ಹುನಗುಂದ: ಕೈಕೊಡುವ ಮಳೆ ಸಹಕರಿಸದ ಪರಿಸರ ಇದೆಲ್ಲದರ ನಡುವೆ ಬೆಳೆ ನೀಡಿ ಬಾಳ್ವೆಗೆ ಆಸರೆಯಾದ ಭೂಮಿಗೆ ವರ್ಷಕ್ಕೊಮ್ಮೆ ಪೂಜೆ ಬೇಡವೇ? ಅಂತೆಯೇ ಹೊಲದಲ್ಲಿ ಪೂಜೆಗೈದು ಚರಗ ಚಲ್ಲುವುದರ ಮೂಲಕ ನೈವಿಧ್ಯ ಅರ್ಪಿಸಿ ಸಂಭ್ರಮಿಸುವ ಪಾರಂಪರಿಕ ಹಬ್ಬವೇ ಇಂದಿನ ಎಳ್ಳಅಮವಾಸ್ಯೆ.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಎಳ್ಳಅಮವಾಸ್ಯೆಯ ಅಂಗವಾಗಿ ರೈತ ಸಮುದಾಯದ ಕುಟುಂಬಗಳು ಬೆಳಗಿನಿಂದಲೇ ತಯಾರಿಯಲ್ಲಿ ತೊಡಗಿರುವುದು ವಿಶೇಷವಾಗಿ ಕಂಡು ಬಂದತು. ಮನೆಯಲ್ಲಿ ಮಹಿಳೆಯರು ಚೆರಗ ಹಾಗೂ ನೈವೇದ್ಯಕ್ಕಾಗಿ ಸಜ್ಜೆ ಕಡಬು, ಹಿಂಡಿ ಪಲ್ಯ, ಪುಂಡಿ ಪಲ್ಯ, ಶೇಂಗಾ ಹೋಳಿಗೆ, ತುಪ್ಪ ಬದನೆಕಾಯಿ ಪಲ್ಯ, ಅನ್ನ ಸಾಂಬಾರುಗಳ ಭೋಜನ ತಯಾರಿಯಲ್ಲಿ ತೊಡಗಿಸಿ ಸಿದ್ಧಪಡಿಸಿದರು.
ರೈತರು ಎತ್ತುಗಳ ಮೈ ತೊಳೆದು ಸಿಂಗರಿಸಿ ಬಂಡಿಯನ್ನು ತಯಾರು ಮಾಡಿದರು. ಟ್ರಾಕ್ಟರ್, ಅಟೋ ಹೊಂದಿದವರು ಅವುಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದು ಕಂಡು ಬಂತು, ಚರಗದ ಎಲ್ಲ ಸಿದ್ಧತೆಗಳ ನಂತರ ಮನೆಯವರು ಆಪ್ತರೊಂದಿಗೆ ಸೇರಿ ಎತ್ತಿನ ಗಾಡಿ, ಟ್ಯಾಕ್ಟರ್, ಟಂಟಂಗಳ ಸಹಿತ ವಿವಿಧ ವಾಹನಗಳ ಮೂಲಕ ತಮ್ಮ ತಮ್ಮ ಹೊಲಗಳಿಗೆ ತೆರಳಿ ಅಲ್ಲಿ ‘ಲಕ್ಷ್ಮಿ’ ಎಂದೇ ಕರೆದು ಪೂಜಿಸಲ್ಪಡುವ ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ನಂತರ ಭೋಜನದ ವಿವಿಧ ತಿಂಡಿಗಳ ಉಂಡೆಮಾಡಿ ‘ಹುಲ್ಲುಲುಗ್ಯೂ ಚಳಾಮುಗ್ಯೋ ಎಂಬ ಘೋಷಣೆ ಮಾಡುತ್ತಾ ಹೊಲದ ನಾಲ್ಕು ದಿಕ್ಕುಗಳಲ್ಲಿ ಅರ್ಪಿಸಿ ನಂತರ ತಾವು ಊಟ ಸವಿದರು.
ಭೋಜನ ಸವಿದ ನಂತರ ಮಕ್ಕಳು ಹೊಲದಲ್ಲಿ ಜಿಗಿದು ಸಂಭ್ರಮಿಸಿದರೆ, ಮಹಿಳೆಯರು ವಿಶ್ರಾಂತಿ ಪಡೆದರು. ಇನ್ನೂ ಕೆಲವರು ಮೊಬೈಲ್‌ಗಳಲ್ಲಿ ತಲ್ಲಿನರಾಗಿದ್ದರು. ನಂತರ ಎತ್ತಿನಗಾಡಿ ಸಹಿತ ಬಂದ ವಾಹನಗಳಲ್ಲಿ ಊರಿನತ್ತ ಬರುವ ಸಂಭ್ರಮದ ದೃಶ್ಯ ಕಂಡು ಬಂದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ