ಮೋಡ ಕವಿದಿರುವ ವಾತಾವರಣ, ಅದರ ಮಧ್ಯೆ ಮರೆಯಾದಂತಹ ಆ ಸೂರ್ಯನ ಕಿರಣ, ಇಳೆಗೆ ಮಳೆ ಮುತ್ತಿಟ್ಟಂತೆ ಗಿಡ- ಮರಗಳು ನಾಚಿಗೆಯ ಸ್ವಭಾವವನ್ನು ತೋರುತ್ತದೆ. ತಂಪು ಗಾಳಿ ಬೀಸುತ್ತಿದ್ದಂತೆ ತೆಂಗು- ಕಂಗು ನರ್ತಿಸಲು ಪ್ರಾರಂಭಿಸುತ್ತದೆ. ಮಳೆಯ ಹನಿಯು ಇಳೆಗೆ ಬಿದ್ದಂತೆ ಮೂಗಿಗೆ ಘಮ್ಮೆನ್ನುವ ಮಣ್ಣಿನ ಸುವಾಸನೆ. ಆ ಸುವಾಸನೆಯನ್ನು ಗ್ರಹಿಸಲು ಎಲ್ಲಿಲ್ಲದ ಕಾತುರ ನಮಗೆ. ಭೂಮಿಗೆ ಮಳೆಯ ಸ್ಪರ್ಶವಾಗುವ ಮುನ್ನ ರಾಶಿ ರಾಶಿ ಬಿಂದುಗಳ ಹಾರಾಟ ಶುರುವಾಗುತ್ತದೆ. ಒಟ್ಟಿಗೆ ಚಿಲಿಪಿಲಿ ಹಕ್ಕಿಗಳ ಆ ನಾದಸ್ವರ, ತಂಪಾದ ಗಾಳಿ, ಕವಿದಿರುವ ಮೋಡ ಈ ರೀತಿಯ ಸನ್ನಿವೇಶಗಳು ಮನಸ್ಸಿಗೆ ಒಂದು ರೀತಿಯ ಮುದ ನೀಡುತ್ತದೆ. ಅದರಲ್ಲೂ ಸಂಜೆಯ ವೇಳೆ ಮಳೆ ಶುರುವಾದರೆ ಸಾಕು... ಚುಮು ಚುಮು ಚಳಿಯಲ್ಲಿ, ಬಿಸಿ ಬಿಸಿ ಚಹಾದ ಜೊತೆ ಕರುಂ- ಕುರುಂ ತಿಂಡಿಯನ್ನು ಸವಿಯುವ ಸುಖವೇ ಬೇರೆ.
ಬಾಲ್ಯದ ದಿನಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಹನಿ ಹನಿ ಮಳೆಯ ಜೊತೆ ಆಟವಾಡುತ್ತಿದ್ದಾಗ ನಾವು ನಮ್ಮನ್ನೇ ಮರೆತುಬಿಡುತ್ತಿದ್ದೆವು. ಅದರಲ್ಲೂ ಹಳ್ಳಿ ಮಕ್ಕಳಿಗಂತೂ ಎಲ್ಲೂ ಇಲ್ಲದ ಸಂಭ್ರಮ. ಕೆಸರಿನಲ್ಲಿ ಬಿದ್ದು ಎದ್ದು ಮೈಯ್ಯಲ್ಲಿ ಸಂಪೂರ್ಣ ಕೆಸರು ಮಾಡಿಕೊಂಡು ಅಮ್ಮನಿಂದ ಎರಡು ಏಟು ಬೀಳುವ ಮುನ್ನ ಅಲ್ಲಿಂದ ಪಲಾಯಣಗೊಳ್ಳುತ್ತಿದ್ದೆವು. ಹಿಂದಿನ ದಿನಗಳಲ್ಲಿ ಕಳೆದ ಕ್ಷಣಗಳು ಯಾವತ್ತೂ ನಮಗೆ ಅಚ್ಛಳಿಯಾಗಿ ನೆನಪಿನಲ್ಲಿ ಉಳಿದುಕೊಂಡಿರುತ್ತದೆ. ಆದರೆ ಈಗಿನ ದಿನಗಳಲ್ಲಿ ಹಿಂದಿನ ದಿನಗಳ ನೆನಪುಗಳು ಮೆಲುಕು ಹಾಕಬಹುದೇ ಹೊರತು ಪ್ರಸ್ತುತ ದಿನಗಳಲ್ಲಿ ಈ ರೀತಿಯ ಕ್ಷಣಗಳು ಕಾಣಲು ಸಿಗುವುದು ಅಪರೂಪವೇ ಸರಿ.
- ಭೂಮಿಕಾ ನಿರಂಜನ್
ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ