ಸಾಗರ: ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಇಸ್ಕಾನ್ ಸನ್ಯಾಸಿ ಚಿನ್ಮಯ್ ಕೃಷ್ಣಪ್ರಭು ಬಂಧಿಸಿರುವ ಧೋರಣೆ ವಿರುದ್ಧ ಬುಧವಾರ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಮೊಗ್ಗ ವಿಭಾಗದೆ ವಕ್ತಾರ ಲೋಹಿತಾಶ್ವ, ಕಳೆದ ನಾಲೈದು ತಿಂಗಳಿನಿಂದ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಅತ್ಯಂತ ಖಂಡನೀಯ ಎಂದರು.
ಜಡೆಕಾನುಕೇರಿ ಮಠದ ಶ್ರೀ ಅಮರೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಹಿಂದೂಧರ್ಮ ಉಳಿದರೆ ಮಾತ್ರ ನಾವೆಲ್ಲಾ ಉಳಿಯುತ್ತೇವೆ. ಹಿಂದೂ ಧರ್ಮವನ್ನು ಉಳಿಸಿ ಬೆಳೆಸಿಕೊಂಡು ಹೋಗುವತ್ತ ನಮ್ಮಚಿತ್ತ ನಮ್ಮ ಚಿತ್ರ ಇರಬೇಕು. ಧರ್ಮ ಮತ್ತು ದೇಶಕ್ಕಾಗಿ ನಾವು ಬೀದಿಗಿಳಿದು ಹೋರಾಟ ಮಾಡುವ ದುಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ. ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ಮಠಾಧೀಶರು ಒಕ್ಕೊರಲಿನ ಧ್ವನಿ ಎತ್ತಿದ್ದೇವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಕ್ಷಣ ನಿಲ್ಲಬೇಕು. ಇಲ್ಲವಾದಲ್ಲಿ ಇನ್ನಷ್ಟು ಉಗ್ರವಾದ ಪ್ರತಿಭಟನೆ ದೇಶಾದ್ಯಂತ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಹೊಸನಗರ ನಿಟ್ಟೂರು ಮಠದ ಶ್ರೀ ರೇಣುಕಾನಂದ ಸ್ವಾಮಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಶಾಸಕ ಚನ್ನಬಸಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ, ಭಜರಂಗ ದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂತೋಷ್ ಶಿವಾಜಿ ಮಾತನಾಡಿದರು.
ಸಭೆಯಲ್ಲಿ ಡಾ. ರಾಜನಂದನಿ, ಪ್ರಶಾಂತ್ ಕೆ.ಎಸ್., ಮಲ್ಲಿಕಾರ್ಜುನ ಹಕ್ಕೆ, ಸವಿತಾ ವಾಸು, ಕೆ.ವಿ.ಪ್ರವೀಣ್, ಐ.ವಿ.ಹೆಗಡೆ, ಸುಧೀಂದ್ರಕೆ. ಎಸ್., ಕೋಮಲ್ ರಾಘವೇಂದ್ರ, ಸುನೀಲ್ ರುದ್ರಪ್ಪ, ಅ.ಶ್ರೀ. ಆನಂದ್, ಅರಗ ಚಂದ್ರಶೇಖರ್, ಕೊಟ್ರಪ್ಪ ನೇದರವಳ್ಳಿ, ಪರಿವಾರದ ಪ್ರಮುಖರು, ನಗರಸಭಾ ಸದಸ್ಯರು, ಪರಿವಾರದ ವಿವಿಧ ಸ್ತರದ ಪ್ರಮುಖರು ಪಾಲ್ಗೊಂಡಿದ್ದರು. ಸುಮಾರು ಎರಡು ಸಾವಿರ ಜನ ಭಾಗವಹಿಸಿದ್ದರು. ಇದಕ್ಕೂ ಮೊದಲು ಮಹಾಗಣಪತಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ