ಮಂಗಳೂರು: "ನಮಗೆ ಜೀವಿಸಲು ಬೇಕಾದ ಆದರ್ಶಗಳನ್ನು ಅನೇಕ ದಿವ್ಯಚೇತನಗಳು ಬಿಟ್ಟುಹೋಗಿದ್ದಾರೆ. ಅವರ ಹಾದಿಯಲ್ಲೇ ನಡೆದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ ಅಂತೆಯೇ ಗೌರವಿಸುತ್ತದೆ. ಇದನ್ನು ನನ್ನ ತೀರ್ಥರೂಪರಾದ ಕೀರ್ತಿಶೇಷ ಗೋಪಾಲಕೃಷ್ಣ ಆಸ್ರಣ್ಣರು ನುಡಿದಂತೆ ನಡೆದು ತೋರಿಸಿದ್ದಾರೆ. ನಾವೂ ಅದೇ ದಾರಿಯಲ್ಲಿ ಸಾಗಿ ಧರ್ಮ ಮಾರ್ಗಿಗಳಾಗುತ್ತೇವೆ. ಬೇರೆ ಬೇರೆ ಕಡೆಗಳಲ್ಲಿ ಆಸ್ರಣ್ಣರ ಸಂಸ್ಮರಣೆ ಆಗುತ್ತದೆಯಾದರೂ ನಗರದಲ್ಲಿ ಕಲಾತಪಸ್ವಿ ಸಂಜಯ ಕುಮಾರ್ ಗೋಣಿಬೀಡುರವರು ಇದನ್ನು ವ್ರತವೆಂದು ಭಾವಿಸಿ ಕಳೆದ ಹದಿನಾರು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸಂಸ್ಮರಣೆ- ಪ್ರಶಸ್ತಿ ಕಲಾವಿದರನ್ನು ಗೌರವಿಸುವ ಕಾರ್ಯಕ್ರಮ ಅನೂಚಾದಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಹಾಗಾಗಿ, ಕಟೀಲಿನ ಶ್ರೀದೇವಿ ಅವರನ್ನು ಹರಸಿ ಅನುಗ್ರಹಿಸಲಿ" ಎಂದು ಕಟೀಲಿನ ಪ್ರಧಾನ ಅರ್ಚಕ ವೇ|ಮೂ| ಲಕ್ಮೀನಾರಾಯಣ ಆಸ್ರಣ್ಣರು ಹೇಳಿದರು.
ಅವರು ಯಕ್ಷಪ್ರತಿಭೆ 16ನೇ ವರ್ಷದ ಆಸ್ರಣ್ಣ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದರು.
ಮಾಜಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡುತ್ತಾ "ಯಕ್ಷಗಾನದಂತಹ ಸಾಗರ ಸದೃಶ ಕಲೆಗೆ ಚೆನ್ನಾದ ಬೆಲೆ ಕೊಡಿಸಿದವರು ಪ್ರಾತಃ ಸ್ಮರಣೀಯರಾದ ಗೋಪಾಲಕೃಷ್ಣ ಆಸ್ರಣ್ಣರು. ಅವರ ಹೆಸರಿನಲ್ಲಿ ಆಸ್ರಣ್ಣ ಪ್ರಶಸ್ತಿಯನ್ನು ನೀಡಿ ಕಲೆಗೆ ಗೌರವವನ್ನು ನೀಡುತ್ತಾ ಬರುತ್ತಿರುವ ಸಂಜಯ ಕುಮಾರ್ ಶೆಟ್ಟರು ಅಭಿನಂದನೀಯರು. ನಿರಂತರವಾಗಿ "ದೇವಿಮಹಾತ್ಮೆ" ಒಂದೇ ಪ್ರಸಂಗವನ್ನು ಆಡಿಸಿಕೊಂಡು ಬಂದಿದ್ದಾರೆ. ಅವರ ಈ ಕಲಾವಿದರನ್ನು ಗೌರವಿಸುವ ಕಾರ್ಯಕ್ಕೆ ನಾವೆಲ್ಲಾ ಬೆಂಬಲ ನೀಡೋಣ. ಓರ್ವ ಕಲಾವಿದನಾಗಿ ಅವರು ಮಾಡುವ ಕೆಲಸ ದೇವರ ಕೆಲಸ ಇದು ನಿರಂತರವಾಗಿ ನಡೆಯಲಿ" ಎಂದು ಶುಭ ಹಾರೈಸಿದರು.
ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಅವರು ತಾವು ಸ್ಥಾಪಿಸಿದ ಯಕ್ಷ ಪ್ರತಿಭೆಯ ಬಗ್ಗೆ ಪ್ರಸ್ತಾಪಿಸಿ, ಅತಿಥಿ ಗಣ್ಯರನ್ನು ಸ್ವಾಗತಿಸಿದರು. ದಿ. ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿಯನ್ನು ಯಕ್ಷರಂಗದ ದೈತ್ಯ ಪ್ರತಿಭೆ ಸದಾಶಿವ ಶೆಟ್ಟಿಗಾರ್ ರಿಗೆ ನೀಡಿ, ಸನ್ಮಾನಿಸಲಾಯಿತು. ಆಸ್ರಣ್ಣರ ಸಂಸ್ಮರಣೆ ಮತ್ತು ಸನ್ಮಾನಿತರ ಅಭಿನಂದನಾ ಭಾಷಣವನ್ನು ಸಂಘಟಕ ಸುಧಾಕರ ರಾವ್ ಪೇಜಾವರ ನಡೆಸಿಕೊಟ್ಟರು.
ಅದಾನಿ ಗ್ರೂಪ್‌ನ ಕಿಶೋರ ಆಳ್ವ ಸಭಾಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪರು ಉಪಸ್ಥಿತರಿದ್ದರು.
ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ಅರುಣ್ ಐತಾಳ್ ಶುಭ ಹಾರೈಸಿದರು. ಒಡಿಯೂರು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ ಮಂಗಳಾದೇವಿ ಸೇವಾ ಸಮಿತಿಯ ದಿಲ್ ರಾಜ್ ಆಳ್ವ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಗುರುರಾಜ್ ಭಟ್, ಕೈರಂಗಳ, ವಿನಯಕುಮಾರ್ ಗುರುಪುರ ಮುಖ್ಯ ಅತಿಥಿಗಳಾಗಿದ್ದರು.
ಅಲ್ಲದೇ ವಿಶೇಷವಾಗಿ ಡಾ| ಪದ್ಮನಾಭ ಕಾಮತ್, ಜನಾರ್ದನ ಅಮ್ಮುಂಜೆ ಮತ್ತು ಪದ್ಮನ್ನೂರು ಪದ್ಮನಾಭ ಶೆಟ್ಟಿಗಾರರನ್ನೂ ಗೌರವಿಸಲಾಯಿತು.
ಲಯನ್ ಪ್ರಶಾಂತ್ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಕ್ಷಧ್ರುವ ಪಟ್ಟ ಸತೀಶ್ ಶೆಟ್ಟಿಯವರ ನೇತೃತ್ವ ಪಾವಂಜೆ ಮೇಳದ ಕಲಾವಿದರಿಂದ "ಶ್ರೀದೇವಿ ಮಹಾತ್ಮೆ" ಯಕ್ಷಗಾನ ಬಯಲಾಟ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ