ಜ್ಞಾನವನ್ನು ಹರಡುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು: ಶಾಸಕ ಚನ್ನಬಸಪ್ಪ

Upayuktha
0

ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಎರಡು ದಿನಗಳ ಶೈಕ್ಷಣಿಕ ವಸ್ತುಪ್ರದರ್ಶನಕ್ಕೆ ಚಾಲನೆ




ಶಿವಮೊಗ್ಗ: ಮಲ್ಲಿಗೇನಹಳ್ಳಿಯಲ್ಲಿರುವ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ನಡೆಯುವ ಎರಡು ದಿನಗಳ ಶೈಕ್ಷಣಿಕ ವಸ್ತು ಪ್ರದರ್ಶನವನ್ನು ಹಾಗೂ ಅನ್ವೇಷಣಾ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆಯ ಕಾರ್ಯಕ್ರಮವನ್ನು ಶಿವಮೊಗ್ಗದ ಶಾಸಕ ಚೆನ್ನಬಸಪ್ಪ (ಚೆನ್ನಿ) ಇವರು ಇಂದು (ಡಿ.6) ಉದ್ಘಾಟಿಸಿದರು.


ಬಳಿಕ ಮಾತನಾಡುತ್ತಾ ಶಿಕ್ಷಣವೆಂಬುದು ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಪಸರಿಸುವ ಕೌಶಲ್ಯವನ್ನು ಬೆಳೆಸಬೇಕು ಎಂದರು. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವಿವಿಧ ಮಾದರಿಗಳ ಮೂಲಕ ತಾವು ತರಗತಿಗಳಲ್ಲಿ ಪಡೆದ ಜ್ಞಾನವನ್ನು ಅತ್ಯುತ್ತಮವಾಗಿ ಪ್ರಸ್ತುತಪಡಿಸುವ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.


ದಿ ಅಶೋಕ್ ಪೈ ಅವರು ಹಲವರ ಜೀವನವನ್ವು ಉತ್ತಮ ಪಡಿಸಿದವರು. ಮಾನಸಿಕ ಆರೋಗ್ಯ ಪ್ರತಿಯೊಬ್ಬರಿಗೂ ಮುಖ್ಯ ಎಂಬುದನ್ನು ಮನೆ ಮನೆಗೂ ತಿಳಿಸಿಕೊಟ್ಟವರು. ಅವರ‌ ಹೆಸರಿನ ಈ ಶಿಕ್ಷಣ ಸಂಸ್ಥೆ ಅತ್ಯುತ್ತಮ ಯುವ ನಾಗರಿಕರನ್ನು ಬೆಳೆಸುತ್ತಿದೆ ಎಂದು ಶ್ಲಾಘಿಸಿದರು.


ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಸಮಾಜ ಕಾರ್ಯ ಸಮಾಜಶಾಸ್ತ್ರ ಇತಿಹಾಸ ಅರ್ಥಶಾಸ್ತ್ರ ಕಾಮರ್ಸ್ ಪ್ರಾಣಿಶಾಸ್ತ್ರ ರಸಾಯನಶಾಸ್ತ್ರ ಹಾಗೂ ಇಂಗ್ಲಿಷ್ ಕನ್ನಡ ಹಿಂದಿ ಭಾಷಾ ಶಾಸ್ತ್ರಗಳ ಕುರಿತು ತಯಾರಿಸಿದ ಮಾದರಿಗಳನ್ನು ಶಾಸಕರು ವೀಕ್ಷಿಸಿದರು. ಹಾಗೆಯೇ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಕಂಪ್ಯೂಟರ್ ಕುರಿತಂತೆ ನೀಡಿದ ಮಾಹಿತಿಗಳನ್ನು ಕೌತುಕದಿಂದ ಆಲಿಸಿದರು.



ತಮ್ಮ ಆಸಕ್ತಿಯ ವಿಷಯವಾದ ಮನಶಾಸ್ತ್ರ ವಿಭಾಗದ ವಸ್ತು ಪ್ರದರ್ಶನವನ್ನು ಕೂಲಂಕುಷವಾಗಿ ವೀಕ್ಷಣೆ ಮಾಡಿ, ಇದು ಪ್ರತಿಯೊಬ್ಬ ಮಗು, ವಿದ್ಯಾರ್ಥಿ, ಪೋಷಕರು ಹಾಗೂ ಶಿಕ್ಷಕರು ತಿಳಿದುಕೊಳ್ಳಬೇಕಾದ ವಿಷಯಗಳನ್ನು ಸರಳವಾಗಿ ಅರ್ಥೈಸಿಕೊಳ್ಳಲು ಅವಕಾಶವನ್ನು ಕಲ್ಪಿಸಿದೆ ಎಂದು ಹೇಳಿದರು.


ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಸಂಸ್ಥೆಯ ಎ. ಮಂಜುನಾಥ್, ಮಾನಸ ಸಂಸ್ಥೆಯ ನಿರ್ದೇಶಕಿ ಡಾಕ್ಟರ್ ರಜನಿ ಪೈ, ಪ್ರೊಫೆಸರ್ ರಾಜೇಂದ್ರ ಚೆನ್ನಿ, ಪ್ರೊಫೆಸರ್ ರಾಮಚಂದ್ರ ಬಾಳಿಗ, ಡಾಕ್ಟರ್ ಪ್ರೀತಿ ಶಾನುಭಾಗ್ ಹಾಗೂ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾಕ್ಟರ್ ಸಂಧ್ಯಾ ಕಾವೇರಿ ಉಪಸ್ಥಿತರಿದ್ದರು.


ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಮಂಜುನಾಥ ಸ್ವಾಮಿ ಹಾಗೂ ಎಲ್ಲ ಉಪನ್ಯಾಸಕರು ಈ ವಿಶೇಷ ಶೈಕ್ಷಣಿಕ ವಸ್ತು ಪ್ರದರ್ಶನದ ಸಂಯೋಜನೆಯಲ್ಲಿ ಕೈಜೋಡಿಸಿದ್ದಾರೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಆಸಕ್ತಿಯಿಂದ ತಾವೇ ತಯಾರಿಸಿದ ಮಾದರಿಗಳ ಮೂಲಕ ವಿವಿಧ ವಿಷಯಗಳನ್ನು ಪ್ರಸ್ತುತಪಡಿಸಿರುವುದು ಕಂಡುಬಂತು.



ಮೊದಲನೇ ದಿನವೇ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಸ್ತು ಪ್ರದರ್ಶನವನ್ನು ವೀಕ್ಷಿಸಿದರು ಎಂದು ಸಂಘಟಕರು ತಿಳಿಸಿರುತ್ತಾರೆ. ನಾಳೆ (ಡಿ.7) ವಸ್ತು ಪ್ರದರ್ಶನವನ್ನು ವೀಕ್ಷಿಸಲು ಬೆಳಗ್ಗೆ 10 ಗಂಟೆಯಿಂದ ಸಂಜೆ 4:00 ವರೆಗೆ ಅವಕಾಶವಿದೆ ಎಂದು ತಿಳಿಸಲಾಗಿದೆ.

ಮಕ್ಕಳ ಹಕ್ಕು, ಪರೀಕ್ಷಾ ಭಯ ನಿವಾರಣೆ, ಕಂಪ್ಯೂಟರ್ ಕೌತುಕ, ಮೊಬೈಲ್ ಅಡಿಕ್ಷನ್ ನಿವಾರಣೆ, ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರದ ಉಪಯೋಗ, ಪ್ರಾಣಿ ಲೋಕದ ವಿಷಯಗಳು, ರಸಾಯನಶಾಸ್ತ್ರದ ಬಳಕೆ, ನಮ್ಮ ಇತಿಹಾಸ, ನಮ್ಮ‌ ಭಾಷೆ- ಹೀಗೆ ಕಲಿಯಲು, ತಿಳಿಯಲು‌ ಒಂದು‌ ಅವಕಾಶವನ್ನು ‌ಈ ವಸ್ತು‌ಪ್ರದರ್ಶನ ಒದಗಿಸುತ್ತಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top