ಉಜಿರೆ: ಸಾರ್ವಜನಿಕ ಗ್ರಂಥಾಲಯಗಳಿಗೆ ಮಾದರಿಯಾಗುವಂತೆ ಉಜಿರೆಯಲ್ಲಿ ಆರಿವು ಕೇಂದ್ರ ರೂಪುಗೊಂಡಿದೆ. ಉಜಿರೆ ಗ್ರಾಮಪಂಚಾಯತ್ ಕಟ್ಟಡದಲ್ಲಿರುವ ಗ್ರಂಥಾಲಯವು ಸಂಘ ಸಂಸ್ಥೆಗಳು ಮತ್ತು ದಾನಿಗಳ ನೆರವಿನಿಂದ ಸುಸಜ್ಜಿತ ಡಿಜಿಟಲ್ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಸಾಮಾನ್ಯವಾಗಿ ಗ್ರಂಥಾಲಯಗಳಲ್ಲಿ ಪುಸ್ತಕಗಳಿರುತ್ತವೆ ಎನ್ನುವುದು ತಿಳಿದಿದೆ. ಆದರೆ ಹೊಸ ಪರಿಕಲ್ಪನೆಯೊಂದಿಗೆ "ಅರಿವು "ಕೇಂದ್ರವನ್ನು ರೂಪಿಸಿರುವುದು ವಿಶೇಷವಾಗಿದೆ.
ಇತರ ಗ್ರಂಥಾಲಯಗಳಲ್ಲಿರುವಂತೆ ವಿವಿಧ ಪ್ರಕಾರಗಳ ಪುಸ್ತಕಗಳ ದೊಡ್ಡ ಸಂಗ್ರಹವೇ ಇಲ್ಲಿದೆ. ಆದರೆ ಈ ಅರಿವು ಕೇಂದ್ರವನ್ನು ಭಿನ್ನಗೊಳಿಸಿರುವುದು ಇಲ್ಲಿನ ಓದಿನ ವಾತಾವರಣ. ಇನ್ಫೋಸಿಸ್ ಸಂಸ್ಥೆ 4 ಕಂಪ್ಯೂಟರ್‌ಗಳನ್ನು ಒದಗಿಸಿಕೊಟ್ಟು ಇದೊಂದು ಡಿಜಿಟಲ್ ಗ್ರಂಥಾಲಯವಾಗಲು ಕಾರಣವಾಗಿವೆ. ಈ ಗ್ರಂಥಾಲಯದಲ್ಲಿ ಮಾಹಿತಿಯುತ ಕಾರ್ಯಕ್ರಮಗಳ ಟಿವಿಯನ್ನು ವೀಕ್ಷಣೆಗಾಗಿ ಅಳವಡಿಸಲಾಗಿದೆ.
ಮೂರು ಸಾವಿರ ಸದಸ್ಯತ್ವ:
ಅರಿವು ಕೇಂದ್ರದ ಸದಸ್ಯತ್ವ ನೋಂದಣಿ ಅಭಿಯಾನದ ಅಂಗವಾಗಿ ಮೂರು ಸಾವಿರಕ್ಕೂ ಹೆಚ್ಚು ಜನರು ಇಲ್ಲಿನ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಕೇಂದ್ರವನ್ನು ವ್ಯವಸ್ಥಿತವಾಗಿ ರೂಪುಗೊಳಿಸಿರುವು ದರಿಂದ ರಾಜ್ಯದಲ್ಲೇ ಉತ್ತಮ ಗ್ರಂಥಾಲಯ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಈ ಕೇಂದ್ರದಲ್ಲಿ ಮಕ್ಕಳ ಪುಸ್ತಕ ವಿಭಾಗವನ್ನು ಸೊಗಸಾಗಿ ರೂಪಿಸಲಾಗಿದೆ. ಗೋಡೆಗಳಿಗೆ ಪೈಂಟಿಂಗ್ ಮಾಡಿ ಮಕ್ಕಳಲ್ಲಿ ಅಕ್ಷರ ಪ್ರೀತಿ ಬಿತ್ತಲು ಪ್ರಯತ್ನಿಸಲಾಗುತ್ತಿದೆ. ಮಕ್ಕಳ ಸಾಹಿತ್ಯದ ಚಿತ್ರಪಟಗಳ ಪುಸ್ತಕಗಳನ್ನು ನೀಡಿ ಮಕ್ಕಳನ್ನು ಓದಿನ ಕಡೆಗೆ ಸೆಳೆಯಲಾಗುತ್ತಿದೆ. ಸಣ್ಣ ಮಕ್ಕಳಿಗೆ ಆಟಗಳ ಮೂಲಕ ಪುಸ್ತಕಗಳನ್ನು ಪರಿಚಯಿಸಿ ಅವರಲ್ಲಿ ನಿರಂತರ ಓದುವಿಕೆಯ ಹವ್ಯಾಸವನ್ನು ಬೆಳೆಸಲು ಕೈಗೊಂಡಿರುವ ಈ ಪ್ರಯತ್ನವು ಮಕ್ಕಳಲ್ಲಿ ಪುಸ್ತಕದ ಕಡೆಗೆ ಆಕರ್ಷಣೆ ಹೆಚ್ಚಿಸಲು ಕಾರಣವಾಗಿದೆ.
ಓದಿನ ನಡುವೆ ವಿರಾಮ ಬೇಕೆನಿಸಿದಾಗ ಒಂದಷ್ಟು ಹೊತ್ತು ಸಮಯ ಕಳೆಯಲು ಇಲ್ಲಿ ಆಟಗಳ ವ್ಯವಸ್ಥೆಯಿದೆ. ಚೆಸ್ ಮತ್ತು ಕೇರಂ ಆಟಕ್ಕೆ ಸಂಬಂಧಿಸಿದ ಪರಿಕರಗಳು ಇಲ್ಲಿದ್ದು ಓದುಗರು ದೀರ್ಘ ಓದಿನ ನಂತರ ಮನಸ್ಸನ್ನು ಹಗುರಗೊಳಿಸಲು ಇವುಗಳು ಪ್ರಯೋಜನಕಾರಿಯಾಗಿವೆ ಎಂದು ಇಲ್ಲಿನ ಗ್ರಂಥಪಾಲಕಿ ತಾರ ಎಸ್. ಗೌಡ ಅವರು ಹೇಳುತ್ತಾರೆ.
-ಶ್ರವಣ್ ನೀರಬಿದಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ