ಲೇಖಾ ಲೋಕ-31: ಶ್ರೇಷ್ಠ ಕಾದಂಬರಿಕಾರರು ಕೊರಟಿ ಶ್ರೀನಿವಾಸರಾವ್

Upayuktha
0


ತಿಹಾಸಿಕ ಕಾದಂಬರಿಗಳನ್ನು ಅವಲೋಕಿಸಿದರೆ ಅದರಲ್ಲೂ ವಿಜಯನಗರ ಸಾಮ್ರಾಜ್ಯದ ಇತಿಹಾಸ ಕೂಲಂಕಷವಾಗಿ ಬರೆದವರು ಕೊರಟಿ ಶ್ರೀನಿವಾಸರಾವ್ ಮೊದಲಿಗರು ಎಂದು ಹೇಳಬಹುದು. ಪ್ರತಿ ಗ್ರಂಥಾಲಯದಲ್ಲಿ ಇವರ ಐತಿಹಾಸಿಕ ಕಾದಂಬರಿ ಓದುಗರ ಕಣ್ಣಿಗೆ ಕಾಣುವುದು ಸಾಮಾನ್ಯ. ಸಾಕಷ್ಟು ಕಾದಂಬರಿಗಳನ್ನು ಕೊರಟಿ ಶ್ರೀನಿವಾಸ ರಾವ್ ಅವರು ಬರೆದರೂ ಸಾಹಿತ್ಯಕವಾಗಿ ಚರ್ಚೆಗೆ ಒಳಗಾಗದೆ ಇವರು ಉಳಿದಿದ್ದಾರೆ. ಇವರ ಜನ್ಮ ಶತಮಾನೋತ್ಸವ ಮುಂದಿನ ವರ್ಷ (19-10-25) ಜರುಗಿಸಿ, ಅವರನ್ನು ಗೌರವದಿಂದ ಸ್ಮರಣೆ ಮಾಡುವುದು ಕನ್ನಡಿಗರ ಆದ್ಯ ಕತ೯ವ್ಯವಾಗಿದೆ. ಐತಿಹಾಸಿಕ ಕಾದಂಬರಿಗಳನ್ನು ಕೊರಟಿ ಶ್ರೀನಿವಾಸ ರಾವ್ ಅವರು ಬರೆದು, ಅದನ್ನು ಓದಿದ ಕನ್ನಡಿಗ ಆನಂದದ ಮಜಲನ್ನು ಮುಟ್ಟಿ ಕನ್ನಡನಾಡಿನ ಮಹಾಪುರುಷರ ಚರಿತ್ರೆ ಅರಿತು ಪುಳಕಿತರಾಗಿ ಹೆಮ್ಮೆ ಪಡುವರು.


ಕೊರಟಿ ಶ್ರೀನಿವಾಸ ರಾವ್ ಅವರು ಶ್ರೀಪಾದರಾವ್ ಕೊರಟಿ ಮತ್ತು ರಾಮಕ್ಕ ಕೊರಟಿ ಅವರ ಪುತ್ರನಾಗಿ ತಾ॥ 19-10-1925 ಜನಿಸಿದರು. ಅವರು ಅಧ್ಯಾಪಕರಾಗಿ, ಪತ್ರಕರ್ತನಾಗಿ ಎ.ಪಿ.ಎಸ್ ಕಾಲೇಜಿನ ಪ್ರಾಂಶುಪಾಲರಾಗಿ, ಪರೀಕ್ಷಾ ಮಂಡಳಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಅಪಾರ ಸೇವೆ ಮಾಡಿದ ಮಹಾನುಭಾವರು. ಕನ್ನಡ ಸಾಹಿತ್ಯ ಪರಿಷತ್ತು ರೂಪಿಸುವ ಮಹನೀಯರಲ್ಲಿ ಇವರೂ ಒಬ್ಬರು ಎನ್ನುವುದು ದಾಖಲಿಸುವ ವಿಷಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುವ "ಕನ್ನಡ ನುಡಿ" ಸಂಪಾದಕರಾಗಿ ಸೇವೆ ಸಲ್ಲಿಸಿದ್ದು ವಿಶೇಷ.

 

ಮಿಸ್ ಲೀಲಾವತಿ ಚಲನಚಿತ್ರ ಅದ್ಭುತ ಜನಪ್ರಿಯಗೊಂಡು ಪ್ರದರ್ಶನಗೊಂಡಾಗ ಕೊರಟಿ ಶ್ರೀನಿವಾಸ ರಾವ್ ಅವರು ನಾಡಿನ ಬಹು ಜನರಿಗೆ ಚಿರಪರಿಚಿತರಾದ ಕಾದಂಬರಿಕಾರರು. ಮಮತೆಯ ಸುಳಿ, ಮಂಗಳದೀಪ, ವಿದ್ಯಾಧರೆ, ಗೃಹಿಣಿ, ತೂರಿ ಬಂದ ತಾರೆ ಮೊದಲಾದ ಸಾಮಾಜಿಕ ಕಾದಂಬರಿ ರಚಿಸಿ, ಪ್ರಖ್ಯಾತರಾದರು. ಕೊರಟಿ ಶ್ರೀನಿವಾಸ ರಾವ್ ಅವರು ತಮ್ಮ ವಿಶಿಷ್ಟ ನೈಪುಣ್ಯತೆಯನ್ನು ಐತಿಹಾಸಿಕ ಕಾದಂಬರಿಗಳಲ್ಲಿ ಅಭಿವ್ಯಕ್ತಿ ಪಡಿಸಿ ಜನರಿಗೆ ಇವರು ಮುಖ್ಯರೆನಿಸಿದರು. ಐತಿಹಾಸಿಕ ಕಾದಂಬರಿಗಳಲ್ಲಿ ಬರೆದ ಇವರ ಭಾಷೆ, ವಸ್ತುವಿನ ಬೆಳವಣಿಗೆ, ಪಾತ್ರ ನಿಮಾ೯ಣ, ಸಂಯಮ, ಸೂಕ್ಷ್ಮತೆಯು ಓದುಗರನ್ನು ತನ್ಮಯಗೊಳಿಸಿ ಮತ್ತೆ ಮತ್ತೆ ಓದಲು ಪ್ರೇರೇಪಿಸುತ್ತದೆ. ಅ.ನ. ಕೃಷ್ಣರಾಯರ, ತರಾಸು ಅವರ ಕಾದಂಬರಿಗಳಿಗೆ ಹೋಲಿಸಿದರೆ, ಇವರಲ್ಲಿ ಭಾವನಾತ್ಮಕತೆಗಿಂತ ವೈಚಾರಿಕತೆ ಕಡೆಗೆ ಒತ್ತುಜಾಸ್ತಿ ಎಂದೇ ಹೇಳಬಹುದು.


ಸುಮಾರು 20 ಕಾದಂಬರಿಗಳನ್ನು ವಿಜಯನಗರ ಸಾಮ್ರಾಜ್ಯದ ಬಗ್ಗೆಯೇ ಬರೆದು ದಾಖಲೆ ಮಾಡಿದ ಮಹನೀಯರು. ದೇವಗಿರಿ ಅರಸರ ಬಗ್ಗೆ ಕಾದಂಬರಿಗಳನ್ನು ಬರೆದರು. ಹತ್ತು ಕಾದಂಬರಿಗಳನ್ನು ಮೈಸೂರು ಅರಸರ ಬಗ್ಗೆ ಬರೆದರು. ಆಧ್ಯಾತ್ಮಿಕ ಕೃತಿಗಳನ್ನು ಬರೆದು, ಮಧ್ವಮತದ ಯತಿಗಳಾದ  ಶ್ರೀಮಧ್ವಾಚಾರ್ಯರು, ಶ್ರೀ ಜಯತೀರ್ಥರು, ಶ್ರೀವ್ಯಾಸರಾಜರು, ಸೋದೆಯ ಶ್ರೀವಾದಿರಾಜರು, ಶ್ರೀರಾಘವೇಂದ್ರಸ್ವಾಮಿಗಳು, ಶ್ರೀಪಾದರಾಜರು ಮತ್ತು ದಾಸರಲ್ಲಿ ಪುರಂದರದಾಸರ ಬಗ್ಗೆ ಕೃತಿಗಳನ್ನು ರಚಿಸಿ ಕನ್ನಡ ನಾಡಿಗೆ ತಮ್ಮ ಅಮೂಲ್ಯ ಕೃತಿಗಳನ್ನು ನೀಡಿದ ಮಹಾನುಭಾವರು. 9 ಐತಿಹಾಸಿಕ ಕಾದಂಬರಿಗಳ ಸಂಕಲನಗಳನ್ನು ಬರೆದು ನೀಡಿದ್ದು ಇವರ ಹೆಗ್ಗಳಿಕೆ.


ಇಮ್ಮಡಿ ಪುಲಕೇಶಿ ಕಾದಂಬರಿ ಹಲವಾರು ವಿಶ್ವವಿದ್ಯಾಲಯಗಳಿಗೆ ಪಠ್ಯ ಪುಸ್ತಕವಾಗಿದ್ದು ವಿಶೇಷ. ಅನೇಕ ಐತಿಹಾಸಿಕ, ಆಧ್ಯಾತ್ಮಿಕ ಕೃತಿಗಳನ್ನು ರಚನೆ ಮಾಡಿ, ಕನ್ನಡ ನಾಡಿಗೆನೀಡಿದ ಕೊರಟಿ ಶ್ರೀನಿವಾಸ ರಾವ್ ಅವರ ಜನ್ಮಶತಮಾನೋತ್ಸವ 19-10-2025ರಂದು ಆಚರಿಸಿ, ಅವರಿಗೆ ಗೌರವ ಸೂಚಿಸುವುದು ಎಲ್ಲರ ಕತ೯ವ್ಯ.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top