ಸಾವು ಯುದ್ಧದಲ್ಲಾಗಲಿ ಅವಘಡದಲ್ಲಾಗಲಿ ಅಥವ ಸಹಜವೇ ಇರಲಿ ಅಂತಹ ಸಾವನ್ನು ಸಂಭ್ರಮಿಸುವುದು ಅತಿಹೀನ ಮನಸ್ಥಿತಿ. ಶವಸಂಭ್ರಮ ಶವಸಂಭೋಗದಷ್ಟೇ ಹೀನ. ಶತ್ರುವೇ ಆದರೂ ಮರಣಶಯ್ಯೆ, ಮರಣ ಮತ್ತು ಮರಣಾನಂತರದ ಪ್ರಕ್ರಿಯೆಗಳವರೆಗಿನ ಪರಿಸ್ಥಿತಿ ಕಂಡು ಸಂಭ್ರಮಿಸುವುದು ದೊಡ್ಡ ವಿಕೃತಿ. ಅಕ್ಷರಶ: ಅದೊಂದು ರಾಕ್ಷಸೀ ಪ್ರವೃತ್ತಿ.
ದೂರದಲ್ಲಿ ಯಾರೋ ಯಹೂದಿಯೊಬ್ಬನ ಶವ ಹೊತ್ತು ಸಾಗುತ್ತಿದ್ದಾರೆ ಎಂದು ಸಂಗಡಿಗರೊಬ್ಬರು ಹೇಳಿದಾಗ ಪ್ರವಾದಿ ಮುಹಮ್ಮದರು "ಯಹೂದಿಯ ಶವ ಹೊತ್ತು ದೂರದಲ್ಲಿ ಯಾರಾದರೂ ಶವ ಮೆರವಣಿಗೆಯಲ್ಲಿ ಸಾಗುತ್ತಿದ್ದರೆ ಮೃತನ ಗೌರವಾರ್ಥವಾಗಿ ಸ್ಥಳದಲ್ಲಿ ಕೂತಿದ್ದರೆ ಮಲಗಿದ್ದರೆ ಎದ್ದು ನಿಂತು ಗೌರವ ಸಲ್ಲಿಸಿರಿ. ನೀವು ನಿಂತಿದ್ದನ್ನು ಅವರು ನೋಡಲಿ ಅಥವ ನೋಡದೇ ಇರಲಿ. ಆದರೆ ದೇವನಂತೂ ನೋಡಿಯೇ ನೋಡುತ್ತಾನೆ " ಎಂಬ ಅರ್ಥದಲ್ಲಿ ತಮ್ಮ ಸಂಗಡಿಗರಿಗೆ ಪ್ರವಚನ ನೀಡಿದ್ದರು. ಸಾವು ಮತ್ತು ಶವ ಯಾವತ್ತೂ ಶತ್ರುವಲ್ಲ. ಯುದ್ಧ ರಂಗದಲ್ಲೂ ಶತ್ರುವಿನೊಂದಿಗೆ ಕೂಡ ಶತ್ರುತ್ವ ಸಾವಿನವರೆಗೆ ಮಾತ್ರ.
ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣನ ಪ್ರೇರಣೆ ಮತ್ತು ಅರ್ಜುನನ ಪ್ರಹಾರಗಳಿಂದ ಜರ್ಜರಿತನಾಗಿ, ದೇಹದ ತುಂಬ ಬಾಣಗಳನ್ನು ಹೆಟ್ಟಿಸಿಕೊಂಡು ಕುರುವಂಶದ ಹಿರಿಯ ಭೀಷ್ಮ ಶರಶಯ್ಯೆಯಲ್ಲಿ ಮಲಗಿ ಸಂಪೂರ್ಣ ನಿಷ್ಕ್ರಿಯನಾಗಿರುತ್ತಾನೆ. ಯುದ್ಧ ಮುಗಿದ ನಂತರ ಮರಣಯಾತನೆಯಲ್ಲಿ ಮುಳುಗಿದ ಭೀಷ್ಮನ ಮುಂದೆ ಬಂದ ಶ್ರೀಕೃಷ್ಣ" ನಿಮ್ಮ ಯೋಧತ್ವ ದುಷ್ಟನ ಪರವಿರದೆ ಶಿಷ್ಟನ ಪರವಿರುತ್ತಿದ್ದರೆ ನಿಮಗೆ ಈ ಸ್ಥಿತಿಗೆ ತಲುಪಿಸುವ ಸಾಮರ್ಥ್ಯವಾಗಲಿ ಸಿದ್ದಾಂತವಾಗಲಿ ನನ್ನಲ್ಲಿ ಇರುತ್ತಿರಲಿಲ್ಲ. ನಿಮ್ಮನ್ನು ಈ ಸ್ಥಿತಿಯಲ್ಲಿ ಕಂಡ ನಂತರ ನನ್ನ ಮಾನಸಿಕ ಯಾತನೆಯು ನಿಮ್ಮ ದೈಹಿಕ ಯಾತನೆಗಿಂತ ಹೆಚ್ಚಾಗಿದೆ. ನಿಮ್ಮ ಮೇಲಿನ ಕ್ಷಣಿಕ ಮತ್ತು ಸೀಮಿತ ಶತ್ರುತ್ವವು ಸ್ನೇಹ-ಗೌರವವನ್ನು ಮೀರಿದ ಅನಿವಾರ್ಯತೆಯಿಂದ ಸೃಷ್ಟಿಯಾದದ್ದು. ನಿಮ್ಮ ಬದುಕಿನ ಇತಿಹಾಸ ಮತ್ತು ಸಾವಿನ ಕಾರಣ, ನ್ಯಾಯದ ಪರವಿದ್ದ ನನ್ನನ್ನೂ ಭವಿಷ್ಯದಲ್ಲಿ ಖಳನಾಯಕನನ್ನಾಗಿಸುವಷ್ಟು ಶಕ್ತವಾಗಿದೆ ಎಂಬ ಭಯ ನನ್ನಲ್ಲಿದೆ. ನ್ಯಾಯಕ್ಕಾಗಿನ ಹೋರಾಟದಲ್ಲಿ ಜ್ಞಾನ ಮತ್ತು ನ್ಯಾಯ ಎರಡೂ ನನ್ನೆದುರಿಗೆ ನಿಮ್ಮ ರೂಪದಲ್ಲಿ ಬಂದದ್ದು ನನ್ನ ದುರಾದೃಷ್ಟ " ಎಂದು ಪ್ರಹಾರಕ್ಕೆ ಪ್ರೇರಣೆ ನೀಡಲು ಕಾರಣವಾದ ಅಂಶ-ಅನಿವಾರ್ಯತೆಯನ್ನು ಭೀಷ್ಮನಿಗೆ ಮನವರಿಕೆಯಾಗುವವರೆಗೆ ವಿವರಿಸುತ್ತಾನೆ.
ಅಂತಹ ನೋವಿನಲ್ಲಿಯೂ ಕೂಡ ಭೀಷ್ಮ ಕೈಯೆತ್ತಿ ಕೃಷ್ಣನ ಮಾತು ಸರಿ ಇದೆ ಎಂದು ಸನ್ನೆಯ ಮೂಲಕ ಸೂಚಿಸುತ್ತಾನೆ. ಯುದ್ಧದಲ್ಲಿ ಎದುರಾಗಿ ನಿಂತವನನ್ನೇ ಸಾವಿನ ಹೊತ್ತಿನಲ್ಲಿ ಶ್ರೀಕೃಷ್ಣ ಶತ್ರುವಾಗಿ ಪರಿಗಣಿಸಲಿಲ್ಲ. ಸಾವು ನೋವುಗಳನ್ನು ಸಂಭ್ರಮಿಸುವುದು ಒಂದು ಸಂಸ್ಕಾರಹೀನ ಮನಸ್ಥಿತಿ. ಶೋಕದ ಉಡುಗೊರೆ ಸಿಗುವವರೆಗೆ ಸಾವಿನ ಕ್ಷಣಿಕ ಸಂಭ್ರಮ ಘೋರ ಅಪರಾಧ ಎನ್ನುವ ಪ್ರಜ್ಞೆ ಬಹಳಷ್ಟು ಜನರಲ್ಲಿ ಮೂಡುವುದೇ ಇಲ್ಲ.
-ಮುಷ್ತಾಕ್ ಹೆನ್ನಾಬೈಲ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ