ಸಹಸ್ರಾರು ಪುಸ್ತಕಗಳ ಸಾಮ್ರಾಜ್ಯ, ಎಲ್ಲಿ ಕಣ್ಣು ಹಾಯಿಸಿದರು ಕಪಾಟುಗಳಲ್ಲಿ ಜೋಡಿಸಿದ ಸಾಲು ಸಾಲು ಪುಸ್ತಕಗಳು. ಓದುಗರು, ಪುಸ್ತಕ ಪ್ರಿಯರನ್ನು ಸೆಳೆಯುವ ಈ ಪುಸ್ತಕ ಸಾಮ್ರಾಜ್ಯದಲ್ಲಿ ಕವಿ ಪುಂಗವರ ಮನದೊಳಗಿನ ಕವಿತ್ವವಾಣಿ, ಅನುಭವಗಳ ಸಾರಗಳು ಕೈ ಬೀಸಿ ಕರೆಯುತ್ತಿರುತ್ತದೆ. ಸಣ್ಣ ಕಥೆಯಿಂದ ಹಿಡಿದು ಕಾದಂಬರಿಗಳವರೆಗೂ ಸಾವಿರಾರು ಸಂಖ್ಯೆಯ ಪುಸ್ತಕಗಳ ಜ್ಞಾನ ಭಂಡಾರದ ಆಗರ. ಓದಿದಷ್ಟು ಮುಗಿಯದ, ನೀರವ ಮೌನದಲ್ಲಿ ಜ್ಞಾನದ ಹಸಿವನ್ನು ಇಂಗಿಸುವ ಒಂದು ಅದ್ಬುತ ಜಾಗವೆಂದರೆ ಅದು ಗ್ರಂಥಾಲಯ.
ಮೂಲೆ ಮೂಲೆಯಲ್ಲೂ ಪುಸ್ತಕಗಳು ಮಾತಾಡುವಂತೆ ಭಾಸವಾಗುವುದು. ಹೆಜ್ಜೆ ಇಟ್ಟು ಗ್ರಂಥಾಲಯ ಪ್ರವೇಶಿಸುತ್ತಿದ್ದಂತೆ ವೀರ ಮಹನೀಯರ ಜೀವನ ಚರಿತ್ರೆ, ಸಾಹಸಗಳನ್ನು ಪುಸ್ತಕಗಳು ಸಾರಿ ಹೇಳುತ್ತವೆ. ಹೀಗೊಂದು ಅದ್ಬುತ ಜ್ಞಾನ ಮಂದಿರ ಗ್ರಂಥಾಲಯ. ಬದುಕಿನ ಸಾವಿರಾರು ಪ್ರಶ್ನೆಗಳಿಗೆ ಪ್ರತಿಯೊಂದು ಪುಟವೂ ದಾರಿ ತೋರಿಸುತ್ತದೆ.
ಕಥೆಗಳು ನೀತಿ ಪಾಠವಾದರೆ, ಕಾದಂಬರಿಗಳು ನವರಸಗಳ ಸಮ್ಮಿಶ್ರಣವಾಗಿ ಒಂದೊಳ್ಳೆ ಸಂದೇಶವನ್ನು ನೀಡುತ್ತವೆ. ಉತ್ತಮ ಮಾರ್ಗದರ್ಶನ, ಸಾವಿರಾರು ಅನುಭವಗಳುಳ್ಳ ಬರವಣಿಗೆಗಳು ಬದುಕಿಗೆ ಸ್ಫೂರ್ತಿದಾಯಕವಾಗಿದೆ. ಪುಸ್ತಕ ಪ್ರಿಯರಿಗಂತೂ ಅಚ್ಚು ಮೆಚ್ಚಿನ ತಾಣ ಎನ್ನಬಹುದು.ಸದಾ ಆಲೋಚನೆಗಳಿಗೆ ಹೊಸ ಹೊಸ ರೀತಿಯಲ್ಲಿ ಬಣ್ಣ ನೀಡುವ ಶಕ್ತಿ ಪುಸ್ತಕಗಳಿಗೆ ಇದೆ. ಆದ್ದರಿಂದ ಪುಸ್ತಕಗಳ ಬಹು ದೊಡ್ಡ ಪ್ರಪಂಚ ಗ್ರಂಥಾಲಯ.
ಆದರೆ ಇಂದು ಪುಸ್ತಕಗಳ ಓದುಗಾರರು ಬಹಳ ವಿರಳ. ಮೊಬೈಲ್ ಎಂಬ ಆಧುನಿಕ ಯಂತ್ರದ ಅಬ್ಬರ ಹೆಚ್ಚಾದಂತೆ ಪುಸ್ತಕಗಳು ಮೌಲ್ಯ ಕಳೆದುಕೊಳ್ಳುತ್ತಿದೆ. ಮೊಬೈಲ್ ನ ಕೈಗೊಂಬೆಗಳಾಗಿ ಬದುಕುತ್ತಿರುವ ನಾವು ಗ್ರಂಥಾಲಯದ ಕಡೆಗೆ ಹೋಗುವುದೇ ಕಡಿಮೆ. ಏಕೆಂದರೆ ಗೂಗಲ್, ಚಾಟ್ ಜಿಪಿಟಿಗಳಂತಹ ಆಪ್ ಗಳು ಸರಳ ವಿಧಾನದಲ್ಲಿ ವಿಚಾರಗಳನ್ನು ಲಭ್ಯವಾಗುವಂತೆ ಮಾಡುವುದರಿಂದ ಪುಸ್ತಕಗಳತ್ತ ನೋಡದಂತೆ ತಡೆಗೋಡೆಯಾಗಿ ನಿಂತಿದೆ.
ಇದೆಲ್ಲಾ ಕಾರಣದಿಂದಾಗಿ ಇಂದು ಪುಸ್ತಕಗಳು ಕಪಾಟಿನೊಳಗಡೆ ವರುಷಗಳೇ ಕಳೆದರು ಸ್ಥಿರ ಸ್ಥಿತಿಯಲ್ಲಿಯೇ ಅದರ ಸ್ಥಾನ. ಕಾಲ ಬದಲಾವಣೆಯಾಗುತ್ತಿದ್ದಂತೆ ಪ್ರತಿಯೊಂದಕ್ಕೂ ಮೊಬೈಲ್ ಅವಲಂಬನೆ ಹೆಚ್ಚು. ವಾಸ್ತವದಲ್ಲಿ ಪುಸ್ತಕ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಕೈ ಬೆರಳಲ್ಲೇ ಬೇಕಾದುದು ಕೈಗೆಟಕುವಾಗ ಹುಡುಕಾಡುವ ಅವಶ್ಯಕತೆ ಇದೆಯೇ ಅನ್ನುವ ರೀತಿಯಲ್ಲಿ ಮನಸ್ಥಿತಿ ಬದಲಾವಣೆಯಾಗಿದೆ. ಕಾರಣ ಶೈಕ್ಷಣಿಕ ಬದುಕಿಗೆ ಶಾಪ ಮತ್ತು ಸವಾಲಾಗಿ ಕಾಡುತ್ತಿರುವ ಮೊಬೈಲ್.
ಗ್ರಂಥಾಲಯ ಎಂದರೆ ಅದು ಜ್ಞಾನ ಸುಧೆ.ಓದುಗಾರರಿಂದಲೇ ತುಂಬಿತುಳುಕುತ್ತಿದ್ದ ಸುಂದರ ನೀರವ ಮೌನ ಸ್ಥಳ. ಕಳ್ಳನನ್ನು ಜ್ಞಾನಿಯಾಗಿ ಪರಿವರ್ತಿಸುವ ಶಕ್ತಿ ಇದೆ. ಸಾವಿರಾರು ಪ್ರಶ್ನೆಗಳಿಗೆ ಹುಡುಕಾಟದ ಉತ್ತರಗಳು ಅಲ್ಲಿ ಸಿಗುವುದು.ಅನುಭವದ, ಅಧ್ಯಯನದ ನೋಟದ ಅದ್ಬುತ ಸಾರವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಸ್ತುತದಲ್ಲಿ ಸಾವಿರಾರು ಆಪ್ ಗಳು ಹುಟ್ಟಿಕೊಂಡು ಗ್ರಂಥಾಲಯದ ಸ್ಥಾನ ಕಸಿದು ಕೊಂಡಿದೆ. ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವ ಆ ಅನುಭವದ ಸ್ವರೂಪವೇ ಬದಲಾಗಿ ಪಿ.ಡಿ.ಎಫ್ ಮೂಲಕ ಇಂದು ನಮ್ಮ ಎದುರು ನಿಂತಿದೆ.
ದಿನೇ ದಿನೇ ಪುಸ್ತಕ ಅಧ್ಯಯನದ ಹವ್ಯಾಸ ಕಡಿಮೆಯಾಗುತ್ತಿದೆ. ಚಾಟ್ ಜಿಪಿಟಿ, ಗೂಗಲ್ ಹೀಗೆ ಮೊರೆ ಹೋಗುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಬರೀ ಒಂದು ಅಲ್ಪ ಜ್ಞಾನಕ್ಕೆ ಸೀಮಿತವಾಗುತ್ತದೆ ಹೊರತು.ಜ್ಞಾನದ ವಿಸ್ತಾರ ಇದರಿಂದ ಸಾಧ್ಯವಿಲ್ಲ. ಸಂಪೂರ್ಣ ಜ್ಞಾನವೂ ಪುಸ್ತಕದಿಂದಲೇ ಎಂಬ ಸತ್ಯವನ್ನು ಅರಿತುಕೊಂಡಾಗ ನಾವು ಪರಿ ಪೂರ್ಣರಾಗಲು ಸಾಧ್ಯ.
ಪ್ರತಿನಿತ್ಯ ಕೈಯಿಂದ ಕೈ ಕಪಾಟು ಸೇರುತ್ತಿದ್ದ ಪುಸ್ತಕಗಳು ಇಂದು ಇಟ್ಟಲ್ಲಿಂದ ಕದಲದೇ ಧೂಳನ್ನು ಅಪ್ಪಿ ಹಿಡಿದಿದೆ. ಹೀಗೆ ಆದರೆ ಗ್ರಂಥಾಲಯಗಳು ಮರೆಯಾಗುವ ಕಾಲ ದೂರವಿಲ್ಲ. ಜ್ಞಾನದ ಆಲಯದ ಬಗೆಗೆ ಒಲವಾದರೆ ಮಾತ್ರ ಅದು ಓದುಗರಿಂದ ಪರಿಪೂರ್ಣವಾಗುವುದು. ಇನ್ನಾದರೂ ವೇಗದ ಹುಡುಕಾಟದಲಿ ಅಲ್ಪ ಜ್ಞಾನ ಪಡೆಯದೇ ಅಧ್ಯಯನ ಹಾದಿಯಲಿ ಪುಸ್ತಕವನ್ನು ಹಿಡಿಯೋಣ.
-ವಿಜಯಲಕ್ಷ್ಮಿ.ಬಿ ಕೆಯ್ಯೂರು
ವಿವೇಕಾನಂದ ಕಾಲೇಜು ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ