ಸ್ಮೃತಿ ಕೃತಿಗಳು ಮುಂದಿನ ತಲೆಮಾರಿಗೆ ದೀವಿಗೆ: ಎಡನೀರು ಶ್ರೀ

Upayuktha
0

ಕಣಿಪುರ ಶ್ರೀ ಗೋಪಾಲಕೃಷ್ಣ ದೇವಳದಲ್ಲಿ ಕುಂಬಳೆ ಶ್ರೀಧರ ರಾವ್ ಸ್ಮೃತಿ । ಕೃತಿ ಲೋಕಾರ್ಪಣೆ




ಕಾಸರಗೋಡು: ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ನಿರ್ವಹಿಸುತ್ತಿದ್ದ ಪಾತ್ರಗಳೆಲ್ಲವೂ ಗೌರವದ ಮಿತಿಯೊಳಗೆ ಅಭಿವ್ಯಕ್ತಿಸಲ್ಪಡುತ್ತಿತ್ತು. ಅವರ ಬಗೆಗಿನ ನೆನಪು ಸಂಚಿಕೆ ಪ್ರಕಟವಾಗಿರುವುದು ಶ್ಲಾಘನೀಯ. ಇದು ಮುಂದಿನ ತಲೆಮಾರಿಗೆ ಹಿರಿಯರೊಬ್ಬರ ಜೀವಿತದ ಕಾಲಘಟ್ಟ, ಅವರ ಕೊಡುಗೆ ಪರಿಚಯಿಸುವ ದೀವಿಗೆಯಾಗುತ್ತದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ. ಕುಂಬಳೆಯ ಶ್ರೀ ಕಣಿಪುರ ಗೋಪಾಲಕೃಷ್ಣ ದೇವಳದ ಸಭಾಭವನದಲ್ಲಿ ಭಾನುವಾರ ಜರುಗಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.


ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧರ ರಾಯರ ವ್ಯಕ್ತಿತ್ವ ಜ್ಞಾಪಿಸಿಕೊಂಡರು.


ಧರ್ಮಸ್ಥಳ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಧರ್ಮಸ್ಥಳ ಮೇಳವೊಂದರಲ್ಲೇ ಐದು ದಶಕಗಳ ಕಾಲ ನಿಷ್ಠೆಯಿಂದ ದುಡಿದವರು ಶ್ರೀಧರ ರಾಯರು. ಕಲಾನಿಷ್ಠನಾಗಿ, ಮೇಳನಿಷ್ಠನಾಗಿ ಮೃದು ಸ್ವಭಾವಗಳಿಂದ ಎಲ್ಲರ ಒಡನಾಡಿಯಾಗಿದ್ದರು ಎಂದರು.


ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಕುಂಬಳೆ ಶ್ರೀಧರ ರಾವ್ ಸ್ಮೃತಿ ಮಾಡಿ, ಶ್ರೀಧರ ರಾಯರ ದಮಯಂತಿ, ಸುಭದ್ರೆ, ಚಿತ್ರಾಂಗದೆ, ಕಯಾದು... ಮೊದಲಾದ ಪಾತ್ರಗಳು ತುಂಬಾ ಚೆನ್ನಾಗಿ ಹಾಗೂ ಅಚ್ಚುಕಟ್ಟಾಗಿ ಮೂಡಿಬರುತ್ತಿತ್ತು. ಇನ್ನೊಂದು ನೆನಪಿಸುವ ಪಾತ್ರ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ಬಲ್ಲಾಳ್ತಿ ಎಂದರು.


ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಸಂಪಾದಿತ ಶ್ರೀಧರ ರಾಯರ ಸ್ಮೃತಿ ಸಂಚಿಕೆ ‘ಕಲಾ ಶ್ರೀಧರ’ ಕೃತಿಯನ್ನು ಎಡನೀರು ಶ್ರೀಗಳು ಅನಾವರಣಗೊಳಿಸಿದರು.


ಕೃತಿ ಪ್ರಕಟಣೆಯ ಆಶಯವನ್ನು ನಾ. ಕಾರಂತ ವಿವರಿಸಿದರು. ಸ್ಮೃತಿ ಕೃತಿ ಸಮಿತಿಯ ಅಧ್ಯಕ್ಷ ಭಗವಾನ್‌ ದಾಸ್‌, ಶ್ರೀಧರ ರಾಯರ ಪತ್ನಿ ಸುಲೋಚನ ಇದ್ದರು. ಕುಂಬ್ಳೆ ಗೋಪಾಲ್ ಸ್ವಾಗತಿಸಿದರು. ಗಣೇಶ ಪ್ರಸಾದ್ ಕುಂಬ್ಳೆ ಹಾಗೂ ದೇವಿ ಪ್ರಸಾದ್ ಕುಂಬ್ಳೆ ಯತಿದ್ವಯರನ್ನು ಗೌರವಿಸಿದರು. ಸುಕುಮಾರ್ ಅನಂತಪುರ, ರಾಮಚಂದ್ರ ಬೆಂಗಳೂರು ಅತಿಥಿಗಳನ್ನು ಗೌರವಿಸಿದರು. ಕೃತಿ ಸಂಪಾದಕ ನಾ. ಕಾರಂತ ಪೆರಾಜೆ, ಮಾಣಿಲ ಮೇಳದ ಸಂಚಾಲಕ ಡಾ.ಸತೀಶ ಪುಣಿಂಚತ್ತಾಯರನ್ನು ಗೌರವಿಸಲಾಯಿತು. ಸಂಘಟಕ, ಅರ್ಥದಾರಿ ಉಜಿರೆ ಅಶೋಕ ಭಟ್ ನಿರ್ವಹಿಸಿದರು. ಭಗವಾನ ದಾಸ್‌ ವಂದಿಸಿದರು.


ಉದ್ಘಾಟನೆ: ‘ಕಲಾ ಶ್ರೀಧರ’ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಣಿಪುರದ ಪ್ರಧಾನ ಅರ್ಚಕ ವೇ.ಮೂ.ಮಾಧವ ಅಡಿಗಳು ಉದ್ಘಾಟಿಸಿದರು. ಧರ್ಮಸ್ಥಳ ಮೇಳದ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ನ್ಯಾಯವಾದಿ ಕಲಾರತ್ನ ಶಂನಾ ಅಡಿಗ ಇದ್ದರು. ನಾರಾಯಣ ರಾವ್ ಬೇರಿಕೆ, ಕೃಷ್ಣ ಮುಖಾರಿ, ರಾಮ ರಾವ್ ಬೇರಿಕೆ, ಪ್ರತಾಪ ಕುಂಬ್ಳೆ, ಅಶೋಕ್ ಕುಂಬ್ಳೆ, ಗೋಪಾಲಕೃಷ್ಣ ಸೂರಂಬೈಲು ಮೊದಲಾದವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಗುರುಮೂರ್ತಿ ನಾಯ್ಕಾಪು ನಿರ್ವಹಿಸಿ, ವಂದಿಸಿದರು.



ಕುಂಬಳೆ ಶ್ರೀಧರ ಪಾತ್ರಗಳನ್ನು ನೆನಪಿಸುವ ಎರಡು ಸನ್ನಿವೇಶವನ್ನು ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತು. ಅಪರಾಹ್ನ ‘ಕೃಷ್ಣ ಸಂಧಾನ’ ತಾಳಮದ್ದಳೆ ನಡೆಯಿತು. ಕಲಾವಿದರಾಗಿ- ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ (ಭಾಗವತರು), ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್, ರಾಮಮೂರ್ತಿ ಕುದ್ರೆಕೂಡ್ಲು, ಲವಕುಮಾರ್ ಐಲ (ಮದ್ದಳೆ- ಚೆಂಡೆ ವಾದನ ಕಲಾವಿದರು), ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಶಂಭು ಶರ್ಮ, ಗೋಪಾಲ ನಾಯಕ್ ಸೂರಂಬೈಲು, ಎಂ.ಕೆ.ರಮೇಶ ಆಚಾರ್ಯ, ವಸಂತ ಗೌಡ ಕಾಯರ್ತಡ್ಕ, ದಿವಾಕರ ಆಚಾರ್ಯ ಗೇರುಕಟ್ಟೆ, ಅಶೋಕ ಕುಂಬ್ಳೆ (ಅರ್ಥದಾರಿಗಳು) ಭಾಗವಹಿಸಿದ್ದರು.


ಕೊನೆಗೆ ಶ್ರೀ ಮಹಾಲಕ್ಷ್ಮೀ ಕೃಪಾಪೋಶಿತ ಯಕ್ಷಗಾನ ಮಂಡಳಿ, ಶ್ರೀಧಾಮ-ಮಾಣಿಲ ಇವರಿಂದ ‘ಕಂಸವಧೆ’ ಬಯಲಾಟ ನಡೆಯಿತು. ಒಟ್ಟೂ ಕಾರ್ಯಕ್ರಮಕ್ಕೆ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ ನಾರಾಯಣಮಂಗಲ, ಶ್ರೀ ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ ಶೇಡಿಕಾವು, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಹಾಗೂ ಕುಂಬಳೆ ಶ್ರೀಧರ ರಾವ್ ಅಭಿಮಾನಿಗಳು ಹೆಗಲೆಣೆ ನೀಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top