ವ್ಯಕ್ತಿತ್ವ ವಿಕಸನಕ್ಕೆ ಹೊಸ ಒಳನೋಟ ನೀಡಿದ ಮಂಗಳೂರು ಲಿಟ್‌ ಫೆಸ್ಟ್‌ ಸಂವಾದ

Upayuktha
0

ಇಂಡಿವಿಜುವಲ್ ಟು ಇಂಡಿವಿಸಿಬಲ್- (ವ್ಯಕ್ತಿಯಿಂದ ಅವಿಭಾಜ್ಯಕ್ಕೆ - ವ್ಯಕ್ತಿತ್ವದ ವಿಕಸನಕ್ಕೆ ದಾರಿ) ಕುರಿತು ಸಂವಾದ




ಮಂಗಳೂರು: ವ್ಯಕ್ತಿತ್ವದ ವಿಕಸನ ಎಂದರೇನು? ವ್ಯಕ್ತಿತ್ವದ ವಿಕಸನ ಆಗುವುದು ಹೇಗೆ? ಕರ್ತವ್ಯದ ಸ್ಥಳದಲ್ಲಿ ವಿಕಸಿತ ವ್ಯಕ್ತಿತ್ವದ ಪಾತ್ರವೇನು? ಈ ವಿಚಾರಗಳ ಬಗ್ಗೆ ಕುತೂಹಲಕಾರಿ ವಿಚಾರಗಳು ಮಂಗಳೂರು ಲಿಟ್‌ ಫೆಸ್ಟ್‌ನ ಎರಡನೇ ದಿನದ ಅಪರಾಹ್ನದ ಅಧಿವೇಶನದಲ್ಲಿ ಚರ್ಚೆಗೆ ಬಂದವು.  ಭಾರತ್ ಫೌಂಡೇಶನ್ ಆಯೋಜಿತ ಮಂಗಳೂರು ಲಿಟ್‌ ಫೆಸ್ಟ್‌ನ 7ನೇ ಆವೃತ್ತಿಯ ಎರಡನೇ ದಿನದ ಅಪರಾಹ್ನದ ಅಧಿವೇಶನದಲ್ಲಿ ಮ್ಯಾನೇಜ್‌ಮೆಂಟ್‌, ಅಧ್ಯಾತ್ಮ, ಸಾಹಿತ್ಯದ ಬಗ್ಗೆ ನೂರಾರು ಉಪನ್ಯಾಸಗಳನ್ನು ನೀಡಿರುವ ಕವಿ, ಸಾಹಿತಿ ಹಾಗೂ ಚಾಣಕ್ಯ ಯುನಿವರ್ಸಿಟಿಯ ಸಲಹೆಗಾರರಾಗಿರುವ ಸತ್ಯೇಶ್ ಬೆಳ್ಳೂರು ಹಾಗೂ ಶ್ರೀ ರಾಮಕೃಷ್ಣ ಆಶ್ರಮದ ಗುರುಗಳಾದ ಸ್ವಾಮಿ ಮಹಾಮೇಧಾನಂದ ಅವರು ಪಾಲ್ಗೊಂಡು ಅಮೂಲ್ಯವಾದ ಒಳನೋಟಗಳನ್ನು ನೀಡಿದರು.


ಇಂಡಿವಿಜುವಲ್ ಟು ಇಂಡಿವಿಸಿಬಲ್- (ವ್ಯಕ್ತಿಯಿಂದ ಅವಿಭಾಜ್ಯಕ್ಕೆ - ವ್ಯಕ್ತಿತ್ವದ ವಿಕಸನಕ್ಕೆ ದಾರಿ) ಕುರಿತು ಸಂವಾದ ನಡೆಯಿತು. ಡಾ. ಶಂಕರ್ ರಾಜಾರಮಣ ಅವರು  ಸಂವಾದವನ್ನು ನಡೆಸಿಕೊಟ್ಟರು.


ಭಾರತೀಯ ಜ್ಞಾನ ಪರಂಪರೆ ಯಾವತ್ತೂ ಸಮಷ್ಟಿ ಹಿತವನ್ನು ಬಯಸುವಂಥದ್ದು. ಅಲ್ಲಿ ಸ್ವಾರ್ಥ, ಸಂಕುಚಿತ ದೃಷ್ಟಿಗೆ ಅವಕಾಶವಿಲ್ಲ. ಲೋಕಾಃ ಸಮಸ್ತಾ ಸುಖಿನೋ ಭವಂತು; ಸರ್ವೇ ಜನಾಃ ಸುಖಿನೋ ಭವಂತು; ಸರ್ವೇ ಸಂತು ನಿರಾಮಯಾ- ಇತ್ಯಾದಿ ವಾಕ್ಯಗಳಲ್ಲಿ ಕಂಡುಬರುವುದು ಅದೇ ತತ್ವ, ಭಾರತೀಯ ವಿಚಾರಧಾರೆ, ತತ್ವದರ್ಶನಗಳು ವಿಶ್ವಕ್ಕೆ ಬೆಳಕು ತೋರಿವಂಥದ್ದು. ಈ ಹಿನ್ನೆಲೆಯಲ್ಲಿ ವ್ಯಕ್ತಿತ್ವ ವಿಕಸನದ ಹಂತಗಳನ್ನು ಸರಳವಾಗಿ ವಿಶ್ಲೇಷಿಸುವ ಪ್ರಯತ್ನ ಈ ಸಂವಾದ ಗೋಷ್ಠಿಯಲ್ಲಿ ನಡೆಯಿತು.


ಮೊದಲಿಗೆ ಸತ್ಯೇಶ್ ಬೆಳ್ಳೂರು ಅವರು ತಮ್ಮ ವಿಚಾರಗಳನ್ನು ಮ್ಯಾನೇಜ್‌ಮೆಂಟ್‌ ಹಿನ್ನೆಲೆಯಲ್ಲಿ ಪ್ರಸ್ತುತಪಡಿಸಿದರು. ನಂತರ ಸ್ವಾಮಿ ಮಹಾಮೇಧಾನಂದ ಅವರು ಅಧ್ಯಾತ್ಮದ ಹಿನ್ನೆಲೆಯಲ್ಲಿ ತೆರೆದಿಟ್ಟರು.




ಓವರ್ ಟು ಸತ್ಯೇಶ್ ಬೆಳ್ಳೂರು:

* ವ್ಯಕ್ತಿತ್ವ ಎಂದರೆ- ಗುಣಧರ್ಮಗಳ ಮೊತ್ತ. ಅದು ಆಂತರಿಕ ವಿಕಸನದಲ್ಲಿ ಫಲಿತವಾಗುತ್ತದೆ. ಪಾಶ್ಚಾತ್ಯ ದೃಷ್ಟಿಕೋನದ ವ್ಯಕ್ತಿತ್ವ ವಿಕಸನವನ್ನು ಇಲ್ಲಿ ಚರ್ಚಿಸುವುದಿಲ್ಲ. ಅದು ಕೇವಲ ಆರ್ಥಿಕ ದೃಷ್ಟಿಯಿಂದ ಮಾತ್ರ ನೋಡಲಾಗುವ ಮ್ಯಾನೇಜ್‌ಮೆಂಟ್ ಗುರುಗಳಿಂದ ಪ್ರಣೀತವಾದ ಒಂದು ಗುಣಧರ್ಮಗಳ ಸಂಕಲನ ಅಷ್ಟೆ. ಪಾಶ್ಚಾತ್ಯ ದೃಷ್ಟಿಕೋನದಿಂದ ಸ್ವದೇಶಿ ದೃಷ್ಟಿಕೋನದತ್ತ ಹೊರಳುವುದಕ್ಕೆ ನಾವು ಕೌಟಿಲ್ಯನ ಅರ್ಥಶಾಸ್ತ್ರವನ್ನು ಮನನ ಮಾಡಿಕೊಳ್ಳಬೇಕು.


* ಭಾರತೀಯ ಮೇಧಾ (ಬುದ್ಧಿವಂತಿಕೆ) (Indian Wisdom) ಎಂಬುದು ವಿದೇಶಿ ವ್ಯಾಖ್ಯಾನಕಾರರು ಹೇಳುವ ವಿಚಾರಕ್ಕಿಂತ ಭಿನ್ನವಾದುದು. 


* ಚಾಣಕ್ಯನ ಅರ್ಥಶಾಸ್ತ್ರಕ್ಕೂ ಮೊದಲೇ ವೇದಮಂತ್ರಗಳಲ್ಲಿ, ಭಾರತೀಯ ದರ್ಶನಶಾಸ್ತ್ರಗಳಲ್ಲಿ ವ್ಯಕ್ತಿತ್ವ ವಿಕಸನದ ಹಂತಗಳನ್ನು, ಮಾರ್ಗಗಳನ್ನು ವಿವರಿಸಲಾಗಿದೆ. ಒಬ್ಬ ವ್ಯಕ್ತಿಯ ಚಿಂತನೆ, ಮಾತು ಕೆಟ್ಟದಾಗಿದ್ದರೆ ಅದು ಅಂತಿಮವಾಗಿ ಕೆಟ್ಟ ಕಾರ್ಯದಲ್ಲಿ ಪರ್ಯವಸಾನವಾಗುತ್ತದೆ. 

ಒಬ್ಬ ವ್ಯಕ್ತಿಯ ಬಗ್ಗೆ ನಿರಂತರವಾಗಿ ಕೆಟ್ಟ ಮಾತುಗಳನ್ನಾಡುತ್ತಿದ್ದವನು ಇದ್ದಕ್ಕಿದ್ದಂತೆ ಒಂದು ದಿನ ಆತನ ಕೆನ್ನೆಗೆ ಹೊಡೆದರೆ ಏನು ಅರ್ಥ? ಆತ ಸತತವಾಗಿ ತನ್ನೊಳಗೆ ಬೆಳೆಸಿಕೊಂಡ ದ್ವೇಷದ ಫಲವೇ ಒಂದು ದಿನ ಆತನ ವರ್ತನೆಯಲ್ಲಿ ಪ್ರತಿಫಲಿಸಿದೆ ಎಂದಲ್ಲವೆ?


*  ಪ್ರತಿದಿನ- ಪ್ರತಿಕ್ಷಣ ಒಳಿತಿನ ಕಡೆಗೆ ಪರಿವರ್ತನೆಗೊಳ್ಳುವುದೇ ವ್ಯಕ್ತಿತ್ವ ವಿಕಸನ.


* ವ್ಯಾಲ್ಯೂಸ್ ಅಂದರೆ ಸೆಟ್ ಆಫ್ ಟ್ರಾನ್ಸ್‌ಫಾರ್ಮ್ಡ್ ವ್ಯಾಲ್ಯೂಸ್- ವಿಕಸಿತ ಮೌಲ್ಯಗಳು ವಿಕಸಿತ ವ್ಯಕ್ತಿಯನ್ನು ಸೃಷ್ಟಿಸುತ್ತವೆ, ಆ ಮೂಲಕ ವಿಕಸಿತ ಸಮಾಜವನ್ನು ಸೃಷ್ಟಿಸುತ್ತದೆ.


* ಕೆಲಸದ ಸ್ಥಳದಲ್ಲಿ ಯಶಸ್ಸಿಗೆ (ಸಕ್ಸಸ್ ಇನ್ ವರ್ಕ್ ಸ್ಪೇಸ್) ಮೂಲವಾಗಿರುವುದು ವ್ಯಕ್ತಿಯ ಅಭಿವ್ಯಕ್ತಿ ಮತ್ತು ವರ್ತನೆ. ಪರಿಸರ ಮತ್ತು ಸಂಸ್ಕಾರ (ನೇಚರ್ ಅಂಡ್ ಕಲ್ಚರ್) ಇದುವೇ ವಿಕಸಿತ ವ್ಯಕ್ತಿತ್ವದ ಕನ್ನಡಿ. 


* ಭಾರತೀಯ ದೃಷ್ಟಿಕೋನದಲ್ಲಿ ಹೇಳುವುದಾದರೆ ಒಬ್ಬ ವ್ಯಕ್ತಿ ಸಮರ್ಥ (ಕಾಂಪಿಟೆಂಟ್), ವ್ಯವಸಾಯಿನಾಂ (ಕಠಿಣ ಪರಿಶ್ರಮಿ ಕುಶಲಕರ್ಮಿ), ಸವಿದ್ಯಾನಾಂ (ವಿದ್ಯಾವಂತ) ಹಾಗೂ ಪ್ರಿಯವಾದಿನಾಂ (ಸತ್ಯವನ್ನು ಪ್ರಿಯವಾದ ರೀತಿಯಲ್ಲಿ ಹೇಳುವವನು) ಆಗಿರುತ್ತಾನೆ.

ಪಾಶ್ಚಾತ್ಯ ಕಲ್ಪನೆಯಂತೆ ಜಾಕ್ ಆಫ್ ಆಲ್, ಮಾಸ್ಟರ್ ಆಫ್ ನನ್ ಆಗಬಾರದು. ನಮ್ಮ ಮೌಲ್ಯ ವ್ಯವಸ್ಥೆಯ ಪ್ರಕಾರ ಜಾಕ್ ಆಫ್ ಆಲ್ ಮಾಸ್ಟರ್ ಆಫ್ ಒನ್ ಆಗಬೇಕು. ಒಂದು ಸ್ಥಳದಲ್ಲಿ ಆಳಕ್ಕೆ ಬಾವಿ ತೋಡಿದರೆ ನೀರು ಸಿಗುತ್ತದೆ. ನೂರು ಕಡೆ ಅಲ್ಪಸ್ವಲ್ಪ ತೋಡಿದರೆ ನೀರು ಸಿಗುವುದೇ?

ಇದಮಿತ್ಥಂ ಎನ್ನುವಂತೆ ಪ್ರತಿಪಾದಿಸುವ ಜ್ಞಾನ ಗಳಿಸಿಕೊಳ್ಳಬೇಕು.


* ಕೈಕೆಸರಾದರೆ ಬಾಯಿ ಮೊಸರು ಎಂಬ ಮಾತಿನಂತೆ ಶ್ರಮಜೀವಿ ಗುಣವನ್ನು (ವರ್ಕ್ ಹಾರ್ಡ್) ವರ್ಕ್‌ ಸ್ಪೇಸ್‌ನಲ್ಲಿ ಅಳವಡಿಸಿಕೊಳ್ಳಬೇಕು. ಆದರೆ ವರ್ಕ್ ಹಾರ್ಡ್ ವಿತ್ ಲಿಟಲ್ ಬಿಟ್ ಆಫ್ ಕಾಮನ್‌ಸೆನ್ಸ್- ಅಂದರೆ ಸಾಮಾನ್ಯ ಜ್ಞಾನ- ವಿವೇಕದೊಂದಿಗೆ ಕಠಿಣ ಪರಿಶ್ರಮಪಡುವುದು. 


* ಜ್ಞಾನಿಯಾದರೆ ಯಾವ ದೇಶದಲ್ಲೂ ಸಲ್ಲುತ್ತಾನೆ. ಅಂಥವನು ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಭೌಮ ಎಂದು ಚಾಣಕ್ಯ ಹೇಳುತ್ತಾನೆ. ಕೆಲಸದ ಸ್ಥಳದಲ್ಲಿ ಮಾತಿನಲ್ಲಿ ರಾಜತಾಂತ್ರಿಕತೆ (ಡಿಪ್ಲೊಮಸಿ) ಬಳಸಬೇಕು. ಡಿಪ್ಲೊಮಸಿ ಅಂದರೆ ವಿದೇಶಿ ಮ್ಯಾನೇಜ್‌ಮೆಂಟ್ ಗುರುಗಳ ಪರಿಕಲ್ಪನೆಯಂತೆ ಅಲ್ಲ. ವಿದೇಶಿ ಕಲ್ಪನೆಯಲ್ಲಿ ಡಿಪ್ಲೊಮಸಿ ಎಂದರೆ ಸುಂದರವಾಗಿ ಸುಳ್ಳು ಹೇಳುವುದು ಅಷ್ಟೆ. ಆದರೆ ನಿಜ ಅರ್ಥದಲ್ಲಿ ಅದು ಅಲ್ಲ. ಸತ್ಯವನ್ನೇ ಹೇಳುವುದು.  ಲಕ್ಷ್ಮಿ ಮಾತಿನಲ್ಲಿ ಇರುತ್ತಾಳೆ. ಅದರಂತೆ ಮಾತು ಪ್ರಿಯವಾಗಿರಬೇಕು, ಆದರೆ ಸತ್ಯವಾಗಿರಬೇಕು.


* ಚಾಣಕ್ಯ ಹೇಳುತ್ತಾನೆ: ಪ್ರಿಯವಾಕ್ಯ ಪ್ರದಾನೇನಾ ಸರ್ವೇ ಪಶ್ಯಂತಿ ಜಂತವ: | ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ |

ಮಾತಿನಲ್ಲಿ ಕಂಜೂಸಿತನ ಯಾಕೆ? 


ಸರಕು ಕಬ್ಬಿಣವಿರಲಿ, ಸರಕು ಧಾನ್ಯವೆ ಇರಲಿ,

ಸರಕು ಕಣ್ಗೆಟುಕದಿರುವ ತಂತ್ರಾಂಶವೆ ಇರಲಿ

ಸರಕು ಎಐ ಇರಲಿ, ಸರಕದೇನೆ ಇರಲಿ

ವ್ಯವಹಾರ ನಡೆಯುವುದು ಎರಡು ಮನುಜರ ನಡುವೆ ನವ್ಯಜೀವಿ


* ಇಬ್ಬರು ವ್ಯಕ್ತಿಗಳ ನಡುವಣ ಟ್ರಾನ್ಸಾಕ್ಷನ್- ಅಂದರೆ ವ್ಯವಹಾರ ಸುಲಲಿತವಾಗಿರಬೇಕು, ಪ್ರಿಯವಾಗಿರಬೇಕು, ಸತ್ಯವಾಗಿರಬೇಕು.

* ಬಿಸಿನೆಸ್ ನಡೆಸುವವರಿಗೆ ಪ್ರತಿಯೊಬ್ಬರಿಗೂ ಹಣ ಬೇಕು. ಅದಕ್ಕಾಗಿಯೇ ಬಿಸಿನೆಸ್. ಅದು ಪಾರಮಾರ್ಥಿಕ ಅಲ್ಲ. ಆದರೆ ಅದನ್ನು ಗಳಿಸುವ ವಿಧಾನ ಸತ್ಯ ಮತ್ತು ಧರ್ಮದ ಮಾರ್ಗದಲ್ಲಿರಬೇಕು.




ಸ್ವಾಮಿ ಮಹಾಮೇಧಾನಂದಜಿ ಅವರ ವಿದ್ವತ್ಪೂರ್ಣ ನುಡಿಗಳು:

* ಸಮುದ್ರ ಸ್ಥಿರವಾಗಿರುತ್ತದೆ. ಅಲೆಗಳು ಚಲಿಸುತ್ತವೆ. ಸಮುದ್ರ ಮತ್ತು ಅಲೆಗಳು ಒಂದೇ ಅನ್ನಬಹುದೇ? ಹೌದು ಎಂದರೆ ಹೌದು, ಅಲ್ಲ ಎಂದರೆ ಅಲ್ಲ. ಅದು ಅದ್ವೈತ. ಬ್ರಹ್ಮ ಮತ್ತು ಶಕ್ತಿ- ಇಬ್ಬರೂ ಒಂದೇ.

ನೀರು ಮತ್ತು ಅದರ ತೇವಾಂಶ. ನೀರಿನಿಂದ ತೇವಾಂಶವನ್ನು ತೆಗೆಯಲು ಸಾಧ್ಯವೇ? ಅವರೆಡೂ ಬೇರೆ, ಆದರೆ ಒಂದೇ. ಗುಳ್ಳೆಗಳು ತಾತ್ಕಾಲಿಕ.

ಬೆಂಕಿ ಮತ್ತು ಸುಡುವ ಗುಣ ಪ್ರತ್ಯೇಕಿಸಲು ಸಾಧ್ಯವೇ? ಬೆಂಕಿ ಸ್ವತಃ ವಸ್ತು. ಸುಡುವ ಗುಣ ಶಕ್ತಿ.


ತತ್ ತ್ವಂ ಅಸಿ- ತತ್ತ್ವಮಸಿ; ಅಹಂ ಬ್ರಹ್ಮಾಸ್ಮಿ ವಾಕ್ಯಗಳು ವ್ಯಕ್ತಿತ್ವದ ವಿಕಸನದ ತುರೀಯಾವಸ್ಥೆಯನ್ನು ಸೂಚಿಸುತ್ತವೆ.


ಗುರುವಾಕ್ಯದಲ್ಲಿ ಶ್ರದ್ಧೆ ಇರಬೇಕು. ರಮಣ ಮಹರ್ಷಿಗಳು ಯಾವಾಗಲೂ ಹೇಳುತ್ತಿದ್ದರು. ನಾನ್ಯಾರು?. ಅಂತರಂಗದ ಶೋಧನೆ ಅದು. ವ್ಯಕ್ತಿತ್ವ ವಿಕಸನ ಅಂದರೆ ಅದು- ಅಹಂ ಬ್ರಹ್ಮಾಸ್ಮಿ.


ಸರ್ವಂ ಖಲ್ವಿದಂ ಬ್ರಹ್ಮ- ಅಂದರೆ ಇಡೀ ಜಗತ್ತೇ ಬ್ರಹ್ಮ. ಕಾನ್ಷಿಯಸ್‌ನೆಸ್- ನಮ್ಮೊಳಗಿನ ಪ್ರಜ್ಞೆಯಿಂದ ಬ್ರಹ್ಮದ ಸಾಕ್ಷಾತ್ಕಾರವಾಗಬಹುದು.

ಸಮುದ್ರದ ಅಲೆಯಲ್ಲಿ ಆಗಾಗ ಕಾಣಿಸಿಕೊಳ್ಳುವ ಗುಳ್ಳೆಗಳು ಶಾಶ್ವತವೇ ಎಂದು ಪ್ರಶ್ನಿಸಿದರೆ, ಅಲ್ಲ. ಅಂತೆಯೇ ಭಗವಂತನ ಅವತಾರಗಳು. ಧರ್ಮಕ್ಕೆ ಗ್ಲಾನಿಯಾದಾಗ ಆಗಾಗ ಅವತರಿಸುವ ಅವನ ಆಗಮನ ಗುಳ್ಳೆಗಳಂತೆ ಕ್ಷಣಿಕ. ಆದರೆ ಭಗವಂತನ ಮೂಲಸ್ವರೂಪವನ್ನು ಅರ್ಥ ಮಾಡಕೊಂಡರೆ ಅಲ್ಲಿ ಮೂಡುವುದು ತಾದಾತ್ಮ್ಯ ಭಾವ. ಅದೇ ವಿಕಸಿತ ವ್ಯಕ್ತಿತ್ವದ ಒಂದು ರೂಪ.


ವೈಯಕ್ತಿಕ ವ್ಯಕ್ತಿತ್ವ ಹೆಸರು ಮತ್ತು ರೂಪವನ್ನಾಧರಿಸಿದೆ. ಆತನಲ್ಲಿ ಮೂರು ಹಂತದ ಜಾಗೃತಿ ಇರುತ್ತದೆ.

ಮನುಷ್ಯ, ಪಶುತ್ವ, ಮನುಷ್ಯತ್ವ , ದೈವತ್ಯ- ಮೂರರ ಸಂಗಮವೇ ಮನುಷ್ಯ.


I- Me- My ಅಂದರೆ ಅಹಂಕಾರ, ಮಮಕಾರ, ಇದು ಪಶುತ್ವದ ಗುಣ. ಆ ಹಂತದಿಂದ ಮನುಷ್ಯತ್ವಕ್ಕೆ ಏರಬೇಕು- ಧ್ಯಾನದಿಂದ ಅದು ಸಾಧ್ಯ. ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಅದನ್ನು ಸಾಧಿಸಿದರು. 

ಸತ್ಯಮೇವ ಜಯತೇ ಎಂಬ ವಾಕ್ಯವನ್ನು ಅನುಸಂಧಾನ ಮಾಡಿಕೊಂಡು ಪ್ರಾಮಾಣಿಕತೆ- ತ್ರಿಕರಣಶುದ್ಧಿಯನ್ನು ಸಾಧಿಸುವುದು ನಿಜವಾದ ಮನುಷ್ಯತ್ವ. ಅಲ್ಲಿಂದ ಮೇಲಕ್ಕೆ ಏರುವ ಸಾಧನೆಯೇ ದೈವತ್ವದ ಹಾದಿ.


* ಪಶುತ್ವವೆಂದರೆ ಸ್ವಾರ್ಥ. ಮನುಷ್ಯತ್ವ ಹಂತದಲ್ಲಿ ನಾವು ಮತ್ತು ನಾವೆಲ್ಲರೂ ಅನ್ನುವ ಭಾವ ಉದ್ದೀಪನಗೊಳ್ಳುತ್ತದೆ. ಮಾತೃತ್ವದ ಭಾವ ನಿಜವಾದ ದೈವತ್ವಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ತಾಯಿಯಾದ ಒಬ್ಬ ಮಹಿಳೆ ಅನ್ಯಾನ್ಯ ಸಂದರ್ಭಗಳಲ್ಲಿ ದೋಷಪೂರ್ಣ ವ್ಯಕ್ತಿತ್ವದವಳೇ ಆಗಿರಬಹುದು. ಆದರೆ ಯಾವಾಗ ಮಾತೃತ್ವದ ಭಾವ ಉದ್ದೀಪನವಾಗುವುದೋ ಆ ಭಾವದಲ್ಲಿ ಆಕೆ ದೈವತ್ವಕ್ಕೆ ಏರುತ್ತಾಳೆ. ಅಂತಹ ಮಾತೃತ್ವದ ಭಾವವನ್ನು ಮಹಿಳೆಯರಷ್ಟೇ ಅಲ್ಲ, ಪುರುಷರೂ ಸೇರಿದಂತೆ ನಾವೆಲ್ಲರೂ ಪರಿಭಾವಿಸಬಹುದು.


* ಸ್ವಾರ್ಥವನ್ನು ಬಿಡಿ, ಅಹಂಕಾರ ಬಿಡಿ. ಸ್ವಾರ್ಥ, ಅಹಂಕಾರ, ಆಲಸ್ಯ- ಈ ಮೂರು ವ್ಯಕ್ತಿತ್ವದ ವಿಕಾಸದ ಹಾದಿಯಲ್ಲಿ ಅಡ್ಡಬರುವ ಶತ್ರುಗಳು.


* ದೃಷ್ಟಿ ವಿಸ್ತಾರಗೊಂಡರೆ ಅದು ಬ್ರಹ್ಮಾಂಡದ ದರ್ಶನ ಮಾಡುತ್ತದೆ. ಅದು ಅನಿರ್ವಚನೀಯ. ರಿಲಿಜನ್ ಈಸ್ ರಿಯಲೈಸೇಶನ್- ಧರ್ಮವೇ ಸಾಕ್ಷಾತ್ಕಾರ.


* ಜೀವನವೊಂದು ಯಜ್ಞಚಕ್ರ. ಹೊರಗಿನಿಂದ ಕಾಣುವ ರೂಪ ಬದಲಾಗಬಹುದು. ಆದರೆ ಆಂತರಿಕ ವ್ಯಕ್ತಿತ್ವ ಬದಲಾಗುವುದಿಲ್ಲ.


* ತತ್ವಸಿದ್ಧಾಂತಗಳ ವಿಚಾರದಲ್ಲಿ ಬಂಡೆಯಂತೆ ದೃಢವಾಗಿ ನಿಲ್ಲಬೇಕು. ಅಭಿಪ್ರಾಯಗಳ ವಿಚಾರದಲ್ಲಿ ಕಾಲದ ಹರಿವಿನ ಜತೆಗೆ ಬದಲಾಗಬೇಕು. ನಿಮ್ಮ ಆದರ್ಶ ಏನೆಂಬುದು ಅರಿವಾದಾಗ ಅದು ಬದಲಾಗುವುದಿಲ್ಲ.


* ನಾನೊಬ್ಬ ಸತ್ಯವಾದಿ, ನಾನೊಬ್ಬ ಪರೋಪಕಾರಿ, ನಾನೊಬ್ಬ ಜಿತೇಂದ್ರಿ. ಈ ಭಾವ ನನ್ನಲ್ಲಿ ದೃಢವಾಗಿದೆ.


* ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತೇವೆಯೇ ಎಂಬುದು ನಮಗೆ ತಿಳಿದಿಲ್ಲ. ಧರ್ಮಶಾಸ್ತ್ರಗಳಲ್ಲಿ ವೇದಗಳಲ್ಲಿ ಅದು ಬರೆದಿರಬಹುದು. ಆದರೆ ನಾನು ಅದನ್ನು ಈಗ ಶೋಧಿಸಿಕೊಳ್ಳಬೇಕು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top