ಏಕತೆ ಮತ್ತು ಪ್ರಗತಿಗೆ ಸಹಕಾರ, ವಿಕಸಿತ್ ಭಾರತ್ 2047 ರ ಸಾಕಾರಕ್ಕೆ ಸಾಮೂಹಿಕ ಸಂಕಲ್ಪ
ಸುರತ್ಕಲ್: ಸುರತ್ಕಲ್ ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ವತಿಯಿಂದ 76ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎನ್‌ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ, 2 ಕಾರ್ ಎಂಜಿನಿಯರಿಂಗ್ ಕೋಯ್ ಎನ್ ಸಿಸಿಯ ಕಮಾಂಡಿಂಗ್ ಆಫೀಸರ್ ಕರ್ನಲ್ ಅನಿಲೇಶ್ ಕೌಶಿಕ್, ಕ್ಯಾಪ್ಟನ್ ಪಿ.ಸ್ಯಾಮ್ ಜಾನ್ಸನ್, ಕ್ಯಾಪ್ಟನ್ ಎಚ್. ಶಿವಾನಂದ ನಾಯಕ, ಪದಾಧಿಕಾರಿಗಳು, ಬೋಧಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಕ್ಯಾಂಪಸ್ ನಿವಾಸಿಗಳು ಉಪಸ್ಥಿತರಿದ್ದರು.
ನಿರ್ದೇಶಕರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ನಂತರ ಎನ್‌ಸಿಸಿ ಕೆಡೆಟ್‌ಗಳು, ಎನ್ಐಟಿಕೆಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಭದ್ರತಾ ತಂಡದಿಂದ ಗಣರಾಜ್ಯೋತ್ಸವ ಪಥಸಂಚಲನ ನಡೆಯಿತು. ನಂತರ ವಿದ್ಯಾರ್ಥಿಗಳು ಸ್ಪೂರ್ತಿದಾಯಕ ನೃತ್ಯಗಳು ಮತ್ತು ಕವನ ವಾಚನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರೊ. ಬಿ. ರವಿ ಅವರು ತಮ್ಮ ಭಾಷಣದಲ್ಲಿ, ಸಮಾನ ಅವಕಾಶ, ವೈಯಕ್ತಿಕ ಘನತೆ ಮತ್ತು ರಾಷ್ಟ್ರೀಯ ಏಕತೆಯನ್ನು ಪ್ರತಿಪಾದಿಸುವ ಮೂಲಕ ಭಾರತೀಯ ಸಂವಿಧಾನದ ಮೌಲ್ಯಗಳಿಗೆ ನವೀಕರಿಸಿದ ಬದ್ಧತೆಗೆ ಕರೆ ನೀಡಿದರು. ಗಣರಾಜ್ಯದ ಪರಿಕಲ್ಪನೆಯು ಪ್ರಾಚೀನ ಗಣರಾಜ್ಯ ಅಥವಾ ಜನಪದದಲ್ಲಿ ಚುನಾಯಿತ ಜನರ ಗುಂಪಿನ ಆಡಳಿತವನ್ನು ಒಳಗೊಂಡಿದೆ ಎಂದು ಅವರು ಉಲ್ಲೇಖಿಸಿದರು.
ಪಾಶ್ಚಿಮಾತ್ಯ ಪರಿಕಲ್ಪನೆಗಳನ್ನು ಅನುಸರಿಸುವ ಬದಲು ಪ್ರಾಚೀನ ವಿಜ್ಞಾನಗಳನ್ನು ಅಧ್ಯಯನ ಮಾಡಿ ತಂತ್ರಜ್ಞಾನವನ್ನು ಸಂಪ್ರದಾಯದೊಂದಿಗೆ ಬೆರೆಸುವಂತೆ ಎಲ್ಲರಿಗೂ ಅವರು ಪ್ರೇರೇಪಿಸಿದರು. ಉದಾಹರಣೆಗೆ, ಶಾಖವನ್ನು ಹಿಡಿದಿಟ್ಟುಕೊಳ್ಳುವ ಗಾಜಿನ ಕಟ್ಟಡಗಳು ಶೀತಲ ಹವಾಮಾನದ ದೇಶಗಳಿಗೆ ಒಳ್ಳೆಯದು, ಭಾರತಕ್ಕೆ ಅಲ್ಲ. ಅದರಲ್ಲೂ ಮಂಗಳೂರಿಗೆ ಖಂಡಿತವಾಗಿಯೂ ಸೂಕ್ತವಲ್ಲ. ನಾವು ಸ್ಥಪತ್ಯ ವೇದ, ಕಟ್ಟಡಗಳ ವಾಸ್ತುಶಿಲ್ಪ ವಿಜ್ಞಾನ ಮತ್ತು ನಗರ ಯೋಜನೆಯನ್ನು ಅಧ್ಯಯನ ಮಾಡಬಹುದು. ಇದನ್ನು ನಾವು ಹಂಪಿ ಅಥವಾ ಬೇಲೂರಿನಲ್ಲಿ ನೋಡಬಹುದು. ಸೌಂದರ್ಯಶಾಸ್ತ್ರ ಮತ್ತು ದಕ್ಷತಾ ಶಾಸ್ತ್ರದೊಂದಿಗೆ ಸಂಯೋಜಿಸಲಾದ ಕ್ರಿಯಾತ್ಮಕತೆಯ ಅತ್ಯುತ್ತಮ ಉದಾಹರಣೆಗಳು ಎಂದು ಅವರು ತಿಳಿಸಿದರು.
ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿದ ಅವರು, ಪ್ರತಿಯೊಂದು ರಾಷ್ಟ್ರಕ್ಕೂ ತಲುಪಬೇಕಾದ ಒಂದು ಗಮ್ಯವಿದೆ, ತಲುಪಿಸಬೇಕಾದ ಸಂದೇಶವಿದೆ ಮತ್ತು ಸಾಧಿಸಲು ಧ್ಯೇಯವಿದೆ. ಇದಕ್ಕೆ ಸರಿಯಾದ ದಿಕ್ಕಿನಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದರು.
ಎನ್ಐಟಿಕೆ ವಿದ್ಯಾರ್ಥಿಗಳಾದ ಐಟಿಯ ಸತೀಶ್ ಮತ್ತು ಸಿಎಸ್ ವಿಭಾಗದ ಯಶವಂತ್ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ನಿರ್ದೇಶಕರು ಈ ಸಂದರ್ಭದಲ್ಲಿ ತಿಳಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಎನ್‌ಐಟಿಕೆಯ ನಾಲ್ವರು ಹಳೆಯ ವಿದ್ಯಾರ್ಥಿಗಳು ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ.
ಈ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಮೂಲಕ ಸಮಾನ ಮತ್ತು ಪರಿಸರ ಸುಸ್ಥಿರ ರೀತಿಯಲ್ಲಿ'ವಿಕಸಿತ್ ಭಾರತ್ 2047' ದೃಷ್ಟಿಕೋನಕ್ಕೆ ಕೊಡುಗೆ ನೀಡುವಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಎನ್ಐಟಿಕೆಯ ಪಾತ್ರವನ್ನು ದೃಢೀಕರಿಸುವ ಸಾಮೂಹಿಕ ಸಂಕಲ್ಪವನ್ನು ಕೈಗೊಳ್ಳಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ