ಹಾಸ್ಟೆಲ್ ಅಂದ್ಮೇಲೆ ಓದು, ಬರಹ ಜೊತೆಗೆ ಒಂದಷ್ಟು ತರ್ಲೆ ತಮಾಷೆಗಳು ಇದ್ದೇ ಇರುತ್ತವೆ. ಹೀಗೆ ಒಂದು ಭಾನುವಾರ ನನ್ನ ರೂಮ್ಮೇಟ್ಸ್ ಒಟ್ಟಾಗಿ ಅವರವರ ಪರಿಚಯದವರ ಫೋನ್ ನಂಬರ್ ಗಳನ್ನು ಎಕ್ಸ್‌ಚೇಂಜ್ ಮಾಡ್ಕೊಂಡು ಏನೇನೋ ಹೆಸರು ಊರು ಕಥೆಗಳನ್ನು ಕಟ್ಟಿ ನಿಮಗೆ ಲಾಟರಿ ಬಂದಿದೆ. ನಿಮ್ಗೆ ಕೊರಿಯರ್ ಬಂದಿದೆ ಅಂತೆಲ್ಲ ಯಾಮಾರಿಸಿ ಖುಷಿ ಪಡ್ತಾ ಇದ್ದರು. ನಾನು ಗಮನಿಸಿ ಸುಮ್ಮನಾದೆ.
ಈ ಪ್ರಾಂಕ್ ಆಟ ಅಷ್ಟಕ್ಕೇ ಮುಗಿಯದೆ ತೀವ್ರತೆ ಪಡೆದದ್ದು ಸರಿಗಮಪ ಆಡಿಷನ್ ಕೊಟ್ಟಿದ್ದ ಹುಡುಗಿಯೊಬ್ಬಳಿಗೆ ಕರೆ ಹೋದಾಗ. ಅವರ ಆಕೆಗೆ ನೀವು ಸರಿಗಮಪ ಮೊದಲನೇ ಸುತ್ತಿನಲ್ಲಿ ಆಯ್ಕೆ ಆಗಿದ್ದೀರಿ ಎರಡನೇ ಸುತ್ತಿಗೆ ಬೆಂಗಳೂರಿಗೆ ಬರ್ತೀರಾ ಈಗ್ಲೇ ಹೇಳಿ ಅಂತೆಲ್ಲ ಕಾಗೆ ಹಾರಿಸಿದ್ದರು. ಆಕೆಯು ನಂಬಿ ಇರಿ ಒಂದು ಹತ್ತು ನಿಮಿಷ ಹೇಳ್ತೀನಿ ಅಂತ ಕಾಲ್ ಕಟ್ ಮಾಡಿದ್ಲು. ಆಗ್ಲೇ ನೋಡಿ ಪ್ರಾಂಕ್ ಬಿಸಿ ಏರಿದ್ದು. ಆ ಹುಡುಗಿ ಅವರ ಮನೆಯವರಿಗೆ ಫೋನ್ ಮಾಡಿ ಒಂದು ಕ್ಷಣವೂ ಆ ಫೋನ್ ಕಾಲ್ ಯಾರು ಮಾಡಿದ್ದು ಏನನ್ನು ಯೋಚಿಸದೆ ಮನೆಯವರ ಹತ್ರ ಖುಷಿ ಹಂಚಿಕೊಂಡಿದ್ದಳು.
ಈ ಪ್ರಾಂಕ್ ಗುಂಪಿಗೆ ತಮ್ಮ ತಮಾಷೆಯ ಕರಾಳತೆ ಅರ್ಥವಾಗಿ ಮತ್ತೆ ಕಾಲ್ ಮಾಡಿ ಸತ್ಯ ಹೇಳಿದ್ರು. ಆ ಕಡೆಯ ಧ್ವನಿ ಈ ಬಾರಿ ಏನೂ ಮಾತಾಡದೆ ಕಾಲ್ ಕೊನೆಗೊಳಿಸಿತು. ಒಂದೆರಡು ನಿಮಿಷದ ನಂತರ ತಮ್ಮ ಪ್ರಾಂಕ್ ಗುಂಪಿನ ಮುಖದಲ್ಲಿದ್ದ ನಗು ಮಾಯವಾಗಿ ಒಂದು ಕ್ಷಣ ಮೌನ. ಒಂದೆರಡು ನಿಮಿಷದ ನಂತರ ತಮ್ಮ ಪ್ರಾಂಕ್‌ನ ಸದುದ್ದೇಶದ ಸಮರ್ಥನೆ ಅವರವನ್ನು ಅವರೇ ಸಮಾಧಾನ ಮಾಡಿಕೊಂಡರು. ಅಲ್ಲಿದ್ದ ಒಬ್ಬಳ ಕ್ಲೋಸ್ ಫ್ರೆಂಡ್ ಆ ಸರಿಗಮಪ ಆಡಿಷನ್ ಕೊಟ್ಟ ಹುಡುಗಿ. ಆದಾಗಿ ಅವರೆಲ್ಲ ಕ್ಷಮೆ ಕೇಳಿದ್ರು ಆಕೆ ಇವರನ್ನು ಕ್ಷಮಿಸಲಿಲ್ಲ. ತನ್ನ ಬೆಸ್ಟ್ ಫ್ರೆಂಡ್ ಈ ಪ್ರಾಂಕ್‌ನಲ್ಲಿ ಭಾಗಿಯಾಗಿದ್ಧಾಳೆ ಎಂದು ಗೊತ್ತಾಗಿ ಆಕೆಯೊಂದಿಗೆ ಮಾತು, ಸ್ನೇಹ ಎರಡಕ್ಕೂ ಬ್ರೇಕ್ ಹಾಕಿದ್ಲು.
ಅರಿವಿದ್ದೋ ಇಲ್ಲದೆಯೋ ತನ್ನ ಗೆಳತಿಯ ಮನ ನೋಯಿಸಿದ ಪಶ್ಚಾತ್ತಾಪ ಅವಳನ್ನು ಬಿಟ್ಟು ಬಿಡದೆ ಕಾಡಲು ಶುರು ಮಾಡಿತು. ಹಲವಾರು ಬಾರಿ ಕ್ಷಮೆ ಕೇಳಿದಳು. ಊಹೂ ಪ್ರಯೋಜನವಿಲ್ಲ. ಕೊನೆಗೆ ಸೋತು ಆ ಪ್ರಾಂಕ್ ನಿಜವಾಗ್ಲಿ ಎಂದು ಪ್ರಾರ್ಥಿಸಲು ಶುರುಮಾಡಿದಳು. ಇನ್ನು ಆ ದಡದಲ್ಲಿ ನಿಂತು ನೋಡಿದ್ರೆ ಆ ಫ್ರಾಂಕ್ ಕಾಲ್ ಆಕೆಗೆಷ್ಟು ನೋವುಂಟು ಮಾಡಿರಬಹುದು, ಸೆಲೆಕ್ಟ್ ಆದ ವಿಷಯ ಬರಿ ತನ್ನ ಗೆಳೆಯರ ತಲೆಹರಟೆ ಅಂಥ ಆಕೆಯ ಮನೆಯವರಿಗೆ ಹೇಳುವಾಗ ಎಷ್ಟು ಸಂಕಟವಾಗಿರಬಹುದು. ಏನೋ ಮಾಡಲು ಹೋಗಿ ಏನೋ ಆಯ್ತು ಅನ್ನೋ ಹಾಗೆ ಒಂದು ಪ್ರಾಂಕ್ ಒಂದು ಸ್ನೇಹವನ್ನೇ ಹಾಳುಗೆಡವಿತು.
ಹೀಗೆ ಅಲ್ವಾ ನಮ್ಮ ಅರೆಕ್ಷಣದ ತಮಾಷೆ ನಮ್ಮವರ ಮನಸನ್ನು ನೋಯಿಸಬಹುದು. ಎಷ್ಟೋ ಸಂಬಂಧಗಳನ್ನು ಕಹಿಯಾಗಿಸಬಹುದು. ಜೊತೆಗೆ ಪಶ್ಚಾತ್ತಾಪದ ಬಿಸಿ ಸುಡದೆ ಬಿಡದು. ಹೀಗಾಗಿ ಯಾರನ್ನಾದ್ರೂ ಪ್ರಾಂಕ್ ಮಾಡುವ ಮುನ್ನ ಯೋಚಿಸೋಣ.
- ನೈದಿಲೆ ಶೇಷೆಗೌಡ
ಎಸ್‌ಡಿಎಂ ಕಾಲೇಜು ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ