ಕಲಬುರಗಿ: ಭಾರತೀಯ ಸಂಸ್ಕೃತಿ ಉತ್ಸವ ಜನವರಿ 29ರಿಂದ ಫೆಬ್ರವರಿ 6ರ ವರೆಗೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೀರನಹಳ್ಳಿಯಲ್ಲಿ ನಡೆಯುವ ಪ್ರಯುಕ್ತ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಬೀದರ್ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಕೈಗೊಂಡ "ಜಾಗೃತಿ ಜಾದೂ ಅಭಿಯಾನ" ಯಶಸ್ವಿಯಾಗಿ ಮುಕ್ತಾಯಗೊಂಡ ಸಂದರ್ಭದಲ್ಲಿ ಕಲ್ಬುರ್ಗಿಯ ಅನಂತ ರೆಸಿಡೆನ್ಸಿ ಸಭಾಂಗಣದಲ್ಲಿ ಜ. 6 ರಂದು ಆತ್ಮೀಯವಾಗಿ ಅಭಿನಂದನೆ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಜಾಗೃತಿ ಜಾದೂ ನಡೆಯಲಿದ್ದು ಬೀದರ್ ಜಿಲ್ಲೆಯ ಬಸವ ಕಲ್ಯಾಣ ಭಾಲ್ಕಿ ಮತ್ತು ಬೀದರ್ ನಗರದಲ್ಲಿ ಜಾಗೃತಿ ಜಾದೂ ಪ್ರದರ್ಶನ ನೀಡಿದರು. ಬಳಿಕ ಕಲಬುರಗಿಯಲ್ಲಿ ಜನವರಿ 5 ಮತ್ತು 6 ರಂದು ಸರ್ವಜ್ಞ ಕಾಲೇಜು, ಶ್ರೀ ಶರಣ ಬಸವೇಶ್ವರ ವಸತಿ ಶಾಲೆ, ಆರಾಧನಾ ಶಾಲೆ, ಎಸ್ ಆರ್.ಎನ್ ಮೆಹ್ತಾ ಶಾಲೆ ಹಾಗೂ ಮಿಲೇನಿಯಮ್ ಶಾಲೆಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದ ಕುದ್ರೋಳಿ ಗಣೇಶ್ ತಂಡವನ್ನು ಭಾರತೀಯ ಸಂಸ್ಕೃತಿ ಉತ್ಸವದ ಸಂಘಟನಾ ಸದಸ್ಯ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ, ಉತ್ಸವದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ, ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಬಿ. ಎಸ್ ದೇಸಾಯಿ, ಆಶ್ರಯ ಗ್ರೂಪ್ ಆಫ್ ಹೋಟೆಲ್ ನ ಉದ್ಯಮಿಗಳಾದ ವೆಂಕಟೇಶ್ ಎಂ. ಕಡೇಚೂರ್, ಪ್ರವೀಣ್ ಜತ್ತನ್ ಶಾಲು ಹಾರ ಮತ್ತು ಕೃತಿಯನ್ನು ನೀಡಿ ಸನ್ಮಾನಿಸಿದರು.
ಜಾದೂ ತಂಡದ ಕುದ್ರೋಳಿ ಗಣೇಶ್, ಪ್ರವೀಣ್ ಬಜಾಲ್ ಹಾಗೂ ರೇಖಾ ಸುಳ್ಯ ಇವರನ್ನು ಸನ್ಮಾನಿಸಲಾಯಿತು.
ಕಲ್ಯಾಣ ಕರ್ನಾಟಕದ ಜನತೆಯ ಪ್ರೀತಿಗೆ ತಲೆಬಾಗಿದ್ದೇನೆ: ಕುದ್ರೋಳಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು 20ಕ್ಕೂ ಹೆಚ್ಚು ಪ್ರದರ್ಶನಗಳನ್ನು ಭಾರತೀಯ ಸಂಸ್ಕೃತಿ ಉತ್ಸವದ ಪ್ರಧಾನ ಸಂಯೋಜಕರಾದ ಬಸವರಾಜ ಪಾಟೀಲ್ ಸೇಡಂ ಅವರು ಆಯೋಜಿಸಿದ್ದು ಶರಣರ ನೆಲ ಬೀದರ್ ಜಿಲ್ಲೆಯಿಂದ ಜಾಗೃತಿ ಜಾದೂ ಪ್ರದರ್ಶನ ಪ್ರಾರಂಭಿಸಿದಾಗ ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಕಲ್ಯಾಣ ಕರ್ನಾಟಕದ ಜನತೆಗೆ ನಾನು ತಲೆಬಾಗಿದ್ದೇನೆ ಎಂದು ಕುದ್ರೋಳಿ ಗಣೇಶ್ ಸಂತಸ ವ್ಯಕ್ತಪಡಿಸಿದರು.
ಪ್ರತಿ ಕಾರ್ಯಕ್ರಮಗಳಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯುವಜನರ ಸಾರ್ವಜನಿಕರು ಪಾಲ್ಗೊಂಡು 9 ದಿನಗಳ ಕಾಲ ನಡೆಯುವ ಉತ್ಸವದ ಪೂರ್ಣ ಮಾಹಿತಿಯನ್ನು ಮನೋರಂಜನೆಯೊಂದಿಗೆ ಮತ್ತು ಜಾಗೃತಿ ಸಂದೇಶ ನೀಡುವ ಮೂಲಕ ಜಾದೂನಲ್ಲಿ ತಿಳಿಯಪಡಿಸಲು ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಭಾರತೀಯ ಸಂಸ್ಕೃತಿ ಉತ್ಸವದ ಮಾಹಿತಿಯನ್ನು ಜಾದೂನ ಮೂಲಕ ತಿಳಿಯಪಡಿಸುವ ವಿನೂತನ ಕಾರ್ಯಕ್ರಮ ಅಪೂರ್ವವಾಗಿದೆ ಎಂದು ಬಿ.ಎಸ್ ದೇಸಾಯಿ ಹೇಳಿದರು.
ಜಾಗೃತಿ ಜಾದೂ ಪ್ರದರ್ಶನದಿಂದ ಉತ್ಸವಕ್ಕೆ ಹೆಚ್ಚಿನ ಮೆರುಗು ಬಂದಿದ್ದು ಅತ್ಯಧಿಕ ಸಂಖ್ಯೆಯಲ್ಲಿ ಜನ ಆಗಮಿಸಲು ಪ್ರೇರಣೆ ಒದಗಿಸಿದೆ ಮುಕ್ತ ಪ್ರಶಂಸೆ ಬರುತ್ತಿದೆ ಎಂದು ಉಮೇಶ ಶೆಟ್ಟಿ ಹೇಳಿದರು. ಕುದ್ರೋಳಿ ಗಣೇಶ್ ಅವರು ಕೇವಲ ಜಾದೂಗಾರನಲ್ಲ. ಅವರೊಬ್ಬ ಕೊಳಲು ವಾದಕ,ಜಾನಪದ ಕಲಾವಿದ , ನಾಟಕ ಕಲಾವಿದ ಹಾಗು ಜನಪದ ಗಾಯಕ ಹೀಗೆ ಬಹುರೂಪಿ ಕಲಾವತಿಕೆಯನ್ನು ಹೊಂದಿದ ಒಬ್ಬ ಮೇರು ಕಲಾ ಶ್ರೀಮಂತಿಕೆ ಹೊಂದಿದ ವ್ಯಕ್ತಿಯಾಗಿದ್ದು ಕಲ್ಯಾಣ ಕರ್ನಾಟಕದಲ್ಲಿ ಅವರಿಗೆ ಅಪಾರ ಬೆಂಬಲಿಗರು ಇರುವುದರಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ಎಲ್ಲೆಡೆ ದೊರೆಯುತ್ತಿರುವುದು ಶ್ಲಾಘನೀಯ ವಿಚಾರ ಎಂದು ಡಾ. ಸದಾನಂದ ಪೆರ್ಲ ಹೇಳಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ರಾಜೇಶ್ ಡಿ. ಗುತ್ತೇದಾರ್, ತಿಮ್ಮಪ್ಪ ಗಂಗಾವತಿ, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಸುರೇಶ್ ಗುತ್ತೇದಾರ್ ಮಟ್ಟೂರು, ಆಕಾಶ್ ಗುತ್ತೇದಾರ್, ವೆಂಕಟೇಶ್ ಗುತ್ತೇದಾರ್ ಜೇವರ್ಗಿ, ಸುದರ್ಶನ್ ಜತ್ತನ್ ಪ್ರದೀಪ್ ,ಕಿರಣ್ ಜತ್ತನ್, ಜಗದೀಶ್ ಕಲ್ ಬೇನೂರ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ