ಧರ್ಮಸ್ಥಳ: ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಪದವೀಧರರಿಗೆ ಪದವಿ ಪ್ರದಾನ

Upayuktha
0

ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನಕ್ಕೆ ಜಾಗತಿಕಮಟ್ಟದಲ್ಲಿ ಮಾನ್ಯತೆ

ನೂತನ ಪದವೀಧರರು ಪಾರಂಪರಿಕ ಪದ್ಧತಿಯ ರಾಯಭಾರಿಗಳಾಗಿ ಜನರ ಸೇವೆ ಮಾಡಬೇಕು




ಧರ್ಮಸ್ಥಳದಲ್ಲಿ ಕೇಂದ್ರಸರ್ಕಾರದ ಆಯುಷ್ ಸಚಿವ ಪ್ರತಾಪ್‌ರಾವ್ ಗಣಪತ್‌ರಾವ್ ಜಾಧವ್ ನೂತನ ಪದವೀಧರರಿಗೆ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು.

ಉಜಿರೆ: ಹಲವು ಶತಮಾನಗಳಿಂದ ಭಾರತದಲ್ಲಿ ಪ್ರಕೃತಿಯ ಪ್ರಶಾಂತ ಪರಿಸರದಲ್ಲಿ  ಋಷಿ-ಮುನಿಗಳು ಆರೋಗ್ಯಭಾಗ್ಯ ರಕ್ಷಣೆಗಾಗಿ ಬಳಸುತ್ತಿದ್ದ ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನಕ್ಕೆ ಜಾಗತಿಕಮಟ್ಟದಲ್ಲಿ  ಇಂದು ಮಾನ್ಯತೆ ಮತ್ತು ಗೌರವ ಇದೆ. ಪ್ರಕೃತಿಚಿಕಿತ್ಸಾ ಪದ್ಧತಿಯ ಜನಕನೆಂದೆ ಚಿರಪರಿಚಿತರಾದ ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಉಪವಾಸ ಹಾಗೂ ವೃತ-ನಿಯಮಗಳ ಪಾಲನೆಯಿಂದ ಆರೋಗ್ಯರಕ್ಷಣೆ ಮಾಡಿಕೊಂಡಿದ್ದರು. ವೇದ-ಉಪನಿಷತ್ತುಗಳಲ್ಲಿ ಕೂಡಾ ಈ ಪದ್ಧತಿಯ ಉಲ್ಲೇಖವಿದೆ ಎಂದು ಕೇಂದ್ರ ಸರ್ಕಾರದ ಆಯುಷ್ ಸಚಿವ ಪ್ರತಾಪ್‌ರಾವ್ ಗಣಪತ್‌ರಾವ್ ಜಾಧವ್ ಹೇಳಿದರು.


ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ  ಉಜಿರೆಯ ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನಲ್ಲಿ ಪದವಿ ತರಗತಿ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು.


ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಪ್ರಯತ್ನದಿಂದಾಗಿ ಇಂದು ಈ ಪಾರಂಪರಿಕ ಪದ್ಧತಿ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗುತ್ತಿದೆ. ದೇಶ-ವಿದೇಶಗಳಲ್ಲಿ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತದೆ.


ನೂತನ ಪದವೀಧರರು ಭಾರತದ ಜನಪ್ರಿಯ ಪಾರಂಪರಿಕ ಪದ್ಧತಿಯ ರಾಯಭಾರಿಗಳಾಗಿ ಜನರ ಸೇವೆ ಮಾಡಬೇಕು. ಭಯ, ನೋವು, ಆತಂಕದಿಂದ ತಮ್ಮ ಬಳಿಗೆ ಬಂದ ರೋಗಿಗಳಿಗೆ ಉತ್ತಮ ಶುಶ್ರೂಷೆ ನೀಡಿ ಅವರು ನಗುಮೊಗದಿಂದ ಹಿಂದೆ ಹೋಗುವಂತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.


ವೈಜ್ಞಾನಿಕ ದೃಷ್ಟಿಕೋನದಿಂದಲೂ ಈ ಪದ್ಧತಿಯನ್ನುರಾಷ್ಟ್ರಮಟ್ಟದಲ್ಲಿ ಜನಪ್ರಿಯಗೊಳಿಸಲು ಸೂಕ್ತ ಕ್ರಮತೆಗೆದುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಈ ಬಗ್ಯೆ ಸದ್ಯದಲ್ಲಿಯೇ ಸಮಾಲೋಚನಾ ಸಭೆ ನಡೆಸಿ ಸಂಘಟಿತ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.



ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆಯುರ್ವೇದ, ಪ್ರಕೃತಿಚಿಕಿತ್ಸೆ ಹಾಗೂ ಯೋಗವಿಜ್ಞಾನ ಪದ್ಧತಿಗೆ ನೀಡುತ್ತಿರುವ ಪ್ರೋತ್ಸಾಹದ ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿ ಹೆಗ್ಗಡೆಯವರನ್ನು ಅಭಿನಂದಿಸಿದರು.


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ದೇಶದಲ್ಲೆ ಪ್ರಥಮವಾಗಿ ಉಜಿರೆಯಲ್ಲಿ ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ  ಪದವಿ ಕಾಲೇಜನ್ನು  ಪ್ರಾರಂಭಿಸಿದ್ದು ಇಲ್ಲಿ ಕಲಿತವರೆಲ್ಲ ದೇಶ-ವಿದೇಶಗಳಲ್ಲಿ ಉತ್ತಮ ಸೇವೆ ನೀಡುತ್ತಿದ್ದಾರೆ.  ಪ್ರಾಚೀನ ಪದ್ಧತಿಯ ಬಗ್ಯೆ ಜನಸಾಮಾನ್ಯರಲ್ಲಿಯೂ ಅರಿವು, ಜಾಗೃತಿ ಮೂಡಿಸಲಿಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಹತ್ತು ಶುಶ್ರ‍್ರೂಷಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಪಂಚತಾರಾ ಹೋಟೆಲ್‌ಗಳಲ್ಲಿ ಕೂಡಾ ಅಲ್ಲಲ್ಲಿ ಶುಶ್ರೂಷಾ ಕೇಂದ್ರಗಳು ಜನಪ್ರಿಯವಾಗುತ್ತಿವೆ ಎಂದರು.


ಉಡುಪಿ, ಬೆಂಗಳೂರು ಮತ್ತು ಹಾಸನದಲ್ಲಿರುವ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗಳು ಹಾಗೂ ಧರ್ಮಸ್ಥಳ, ಪರೀಕಾ ಮತ್ತು ಬೆಂಗಳೂರಿನಲ್ಲಿ ಪ್ರಕೃತಿಚಿಕಿತ್ಸಾ  ಆಸ್ಪತ್ರೆಗೆ ಉತ್ತಮ ಬೆಂಬಲ ಸಿಗುತ್ತಿದೆ ಎಂದು ಅವರು ಸಂತಸ  ವ್ಯಕ್ತಪಡಿಸಿದರು. ಅಂತೂ ಜನಸಾಮಾನ್ಯರಿಗೂ ಪಾರಂಪರಿಕ ಪದ್ಧತಿ ಬಗ್ಗೆ ನಂಬಿಕೆ, ವಿಶ್ವಾಸ ಮತ್ತು ಗೌರವ ಮೂಡಿ ಬಂದಿದೆ ಎಂದು ಅವರು ಹೇಳಿದರು.


25 ಮಂದಿಗೆ ಸ್ನಾತಕೋತ್ತರ ಪದವಿ ಹಾಗೂ 89 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್, ನವದೆಹಲಿಯ ಯೋಗ ಮತ್ತು ಪ್ರಕೃತಿಚಿಕಿತ್ಸಾ ಕೇಂದ್ರೀಯ ಸಂಶೋಧನಾ ಪರಿಷತ್‌ನ ನಿರ್ದೇಶಕ ಡಾ. ರಾಘವೇಂದ್ರ ರಾವ್, ಬೆಂಗಳೂರಿನ ಡಾ. ನವೀನ್ ವಿಶ್ವೇಶ್ವರಯ್ಯ ಮತ್ತು ಬೆಂಗಳೂರಿನ ಆಯುಷ್ ನಿರ್ದೇಶನಾಲಯದ ಮುಖ್ಯ ಆಡಳಿತಾಧಿಕಾರಿ ಕಮಲಾ ಬಾಯಿ ಉಪಸ್ಥಿತರಿದ್ದರು.


ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು. ಕುಮಾರಿ ಅನನ್ಯಾ ಉಜಿರೆ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top