ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಗೆ ಸಿದ್ಧತೆ ಮಾಡಿ: ಉಡುಪಿ ಡಿಸಿ ಸೂಚನೆ

Upayuktha
0


ಉಡುಪಿ: ಜಿಲ್ಲೆಯ ಕಾರ್ಮಿಕರಿಗೆ ಅನುಕೂಲವಾಗುವಂತೆ ಜಿಲ್ಲಾ ಕಾರ್ಮಿಕ   ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘವನ್ನು ತೆರೆಯಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು ಜಿಲ್ಲೆಯ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.


ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಹೊಸದಾಗಿ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ(ನಿ) ಸ್ಥಾಪನೆ ಕುರಿತು ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಜಿಲ್ಲೆಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಯಿಂದ ಕಾರ್ಮಿಕರು, ಹೊರ ಗುತ್ತಿಗೆದಾರರು, ವಿವಿಧ ಆರ್ಥಿಕ ಲಾಭಗಳನ್ನು ಪಡೆಯಲು ಅನುಕೂಲವಾಗುವ ದರ ಜೊತೆಗೆ ಸರಕಾರದ ವಿವಿಧ ಇಲಾಖೆಗಳು ಹಾಗೂ ಇವುಗಳ ಅಧೀನದಲ್ಲಿ ಬರುವ ನಿಗಮ ಮಂಡಳಿ ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರ ಸೇವೆಗಳನ್ನು ಒದಗಿಸಲು  ಅನುಕೂಲವಾಗಲಿದೆ. ಹೊರಗುತ್ತಿಗೆದಾರರ ವೇತನ ಪಾವತಿ, ಇ.ಎಸ್.ಐ, ಪಿ.ಎಫ್ ಮುಂತಾದ ಶಾಸನಾತ್ಮಕ ಸೌಲಭಗಳನ್ನು ನೌಕರರಿಗೆ ಒದಗಿಸುವ ಮೂಲಕ ಯಾವುದೇ ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬಹುದಾಗಿದೆ ಎಂದರು. 


ರಾಜ್ಯದಲ್ಲಿ ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಈ ರೀತಿಯ ಸಂಘಗಳನ್ನು ಸ್ಥಾಪಿಸಿ, ಈ ಸಂಘದ ಮೂಲಕ ಹೊರ ಗುತ್ತಿಗೆ ನೌಕರರನ್ನು ವಿವಿಧ ಇಲಾಖೆಗಳಿಗೆ ನಿಯೋಜಿಸಿದೆ. ಹಾಗೂ ಅವರಿಗೆ ವೇತನ ಸೇರಿದಂತೆ ಮತ್ತಿತರ ಶಾಸನಾತ್ಮಕವಾಗಿ ನೀಡಬೇಕಾದ ಸೇವೆಗಳು ಯಾವುದೇ ಸಂಸ್ಯೆಗಳಿಲ್ಲದೆ ಸರಳವಾಗಿ ನೀಡುವುದರೊಂದಿಗೆ ಯಶಸ್ವಿಯಾಗಿದೆ. ಇದನ್ನು ಈ ಜಿಲ್ಲೆಯಲ್ಲಿಯೂ ಅನುಷ್ಠಾನಗೊಳಿಸಬೇಕು ಎಂದರು.


ಸಂಘದ ಪ್ರಾರಂಭಕ್ಕೆ ಅಗತ್ಯವಿರುವ ಕಚೇರಿ, ಸಂಘದ ಬೈಲಾ, ಅಡ್ಹಾಕ್ ಸಮಿತಿ ಸೇರಿದಂತೆ ಮತ್ತಿತರ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡು ಶೀಘ್ರದಲ್ಲಿಯೇ ಸಂಘ ಸ್ಥಾಪನೆಗೆ ಮುಂದಾಗಬೇಕು ಎಂದ ಅವರು, ಪ್ರಸ್ತುತ ಚಾಲ್ತಿಯಲಿರುವ ಕಾರ್ಮಿಕ ಇಲಾಖೆಗಳ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಜಿಲ್ಲೆಯ ತಂಡ ಭೇಟಿ ನೀಡಿ, ವೀಕ್ಷಿಸಿ ಮಾಹಿತಿ ಕಲೆ ಹಾಕಬೇಕು ಎಂದರು.


ಜಿಲೆಯಲ್ಲಿ ವಿವಿಧ ಇಲಾಖೆಗಳಲ್ಲಿ 2080 ಕ್ಕೂ ಹೆಚ್ಚು ಜನ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುತ್ತಾರೆ ಎಂದ ಅವರು, ಕೆಲವು ಗುತ್ತಿಗೆ ಸಂಸ್ಥೆಗಳು ತಮಗೆ ಸರಿಯಾಗಿ ವೇತನ, ಪಿ.ಎಫ್ ಸೇರಿದಂತೆ ಮತ್ತಿತರ ಕಾನೂನಾತ್ಮಕ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಅನೇಕ ಬಾರಿ ದೂರಿದ್ದಾರೆ. ಈ ರೀತಿಯ ವಿವಿಧೋದ್ದೇಶ ಸಂಘಗಳನ್ನು ಮಾಡಿಕೊಳ್ಳುವುದರಿಂದ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದರು. 


ವಿವಿಧೋದ್ದೇಶ ಸಹಕಾರ ಸಂಘ ಪ್ರಾರಂಭ ಕುರಿತು ಈಗಾಗಲೇ ಜಿಲ್ಲೆಯ ಅನೇಕ ಸರಕಾರಿ, ನಿಗಮ ಮಂಡಳಿ ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ಇದೇ ಡಿಸೆಂಬರ್ 12 ರಂದು ಸಭೆಯನ್ನು ಕರೆದು ಅವರೊಂದಿಗೆ ಸಾಧಕ-ಬಾಧಕಗಳನ್ನು ಚರ್ಚಿಸಲಾಗುವುದು ಎಂದರು. 


ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ.ಪಿ ಗಡದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಬಾಲ ಕಾರ್ಮಿಕ ಸಂಘದ ಯೋಜನಾಧಿಕಾರಿ ಅಮೃತ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು, ತಾಲೂಕು ತಹಶೀಲ್ದಾರ್ ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top