ಸಂಚಾರ ನಿರ್ವಹಣೆ: ಟ್ರಾಫಿಕ್ ಸಿಗ್ನಲ್ Vs ಸರ್ಕಲ್

Upayuktha
0


ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಅದು ಯಾರು ಕಂಡುಹಿಡಿದರೋ ಗೊತ್ತಿಲ್ಲ. ಪ್ರಪ್ರಥಮವಾಗಿ ಇಂಗ್ಲೆಂಡಿನಲ್ಲಿ 1868 ರಲ್ಲೇ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ರಸ್ತೆಗಳ ಜಂಕ್ಷನ್ನುಗಳಲ್ಲಿ ಅಳವಡಿಸಿಕೊಳ್ಳಲಾಗಿತ್ತಂತೆ. ಆದರೆ, 1923 ರಲ್ಲಿ ಗೆರೆಟ್ ಮಾರ್ಗಾನ್ ಎಂಬವನು ಇಲೆಕ್ಟ್ರಿಕ್ ಟ್ರಾಫಿಕ್ ಸಿಗ್ನಲ್ಲನ್ನು ಕಂಡುಹಿಡಿದ ಎಂದು ಹೇಳಲಾಗುತ್ತಿದೆ. ಕಂಡುಹಿಡಿದವರು ಯಾರೇ ಇರಲಿ ಈಗಂತೂ ಎಲ್ಲಾ ನಗರಗಳಲ್ಲೂ ಎಲ್ಲಾ ರಸ್ತೆಗಳ ಕೂಡುವಿಕೆಯಲ್ಲೂ ಇದು ಬಳಕೆ ಆಗ್ತಾ ಇದೆ. ಇರುವ ಸರ್ಕಲ್ಲುಗಳನ್ನೆಲ್ಲಾ ಅಳಿಸಿ ಹಾಕಿ ಅಲ್ಲಿ ಸಿಗ್ನಲ್ ಲೈಟ್ ಅಳವಡಿಸುತ್ತಾ ಇದ್ದಾರೆ. ವರ್ಷಾಂತ್ಯದಲ್ಲಿ ಎಲ್ಲಾ ಕಡೆಗಳಲ್ಲಿಯೂ ಜನದಟ್ಟಣೆ ಮತ್ತು ವಾಹನದಟ್ಟಣೆ ಉಂಟಾಗುವುದರಿಂದ ನಗರಾಡಳಿತದವರು ಟ್ರಾಫಿಕ್ ನಿಯಂತ್ರಣದ ಕುರಿತಾಗಿ ತಲೆಕೆಡಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಈ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯ ಬಗ್ಗೆ ಮರು ಚಿಂತನೆ ನಡೆಸುವುದು ಸೂಕ್ತ ಅನ್ನಿಸುತ್ತದೆ.


ವಾಹನ ಸವಾರರಿಗೆ ಈ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಅನ್ನುವುದು ಒಂದು ದೊಡ್ಡ ಗೋಳು. ಹೆಚ್ಚಿನ ಕಡೆಗಳಲ್ಲಿ ಈ ಸಿಗ್ನಲ್ ವ್ಯವಸ್ಥೆ ಆಟೋಮ್ಯಾಟಿಕ್ ಆಗಿ ಕಾರ್ಯ ನಿರ್ವಹಿಸುತ್ತಾ ಇರುತ್ತದೆ. ಬೆಳ್ಳಂಬೆಳಗ್ಗೆ ವಾಹನ ದಟ್ಟಣೆ ಇಲ್ಲದಿರುವಾಗಲೂ ಅದು ಚಾಲೂ ಇರುತ್ತದೆ. ತಮ್ಮ ಮುಂದಿನ ರಸ್ತೆ ಖಾಲಿ ಇದ್ದರೂ ಕೂಡಾ ವಾಹನ ಸವಾರರು ಅಲ್ಲಿ ಹೋಗಿ ಹಸಿರು ನಿಶಾನೆಗಾಗಿ ಕಾಯುತ್ತಾ ಇರಬೇಕು. ಸವಾರರಿಗೆ ಇದು ಒಂಥರಾ ತಾಳ್ಮೆಯ ಪರೀಕ್ಷೆ. 


ಇನ್ನು ವಾಹನ ದಟ್ಟಣೆ ಹೆಚ್ಚು ಇರುವಾಗ ಇದೊಂಥರಾ ಮಜಾ ಕೊಡುವ ಆಟ ಇದ್ದ ಹಾಗೆ. ಒಂದು ರಸ್ತೆಯನ್ನು ಮಾತ್ರ ಬಿಟ್ಟು ಉಳಿದೆಲ್ಲಾ ರಸ್ತೆಗಳನ್ನು ಆ ರಸ್ತೆಗಳಲ್ಲಿ ವಾಹನಗಳು ಒತ್ತೊತ್ತಾಗಿ ಸಂಗ್ರಹ ಆಗುವವರೆಗೂ ಬಂದ್ ಮಾಡೋದು. ಆನಂತರ ನಮ್ ಪಿಟಿ ಮಾಸ್ಟರು “ರೆಡಿ, ಸ್ಟೆಡಿ, ಗೋ” ಅಂತ ಮಕ್ಕಳನ್ನು ಓಡಲು ಬಿಡುವ ಹಾಗೇ ಇಲ್ಲಿ ಹಸಿರು ಸಿಗ್ನಲ್ ತೋರಿಸಿ ಎಲ್ಲರನ್ನೂ ಒಮ್ಮೆಲೇ ಬಿಟ್ ಬಿಡುವುದು. ಅದುವರೆಗೂ ತಾಳ್ಮೆಯಿಂದಲೇ “ಗುರ್ ಗುರ್” ಅಂತ ಎಕ್ಸಿಲರೇಟರ್ ಅದುಮುತ್ತಾ ಇದ್ದವರೆಲ್ಲಾ ನಾಮುಂದೆ ತಾಮುಂದೆ ಅಂತ ಒಮ್ಮೆಲೇ ವಾಹನಗಳನ್ನು ದೌಡಾಯಿಸುವುದು. ಸರತಿ ಸಾಲಿನಲ್ಲಿ ಹಿಂಬದಿ ಇದ್ದವರಿಗಂತೂ ಭಾರೀ ಟೆನ್ಶನ್. ತಾನು ದಾಟುವುದರ ಒಳಗಾಗಿ ಎಲ್ಲಿ ಪುನಹ ರೆಡ್ ಲೈಟ್ ಬರುತ್ತೋ ಏನೋ ಅಂತ. ಹೀಗಾಗಿ ಹಸಿರು ದೀಪ ಕಂಡೊಡನೆ ಅವರು ಕರ್ಕಶವಾಗಿ ಹಾರ್ನ್ ಮಾಡುತ್ತಾ ಎಲ್ಲರಿಗಿಂತ ಹೆಚ್ಚು ಸ್ಪೀಡಾಗಿ ವಾಹನಗಳನ್ನು ಹಾರಿಸುವುದು.  


ನಗರಗಳಲ್ಲಿಯೇ ವಾಸಿಸುತ್ತಾ ಇರುವ ಎಲ್ಲಾ ನಾಗರಿಕರೂ ಇದನ್ನು ಬೇರೆ ನಿರ್ವಾಹವೇ ಇಲ್ಲದೇ ಅನುಭವಿಸುತ್ತಾ ಇದ್ದಾರೆ. ಎಲ್ಲಾ ವಾಹನ ಸವಾರರಿಗೂ ಇದು ಒಂಥರಾ ಕಿರಿಕಿರೀನೇ. ಈ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಇಷ್ಟಪಡುವವರು ಯಾರೂ ಇಲ್ಲ. ಸಣ್ಣ ವಾಹನಗಳ ಸವಾರರೆಲ್ಲರೂ ಟ್ರಾಫಿಕ್ ಸಿಗ್ನಲ್ ತಪ್ಪಿಸಿಕೊಳ್ಳಲು ಬೇರೆ ಬೇರೆ ಒಳದಾರಿಗಳನ್ನು ಹಿಡಿದರೆ, ದೊಡ್ಡ ವಾಹನಗಳ ಚಾಲಕರು ಬೇರೆ ದಾರಿ ಕಾಣದೇ ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತಾ ಅನಿವಾರ್ಯವಾಗಿ ಸಿಗ್ನಲ್ ಜಂಕ್ಷನ್ನುಗಳಲ್ಲಿ ಹಸಿರು ಲೈಟಿಗಾಗಿ ಕಾಯುತ್ತಾ ಇರುತ್ತಾರೆ. 


ನಗರವಾಸಿಗಳಿಗೆ ಇದು ದಿನ ನಿತ್ಯದ ಗೋಳಾದರೆ ಇನ್ನು ಹಳ್ಳಿಗಳಿಂದ ಅಪರೂಪಕ್ಕೆ ನಗರಗಳಿಗೆ ಬರುವ ಚಾಲಕರಿಗೆ ಇದು ಒಂಥರಾ ಶಿಕ್ಷೆಯೇ ಆಗಿದೆ. ಅವರಿಗೆ ನಗರಗಳಲ್ಲಿ ಸರಿಯಾದ ದಾರಿ ಗೊತ್ತಿರುವುದಿಲ್ಲ. ಹೀಗಾಗಿ ಮೊಬೈಲಲ್ಲಿ ಮ್ಯಾಪ್ ಹಾಕಿಕೊಂಡು ಅದನ್ನು ನೋಡುತ್ತಾ ನಿಧಾನವಾಗಿ ಸಾಗಬೇಕಾದ ಪರಿಸ್ಥಿತಿ ಅವರದ್ದು. ದೊಡ್ಡವಾಹನಗಳ ಹಿಂದೆ ಸಾಗುವಾಗ ಸಿಗ್ನಲ್ ಜಂಪ್ ಆದರೂ ಕಾಣಿಸುವುದಿಲ್ಲ. ಸಿಗ್ನಲ್ಲುಗಳಲ್ಲಿ ಸ್ವಲ್ಪ ಎಡವಟ್ಟು ಮಾಡಿಕೊಂಡರೂ ದಂಡ ಬೀಳುತ್ತದೆ. ಅಂಥವರು ಒಮ್ಮೆ ಊರಿಗೆ ಹೋದವರು ಕೇವಲ ದಂಡ ಕಟ್ಟುವುದಕ್ಕಾಗಿಯೇ ಪುನಃ ನಗರಕ್ಕೆ ಹಿಂತಿರುಗಬೇಕಾಗುತ್ತದೆ ಪಾಪ.  


ನಾಲ್ಕು ರಸ್ತೆಗಳು ಕೂಡುವಲ್ಲಿ ಕೇವಲ ಒಂದು ರಸ್ತೆ ತೆರೆದಿಟ್ಟು ಉಳಿದ ರಸ್ತೆಗಳನ್ನು ಅವುಗಳಲ್ಲಿ ವಾಹನಗಳು ಸಂಗ್ರಹ ಆಗುವವರೆಗೂ ಬಂದ್ ಮಾಡಿ ಇಟ್ಟುಕೊಳ್ಳುವುದು, ಆನಂತರ “ರೆಡಿ, ಸ್ಟೆಡಿ, ಗೋ” ಅಂತ ಒಮ್ಮೆಲೇ ಬಿಟ್ಟು ಬಿಡುವುದು ಒಂಥರಾ ಹಾಸ್ಯಾಸ್ಪದ ಅಲ್ವಾ? ಟ್ರಾಫಿಕ್ ಸಿಗ್ನಲ್ ಇರುವ ನಾಲ್ಕು ರಸ್ತೆಗಳು ಕೂಡುವ ಒಂದು ಜಂಕ್ಷನ್ನನ್ನು ಗಮನಿಸಿ. ಅಲ್ಲಿ ದಿನವಿಡೀ ಯಾವುದಾದರೂ ಒಂದು ರಸ್ತೆ ಮಾತ್ರ ತೆರೆದಿರುತ್ತದೆ, ಉಳಿದ ಮೂರೂ ಮುಚ್ಚಿರುತ್ತವೆ. ಇದು ಅವೈಜ್ಞಾನಿಕ ಅಲ್ವಾ? ಇಂತಹ ಟ್ರಾಫಿಕ್ ವ್ಯವಸ್ಥೆಯೇ ನಮಗೆ ಬೇಕಾ? ಇದಕ್ಕೆ ಬೇರೆ ಪರಿಹಾರವೇ ಇಲ್ವಾ? ಈ  ಕುರಿತು ಯಾಕೆ ನಮ್ಮ ಇಲಾಖೆ ಚಿಂತಿಸುತ್ತಾ ಇಲ್ಲ? 


ರಸ್ತೆಗಳು ಕೂಡುವಲ್ಲಿ ಈ ಹಿಂದೆ ಇದ್ದ ವೃತ್ತಗಳೇ ಸರಿಯಾದ ಕ್ರಮವಾಗಿದೆ. ರಸ್ತೆಗಳು ಕೂಡುವಲ್ಲಿ ರಸ್ತೆಗಳ ಸಂಖ್ಯೆಗಳಿಗೆ ಅನುಸಾರವಾಗಿ ಮತ್ತು ವಾಹನಗಳ ದಟ್ಟಣೆಗೆ ಅನುಸಾರವಾಗಿ ಭಾರೀ ಗಾತ್ರದ ದೊಡ್ಡದಾದ ವೃತ್ತ ನಿರ್ಮಿಸಿ ಎಲ್ಲಾ ವಾಹನಗಳೂ ಒಂದರ ಹಿಂದೆ ಒಂದರಂತೆ ನಿಧಾನವಾಗಿ ಸಾಗುವಂತೆ ವ್ಯವಸ್ಥೆ ಮಾಡಿದರೆ ಅದೇ ಶಾಶ್ವತ ಪರಿಹಾರ. ಇಂತಹ ಟ್ರಾಫಿಕ್ ಸಿಗ್ನಲ್ಲುಗಳ ಅವಶ್ಯಕತೆಯೇ ಇರುವುದಿಲ್ಲ.  


- ಹರಿಕೃಷ್ಣ ಹೊಳ್ಳ, ಬ್ರಹ್ಮಾವರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top