ನೋಡ್ ನೋಡ್ತಾ ಹಳೆ ವರ್ಷ ಕಳೆದು ಹೊಸ ವರ್ಷ ಬಂದೇ ಬಿಡ್ತು. ಅದೇನೇನೋ ಕನಸು, ಅದೇನೇನೋ ಆಸೆ ಹೊತ್ತು ನಡೆಸಿದ ಈ ವರ್ಷಕ್ಕೆ ಇದೀಗ ಪೂರ್ಣವಿರಾಮ. ಅದೆಷ್ಟೋ ಜೀವಕೆ ಈ ವರ್ಷ ಹರುಷ ತಂದಿರಬಹುದು, ಅದೆಷ್ಟೋ ಜೀವಕ್ಕೆ ನೋವು ಕೊಟ್ಟಿರಬಹುದು ಆದ್ರೆ ಬರುವ ವರ್ಷವಾದರೂ ಅಂದುಕೊಂಡದ್ದು ನೆರವೇರಲಿ, ಕನಸು ಕಂಡ ಮನಸುಗಳಿಗೆ ಸಮಾಧಾನ ಸಿಗಲಿ. ಮುಂಬರುವ ವರ್ಷ ವಾದರೂ ಎಲ್ಲಾ ಆಸೆಗಳು ಈಡೇರಲಿ ಅನ್ನೋ ಭಂಡ ಧೈರ್ಯ, ನಂಬಿಕೆಯಿಂದ ಹೊಸ ವರ್ಷಕ್ಕೆ ಹೆಜ್ಜೆ ಇಡುವ.
ಹೊಸ ವರ್ಷಕ್ಕೆ ಆಸೆಗಳ ಮೂಟೆ ಹೊತ್ತು ಕಾಲಿಡುವ ಮುನ್ನ ಒಂದು ಕೆಲಸ ಮಾಡಿ. ನಿಮಗೆ ನೆಮ್ಮದಿ ಸಿಗುವ ಜಾಗದಲ್ಲಿ ಏಕಾಂಗಿಯಾಗಿ ಕೂತು ಒಮ್ಮೆ ಯೋಚಿಸಿ. ಈ ವರ್ಷ ನಿಮ್ಮೊಟ್ಟಿತಿಗೆ ಇದ್ದವರಾರು? ಪ್ರೀತಿಯ ಸುರಿಮಳೆ ಸುರಿಸಿದವರಾರು? ಏನು ಬಯಸದೆ ನಿಮ್ಮ ಸಂಘ ಮಾಡಿದವರಾರು? ನಿಮ್ಮ ಒಂದು ಮುಗುಳು ನಗೆಗೆ ಹುಚ್ಚರಂತೆ ನಿಮ್ಮ ಆಸೆ ಈಡೇರಿಸಿದವರಾರು? ನಿಮ್ಮ ಹತ್ತಿರ ಎಲ್ಲಾ ಇದ್ದಾಗ ಬಂದವರಾರು? ಏನು ಇಲ್ಲದಾಗ ಕೈ ಬಿಟ್ಟವರಾರು? ಕಣ್ಣೀರು ತರೆಸಿದವರಾರು? ಅತ್ತಾಗ ಒರೆಸಿದವರಾರು? ಕೆಲಸಕ್ಕೆ ಬಳಸಿಕೊಂಡು ನಿಮ್ಮನ್ನು ದೂರ ಸರಿಸಿದವರಾರು? ಒಡಹುಟ್ಟಿದವರಿಗಿಂತ ಹೆಚ್ಚಿನ ಕಾಳಜಿ, ಪ್ರೀತಿ ತೋರಿಸಿದವರಾರು? ನಿಮ್ಮ ಪ್ರೀತಿ ಬಯಸಿ ನಿಸ್ವಾರ್ಥದಿ ನಿಮ್ಮ ಜೊತೆಗಿದ್ದು ಕಷ್ಟ ಸುಖಕೆ ಆದವರಾರು? ಹೀಗೆ ಕಳೆದು ಬಂದ, ನಡೆದು ಹೋದ ಎಲ್ಲಾ ಘಟನೆಗಳನ್ನು ಒಮ್ಮೆ ಮೆಲಕು ಹಾಕಿ. ತಪ್ಪಿದ್ದರೆ ಕ್ಷಮೆ ಕೇಳಿ, ಅಪಾರ್ಥ ಮಾಡಿಕೊಂಡಿದ್ದರೆ ಸರಿ ಪಡಸಿಕೊಂಡು ಹತ್ತಿರವಾಗಿ. ಕೊನೆವರೆಗೂ ಜೊತೆ ಇರುವೆ ಎಂದು ಆಣೆ ಮಾಡಿ ಚಿಕ್ಕ ಕಾರಣಕ್ಕೆ ಬಿಟ್ಟು ಹೋಗದೆ ವರ್ಷದ ಕೊನೆಯಲ್ಲಾದರೂ ಒಮ್ಮೆ ನಿಮ್ಮನ್ನು ತುಂಬಾ ಪ್ರೀತಿಸುವ ಹೃದಯದ ಬಗ್ಗೆ ತುಸು ಯೋಚಿಸಿ. ಎಲ್ಲಾ ಮುಗಿತು ಅಂತ ನೀವು ಅವರನ್ನ ಬಿಟ್ಟು ತುಂಬಾ ದೂರ ಹೋಗಿರಬಹುದು ಆದ್ರೆ ನಾಲ್ಕು ಹೆಜ್ಜೆ ಹಿಂದಕ್ಕೆ ಬಂದು ನೋಡಿ ಆ ಜೀವ ನಿಮಗಾಗಿ ಅಲ್ಲೇ ಕಾಯುತ್ತಾ ಮಂಕಾಗಿ ಕಾದು ಕೂತಿರುತ್ತೆ. ಬಂದು ರಮಿಸಿ, ಮುದ್ದಿಸಿ ಪ್ರೀತಿ ತೋರಿಸ್ಲಿ ಅಂತ ನೂರಾಸೆ ಹೊತ್ತು ಕಣ್ಣೀರು ಹಾಕುತ್ತಿರುತ್ತೆ. ಹೊಸ ವರ್ಷಕ್ಕೆ ಹಳೆಯ ಪ್ರೀತಿಯನೆಲ್ಲ ಹೊತ್ತು ಹೆಜ್ಜೆ ಇಡೋಣ..
ಪ್ರತಿಯೊಬ್ಬ ಮನುಷ್ಯನಲ್ಲಿ ಇರುವ ಕೆಟ್ಟು ಬುದ್ದಿ ಅಂದ್ರೆ ಯಾವುದೇ ಒಂದು ವಸ್ತುವನ್ನು ಪ್ರೀತಿಸುವಷ್ಟು ನೀವು ನಿಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುವುದಿಲ್ಲ. ವಸ್ತುವಿಗೆ ನೀಡುವ ಬೆಲೆ ಪ್ರೀತಿಸುವವರಿಗೆ ನೀಡುವದಿಲ್ಲ. ಹತ್ತಿರವಿದ್ದಾಗ ಒಬ್ಬ ವ್ಯಕ್ತಿಯ ಬೆಲೆ ಎಂದಿಗೂ ತಿಳಿಯುವದಿಲ್ಲ. ತಿಳಿದಾಗ ಆ ವ್ಯಕ್ತಿ ನಿಮ್ಮ ಜೊತೆಗೆ ಇರುವದಿಲ್ಲ. ನಿಮಗಾಗಿ, ನಿಮ್ಮ ಮಾತಿಗಾಗಿ ಕಾಯುತ್ತಾ ಕೂತಿರುತ್ತಾರೆ ಅಂದ್ರೆ ಅವರಿಗೆ ಮಾಡೋಕೆ ಬೇರೇನೂ ಕೆಲಸ ಇಲ್ಲ ಅಥವಾ ಮಾತಾಡೋಕೆ ಬೇರೆ ಯಾವ ವ್ಯಕ್ತಿ ಪರಿಚಯವಿಲ್ಲ ಅಂತ ಅರ್ಥ ಅಲ್ಲ. ಆ ಹೃದಯಕ್ಕೆ ನಿಮ್ಮನ್ನ ಬಿಟ್ಟಿರೋ ಶಕ್ತಿ ಇಲ್ಲ, ನಿಮ್ಮ ಜೊತೆ ಮಾತಾಡಿದಾಗ ಸಿಗುವ ನೆಮ್ಮದಿ ಬೇರೆಯವರ ಜೊತೆ ಮಾತಾಡಿದಾಗ ಸಿಗುವದಿಲ್ಲ ಎಂದರ್ಥ. ಓಡುತ್ತಿರುವ ಪ್ರಪಂಚದಲ್ಲಿ ಎಲ್ಲರೂ ಬ್ಯುಸಿ, ಎಷ್ಟಿದ್ದರು ಇನ್ನು ಸಮಯ ಕಡಿಮೆ ಬೀಳುತ್ತೆ, ಯಾವದೇ ವಸ್ತು ಕಳೆದು ಕೊಂಡಾಗ ಮತ್ತೆ ಸಿಗಬಹುದು ಆದ್ರೆ ಕಳೆದು ಕೊಂಡ ಸಮಯ ಮತ್ತೆ ಬರುವದೇ? ಅಂತದ್ರಲ್ಲಿ ನಿಮಗೆ ಅಂತ ಸಮಯ ಮಿಸಲಿಟ್ಟಿದ್ದಾರೆ ಅಂದ್ರೆ ಅದು ಸಾಮಾನ್ಯ ವಿಷಯನಾ? ಅದ್ರಲ್ಲೇ ಗೊತ್ತಾಗಲ್ವಾ ಅವರು ನಿಮ್ಮ ಮೇಲಿಟ್ಟಿರುವ ಪ್ರೀತಿ, ಗೌರವ ಎಂತದ್ದು ಅಂತ. ಅಂತವರನ್ನು ನೀವೇನಾದ್ರು ಕಳೆದು ಕೊಂಡ್ರೆ ನಿಮಗೆ ನಷ್ಟ ಹೊರತು ಮತ್ಯಾರಿಗಲ್ಲ.
ಬದಲಾವಣೆ ಅನಿವಾರ್ಯ ಅನ್ನುವಷ್ಟು ದೊಡ್ಡ ಪೆಟ್ಟು ಬಿದ್ದಾಗ ಮಾತ್ರ ಮನುಷ್ಯ ಬದಲಾಗುತ್ತಾನೆ. ಅಂತ ಬದಲಾವಣೆಯನ್ನು ಸರಿಪಡಿಸುವ ಶಕ್ತಿ ಇರುವದು ಬದಲಾವಣೆಗೆ ಕಾರಣವಾದವರಿಂದ ಮಾತ್ರ ಸಾಧ್ಯ. ಅದೆಷ್ಟೋ ವಿಷಯಗಳನ್ನ ಮರಿಬೇಕು ಅಂದ್ರು ಸಾಧ್ಯವಾಗಲ್ಲ, ಬೇಡ ಅದ ವಿಷಯ ನಿಮಿಷಕ್ಕೂ ತಲೆಯಲ್ಲಿ ಉಳಿಯಲ್ಲ. ಎಲ್ರಿಗೂ ದೇವರು ಕೊಟ್ಟ ಅಮೂಲ್ಯವಾದ ವರ ಅಂದ್ರೆ ಅದು ಮರೆವು. ಅದು ಇಲ್ಲದಿದ್ದರೆ ಈ ಭೂಮಿ ಮೇಲೆ ಯಾರು ಉಳಿಯೋಕೆ ಸಾಧ್ಯನೇ ಆಗ್ತಿರ್ಲಿಲ್ಲ. ಅದಕ್ಕೆ ಹೇಳೋದು ನೆನಪು ಮರೆವು ಎರಡೂ ದೇವರು ಕೊಟ್ಟ ವರದಾನ ಅಂತ. ಯಾವುದನ್ನು ನೆನಪಿಡಬೇಕು ಯಾವುದನ್ನು ಮರೆಯಬೇಕು ಎಂಬ ಅರಿವು ನಮಗಿದ್ದರೆ ಜೀವನದಲ್ಲಿ ಯಾವ ತೊಂದರೆಯೂ ಬಾರದು.
ಹೊಸ ವರ್ಷಕ್ಕೆ ಹೋಗುವ ಮುನ್ನ ಹಿಂದೆ ಕಲಿತ ಪಾಠವನ್ನು ಹೊತ್ತು ಹೋಗಿ ಏಕೆಂದರೆ ಸಮಯ ಮತ್ತು ಪರಿಸ್ಥಿತಿ ಎನ್ನುವುದು ಚಂಡಮಾರುತದ ಅಲೆಗಳಂತೆ, ಅಲೆಗಳ ಏರಿಳಿತಕ್ಕನುಸಾರವಾಗಿ ಈಜಿದವರು ದಡ ಸೇರುತ್ತಾರೆ. ಅಲೆಗಳೆದುರು ಈಜಲೊದವರು ಜೀವನದ ಗತಿಯಲ್ಲಿ ಕೊಚ್ಚಿ ಹೋಗುತ್ತಾರೆ. ಹಾಗೆಯೇ ಜೀವನದ ಪ್ರತಿ ನಡೆ ಮತ್ತು ನಿರ್ಧಾರ ತಪ್ಪಿದರೆ ಬರುವ ಪ್ರತಿಯೊಂದು ಸಮಸ್ಸೆಯು ಚಂಡಮಾರುತವಾಗಿ ಮಾರ್ಪಾಡಾಗುತ್ತದೆ. ಅತಿಯಾದ ಆಸೆಯಿಂದ ಸಿಗುವುದು ಕೇವಲ ನಿರಾಸೆ ಮತ್ತು ದುಃಖ, ಅತಿಯಾದ ನಂಬಿಕೆಯಿಂದ ಸಿಗುವುದು ನೋವು ಮತ್ತು ಬೇಸರ. ಅತಿಯಾದ ಪ್ರೀತಿಯಿಂದ ಸಿಗುವುದು ಮೋಸ ಮತ್ತು ವಂಚನೆ. ಆಸೆ, ನಂಬಿಕೆ ಮತ್ತು ಪ್ರೀತಿ ಈ ಮೂರನ್ನು ಮಿತವಾಗಿ ಬಯಸುವುದು ಮತ್ತು ಬಳಸುವುದು ಸುಖಕರ ಜೀವನಕ್ಕೆ ನಾಂದಿ ಮತ್ತು ಬುನಾದಿ.
ಕಾಲ ಜೀವನದ ಪಾಠ ಕಲಿಸುತ್ತದೆ, ಆದರೆ ಮನಸ್ಸಿನೊಳಗೆ ಅಡಗಿರುವ ನೋವು ಕಾಲದ ಜೊತೆ ಸಾಯುವುದಿಲ್ಲ. ಅದು ಸಾಯುವುದು ನಾವು ಸತ್ತಾಗಲೇ. ನಾವು ನೋವನ್ನು ಎಷ್ಟೇ ಮರೆತಿದ್ದೇವೆಂದು ಸುಮ್ಮನಿದ್ದರೂ ಒಂದಲ್ಲಾ ಒಂದು ದಿನ ಮನಸ್ಸಿನೊಳಗೆ ತೊಳಲಾಟವನ್ನುಂಟು ಮಾಡುತ್ತದೆ. ಇಷ್ಟು ಹಿಂಸೆ ಕೊಡುವ ನೋವುಗಳಿಗೆ ಉತ್ತರವೇ ಇಲ್ಲವೇ ಅಂತ ಯೋಚಿಸಿದರೆ ಕೆಲವು ನೋವುಗಳಿಗೆ ಉತ್ತರ ಸಿಗುವುದು ಕಷ್ಟವೇ. ನಮ್ಮ ಮನಸ್ಸಿನ ನೋವಿಗೆ ನಾವೇ ಮುಲಾಮು ಹಂಚ್ಚಿಕೊಳ್ಳಬೇಕು. ಅದು ಯಾರ ಮಾತನ್ನೂ ಕೇಳುವುದಿಲ್ಲ. ಕಿವಿಕೊಟ್ಟರೂ ಸಹ ಕೊನೆಗೆ ನಾನು ಅಂದಿಕೊಂಡಿದ್ದೇ ಸರಿ ಎಂದು ವಾದಿಸುತ್ತದೆ. ವಾಸ್ತವವಾಗಿ ಅದೇ ಸರಿ.
ಆದರೆ, ಅದು ನೆಗೆಟಿವ್ ನಿರ್ಧಾರವಾಗಿದ್ದರೆ ಖಂಡಿತ ತಪ್ಪು. ಪಾಸಿಟಿವ್ ನಿರ್ಧಾರವಾಗಿದ್ದರೆ ಖಂಡಿತ ಸರಿ. ಹೀಗೊಂದು ನಿರ್ಧಾರವನ್ನು ನಮ್ಮೊಳಗೆ ನಾವೇ ಗಟ್ಟಿಮಾಡಿಕೊಂಡರೆ ಎಂಥ ನೋವನ್ನೂ ಮೆಟ್ಟಿ ನಿಲ್ಲಬಹುದು. ಇದೇ ಬದುಕುವ ಕಲೆ. ಆದರೆ ಎಲ್ಲರಂತೆ ಹೇಗೆ ಬದುಕಬೇಕು ಎಂಬುದನ್ನು ನಾವೇ ಕಂಡುಕೊಳ್ಳಬೇಕು. ಎಷ್ಟೇ ನೋವಾದರೂ ಇದು ನನ್ನ ಬದುಕಿಗಿಂತ ದೊಡ್ಡದಲ್ಲ, ನಾನು ಬದುಕಬೇಕು, ನನಗೆ ನೋವು ಕೊಟ್ಟವರಿಗೆ ಬದುಕಿ ತೋರಿಸಬೇಕು ಎಂಬ ನಿರ್ಧಾರವಷ್ಟೇ ನಮ್ಮ ಕೈಹಿಡಿದು ಕೊನೆಯತನಕ ಮುನ್ನಡೆಸಬಲ್ಲದು ಎಂಬ ನಿರ್ಧಾರ ಮಾಡಿ ಹೊಸ ವರ್ಷಕ್ಕೆ ಕಾಲಿಡಬೇಕು. ಕಷ್ಟ ಅಂತ ಬಂದರೆ ಕರುಣೆ ತೋರಿ, ಇಷ್ಟ ಅಂತ ಬಂದ್ರೆ ಪ್ರೀತಿ ತೋರಿ, ನಿಮ್ಮ ನಂಬಿ ಬಂದವರಿಗೆ ಉಸಿರು ಇರುವ ತನಕ ಪ್ರೀತಿ ತೋರಿ ಕೊನೆವರಿಗೂ ಸ್ನೇಹಿತರಾಗಿ. ಪ್ರೀತಿನಾ ಹೃದಯದಿಂದ ಮಾಡು, ಮರಳಿ ಪ್ರೀತಿ ಸಿಗುತ್ತದೆ .ಅಧಿಕಾರದಿಂದ ಮಾಡಿದರೆ ಪ್ರೀತಿಯು ಇದ್ದೂ ಸತ್ತಹಾಗೆ.
ಪ್ರೀತಿ ಸಮುದ್ರದಲ್ಲಿ ಸಿಗುವ ಉಪ್ಪಿನ ಹಾಗೆ ಅದು ಯಾರಿಗೆ ಬೇಕಾದ್ರು ಸಿಗಬಹುದು, ಆದರೆ ಸ್ನೇಹ ಸಮುದ್ರದಲ್ಲಿ ಸಿಗುವ ಮುತ್ತಿನ ಹಾಗೆ ಅದೃಷ್ಟವಂತರಿಗೆ ಮಾತ್ರ ಸಿಗುತ್ತೆ. ಸಿಕ್ಕ ಮುತ್ತನ್ನು ಕಣ್ ರೆಪ್ಪೆಯಲ್ಲಿಟ್ಟು ಜೋಪಾನ ಮಾಡಿಕೊಳ್ಳಿ. ಕೈ ತಪ್ಪಿದರೆ ಬೇರೆಯವರ ಪಾಲಾಗುತ್ತೆ.
ನಿಮ್ಮ ನೆಮ್ಮದಿ ಹಾಳು ಮಾಡುವ ಯಾವುದೇ ವಸ್ತುವಾಗಲಿ, ವ್ಯಕ್ತಿ ಆಗಲಿ, ಅವು ಎಷ್ಟೇ ಬೆಲೆ ಬಾಳುತ್ತಿರಲಿ, ಅದನ್ನು ತೆಗೆದುಕೊಂಡು ಡಸ್ಟ್ ಬಿನ್‌ಗೆ ಹಾಕಿ. ನಿಮ್ಮನ್ನು ಪ್ರೀತಿಸುವವರು ಎಂತವರೇ ಆಗಿರಲಿ ಈ ಹೊಸ ವರ್ಷ ಅಂತವರ ಜೊತೆ ನೆಮ್ಮದಿಯಾಗಿರಿ.
ನನ್ ಪ್ರಕಾರ ಪ್ರೀತಿ, ನಗು ಹಂಚಿದಷ್ಟು ಹೆಚ್ಚಾಗುತ್ತೆ. ಇದೆರಡಕ್ಕೂ ಹಣ ಕೊಡ್ಬೇಕಾಗಿಲ್ಲ, ಹಣ ಕೊಟ್ರೆ ಇದು ಸಿಗುವಂತದ್ದು ಅಲ್ಲಾ. ಆದ್ರೆ ಇವು ಜೀವನ ಸಾಗಿಸೋಕೆ ತುಂಬಾ ಅವಶ್ಯಕ. ನಾವು ನಗುವದರ ಜೊತೆಗೆ ಇನ್ನೊಬ್ಬರನ್ನ ನಗೋಸೋದ್ರಲ್ಲಿ ತುಂಬಾ ನೆಮ್ಮದಿ ಇದೆ.

- ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ