ಬದಿಯಡ್ಕ: ಗಡಿನಾಡು ಕಾಸರಗೋಡಿನ ದಶಮಾನೋತ್ತರ ಸಂಸ್ಥೆ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ನಮ್ಮ ಮಣ್ಣಿನ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೈಂಕರ್ಯವನ್ನು ನಿರ್ವಹಿಸುತ್ತಾ ಬಂದಿದೆ. ಹಲವಾರು ಬಗೆಯ ಸಮಾಜಮುಖೀ ಚಟುವಟಿಕೆಗಳು ಸಂಸ್ಥೆಯನ್ನು ಜನಾನುರಾಗಿಯಾಗಿಸಿವೆ. ರಂಗಸಿರಿಯು ಈ ಹಿಂದೆ ದೀಪದ ಬೆಳಕಿನ ತಾಳಮದ್ದಳೆಯನ್ನು ನಡೆಸಿ ಯಶಸ್ವಿಯಾಗಿತ್ತು. ಅಂತಹ ವಿನೂತನ ಕಾರ್ಯಗಳ ಸಾಲಲ್ಲಿ ಹೊಸ ಸೇರ್ಪಡೆ "ದೀಪದ ಬೆಳಕಿನಲ್ಲಿ ಯಕ್ಷಗಾನ". ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬನ ಜನ್ಮಭೂಮಿ ಕುಂಬಳೆಯ ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ವಿಶೇಷವಾಗಿ ದೀಪದ ಬೆಳಕಿನಲ್ಲಿ ಯಕ್ಷಗಾನ ನಡೆಯಿತು. ವಿದ್ಯಾರ್ಥಿಗಳಿಂದ ಕಾಲನೇಮಿ ಕಾಳಗ ಹಾಗೂ ಜಾಂಬವತಿ ಕಲ್ಯಾಣ ಎಂಬ ಪೌರಾಣಿಕ ಕಥಾನಕಗಳ ಪ್ರದರ್ಶನಗಳು ನಡೆದವು.
ಯಕ್ಷಗಾನ ಗುರುಗಳಾದ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರ ಪರಿಕಲ್ಪನೆಯಂತೆ ಕಾರ್ಯಕ್ರಮವು ಮೂಡಿಬಂತು. ವೇದಿಕೆಗೆ ಗೂಟ ದೀಪದ ಬೆಳಕನ್ನು ಸಜ್ಜುಗೊಳಿಸಲಾಗಿತ್ತು. ವೇದಿಕೆಯ ಹೊರಭಾಗದ ಬೆಳಕು ಬಾರದಂತೆಯೂ ಎಚ್ಚರವಹಿಸಿ ವೇದಿಕೆ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿ ಕಲಾವಿದರು ಚೌಕಿಯಲ್ಲಿ ಬಣ್ಣಗಾರಿಕೆ ನಡೆಸಿದ್ದು ಕೂಡಾ ದೀಪದ ಬೆಳಕಿನಲ್ಲಿ ಎಂಬುದು ಈ ಕಾರ್ಯಕ್ರಮದ ಇನ್ನೊಂದು ವಿಶೇಷ. ಎಲ್ಲಾ ಉದಯೋನ್ಮುಖ ಕಲಾವಿದರೂ ಸ್ವಂತ ಬಣ್ಣಗಾರಿಕೆ ಮಾಡಿಕೊಳ್ಳಲು ಸಮರ್ಥರಾಗಿದ್ದರು. ಇದರಿಂದಾಗಿ ವಿದ್ಯಾರ್ಥಿ ಕಲಾವಿದರಿಗೆ ವಿಶೇಷ ಅನುಭೂತಿ ದೊರೆಯಿತು. ಅಲ್ಲದೆ ಈ ಪ್ರಯೋಗವು ಯಕ್ಷರಂಗದಲ್ಲಿ ದಾಖಲಾರ್ಹವಾಯಿತು.
ಅಗತ್ಯ ತಯಾರಿಗಳನ್ನು ಕೆಲವೇ ದಿನಗಳಲ್ಲಿ ನಡೆಸಿ ಈ ಪ್ರಯೋಗವನ್ನು ನಡೆಸಲಾಯಿತು. ಸನ್ಮನಸ್ಸುಗಳು ರಂಗವನ್ನು ಸಜ್ಜುಗೊಳಿಸುವಲ್ಲಿಂದ ತೊಡಗಿ ಕಾರ್ಯಕ್ರಮದುದ್ದಕ್ಕೂ ಇದ್ದು ವೀಕ್ಷಿಸಿ ಸೂಕ್ತ ಸೂಚನೆಗಳನ್ನು ನೀಡಿದರು. ಪ್ರಬುದ್ಧ ಪ್ರೇಕ್ಷಕರು ಕಾರ್ಯಕ್ರಮದ ಘನತೆ ಹೆಚ್ಚಿಸಿದರು. ಪಾತ್ರವರ್ಗದಲ್ಲಿ ಡಾ. ಶ್ರೀಶಕುಮಾರ ಪಂಜಿತ್ತಡ್ಕ, ಡಾ. ವಿದ್ಯಾ ಆನಂದ್ ಕೆಕ್ಕಾರು, ಶಶಿಧರ ಕುದಿಂಗಿಲ, ಕು. ಅಭಿಜ್ಞಾ ಭಟ್ ಬೊಳುಂಬು, ಚಿ. ಮನ್ವಿತ್ ಕೃಷ್ಣ ನಾರಾಯಣಮಂಗಲ, ಕು. ದೃಶ್ಯಾ ಕುಂಟಾರು, ಚಿ. ಪ್ರಜ್ವಲ್ ಅಂಬುಕುಂಜೆ, ಕು. ಮೋಕ್ಷಾ ಶೆಟ್ಟಿ, ಚಿ. ಸುಮನ್, ಕು. ಬಾನ್ವಿ ಉತ್ತಮ ಸಾಮರ್ಥ್ಯ ಮೆರೆದರು. ಹಿಮ್ಮೇಳದಲ್ಲಿ ಭಾಗವತರಾಗಿ ವಾಸುದೇವ ಕಲ್ಲೂರಾಯ ಮಧೂರು, ಚೆಂಡೆ ಮದ್ದಳೆಗಳಲ್ಲಿ ವೇಣುಗೋಪಾಲ ಭಟ್ ಬರೆಕರೆ, ಸೂರ್ಯನಾರಾಯಣ ಪದಕಣ್ಣಾಯ ಹಾಗೂ ನೇಪಥ್ಯದಲ್ಲಿ ಕೇಶವ ಕಿನ್ಯ, ರಾಜೇಂದ್ರ ವಾಂತಿಚ್ಚಾಲು ಸಹಕರಿಸಿದರು.
ದೀಪದ ಬೆಳೆಕು ಹೇಗೆ ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ಚೆಲ್ಲುತ್ತದೋ ಅದೇ ರೀತಿಯಾಗಿ ಈ ವಿಶಿಷ್ಟ ಸಂಯೋಜನೆಯ ಕಾರ್ಯಕ್ರಮ ನಮ್ಮೊಳಗೆ ಸುಪ್ತವಾಗಿದ್ದ ಕಲೆಯನ್ನು ಹೊಸ ಹುರುಪಿನಿಂದ ಸೇರಿದ ಪ್ರೌಢ ಪ್ರೇಕ್ಷಕರ ಮುಂದೆ ನವ ಚೈತನ್ಯದಿಂದ ಪ್ರದರ್ಶಿಸುವುದಕ್ಕೆ ನಾಂದಿ ಆಯಿತು. ಈ ಕಾರ್ಯಕ್ರಮಕ್ಕೆ ಮುನ್ನುಡಿ ಇಟ್ಟ ಗುರುಗಳಿಗೂ, ರಂಗಸಿರಿಗೂ ಕಾರ್ಯಕ್ರಮದ ಯಶಸ್ವಿಗೆ ಪ್ರಯತ್ನಪಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು.
-ಡಾ. ವಿದ್ಯಾ ಆನಂದ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ