ಬೆಂಗಳೂರು: ಅರಮನೆ ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ನಡೆಯುತ್ತಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಇಂದು ಮುಕ್ತಾಯಗೊಂಡಿದ್ದು, ಹವ್ಯಕ ಸಮಾಜದ ಸಂಸ್ಕೃತಿ, ಸಂಪ್ರದಾಯ, ಜೀವನ ವಿಧಾನವನ್ನು ಉಳಿಸುವ ನಿಟ್ಟಿನಲ್ಲಿ 8 ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿದೆ. ಅವುಗಳು ಇಂತಿವೆ:
1. ಆಧುನಿಕತೆಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಹವ್ಯಕರ ವಿಶಿಷ್ಟ ಸಂಸ್ಕೃತಿ ಸಂಪ್ರದಾಯ ಸಂಸ್ಕಾರಗಳನ್ನು ಒಳಗೊಂಡ ಹವ್ಯಕತ್ವವನ್ನು ಉಳಿಸಿ ಬೆಳೆಸುವಲ್ಲಿ ಬದ್ಧತೆಯನ್ನು ಕಾಪಾಡಿಕೊಳ್ಳುವುದು, ವ್ಯಸನ ಮುಕ್ತ ಸಮಾಜವಾಗಿ ಕಾಪಾಡಿಕೊಳ್ಳಲು ಪ್ರೇರೇಪಿಸುತ್ತದೆ.
2. ಹಳೆಗನ್ನಡಕ್ಕೆ ಸಮೀಪವಾದ, ವಿಶಿಷ್ಟ ಲಕ್ಷಣಗಳನ್ನು ಒಳಗೊಂಡ, ಭಾಷಾ ಶ್ರೀಮಂತಿಕೆಯಿಂದ ಕೂಡಿದ, ಹವ್ಯಕ ಕನ್ನಡವನ್ನು ಸಂರಕ್ಷಿಸುವಲ್ಲಿ ವಿಶೇಷ ಒತ್ತುಕೊಡುವ ದೃಷ್ಟಿಯಿಂದ 'ಹವ್ಯಕ ಅಧ್ಯಯನ ಪೀಠ'ವನ್ನು ಸ್ಥಾಪಿಸಲು ಘನ ಸರ್ಕಾರಕ್ಕೆ ಆಗ್ರಹಿಸುತ್ತದೆ.
3. ಗ್ರಾಮೀಣ ಭಾಗಗಳಲ್ಲಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು, ಅವಶ್ಯ ತರಬೇತಿ ಇತ್ಯಾದಿ ಮೂಲ ಸೌಕರ್ಯಗಳನ್ನು ಒದಗಿಸುತ್ತದೆ.
4. ಮಹಾಸಭೆಯ ಆಡಳಿತ ವಿಕೇಂದ್ರೀಕರಣದ ಮೂಲಕ ಹವ್ಯಕರು ಪ್ರಮುಖವಾಗಿ ಇರುವ ಪ್ರಾಂತ್ಯಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಘಟನೆಯನ್ನು ಬಲಗೊಳಿಸುವುದು ಹಾಗೂ ಸಂಸ್ಕೃತಿಯನ್ನು ಆರ್ಷ ಪರಂಪರೆಯನ್ನು ಉಳಿಸಿಕೊಳ್ಳುವುದು, ಜೊತೆಗೆ ಹವ್ಯಕ ಸಮಾಜವನ್ನು ಶ್ರೇಷ್ಠವಾಗಿರಿಸಿದ ಸಾಹಿತ್ಯ ಸಂಗೀತ, ನೃತ್ಯ ಯಕ್ಷಗಾನ ಇತ್ಯಾದಿ ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡುತ್ತದೆ.
5. ಅಪರ ಕಾರ್ಯಗಳನ್ನು ಶಾಸ್ರೋಕ್ತವಾಗಿ ನೆರವೇರಿಸಲು ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ 'ತರ್ಪಣ ಭವನ'ವನ್ನು ನಿರ್ಮಿಸುತ್ತದೆ.
6. ಹವ್ಯಕರ ಅವಿಭಾಜ್ಯ ಸಂಸ್ಕೃತಿಯಾದ ಪಾರಂಪರಿಕ ಅಡಿಕೆ ಹಾಗೂ ಇತರ ಕೃಷಿಗಳನ್ನು ಮುಂದುವರಿಸಿಕೊಂಡು ಕೃಷಿಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವ ಕುರಿತು ಸರ್ಕಾರಗಳನ್ನು ಆಗ್ರಹಿಸುತ್ತದೆ.
7. ಸಮ್ಮೇಳನದ ಫಲಶೃತಿಯ ಭಾಗವಾಗಿ ಹವ್ಯಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ಹಾಗೂ ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಹವ್ಯಕರು ಮುಂದೆ ಬರುವಂತೆ ಮೂಲ ಸೌಕರ್ಯಗಳನ್ನು ಒದಗಿಸುವುದರ ಜೊತೆ ಯುವ ಸಮುದಾಯವನ್ನು ಆಯಕಟ್ಟಿನ ಕ್ಷೇತ್ರದಲ್ಲಿ ಬೆಳೆಯಲು ಸಹಕಾರ ನೀಡುತ್ತದೆ.
8. ಜನಸಂಖ್ಯಾನಿಯಂತ್ರಣ ಮನಸ್ಥಿತಿಯಿಂದ ಯುವಜನರು ಹೊರಬರಲು ಪ್ರೇರೇಪಿಸುವುದು ಹಾಗೂ ನಶಿಸಿಹೋಗುತ್ತಿರುವ ವಿಶಿಷ್ಟ ಹವ್ಯಕ ತಳಿಯನ್ನು ಉಳಿಸಲು ಪ್ರೇರೇಪಣೆ ನೀಡುವುದರ ಮೂಲಕ ಹವ್ಯಕರ ಸಂಖ್ಯಾ ಬಲವನ್ನು ವೃದ್ಧಿಸುವುದು. ಜೊತೆಗೆ ಕೌಟುಂಬಿಕ ಸಾಮರಸ್ಯವನ್ನು ಪ್ರೋತ್ಸಾಹಿಸಿ ವಿಚ್ಛೇದನದ ಪಿಡುಗನ್ನು ನಿವಾರಿಸಲು ಶ್ರಮಿಸುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ