ಮಂಗಳೂರು ಲಿಟ್ ಫೆಸ್ಟ್ ನಲ್ಲಿ ಶಿಕ್ಷಣ ನೀತಿ ಕುರಿತ ಸಂವಾದ
ಮಂಗಳೂರು: ಪ್ರಾಚೀನ ಭಾರತದ ಶಿಕ್ಷಣ ನೀತಿ ವ್ಯಕ್ತಿ ಮತ್ತು ವ್ಯಕ್ತಿತ್ವ ನಿರ್ಮಾಣದ ಉದಾತ್ತ ಗುರಿಯನ್ನು ಹೊಂದಿತ್ತೇ ಹೊರತು ಕೇವಲ ಆರ್ಥಿಕ ಸಂಪಾದನೆಯ ದೃಷ್ಟಿಕೋನವನ್ನು ಹೊಂದಿರಲಿಲ್ಲ. 1830ರ ವೇಳೆಗೆ ಬ್ರಿಟಿಷ್ ಆಡಳಿತದ ಭಾರತದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿ ಜಾರಿಗೆ ಬಂದ ಬಳಿಕ ಶಿಕ್ಷಣದಲ್ಲಿ ಭಾರತೀಯತೆ, ಭಾರತೀಯ ಮೌಲ್ಯಗಳು ಶಿಥಿಲವಾಗುತ್ತ ಬಂದವು. ಈ ಶೈಥಿಲ್ಯವನ್ನು ಸರಿಪಡಿಸಿ ಮತ್ತೆ ಉದಾತ್ತ ಶಿಕ್ಷಣನೀತಿಯನ್ನು ಜಾರಿಗೊಳಿಸುವುದು ಎನ್‌ಇಪಿ 2020 ಉದ್ದೇಶವಾಗಿದೆ ಎಂದು ಶಿಕ್ಷಣ ತಜ್ಞ ಡಾ. ವಿನಯ್ ಸಹಸ್ರಬುದ್ಧೆ ಹೇಳಿದರು.
ಭಾರತ್ ಫೌಂಡೇಶನ್ ಆಯೋಜಿಸಿದ ಮಂಗಳೂರು ಲಿಟ್ ಫೆಸ್ಟ್‌ನ 7ನೇ ಆವೃತ್ತಿಯ ಮೊದಲ ದಿನ ಗ್ರಾಜುಯೇಟಿಂಗ್ ಎಜುಕೇಶನ್ ಪಾಲಿಸಿ (ಶಿಕ್ಷಣ ನೀತಿಯ ಪದೋನ್ನತಿ) ಎಂಬ ವಿಷಯದ ಬಗ್ಗೆ ಸಂವಾದದಲ್ಲಿ ಭಾಗವಹಿಸಿ ಅವರು ತಮ್ಮ ವಿಚಾರ ಮಂಡಿಸಿದರು. ಡಾ. ವಿನಯಚಂದ್ರ ಬಾನಾವತಿ ಸಂವಾದ ನಡೆಸಿಕೊಟ್ಟರು.
ಮುಖ್ಯಾಂಶಗಳು:
ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆ 1835ರಿಂದ ಭಾರತದಲ್ಲಿ ಪ್ರಾರಂಭವಾಯಿತು. ಭಾರತೀಯ ಶಿಕ್ಷಣ ಪದ್ಧತಿಯ ಬಗ್ಗೆ ತಪ್ಪು ನಿರೂಪಣೆ, ಅಪಪ್ರಚಾರದ ಫಲವಾಗಿ ಮೆಕಾಲೆ ಶಿಕ್ಷಣ ಪದ್ಧತಿ ಬ್ರಿಟಿಷ್ ಆಡಳಿತದಲ್ಲಿ ಚಾಲ್ತಿಗೆ ಬಂತು. ಅದು ಕೇವಲ ಬ್ರಿಟಿಷ್ ಆಡಳಿತಕ್ಕೆ ಬೇಕಿರುವ ಗುಮಾಸ್ತರನ್ನು ಸೃಷ್ಟಿಸುವ ಉದ್ದೇಶ ಹೊಂದಿತ್ತೇ ಹೊರತು ಈ ದೇಶದ ಪರಂಪರೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಉದ್ದೇಶ ಹೊಂದಿರಲಿಲ್ಲ.
ಪರಿಣಾಮವಾಗಿ ಭಾರತೀಯ ಶಿಕ್ಷಣ ವ್ಯವಸ್ಥೆ ಕುಸಿಯುತ್ತ ಬಂತು. ಎಡಪಂಥೀಯ ಚಿಂತನೆಗಳು ಹುಲುಸಾಗಿ ಬೆಳೆಯಲು ಶಿಕ್ಷಣ ಕೇಂದ್ರಗಳು ಕಾರಣವಾದವು. ಭಾರತೀಯತೆಯನ್ನು ಶಿಕ್ಷಣದಿಂದ ಸಂಪೂರ್ಣ ತೊಡೆದುಹಾಕಲಾಯಿತು. ಅದೇ ಮಾದರಿಯ ಶಿಕ್ಷಣ ಪಡೆದು ಬೆಳೆದ ತಲೆಮಾರುಗಳು ವಿಸ್ಮೃತಿಯ ಕಾರಣದಿಂದ ಭಾರತೀಯತೆಯನ್ನು ದ್ವೇಷಿಸಲು ಆರಂಭಿಸಿದವು. ಆ ಮೂಲಕ ಬ್ರಿಟಿಷ್ ಆಡಳಿತದ ವ್ಯವಸ್ಥೆ ಪರೋಕ್ಷವಾಗಿ ಮುಂದುವರಿಯಲು ಕಾರಣವಾಗಿದೆ ಎಂದು ಸಹಸ್ರಬುದ್ಧೆ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020:
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು , ರಾಷ್ಟ್ರೀಯತೆಯ ಭಾವನೆಯನ್ನು ಎಳವೆಯಲ್ಲೇ ತುಂಬಲು ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಬಂತು. ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಿದೆ. ಭಾರತೀಯ ಮೌಲ್ಯಗಳನ್ನು, ಭಾರತದ ಐತಿಹಾಸಿಕ ಹಿರಿಮೆಗಳನ್ನು ಎತ್ತಿ ಹಿಡಿಯುವ ಶಿಕ್ಷಣಕ್ಕಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಲಾಯಿತು.
ಪ್ರಾಚೀನ ಭಾರತದ ಶಿಕ್ಷಣ ನೀತಿಯಲ್ಲಿ ಗುರು ಶಿಷ್ಯ ಪರಂಪರೆ ಉದಾತ್ತವಾಗಿತ್ತು. ಶಿಕ್ಷಕರು-ವಿದ್ಯಾರ್ಥಿಗಳ ನಡುವಿನ ಸಂಬಂಧ ಮಧುರವಾಗಿತ್ತು. ಈ ನೆಲೆಗಟ್ಟಿನ ಮೇಲೆ
ಅತ್ಯಂತ ಯೋಜಿತವಾಗಿ ಸಿದ್ಧಪಡಿಸಲಾದ ಶಿಕ್ಷಣ ನೀತಿ ಇದಾಗಿದೆ. ಉನ್ನತ ಅಧ್ಯಯನ ಮತ್ತು ಕೌಶಲ್ಯ ಅಭಿವೃದ್ಧಿ ಇವೆರಡೂ ಎನ್‌ಇಪಿ 2020ಯ ಪ್ರಮುಖ ಆದ್ಯತೆಗಳು ಎಂದು ಸಹಸ್ರಬುದ್ಧೆ ವಿವರಿಸಿದರು.
ತಮಿಳುನಾಡೂ ಸೇರಿದಂತೆ ಹಲವು ರಾಜ್ಯಗಳು ಎನ್‌ಇಪಿ 2020 ಜಾರಿಗೆ ತಂದಿಲ್ಲ. ಕೇವಲ ಸಂಕುಚಿತ ರಾಜಕೀಯ ದೃಷ್ಟಿಕೋನದಿಂದ ಅಲ್ಪದೃಷ್ಟಿಯ ಶಿಕ್ಷಣದ ವ್ಯವಸ್ಥೆಯನ್ನು ಮುಂದುವರಿಸಿರುವ ಈ ರಾಜ್ಯಗಳು ಒಂದಲ್ಲ ಒಂದು ದಿನ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಬರಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ ನೂತನ ಶಿಕ್ಷಣ ನೀತಿ ಜಾರಿಗೊಳಿಸುವಲ್ಲಿ ರಾಜ್ಯಗಳ ಸಹಕಾರ ಹೆಚ್ಚು ಅಗತ್ಯವಿದೆ.
ನಮ್ಮ ಶೈಕ್ಷಣಿಕ ಪರಂಪರೆ ಶ್ರೇಷ್ಠವಾದದ್ದು. ಅಲ್ಲಿ ನಾವು ಗುರುತಿಸಬಹುದಾದ ವೈಶಿಷ್ಟ್ಯಗಳೆಂದರೆ- ರಾಮ, ಕೃಷ್ಣರಂತಹ ರಾಜಕುಮಾರರೂ ಸಾಮಾನ್ಯ ಮಕ್ಕಳಂತೆ ಗುರುಕುಲದಲ್ಲಿ ಕಲಿತರು, ಕುಚೇಲನಂತಹ ಸಾಮಾನ್ಯ ಬಡ ವ್ಯಕ್ತಿಯೂ ಗುರುಕುಲದಲ್ಲಿ ಕಲಿತ. ಶಿಕ್ಷಣದಲ್ಲಿ ಯಾರಿಗೂ ತಾರತಮ್ಯ ಇಲ್ಲ ಎಂಬುದನ್ನು ನಮ್ಮ ಪ್ರಾಚೀನ ಗುರುಕುಲ ಪದ್ಧತಿ ಸಾರಿತ್ತು.
ಜ್ಞಾನಾರ್ಥಿ ಸಮಾಜ ನಮ್ಮದು, ಜ್ಞಾನ ಪರಂಪರೆ ಮೌಖಿಕವಾಗಿ ಬಂದಿದೆ. ಶೃತಿ-ಸ್ಮೃತಿ-ಪುರಾಣಗಳು ನಮ್ಮ ಜ್ಞಾನ ಭಂಡಾರಗಳು. ಅಲ್ಲದೆ ವಯೋಮಾನಕ್ಕೆ ಅನುಗುಣವಾಗಿ ಮಕ್ಕಳ ಜತೆಗೆ ವ್ಯವಹರಿಸುವ ಅತ್ಯಂತ ಶ್ರೇಷ್ಠ ವಿಧಾನ ನಮ್ಮಲ್ಲಿ ಮೊದಲೇ ಇತ್ತು. ಹೀಗಾಗಿಯೇ ಷೋಡಶ ವರ್ಷದಲ್ಲಿ ಪುತ್ರ ಮಿತ್ರನಾಗುತ್ತಾನೆ ಎಂಬ ಸುಭಾಷಿತ ಚಾಲ್ತಿಗೆ ಬಂತು.
ನಮ್ಮ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎಂಬುದು ಅತ್ಯಂತ ಸ್ಪಷ್ಟವಾಗಿತ್ತು. ಪ್ರಕ್ರಿಯೆಯ ಪ್ರಜಾಪ್ರಭುತ್ವೀಕರಣ (ಡೆಮಾಕ್ರಟೈಸೇಶನ್), ನೂತನ ತಂತ್ರಜ್ಞಾನದ ಅಳವಡಿಕೆ ಆಗಬೇಕಿದೆ. ಶಿಕ್ಷಣ ನೀತಿಯನ್ನು ರಾಜಕೀಯ ವಿರೋಧವಿಲ್ಲದೆ ಜಾರಿಗೊಳಿಸಬೇಕು.
ಮಾತೃಭಾಷೆಯಲ್ಲಿ ಶಿಕ್ಷಣ:
ಮಾತೃಭೂಮಿ, ಮಾತೃಭಾಷೆ ಎಲ್ಲವನ್ನೂ ಗೌರವಿಸಬೇಕು. ಎನ್‌ಇಪಿ 2020 ಯಲ್ಲಿ ಇದಕ್ಕೆ ವಿಪುಲ ಅವಕಾಶಗಳನ್ನು ಒದಗಿಸಲಾಗಿದೆ.
ಎಂಜಿನಿಯರಿಂಗ್ ಶಿಕ್ಷಣ ಇಟಾಲಿಯನ್, ಫ್ರೆಂಚ್ ಭಾಷೆಯಲ್ಲಿ ಸಾಧ್ಯವಿದ್ದರೆ ಕನ್ನಡದಲ್ಲಿ ಯಾಕೆ ಸಾಧ್ಯವಿಲ್ಲ? ಕನ್ನಡದಲ್ಲೂ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯಲು ಎನ್‌ಇಪಿ ಅವಕಾಶ ಮಾಡಿಕೊಟ್ಟಿದೆ.
ನಾವು ಮಾತೃಭಾಷೆಯಲ್ಲಿ ಮಾತನಾಡಿದರೆ ಗೌರವ ಕಡಿಮೆ ಎಂಬ ಕೀಳರಿಮೆ ಏಕೆ? ಕನ್ನಡ, ತೆಲುಗು, ಮರಾಠಿ, ಗುಜರಾತಿ- ಭಾಷಿಕರಲ್ಲಿ ಇಂತಹದೊಂದು ಕೀಳರಿಮೆ ಇದೆ. ಭಾಷೆ ಎಂಬುದು ಸಂಸ್ಕೃತಿಯ ವಾಹಕ. ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ವರ್ಗಾಯಿಸಲು ಭಾಷೆ ಅತಿ ಮುಖ್ಯ.
ಸರಕಾರದ ನಾಯಕರು ಭಾರತೀಯ ಸಂಸ್ಕೃತಿಯ ಬೇರುಗಳನ್ನು ಹೊಂದಿರಬೇಕು. ಅದನ್ನು ಪ್ರತಿಪಾದಿಸುವುದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಜಪಾನ್ ಪ್ರಧಾನಿಯನ್ನು ಭೇಟಿಯಾದಾಗ ಭಗವದ್ಗೀತೆಯನ್ನು ಉಡುಗೊರೆಯಾಗಿ ಕೊಟ್ಟರು.
ರಾಮಾಯಣ-ಮಹಾಭಾರತ ನಮ್ಮ ಪರಂಪರೆ. ಇಸ್ಲಾಮ್ ಅನುಸರಿಸುವ ಹಲವು ದೇಶಗಳು ರಾಮಾಯಣವನ್ನು ಪವಿತ್ರ ಗ್ರಂಥವಾಗಿ ಪರಿಗಣಿಸಿವೆ. 2018ನಲ್ಲಿ ಇರಾನ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದರು. ಅವರು ತಮ್ಮ ಭಾಷಣದಲ್ಲಿ ಭಾರತ-ಇರಾನ್ ಪರಂಪರೆಯಲ್ಲಿ ಇರುವ ಸಾಮಾನ್ಯ ಅಂಶಗಳನ್ನು ಉಲ್ಲೇಖಿಸಿದರು. ಸಂಸ್ಕೃತದ ವೈಯಾಕರಣಿ ಪಾಣಿನಿಯ ಬಗ್ಗೆ ಟೆಹರಾನ್ ನಲ್ಲಿ ವಿಚಾರಗೋಷ್ಠಿ ನಡೆಸಲಾಯಿತು. ಟೆಹರಾನ್ ವಿವಿಯಲ್ಲಿ ಋಗ್ವೇದ, ಉಪನಿಷತ್ ಗಳನ್ನು ಅಲ್ಲಿ ಬೋಧಿಸಲಾಗುತ್ತಿದೆ. ಭಾರತದಲ್ಲೇ ಯಾವ ಯನಿವರ್ಸಿಟಿಯೂ ಇವುಗಳನ್ನು ಬೋಧಿಸುತ್ತಿಲ್ಲ.
ವರ್ಣಮಯ ಸಂಸ್ಕೃತಿ ನಮ್ಮದು. ಹೀಗಾಗಿ ಇಡೀ ವಿಶ್ವವನ್ನೇ ಆಕರ್ಷಿಸುತ್ತಿದೆ. ಜಗತ್ತಿನೆಲ್ಲೆಡೆ ಭಾರತ ಮತ್ತು ಭಾರತೀಯರ ಬಗ್ಗೆ ಗೌರವ, ಆದರಗಳಿವೆ. ಇದಕ್ಕೆ ಕಾರಣ ನಮ್ಮ ಸಂಸ್ಕೃತಿ.
ಜಾರ್ಜ್ ಸೊರೋಸ್ ನಂತಹ ಕೆಲವು ವ್ಯಕ್ತಿಗಳು ಭಾರತವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಲು ಹವಣಿಸಿದರೂ ಪರಿಣಾಮವಾಗಿಲ್ಲ ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ