ನಮ್ಮ ದೇಹದ ತೂಕವನ್ನು ಸದಾಕಾಲ ಹೊರುವ ನಮ್ಮ ಪಾದ ಅತೀ ಹೆಚ್ಚು ಶೋಷಣೆಗೆ ಒಳಗಾಗುವ ದೇಹದ ಅಂಗವಾಗಿರುತ್ತದೆ. ಅತೀ ಹೆಚ್ಚು ಉಪಯೋಗಿಸಲ್ಪಡುವುದಕ್ಕಿಂತ ಹೆಚ್ಚು ದುರುಪಯೋಗ ವಾಗುವ ಅಂಗ ಪಾದ ಎಂದರೆ ಅತಿಶಯೋಕ್ತಿಯಾಗಲಾರದು. ರಚನಾತ್ಮಕವಾಗಿ ನಮ್ಮ ಕಾಲಿನಲ್ಲಿ 26 ಕ್ಕೂ ಹೆಚ್ಚು ಮೂಳೆಗಳು ಇದ್ದು ಸ್ನಾಯುಗಳು ಮತ್ತು ಅಸ್ಥಿರಜ್ಜೆಗಳ ಮುಖಾಂತರ ಒಂದಕ್ಕೊಂದು ಪೂರಕವಾಗಿ ಕೆಲಸಮಾಡಿ ದೇಹದ ತೂಕವನ್ನು ಹೊರುತ್ತದೆ. ಬಹಳ ಸಂಕೀರ್ಣವಾದ ರಚನೆ ಇರುವ ಮೂಳೆ, ಸ್ನಾಯು, ಕಾರ್ಟಿಲೇಜ್ ಅಲ್ಲದೆ ನರಗಳು, ರಕ್ತನಾಳಗಳು ಕೂಡ ಸೇರಿಕೊಂಡು ದೇಹದ ತೂಕ ನಿಭಾಯಿಸುವಲ್ಲಿ ಮಹತ್ತರದ ಪಾತ್ರ ವಹಿಸುತ್ತದೆ. ಇಂತಹ ಪಾದದ ಹಿಂಬಾಗ ಅಥವಾ ಹಿಮ್ಮಡಿಯಲ್ಲಿ ನೋವು ಬಂದರೆ ಬದುಕು ಅಸಹನೀಯವಾಗುತ್ತಾರೆ. ಸ್ನಾಯುಗಳ ಸವಕಳಿ, ಸ್ನಾಯುಗಳ ಉರಿಯೂತ, ನರದ ಸಮಸ್ಯೆ, ಮಧುಮೇಹದಿಂದ ಉಂಟಾಗುವ ಸಮಸ್ಯೆ ಹೀಗೆ ಹತ್ತು ಹಲವು ಕಾರಣಗಳಿಂದ ಹಿಮ್ಮಡಿ ನೋವು ಕಂಡುಬರುತ್ತದೆ.
ಕಾರಣಗಳು:
1. ಅತಿಯಾದ ಬೊಜ್ಜು ಮತ್ತು ಅತಿಯಾದ ದೇಹದ ತೂಕ.
2. ಮೂಳೆಗಳ ಸವಕಳಿ ಅಥವಾ ಅಸ್ಥಿರಂದ್ರತೆ ರೋಗ ಇದ್ದಲ್ಲಿ ಕಾಲಿನ ಎಲುಬುಗಳು ಸವೆದು ಹಿಮ್ಮಡಿ ನೋವು ಬರಬಹುದು.
3. ಮದುಮೇಹ ರೋಗ ಇರುವವರಲ್ಲಿ ನರದ ಸಮಸ್ಯೆ ಮತ್ತು ಅಸಮರ್ಪಕ ರಕ್ತದ ಪೂರೈಕೆಯಿಂದಾಗಿ ಸ್ನಾಯುಗಳ ಉರಿಯೂತ ಉಂಟಾಗಿ ಹಿಮ್ಮಡಿ ನೋವು ಬರುತ್ತದೆ.
4. ಅತಿಯಾದ ದೈಹಿಕ ಚಟುವಟಿಕೆ ಇರುವ ವ್ಯಕ್ತಿಗಳಲ್ಲಿ ಅಂದರೆ ಕ್ರೀಡಾಪಟುಗಳಲ್ಲಿ ಕಾಲುಗಳ ಮತ್ತು ಪಾದಗಳ ಮೇಲೆ ಅತಯಾದ ಒತ್ತಡ ಬಿದ್ದು ಹಿಮ್ಮಡಿ ನೋವು ಬರುವ ಸಾಧ್ಯತೆ ಇದೆ.
5. ಅಸಮರ್ಪಕ ಚಪ್ಪಲಿ ಬಳಕೆ, ಅತಿ ಎತ್ತರದ ಚಪ್ಪಲಿ ಬಳಕೆಯಿಂದಲೂ ಹಿಮ್ಮಡಿ ನೋವು ಬರುವ ಸಾಧ್ಯತೆ ಇದೆ.
6. ನಮ್ಮ ಪಾದ ಸಮತಟ್ಟಾದ ಜಾಗದಲ್ಲಿ ನಡೆಯಲು ಸೂಕ್ತವಾಗಿರುತ್ತದೆ. ಅಂಕುಡೊAಕಾದ ಜಾಗದಲ್ಲಿ ನಿರಂತರ ಓಡಾಟದಿಂದಲೂ ಹಿಮ್ಮಡಿ ನೋವು ಬರುವ ಸಾಧ್ಯತೆ ಇರುತ್ತದೆ. ಅಸಹಜ ನಡೆದಾಡುವ ಶೈಲಿಯಿಂದಲೂ ಹಿಮ್ಮಡಿ ನೋವು ಬರುವುದು.
7. ಪ್ಲಾಂಟರ್ ಫ್ಯಾಸೈಟಿಸ್ ಎನ್ನುವುದು ಹಿಮ್ಮಡಿ ನೋವಿಗೆ ಕಾರಣವಾಗುವ ಅತಿ ಪ್ರಮುಖ ಕಾರಣ. ನಮ್ಮ ಪಾದದಲ್ಲಿ ಮೂರು ಪದರಗಳಲ್ಲಿ ಮಾಂಸ ಖಂಡಗಳ ಹರಡಿಕೊಂಡಿದೆ. ಈ ಸ್ನಾಯುಗಳನ್ನು ಆವರಿಸುವ ಅಂಗಾಂಶಗಳನ್ನು ಅಥವಾ ಪದರಗಳನ್ನು ಸಂತುಕೋಶ ಎಂದು ಕರೆಯುತ್ತಾರೆ. ಈ ಪದರಕ್ಕೆ ಅತಿಯಾದ ಒತ್ತಡ ಬಿದ್ದಾಗ ನರಗಳ ಹೆಚ್ಚು ಸಂಕುಚಿತಗೊಂಡು ಉರಿಯೂತಕ್ಕೆ ಕಾರಣವಾಗಿ ಹಿಮ್ಮಡಿ ನೋವು ಬರುವ ಸಾಧ್ಯತೆ ಹೆಚ್ಚಾಗುತ್ತವೆ. ಇದನ್ನು ಪ್ಲಾಂಟರ್ ಫ್ಯಾಸೈಟಿಸ್ ಎನ್ನುತ್ತಾರೆ.
8. ಬಹಳ ಹೊತ್ತು ನಿಂತು ಕೆಲಸ ಮಾಡುವವರಿಗೂ ಈ ಹಿಮ್ಮಡಿ ನೋವು ಸಮಸ್ಯೆ ಹಚ್ಚು ಕಂಡುಬರುತ್ತದೆ.
9. ದೈಹಿಕವಾಗಿ ಸಕ್ರಿಯರಲ್ಲದ ಮಧ್ಯವಯಸ್ಸಿನ ಮಹಿಳೆ ಮತ್ತು ಪುರುಷರಲ್ಲಿ ಹಿಮ್ಮಡಿ ನೋವು ಹೆಚ್ಚು ಕಂಡುಬರುತ್ತದೆ.
10. ಗೌಟ್, ಸಂಧಿವಾತ, ಬರ್ಸೈಟಿಸ್ ಕಾರಣದಿಂದಲೂ ಹಿಮ್ಮಡಿ ನೋವು ಬರುವ ಸಾಧ್ಯತೆ ಇದೆ.
ತಡೆಗಟ್ಟುವುದು ಹೇಗೆ?
1. ದೇಹದ ತೂಕ ನಿಯಂತ್ರಿಸಬೇಕು. ಬೊಜ್ಜು ಕರಗಿಸಲೇಬೇಕು. ತೂಕ ಮತ್ತು ಬೊಜ್ಜು ಹೆಚ್ಚಾದಲ್ಲಿ ಮದುಮೇಹ, ಅಧಿಕ ರಕತದೊತ್ತಡ, ಹೃದಯಾಘಾತ ಹೀಗೆ ಹತ್ತು ಹಲವು ಸಮಸ್ಯೆ ಬಂದೇ ಬರುತ್ತದೆ.
2. ಗಟ್ಟಿ ನೆಲದಲ್ಲಿ ಓಡಾಡುವಾಗ ಮೆತ್ತನೆಯ ಚಪ್ಪಲಿ ಬಳಸಿ. ಹೈ ಹೀಲ್ಸ್ ಚಪ್ಪಲಿ ಮತ್ತು ಗಟ್ಟಿ ಚಪ್ಪಲಿ ಬಳಸಬೇಡಿ. ರಾತ್ರಿ ಹೊತ್ತು ಪಾದ ಹಿಮ್ಮಡಿ ಮತ್ತು ಸ್ನಾಯುಗಳಿಗೆ ಬಿಸಿ ನೀರಿನ ಶಾಖ, ಮಸಾಜ್ ಮತ್ತು ವಿಶ್ರಾಂತಿ ನೀಡಬೇಕು.
3. ಮೂಳೆಯ ಅಸ್ಥಿರಂದ್ರತೆ ಆಗದಂತೆ ಎಚ್ಚರವಹಿಸಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಕೊರತೆ ಆಗದಂತೆ ಎಚ್ಚರ ವಹಿಸಿ ಎಲುಬಿನ ಸಾಂದ್ರತೆ ಪರೀಕ್ಷಿಸಿ ಎಲುಬಿನ ಟೊಳ್ಳು ಮೂಳೆ ರೋಗ ಬರದಂತೆ ಎಚ್ಚರ ವಹಿಸಬೇಕು.
4. ಮದುಮೇಹ ರೋಗ ಇದ್ದಲ್ಲಿ ಅದನ್ನು ಸದಾಕಾಲ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
5. ಸದಾಕಾಲ ನಿಂತು ಕೆಲಸ ಮಾಡುವ ಅನಿವರ‍್ಯತೆ ಇದ್ದಲ್ಲಿ ನಡು ನಡುವೆ ಪಾದಕ್ಕೆ ವಿಶ್ರಾಂತಿ ನೀಡಿ ಮತ್ತು ಪಾದಗಳ ಬಗ್ಗೆ ವಿಶೇಷ ಆರೈಕೆ ನೀಡಲೇಬೇಕು.
6. ಕಳಪೆ ಗುಣಮಟ್ಟದ ಪಾದರಕ್ಷೆ ಬಳಸಬೇಡಿ. ಉತ್ತಮ ಗುಣಮಟ್ಟದ ಮೆತ್ತನೆಯ ಮತ್ತು ಪಾದದ ರಚನೆಗೆ ಪೂರಕವಾದ ಪಾದರಕ್ಷೆ ಧರಿಸಬೇಕು.
7. ಅನಗತ್ಯವಾಗಿ ನೋವುನಿವಾರಕ ಔಷದ ನಿರಂತರವಾಗಿ ಬಳಸಬೇಡಿ. ಹಿಮ್ಮಡಿ ನೋವು ಇದ್ದಲ್ಲಿ ನಿರಂತರ ಪಿಸಿಯೋಥೆರಪಿ ಮತ್ತು ಮಸಾಜ್ ಮಾಡಿಸಿಕೊಳ್ಳುವುದು ಸೂಕ್ತ.
ಚಿಕಿತ್ಸೆ ಹೇಗೆ?
1. ನಿರಂತರ ಪಾದದ ವ್ಯಾಯಾಮಗಳನ್ನು ಮಾಡುತ್ತಿರಬೇಕು.
2. ಬರಿಗಾಲಲ್ಲಿ ನಡೆಯುವುದನ್ನು ನಿಲ್ಲಿಸಬೇಕು. ಹಿತವಾದ ಮೃದುವದ ಚಪ್ಪಲಿ ಧರಿಸಬೇಕು.
3. ದೈಹಿಕ ಚಟುವಟಿಕೆ ನಿಯಂತ್ರಿಸಬೇಕು. ರಾತ್ರಿ ಹೊತ್ತು ಪಾದಕ್ಕೆ ಐಸ್ ಮಸಾಜ್ ನೀಡಬೇಕು.
4. ಅತಿಯಾದ ಉರಿಯೂತ ಇದ್ದಲ್ಲಿ ಪಾದಕ್ಕೆ ಸ್ಟಿರಾಯ್ಡ್ ಇಂಜಕ್ಷನ್ ನೀಡಬಹುದು. ಕನಿಷ್ಟ ನೋವು ಇದ್ದಲ್ಲಿ ನೋವು ನಿವಾರಕದಿಂದ ಸ್ನಾಯು ಸೆಳೆತ ಮತ್ತು ಉರಿಯೂತ ನಿಯಂತ್ರಣಕ್ಕೆ ಬರುತ್ತದೆ.
5. ಮಧುಮೇಹಕ್ಕೆ ಚಿಕಿತ್ಸೆ ಪಡೆದು ಸಕ್ಕರೆ ಅಂಶ ನಿಯಂತ್ರಿಸಬೇಕು.
6. ನಿರಂತರ ಫಿಸಿಯಾಥೆರಪಿ ಮತ್ತು ಮಸಾಜ್ ಮಾಡಿ ಹಿಮ್ಮಡಿ ನೋವು ಶಮನ ಮಾಡಲು ಸಾಧ್ಯವಿದೆ.
ಕೊನೆಮಾತು:
ಹಿಮ್ಮಡಿ ನೋವು ಪ್ರತೀ ಮದ್ಯ ವಯಸ್ಸಿನ ಮಹಿಳೆ ಮತ್ತು ಪುರುಷರು ಅನುಭವಿಸುವ ಸಾಮಾನ್ಯ ಕಾಯಿಲೆ. ಹತ್ತು ಹಲವು ಕಾರಣಗಳಿಂದ ಹಿಮ್ಮಡಿ ಬರುವ ಸಾಧ್ಯತೆ ಇರುತ್ತದೆ. ದೇಹದ ತೂಕದ ನಿಯಂತ್ರಣ ಅತೀ ಅಗತ್ಯ. ನಿರಂತರವಾಗಿ ಪಾದದ ಆರೈಕೆ ಮತ್ತು ಪೋಷಣೆ ಮಾಡಿ ಕಾಲುಗಳು ಮತ್ತು ಪಾದಗಳ ಆರೋಗ್ಯ ಕಾಪಾಡಿಕೊಳ್ಳುವುದರಲ್ಲಿ ಜಾಣತನ ಅಡಗಿದೆ.
-ಡಾ|| ಮುರಳಿ ಮೋಹನ್‌ಚೂಂತಾರು
BDS, MDS, DNB, MBA, MOSRCR Ed
ಬಾಯಿ ಮುಖ ಮತ್ತು ದವಡೆ ಶಸ್ತç ಚಿಕಿತ್ಸಕರು
9845135787
drmuraleemohan@gmail.com
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ