ಪಿಎಂ ಸೂರ್ಯಘರ್ ಯೋಜನೆ ಅಳವಡಿಸಿಕೊಳ್ಳಿ, ದೀರ್ಘಕಾಲ ಉಚಿತ ವಿದ್ಯುತ್ ಪಡೆಯಿರಿ: ಸಚಿವ ಪ್ರಲ್ಹಾದ್ ಜೋಷಿ

Upayuktha
0

ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್‌ ಬಿಜ್ಲಿ ಯೋಜನೆಯ ಫಲಾನುಭವಿಗಳ ಜತೆಗೆ ಸಂವಾದ ಹಾಗೂ ಮಾಹಿತಿ ಕಾರ್ಯಾಗಾರ




ಮಂಗಳೂರು: ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್‌ ಬಿಜ್ಲಿ ಯೋಜನೆಯ ಫಲಾನುಭವಿಗಳ ಜತೆಗೆ ಸಂವಾದ ಹಾಗೂ ಮಾಹಿತಿ ಕಾರ್ಯಾಗಾರವು ಕಾವೂರಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಇಂದು ಜರಗಿತು.


ಕೇಂದ್ರ ಸರಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಪ್ರಲ್ಹಾದ ಜೋಷಿ ಅವರು ಈ ಸಮಾರಂಭವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ಹಸ್ತಾಂತರಿಸಿದರು.


ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ವಿದ್ಯುತ್ ಸಬರಾಜು ಕಂಪನಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಗಳು ಸಂಯುಕ್ತವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಯೋಜನೆಯ ಮಾಹಿತಿಯನ್ನು ನೀಡಲಾಯಿತು.


ಕಳೆದ ಹತ್ತು ವರ್ಷಗಳಲ್ಲಿ ಭಾರತ ಸೌರ ವಿದ್ಯುತ್ ಸೇರಿದಂತೆ ಅಸಾಂಪ್ರದಾಯಿಕ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುತ್ತಿರುವ ವಿದ್ಯುತ್ ಪ್ರಮಾಣ 90 ಗಿಗಾ ವ್ಯಾಟ್‌ಗೆ ಏರಿದೆ ಎಂದು ಸಚಿವ ಜೋಷಿ ತಿಳಿಸಿದರು.


ಭಾರತ ಜಗತ್ತಿನಲ್ಲೇ ಅತಿದೊಡ್ಡ ಉತ್ಪಾದನಾ ಕೇಂದ್ರವಾಗಿ ಬದಲಾಗುತ್ತಿದ್ದು, ಚೀನಾವನ್ನು ಹಿಂದಿಕ್ಕಿ ಅಭಿವೃದ್ಧಿ ಹಾಗೂ ಬಂಡವಾಳ ಹೂಡಿಕೆಯಲ್ಲಿ ದಾಪುಗಾಲು ಹಾಕುತ್ತಿದೆ. ಪ್ರಸ್ತುತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತ ಶೀಘ್ರದಲ್ಲೇ 3ನೇ ಸ್ಥಾನಕ್ಕೆ ಏರಲಿದೆ ಎಂದು ಅವರು ತಿಳಿಸಿದರು.


ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ದೂರದೃಷ್ಟಿಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಿದ್ದು ಭಾರತವನ್ನು ಜಗತ್ತಿನಲ್ಲೇ ನಂ.1 ಸ್ಥಾನಕ್ಕೆ ಏರಿಸುವುದು ಅವರ ಗುರಿಯಾಗಿದೆ. ಈ ದಿಕ್ಕಿನಲ್ಲಿ ದೇಶವನ್ನು ಸೋಲಾರ್ ಪವರ್ ಹೌಸ್ ಆಗಿ ಅಭಿವೃದ್ಧಿಪಡಿಸಲು ಸ್ಥಳೀಯ ಜನಪ್ರತಿನಿಧಿಗಳು ಪಿಎಂ ಸೂರ್ಯಘರ್ ಯೋಜನೆಯನ್ನು ಜನರಿಗೆ ತಲುಪಿಸಬೇಕು ಎಂದು ಸಚಿವ ಪ್ರಲ್ಹಾದ್ ಜೋಷಿ ಕರೆ ನೀಡಿದರು.


ಈ ಯೋಜನೆಯಡಿ ಗೃಹ ಬಳಕೆಗೆ 3 ಕಿಲೋವಾಟ್ ವರೆಗೆ ವಿದ್ಯುತ್ ಉತ್ಪಾದಿಸುವ ಸೌರ ಫಲಕಗಳನ್ನು ಅಳವಡಿಸಲು 2 ಲಕ್ಷ ರೂ ವೆಚ್ಚ ತಗಲುತ್ತದೆ. ಅದರಲ್ಲಿ ಕೇವಲ ಶೇ 10ರಷ್ಟು ಮಾತ್ರ ಯೋಜನೆಯ ಫಲಾನುಭವಿಗಳು ಮೊದಲಿಗೆ ಹೂಡಿಕೆ ಮಾಡಬೇಕಿದ್ದು, ಶೇ 90ರಷ್ಟು ಸಾಲವನ್ನು ರಾಷ್ಟ್ರೀಕೃತ ಬ್ಯಾಂಕುಗಳು ಶೇ 7 ರಬಡ್ಡಿ ದರದಲ್ಲಿ ನೀಡುತ್ತಿವೆ. ಈ ಸೌಲಭ್ಯ ಬಳಸಿಕೊಂಡು ಸುಸ್ಥಿರ ಅಭಿವೃದ್ಧಿಯ ಮಾದರಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಅವರು ನುಡಿದರು.


ಗೃಹಬಳಕೆಗೆ ಅಳವಡಿಸಲಾಗುವ ಸೌರ ಫಲಕಗಳಿಗೆ 25 ವರ್ಷಗಳ ಖಾತರಿಯಿದ್ದು,  ಆ ಅವಧಿಯನ್ನೂ ಮೀರಿ 40 ವರ್ಷಗಳ ವರೆಗೆ ಶೇ 80ರಷ್ಟು ಕಾರ್ಯಕ್ಷಮತೆಯಿಂದ ಫಲಕಗಳು ವಿದ್ಯುತ್ ಉತ್ಪಾದಿಸುತ್ತವೆ. ವಿದ್ಯುತ್ ಗ್ರಾಹಕರಾಗುವುದರ ಜತೆಗೆ ವಿದ್ಯುತ್ ಉತ್ಪಾದಕರಾಗಿಯೂ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸುವ ಮತ್ತು ಎಲ್ಲರೂ ಗೆಲ್ಲಬಹುದಾದ ಅವಕಾಶವಿದು  ಎಂದು ಅವರು ಹೇಳಿದರು.


ನಮ್ಮ ಭೂಮಿ, ಪರಿಸರವನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಬಿಟ್ಟುಹೋಗುವ ಜವಾಬ್ದಾರಿ ನಮ್ಮದಾಗಿದ್ದು, ಮಾಲಿನ್ಯರಹಿತ ಮತ್ತು ಸಂಪೂರ್ಣ ಉಚಿತವಾದ ಸೌರ ವಿದ್ಯುತ್ ಅಳವಡಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಜನತೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.


ಪ್ರಸ್ತುತ ಭಾರತದಲ್ಲೇ ಉತ್ಕೃಷ್ಟ ಗುಣಮಟ್ಟದ ಸೌರ ಕೋಶಗಳು ಮತ್ತು ಫಲಕಗಳನ್ನು ಉತ್ಪಾದಿಸಲಾಗುತ್ತಿದ್ದು, ಚೀನಾದಿಂದ ಆಮದು ಮಾಡಿಕೊಳ್ಳುವುದು ಶೂನ್ಯಕ್ಕೆ ಇಳಿದಿದೆ. ಶೀಘ್ರದಲ್ಲೇ ಭಾರತವು ಜಗತ್ತಿಗೇ ಸೌರ ಕೋಶ ಮತ್ತು ಫಲಕಗಳನ್ನು ದೊಡ್ಡ ಮಟ್ಟದಲ್ಲಿ ಪೂರೈಸುವ ಉತ್ಪಾದಕನಾಗಿ ಬೆಳೆಯಲಿದ್ದು, ಆಗ ಸೌರ ಫಲಕಗಳ ಅಳವಡಿಕೆ ವೆಚ್ಚ ಇನ್ನೂ ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ.


ಸೌರವಿದ್ಯುತ್ ಬಳಸಿಕೊಂಡು ಚಲಿಸುವ ವಾಹನಗಳ ಅಭಿವೃದ್ಧಿ ಕೂಡ ನಡೆಯುತ್ತಿದ್ದು, ಬ್ಯಾಟರಿ ತಂತ್ರಜ್ಞಾನ ದಿನೇ ದಿನೇ ಉನ್ನತ ಮಟ್ಟಕ್ಕೆ ಏರುತ್ತಿದೆ ಎಂದು ಜೋಷಿ ಹೇಳಿದರು.


ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಾ. ಭರತ್ ಶೆಟ್ಟಿ, ಡಿ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top