ಜವಾಬ್ದಾರಿ ಮರೆತ ಕುಮಟಾ ಶಾಸಕ: ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೇ ರೋಗಿಗಳ ಪರದಾಟ

Upayuktha
0


ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಮಧ್ಯಮರ್ತಿ ಸ್ಥಳವಾಗಿರುವ ಕುಮಟಾದಲ್ಲಿ ಅತ್ಯುತ್ತಮ ಎಂದು ಹೇಳಬಹುದಾದ ತಾಲೂಕಾ ಆಸ್ಪತ್ರೆ ಇದ್ದು, ಆಡಳಿತಾಧಿಕಾರಿ ಗಣೇಶ ನಾಯ್ಕರು ಬಹಳಷ್ಟು ಶ್ರಮಪಟ್ಟು ಆಸ್ಪತ್ರೆಯನ್ನು ಯಾವ ಖಾಸಗಿಗೂ ಕಡಿಮೆ ಇಲ್ಲದಂತೆ ಕ್ಲೀನ್ & ಕ್ಲೀಯರ್ ಆಗಿಟ್ಟಿದ್ದಾರೆ. ಆದರೆ ಇಲ್ಲಿ ಅವಶ್ಯವಾಗಿ ಇರಬೇಕಾದ ವೈದ್ಯರೇ ಇಲ್ಲ ಎಂಬ ಕೂಗು ನಿರಂತರವಾಗಿ ಕೇಳಿ ಬರುತ್ತಿದ್ದು, ಕ್ಷೇತ್ರದ ಶಾಸಕರು ತನ್ನ ಜವಾಬ್ದಾರಿಯನ್ನೇ ಮರೆತಿದ್ದಾರಾ? ಎನ್ನುವ ಪ್ರಶ್ನೆ ಆಸ್ಪತ್ರೆಗೆ ಬರುವ ಬಹುತೇಕರನ್ನು ಕಾಡಲಾರಂಭಿಸಿದೆ.


ಒಟ್ಟು ಮೂರು ಬಾರಿ ಶಾಸಕರಾಗಿರುವ ದಿನಕರ ಶೆಟ್ಟರು ರಾಜಕೀಯದಲ್ಲಿ ಸಾಕಷ್ಟು ಅನುಭವವುಳ್ಳವರಾಗಿದ್ದು, ಪ್ರಭಾವಿಯೂ ಆಗಿದ್ದಾರೆ. ಆದರೆ 

'ಏನಿದ್ದು ಏನುಪಯೋಗ, ಮನೆ ಮಕ್ಕಳು ಮಲಗಿರುವಾಗ' ಎನ್ನುವ ಗಾದೆಯಂತೆ ಅನುಭವ, ಪ್ರಭಾವಿ ಆದರೂ ಕ್ಷೇತ್ರಕ್ಕೆ ಉಪಯೋಗವಿಲ್ಲ ಎನ್ನುವಂತಾಗಿದೆ.


ಜಿಲ್ಲೆಯ ಮಧ್ಯವರ್ತಿ ಸ್ಥಳ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎನ್ನುವ ಕೂಗು ಕೇಳಲಾರಂಭಿಸಿ ದಶಕಗಳೇ ಕಳೆದಿದೆ. ಆದರೆ ಆಸ್ಪತ್ರೆ ಇನ್ನೂ ಕನಸಾಗೇ ಉಳಿದಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗುತ್ತದೋ ಇಲ್ಲವೋ, ಅದು ಬೇರೆ ವಿಚಾರ. ಆದರೆ ಅದು ಆಗುವವರೆಗಾದರೂ ಇದ್ದ ತಾಲೂಕಾಸ್ಪತ್ರೆಯನ್ನು ಚೆನ್ನಾಗಿಟ್ಟುಕೊಳ್ಳಬೇಕಲ್ಲವೇ? ತಾಲೂಕಾಸ್ಪತ್ರೆಯಲ್ಲಿ "ವೈದ್ಯರು ಲಭ್ಯರಿಲ್ಲ" ಎನ್ನುವ ಬೋರ್ಡು ರಾರಾಜಿಸುತ್ತಿದ್ದು, ಆಸ್ಪತ್ರೆಗೆ ಬಂದ ಜನ "ಕ್ಷೇತ್ರದಲ್ಲಿ ಶಾಸಕರು ಲಭ್ಯರಿದ್ದಾರಾ?" ಎಂದು ಪ್ರಶ್ನಿಸಲಾರಂಭಿಸಿದ್ದಾರೆ.


ಕುಮಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಸುಂದರ ಕಟ್ಟಡವಿದೆ, ಸರ್ಕಾರ ಮತ್ತು ಹಲವು ಸಂಘ-ಸಂಸ್ಥೆಗಳು ನೀಡಿದ ಅನೇಕ ಉಪಯುಕ್ತ ಉಪಕರಣಗಳಿವೆ. ಆದರೆ, ರೋಗಿಗಳನ್ನು ನೋಡಲು ಅವಶ್ಯವಾಗಿ ಇರಬೇಕಾದ ವೈದ್ಯರೇ ಇಲ್ಲವಾಗಿದೆ. ಜನಪ್ರತಿನಿಧಿ ಆದವರಿಗೆ ತನ್ನ ಕ್ಷೇತ್ರದ ಮತದಾರರ ಬಗ್ಗೆ ಕಾಳಜಿ ಇರಲೇ ಬೇಕು. ಕ್ಷೇತ್ರದ ಜನರ ಆರೋಗ್ಯದ ಹೊಣೆಯನ್ನು ಜನಪ್ರತಿನಿಧಿಗಳೇ ಹೊರಬೇಕು. ಆದರೆ ಕುಮಟಾದಲ್ಲಿ ಹಾಗಾಗುತ್ತಿಲ್ಲ. ಜನಪ್ರತಿನಿಧಿಗಳಿಗೆ ನಿಜಕ್ಕೂ ಕಾಳಜಿ ಇದ್ದರೆ ಅವರು ಆಸ್ಪತ್ರೆಯಲ್ಲಿ ಇಲ್ಲದ ವೈದ್ಯರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದರು. ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ತಜ್ಞರಿಲ್ಲದೆ ವರ್ಷಗಳೇ ಕಳೆದಿದೆ. ಹೆರಿಗೆ ತಜ್ಞರು ಇನ್ನು ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿದ್ದಾರಂತೆ! ಇನ್ನೂ ಕೆಲ ತಜ್ಞ ವೈದ್ಯರು ಆಸ್ಪತ್ರೆಗೆ ಎಷ್ಟು ಗಂಟೆಗೆ ಬರುತ್ತಾರೆ, ಯಾವಾಗ ಹೊರ ಹೋಗುತ್ತಾರೆ ಎನ್ನುವುದು ಖುದ್ದು ವೈದ್ಯರಿಗೇ ಗೊತ್ತಿರುವುದಿಲ್ಲ. ವ್ಯವಸ್ಥೆ ಹೀಗಾದರೆ ಹೇಗೆ?


ಚಳಿಗಾಲದಲ್ಲಿ ಇ.ಎನ್.ಟಿ. ವೈದ್ಯರ ಅಗತ್ಯವಿದೆ

ಇದು ಚಳಿಗಾಲವಾದ ಕಾರಣ ಪ್ರಕೃತಿ ಸಹಜವಾಗಿಯೇ ಮಕ್ಕಳು ಸಹಿತ ವಯಸ್ಕರೂ ಕೂಡ ನೆಗಡಿ, ಗಂಟಲು, ಕಿವಿ, ಮೂಗು ಮತ್ತಿತರ ಸಮಸ್ಯೆಗಳಿಂದ ಬಳಲುತ್ತಾರೆ. ಆದರೆ ಎಲ್ಲಾ ಇರುವ ಕುಮಟಾ ಆಸ್ಪತ್ರೆಯಲ್ಲಿ ಇ.ಎನ್.ಟಿ ವೈದ್ಯರೇ ಇಲ್ಲ. ಇದ್ದವರು ಬೇರೆಡೆ ವರ್ಗವಾಗಿ ಹೋಗಿ ವರ್ಷಗಳೇ ಕಳೆದಿದೆ. ಆದರೆ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟರಿಗೆ ತನ್ನ ಕ್ಷೇತ್ರಕ್ಕೆ ಒಬ್ಬ ನುರಿತ ಇ.ಎನ್.ಟಿ. ತಜ್ಞರನ್ನು ತರಬೇಕು ಎನ್ನುವುದು ಗೊತ್ತಾಗಿಲ್ಲವೇ?


ಕ್ಷೇತ್ರದ ಜನ ಈಗ ಬುದ್ಧಿವಂತರಾಗಿದ್ದಾರೆ. "ನಾನು ವಿರೋಧ ಪಕ್ಷದಲ್ಲಿದ್ದೆ. ಹಾಗಾಗಿ ನನ್ನ ಮಾತು ಸರ್ಕಾರದ ಮಟ್ಟದಲ್ಲಿ ನಡೆಯಲಿಲ್ಲ" ಎಂದು ಮುಂದಿನ ಚುನಾವಣೆ ಸಂದರ್ಭ ಗಿಣಿ ಪಾಠ ಹೇಳಿದರೆ ಜನ ನಂಬುವುದಿಲ್ಲ. ಹೀಗಾಗಿಯೇ ಕ್ಷೇತ್ರದ ಜನರು "ಶಾಸಕರು ತನ್ನ ಜವಾಬ್ದಾರಿಯನ್ನೇ ಮರೆತಿದ್ದಾರಾ?" ಎಂದು ಪ್ರಶ್ನೆ ಕೇಳಲಾರಂಭಿಸಿದ್ದಾರೆ.

(ಮಾಹಿತಿ: ಶ್ರೀಧರ ಕುಮಟಾಕರ)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top