ಎಲೆ ಮರೆಯ ಕಾಯಿಯಂತೆ ಕಲ್ಲಿನಲ್ಲಿ ಅಡಗಿರುವ ಬೆಂಕಿಯಂತೆ ಮಂಜಿನಲ್ಲಿ ಅಡಗಿರುವ ಬೆಣ್ಣೆಯಂತೆ ನನ್ನ ಜೀವನದ ಹಿಂದೆ ಕಾಣದೇ ಅಡಗಿರುವ ಅದ್ಬುತವಾದ ಶಕ್ತಿಯೇ ನನ್ನಪ್ಪ. ಅಪ್ಪನೆಂದರೆ ಬೆಳಕು ಅಪ್ಪನಿಂದಲೇ ಬದುಕು ಅಪ್ಪಾ ಎಂಬ ಈ ಶಬ್ದದಲ್ಲೇ ಅದೆಂತಾ ಗತ್ತು ಗಾಂಭೀರ್ಯ. ಅಪ್ಪಾ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ. ದರ್ಪ, ಕೋಪ ಅತಿ ಎನ್ನಿಸುವ ಶಿಸ್ತು, ಅವಮಾನ, ಇವೆಲ್ಲದರ ಸಮ್ಮಿಲನವೇ ಅಪ್ಪ. ಮಗಳ ಕೋರಿಕೆಗಳು ಮತ್ತು ಬಯಕೆಗಳನ್ನೆಲ್ಲಾ ಈಡೇರಿಸುವ ಅದ್ಬುತವಾದ ಶಕ್ತಿ ಪ್ರತಿಯೊಂದು ಹೆಣ್ಣುಮಗುವಿನ ಪಾಲಿಗೆ ಅಪ್ಪನೇ ಮೊದಲ ನಾಯಕನಾಗಿರುತ್ತಾನೆ.
ನನ್ನಪ್ಪ ಗುರು ಅಲ್ಲ, ಆದ್ರೆ ಜವಾಬ್ದಾರಿಯಿಂದ ಬದುಕಲು ಕಲಿಸಿದ. ಶ್ರೀಮಂತನಲ್ಲ ಆದ್ರೆ ಶ್ರೀಮಂತಿಕೆಯಿಂದ ಜೀವಿಸಲು ಕಲಿಸಿದ. ಉತ್ತಮ ಗುಣಗಳನ್ನು ತಿಳಿಸಿಕೊಟ್ಟ. ಸಮಯಕ್ಕೆ ತಕ್ಕ ಹಾಗೆ ಸಂಬಂಧಗಳು ಬದಲಾದಾಗ ಧೈರ್ಯ ಹಾಗೂ ಸ್ವಾಭಿಮಾನದಿಂದ ಬದುಕಲು ಕಲಿಸಿಕೊಟ್ಟ, ವರುಷಗಟ್ಟಲೆ ಉಸಿರುಗಟ್ಟಿ ದುಡಿದು ಬೆವರಲಿ ಮಿಂದು ಮಗಳ ಜೀವಕ್ಕೆ ನೆರಳಾದ ಕಲ್ಪವೃಕ್ಷ ಬಣ್ಣದ ಕನಸುಗಳಿಗೆ ರೆಕ್ಕೆ ಕಟ್ಟಲು ಕಲ್ಲು ಮುಳ್ಳಿನ ಹಾದಿ ತುಳಿದು ಮಗಳ ಸಾಧನೆಗೆ ಹೆಜ್ಜೆಯಾದ ಸಾಧಕ.
ಅಪ್ಪ ಬೆಳೆಯುವ ಬಳ್ಳಿಗೆ ಆಸರೆ, ಮಗಳನ್ನು ಗುರಿ ಮುಟ್ಟಿಸುವ ಹೊಣೆ, ಬದುಕಿನಲ್ಲಿ ಎಲ್ಲವೂ ಅಪ್ಪನೇ... ಹೆಣ್ಣು ಮಕ್ಕಳಿಗೆ ತಾಯಿಗಿಂತ ತಂದೆಯನ್ನು ಹಚ್ಕೊಳ್ಳೋದೇ ಜಾಸ್ತಿ. ಮಗಳಿಗೆ ತಂದೆ ಭಾವನಾತ್ಮಕ ಶಕ್ತಿ ಇದ್ದಂತೆ. ಮಗಳ ನಿಸ್ವಾರ್ಥಿ ಜೀವಿಯೇ ಅಪ್ಪ, ಮಗಳು ಅಪ್ಪನ ಕೈ ಬೆರಳನ್ನು ಹಿಡಿದರೆ ಯಾರೊಬ್ಬರ ಕಾಲನ್ನು ಹಿಡಿಯುವ ಸಂದರ್ಭವೇ ಬರುವುದಿಲ್ಲ.
ಅಪ್ಪ ಎನ್ನುವ ಹೆಸರು ಎರಡಕ್ಷರದಲ್ಲಿದೆ, ಆದರೆ ಆ ಎರಡಕ್ಷರದಲ್ಲಿ ಮಗಳ ಇಡೀ ಪ್ರಪಂಚವೇ ಇದೆ. ಅಪ್ಪನ ರಾಜಕುಮಾರಿ, ದೇವತೆ, ಗೆಳತಿ, ಮಗ ಎಲ್ಲವೂ ಮಗಳೇ ಅಪ್ಪನ ಮನಸ್ಸು ಆಕಾಶದಂತೆಯೇ ಅವನ ಪ್ರೀತಿಯು ಅಷ್ಟೇ ವಿಶಾಲವಾಗಿರುತ್ತದೆ. ಆತನಿಂದ ಮಗಳು ಅನೇಕ ವಿಷಯವನ್ನು ನಿರೀಕ್ಷಿಸುತ್ತಾಳೆ. ಅದನ್ನು ಅರಿತು ನೀಡಿದರೆ ಅವಳ ಬಾಳು ಹುಣ್ಣಿಮೆಯ ಬೆಳದಿಂಗಳ ಚಂದಿರನಂತೆ. ಅತ್ತೆ ಮನೆಗೆ ಹೊರಟು ನಿಂತ ಆ ಕ್ಷಣ ಅಪ್ಪ ಮಗುವಾಗುತ್ತಾನೆ. ಮಗಳ ಜನನವನ್ನು ಮೊದಲು ಸಂಭ್ರಮಿಸುವುದೇ ತಂದೆ. ಹಾಗೆಯೇ ಅತ್ತೆ ಮನೆಗೆ ಹೊರಟ ಮಗಳ ಆ ಕ್ಷಣದಲ್ಲಿ ಮೊದಲು ದುಃಖಿಸುವುದೇ ಅವಳ ಅಪ್ಪನಾಗಿರುತ್ತಾನೆ.
ಅಪ್ಪನ ಪಾಲಿಗೆ ಮಗಳು ರಾಜಕುಮಾರಿ. ಅವರಿಬ್ಬರ ಸಂಬಂಧ ಕೇವಲ ಮಾತಿನಲ್ಲಿ ವರ್ಣಿಸಲಾಗದು. ಕಪ್ಪೆ ಚಿಪ್ಪಿನೊಳಗೆ ಅಡಗಿರುವ ಮುತ್ತುಗಳ ಹಾಗೆ ಮಕ್ಕಳನ್ನು ಜೋಪಾನ ಮಾಡುತ್ತಾನೆ. ಹಾಗೆ ಜೋಪಾನ ಮಾಡುತ್ತಲೇ ಮಕ್ಕಳನ್ನು ಜಗತ್ತಿನ ಅನುಭವಕ್ಕೆ ತೆರೆದುಕೊಳ್ಳುವಂತೆ ಬುದ್ಧಿ ಹೇಳುತ್ತಾನೆ. ಸ್ನೇಹಿತ, ಗುರು, ಮಾರ್ಗದರ್ಶಕನಾಗಿದ್ದುಕೊಂಡು ಬದುಕನ್ನು ರೂಪಿಸಿದ ಅಪ್ಪನಿಗೆ ಮನತುಂಬಿ ಧನ್ಯವಾದಗಳನ್ನು ಹೇಳಲೇಬೇಕು.
-ಮಂಜುಳಾ ಪ್ರಕಾಶ್
ಎಂಸಿಜೆ, ಆಳ್ವಾಸ್ ಕಾಲೇಜು ಮೂಡುಬಿದಿರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ