಡುವುದಿಲ್ಲ. ನೀರಿನಿಂದ ಹೈಡ್ರೋಜನ್ ಬೇರ್ಪಡಿಸುವ ತಂತ್ರಜ್ಞಾನದ ಸ್ಟಾಲ್ ಅನ್ನು ಬಿಪಿಸಿಎಲ್  ಪ್ರದರ್ಶಿಸಿದೆ. ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಟಾರ್ಟಪ್ ಇಕೋ ಸಿಸ್ಟಂ ಬೆಳೆಯುತ್ತಿದೆ. ಇವುಗಳ ಸಹಕಾರದಿಂದ ಹೊಸ ತಂತ್ರಜ್ಞಾನಗಳ ಆವಿಷ್ಕಾರ ನಡೆಯುತ್ತಿದೆ ಎಂದು ಹರ್‍‌ದೀಪ್ ಸಿಂಗ್ ಪುರಿ ವಿವರಿಸಿದರು.


ಪ್ರಶಾಂತ್ ವೈದ್ಯರಾಜ್ ಸಂವಾದ ನಡೆಸಿಕೊಟ್ಟರು. ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ ಮುರ್ಡೇಶ್ವರ ಮೂಲದವರು. ಹೀಗಾಗಿ ಕರ್ನಾಟಕದ ಅಳಿಯ ಎನ್ನಲು ಹೆಮ್ಮೆಯಿದೆ ಎಂದು ನೆನಪಿಸಿಕೊಂಡರು. 39 ವರ್ಷ ವಿದೇಶಾಂಗ ಸೇವೆಯಲ್ಲಿದ್ದು, ಇಂಟರ್‌ನ್ಯಾಷನಲ್ ಥಿಂಕ್ ಟ್ಯಾಂಕ್ ಮೆಂಬರ್ ಆಗಿದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top