ಪ್ರಸಿದ್ಧ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್ ಜನ್ಮದಿನ
ಗಣಿತ ಲೋಕವೇ ಒಂದು ಸೋಜಿಗ. ಅಂಕಿ ಸಂಖ್ಯೆಗಳ ಲೋಕದ ವಿಸ್ಮಯ. ಬುದ್ಧಿಗೆ ಒಂದಷ್ಟು ಆಲೋಚನೆ. ಕೂಡುವ, ಕಳೆಯುವ, ಗುಣಿಸುವ, ಭಾಗಿಸುವ ಲೋಕದಲ್ಲಿ ಪಾದಾರ್ಪಣೆ ಮಾಡಿದರೆ ನಾವೇ ಮಾಯ. ಭಿನ್ನರಾಶಿಗಳ ವಿಭಿನ್ನತೆ, ಭಾಜ್ಯ - ಅವಿಭಾಜ್ಯ ಸಂಖ್ಯೆಗಳ ಸಾಗರದಲ್ಲಿ ಮೀಯುವ ಆನಂದವೇ ಆನಂದ.
ಗಣಿತಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದ್ದು, ಪ್ರಾಚೀನ ಕಾಲದಿಂದಲೂ ಗಣಿತದೊಡನೆ ಜ್ಞಾನವನ್ನು ಸಮ್ಮಿಳಿತಗೊಳಿಸಿದೆ. ವಿಶ್ವದ ಅದೆಷ್ಟೋ ರಾಷ್ಟ್ರಗಳು ಅಗೋಚರ ಸ್ಥಿತಿಯಲ್ಲಿದ್ದಾಗ ಭಾರತ ದೇಶವು ಗಣಿತ, ವಿಜ್ಞಾನ, ಕಲೆ, ವಾಸ್ತುಶಿಲ್ಪ, ಖಗೋಳಶಾಸ್ತ್ರ, ಜ್ಯೋತಿಷ್ಯಶಾಸ್ತ್ರ , ಜ್ಯಾಮಿತಿ, ರಾಜನೀತಿ ಮುಂತಾದ ಜ್ಞಾನವನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡಿದೆ.
ಭಾರತ ದೇಶ ತಪೋ ಭೂಮಿ. ಇಲ್ಲಿ ಸುಜ್ಞಾನಿಗಳು , ವಿಜ್ಞಾನಿಗಳು, ತತ್ವಜ್ಞಾನಿಗಳು, ಪಂಡಿತೋತ್ತಮರು, ಪ್ರಾಜ್ಞ ಮಹನೀಯರು, ಆಚಾರವಂತರು, ವಿಚಾರವಂತರು, ಋಷಿಮುನಿಗಳು, ಸಾಧು-ಸಂತರು ಜನ್ಮ ತಳೆದ ಪುಣ್ಯಭೂಮಿ. ಜ್ಞಾನ, ವಿಜ್ಞಾನ, ತತ್ವಜ್ಞಾನ, ವೈದ್ಯಕೀಯ, ವೈಚಾರಿಕ, ಭೂಗೋಳ, ಖಗೋಳ, ವೈಮಾನಿಕ , ರಾಜಕೀಯ, ಸೈನಿಕ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳಾದ ಕಲೆ, ಚಿತ್ರಕಲೆ, ವಾಸ್ತು ಶಿಲ್ಪ, ನೃತ್ಯ, ಸಂಗೀತ ಮತ್ತು ಸಾಹಿತ್ಯ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಪುರಾತನ ಕಾಲದಿಂದಲೂ ಭಾರತದ ಸಾಧನೆ ಮೇರು ಶಿಖರದಲ್ಲಿದೆ.
ಆರ್ಯಭಟ, ಬ್ರಹ್ಮಗುಪ್ತ, ಮಹಾವೀರ, ಭಾಸ್ಕರ, ಲೀಲಾವತಿ ಮುಂತಾದ ವಿದ್ವಾಂಸರು ಗಣಿತ ಶಾಸ್ತ್ರಕ್ಕೆ ಮಹತ್ವದ ಮಹೋನ್ನತ ಕೊಡುಗೆಗಳನ್ನು ನೀಡಿದ್ದಾರೆ. ಅಂತಹವರಲ್ಲಿ ಶ್ರೇಷ್ಠರೆನಿಸಿದ ಪ್ರಸಿದ್ಧ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್ ರವರು 1887 ರ ಡಿಸೆಂಬರ್ 22 ರಂದು ಮದ್ರಾಸ್ ಪ್ರಾಂತದ (ಈಗಿನ ತಮಿಳು ನಾಡು ) ಈರೋಡ್ ನಲ್ಲಿ ತಮಿಳು ಬ್ರಾಹ್ಮಣ ಅಯ್ಯಂಗಾರ್ ಕುಟಂಬದಲ್ಲಿ ಕುಪ್ಪುಸಾಮಿ ಶ್ರೀನಿವಾಸ ಅಯ್ಯಂಗಾರ್ ಮತ್ತು ಕೋಮಲತಮ್ಮಾಳ್ ದಂಪತಿಗಳ ಮಗನಾಗಿ ಜನಿಸಿದರು.
ಗಣಿತ ಲೋಕದಲ್ಲಿ ಅಸಾಮಾನ್ಯ ಪ್ರತಿಭೆಯಾಗಿ ಹೊರ ಹೊಮ್ಮಿದ ಇವರು ಎಲ್ಲರಿಗೂ ರಾಮಾನುಜನ್ ಎಂದೇ ಚಿರಪರಿಚಿತರು. ಅವರಿಗೆ "ಸಂಖ್ಯೆಗಳ ವೈಲಕ್ಷಣಗಳನ್ನು ನಂಬಲಸಾಧ್ಯವಾದಂಥ ರೀತಿಯಲ್ಲಿ ನೆನಪಿಡುವ ಅಪೂರ್ವ ಸಾಮರ್ಥ್ಯವಿತ್ತು " ಎಂದು ಹೇಳಲಾಗುತ್ತದೆ.
ಆದ್ದರಿಂದ ಭಾರತದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು 26 ಫೆಬ್ರವರಿ 2012 ರಂದು ಮದ್ರಾಸ್ ವಿಶ್ವವಿದ್ಯಾನಿಲಯ ದಲ್ಲಿ ಭಾರತೀಯ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ 125 ನೇ ಜನ್ಮದಿನದಂದು ಡಿಸೆಂಬರ್ 22 ನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರು 2012 ಅನ್ನು ರಾಷ್ಟ್ರೀಯ ಗಣಿತ ವರ್ಷವನ್ನಾಗಿ ಆಚರಿಸುವುದಾಗಿಯೂ ಘೋಷಿಸಿದರು. 2012 ರ ಭಾರತೀಯ ಅಂಚೆ ಚೀಟಿಯನ್ನು ರಾಷ್ಟ್ರೀಯ ಗಣಿತ ದಿನಾಚರಣೆಗೆ ಸಮರ್ಪಿಸಲಾಗಿದೆ ಮತ್ತು ಅದು ರಾಮಾನುಜನ್ ರವರ ಭಾವಚಿತ್ರವನ್ನೂ ಒಳಗೊಂಡಿದೆ. ನಂತರದ ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ಗಣಿತ ದಿನವನ್ನು ಡಿಸೆಂಬರ್ 22 ರಂದು ಆಚರಿಸಲಾಗುತ್ತದೆ. ಅಂದು ದೇಶದಾದ್ಯಂತ ಶಾಲೆಗಳು ಮತ್ತು ಅನೇಕ ವಿಶ್ವವಿದ್ಯಾನಿಲಯಗಳು ಬಹಳಷ್ಟು ಸಂಖ್ಯೆಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ನಡೆಸುತ್ತವೆ.
ರಾಷ್ಟ್ರೀಯ ಗಣಿತ ದಿನದ ಉದ್ದೇಶ :
1 ) ಗಣಿತ ದಿನದ ಆಚರಣೆಯ ಹಿಂದಿನ ಮುಖ್ಯ ಉದ್ದೇಶವೆಂದರೆ ಒಬ್ಬರು ಮತ್ತೊಬ್ಬರನ್ನು ಮೋಸ ಮಾಡಬಾರದೆಂಬ ಹಾಗೂ ತಿಳಿದವರು ತಿಳಿಯದವರಿಗೆ ತಮ್ಮ ಜ್ಞಾನವನ್ನು ತಿಳಿಸಬೇಕು ಎಂಬ ಮಾನವೀಯತೆಯ ಬೆಳವಣಿಗೆಗೆ ಗಣಿತದ ಪ್ರಾಮುಖ್ಯತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು.
2 ) ರಾಷ್ಟ್ರದ ಯುವ ಜನಾಂಗದಲ್ಲಿ ಗಣಿತವನ್ನು ಇಚ್ಚೆಪಟ್ಟು ಕಲಿಯುವ ಕುರಿತು ಸಕಾರಾತ್ಮಕ ಮನೋಭಾವವನ್ನು ಮೂಡಿಸಿ ಪ್ರೇರೇಪಿಸುವುದು. ಇದಕ್ಕಾಗಿ ಹಲವು ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸುವುದು.
3 ) ರಾಷ್ಟ್ರೀಯ ಗಣಿತ ದಿನದಂದು ಗಣಿತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ಆಯೋಜಿಸುವ ಮೂಲಕ ತರಬೇತಿಯನ್ನು ನೀಡುವುದು.
4 ) ರಾಷ್ರೀಯ ಗಣಿತ ದಿನದಂದು ಗಣಿತ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ಸಂಶೋಧನೆಗಾಗಿ ಮತ್ತು ವಿನೂತನ ಚಟುವಟಿಕೆಗಳಿಗಾಗಿ ಬೋಧನಾ - ಕಲಿಕಾ ಸಾಮಗ್ರಿಗಳ ( TEACHING - LEARNING MATERIALS ) ಸಿದ್ಧತೆ, ಅವುಗಳ ಅಭಿವೃದ್ಧಿ , ಉತ್ಪಾದನೆ ಮತ್ತು ಪ್ರಸಾರಕ್ಕೆ ಪ್ರಾಮುಖ್ಯತೆ ನೀಡುವುದು.
ರಾಷ್ಟ್ರೀಯ ಗಣಿತ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ರಾಷ್ಟ್ರದಲ್ಲಿನ ವಿವಿಧ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯ ಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಸೊಸೈಟಿ ಯುನೆಸ್ಕೋ (ಯುನೈಟೆಡ್ ನೇಷನ್ಸ್ ಎಜುಕೇಷನಲ್, ಸೈಂಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಸೇಶನ್) ಮತ್ತು ಭಾರತ ಜೊತೆ ಜೊತೆಯಾಗಿ ಗಣಿತ ಕಲಿಕೆಯನ್ನುಂಟು ಮಾಡಲು ಮತ್ತು ತಿಳಿವಳಿಕೆಯನ್ನು ಪಸರಿಸಲು ಜೊತೆಗೂಡಿ ಕೆಲಸ ಮಾಡುತ್ತಿವೆ.
ಇಷ್ಟೇ ಅಲ್ಲದೆ, ಇದರೊಂದಿಗೆ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರದಲ್ಲಿ ಶಿಕ್ಷಣ ನೀಡಲು ಮತ್ತು ವಿಶ್ವದಾದ್ಯಂತದ ವಿದ್ಯಾರ್ಥಿಗಳಿಗೆ ಮತ್ತು ಕಲಿಯುವವರಿಗೆ ಜ್ಞಾನವನ್ನು ಹರಡಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಭಾರತದ ಎಲ್ಲ ರಾಜ್ಯಗಳು ರಾಷ್ಟ್ರೀಯ ಗಣಿತ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತವೆ. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಗಣಿತದ ರಸಪ್ರಶ್ನೆಗಳನ್ನು ನಡೆಸಲಾಗುತ್ತದೆ. ಗಣಿತದ ಪ್ರತಿಭೆಗಳು ಮತ್ತು ಭಾರತದಾದ್ಯಂತ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಿದ್ದಾರೆ.
ರಾಮಾನುಜನ್‌ಗೆ ಚಿಕ್ಕಂದಿನಿಂದಲೂ ಗಣಿತ ವಿಷಯದ ಬಗ್ಗೆ ಬಹಳ ಆಸಕ್ತಿ ಮತ್ತು ಉತ್ಸಾಹ ಇತ್ತು. ಅದು ಎಷ್ಟರಮಟ್ಟಿಗೆ ಎಂದರೆ, 12 ನೇ ವಯಸ್ಸಿನಲ್ಲೇ ಟ್ರಿಗ್ನಾಮೆಟ್ರಿ ( ತ್ರಿಕೋನಮಿತಿ ) ಯಲ್ಲಿ ಅವರು ನಿಪುಣರಾಗಿದ್ದು, ಯಾರ ಸಹಾಯವೂ ಇಲ್ಲದೆ ಅನೇಕ ಸಿದ್ಧಾಂತಗಳನ್ನು ರೂಪಿಸಿ ಅಭಿವೃದ್ಧಿಪಡಿಸಿದ್ದರು. ನಂತರ, ಅವರಿಗೆ ಕುಂಬಕೋಣಮ್‌ನ ಸರಕಾರಿ ಕಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಹರಾದರೂ ಸಹ, ಇತರೆ ವಿಷಯಗಳಲ್ಲಿ ಆಸಕ್ತಿಯ ಕೊರತೆಯಿಂದಾಗಿ ಅದನ್ನೂ ಕಳೆದುಕೊಂಡರು. ಹೀಗಾಗಿ, ಮನೆ ತೊರೆದ ರಾಮಾನುಜನ್, ಮದ್ರಾಸ್‌ನ ಪಚ್ಚೈಯಪ್ಪ ಕಾಲೇಜಿಗೆ ಸೇರಿದರು.
ನಂತರ 1912 ರಲ್ಲಿ ಇಂಡಿಯನ್ ಮ್ಯಾಥಮ್ಯಾಟಿಕಲ್ ಸೊಸೈಟಿಯ ಸಂಸ್ಥಾಪಕ ರಾಮಸ್ವಾಮಿ ಅಯ್ಯರ್ ಅವರು ಸಹಾಯಾಸ್ತದೊಂದಿಗೆ ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದರು. ಆಗಲೇ, 1913 ರಲ್ಲಿ ಬ್ರಿಟೀಷ್ ನ ಕೇಂಬ್ರಿಡ್ಜ್ ಮೂಲದ ಗಣಿತಶಾಸ್ತ್ರಜ್ಞ ಜಿ.ಎಚ್. ಹಾರ್ಡಿಯವರಿಗೆ ಶ್ರೀನಿವಾಸ ರಾಮಾನುಜನ್ ಪತ್ರ ಬರೆದು ತನಗಿರುವ ಗಣಿತ ವಿಷಯಾಸಕ್ತಿ ಮತ್ತು ಉತ್ಸಾಹವನ್ನು ತಿಳಿಸಿದರು.
ಜಿ. ಹೆಚ್. ಹಾರ್ಡಿ ಅವರು ರಾಮಾನುಜನ್ ಅವರಿಗೆ ಮರುಪತ್ರ ಬರೆದು, ರಾಮಾನುಜನ್ ಅವರ ಪ್ರಮೇಯಗಳು ಮತ್ತು ಇನ್ಫಿನಿಟ್ ಸರಣಿಗಳಿಗೆ (infinite series) ಸಂಬಂಧಿಸಿದ ಕೆಲಸಗಳಿಂದ ಪ್ರಭಾವಿತರಾದ ಹಾರ್ಡಿಯವರು ರಾಮಾನುಜನ್ ರನ್ನು ಲಂಡನ್‌ಗೆ ಆಹ್ವಾನಿಸಿದರು. 1914ರಲ್ಲಿ ರಾಮಾನುಜನ್ ಬ್ರಿಟನ್‌ಗೆ ತೆರಳಿದರು. ಇದಾದ ನಂತರದ ಅವರ ಬದುಕಿನಲ್ಲಿ ಮಹತ್ವದ ತಿರುವು ದೊರೆಯಿತು.
ನಂತರ, ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿನಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರಿಸಲು ಸೇರಿಕೊಂಡ ರಾಮಾನುಜನ್‌ರ ಯಶಸ್ಸಿನ ದಿನಗಳು ಅಲ್ಲಿಂದಲೇ ಪ್ರಾರಂಭವಾದವು. 1917 ರಲ್ಲಿ ರಾಮಾನುಜನ್ ಲಂಡನ್ ಮ್ಯಾಥಮ್ಯಾಟಿಕಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆಯಾದರು.
1918 ರಲ್ಲಿ ಅವರು ರಾಯಲ್ ಸೊಸೈಟಿಯ ಫೆಲೋ ಆಗಿ, ಈ ಸಾಧನೆ ಮಾಡಿದ ಅತ್ಯಂತ ಕಿರಿಯರಲ್ಲಿ ಒಬ್ಬರಾದರು. ಇಂಗ್ಲೆಂಡ್ ನಲ್ಲಿ ಅವರ ಯಶಸ್ಸಿನ ಹೊರತಾಗಿಯೂ, ರಾಮಾನುಜನ್‌ಗೆ ದೇಶದ ಆಹಾರ ಪದ್ಧತಿಗೆ ಒಗ್ಗಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ 1919 ರಲ್ಲಿ ಭಾರತಕ್ಕೆ ವಾಪಾಸ್ಸಾದರು. ನಂತರದ ದಿನಗಳಲ್ಲಿಯೂ ರಾಮಾನುಜನ್ ಅವರ ಆರೋಗ್ಯವು ಹದಗೆಡುತ್ತಲೇ ಇದ್ದುದರಿಂದ ಆಸ್ಪತ್ರೆಗೆ ದಾಖಲಾದರು. ಮತ್ತು ಏಪ್ರಿಲ್ 26, 1920 ರಲ್ಲಿ ಅವರು ತಮ್ಮ 32ನೇ ವಯಸ್ಸಿನಲ್ಲಿ ಇಹಲೋಹ ತ್ಯಜಿಸಿದರು.
ಒಮ್ಮೆ ಆಸ್ಪತ್ರೆಯಲ್ಲಿ ರಾಮಾನುಜನ್ ಅವರನ್ನು ನೋಡಲು ಹಾರ್ಡಿಯವರು ಆಗಮಿಸಿದರು. ಇದೊಂದು ಅವಿಸ್ಮರಣೀಯ ಭೇಟಿ ಎನ್ನಬಹುದಾಗಿದೆ. ಏಕೆಂದರೆ ಈ ಭೇಟಿಯ ನಂತರವೆ 1729 ಎಂಬ ಸಂಖ್ಯೆಯು ಹಾರ್ಡಿ-ರಾಮಾನುಜನ್ ಸಂಖ್ಯೆ ಎಂದು ಕರಸಿಕೊಂಡಿತು.
ಈ ಸಂದರ್ಭವನ್ನು ಹಾರ್ಡಿಯವರ ಮಾತುಗಳಲ್ಲಿ ಹೇಳುವುದಾದರೆ: ಪುಟ್ನೆಯ ಆಸ್ಪತ್ರೆಯಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಒಮ್ಮೆ ಅವರನ್ನು ನೋಡಲು ಹೋಗಿದ್ದ ನೆನಪು. ನಾನು ಟ್ಯಾಕ್ಸಿ ಕ್ಯಾಬ್ ಸಂಖ್ಯೆ 1729 ರಲ್ಲಿ ಸವಾರಿ ಮಾಡಿದ್ದೇನೆ ಮತ್ತು ಸಂಖ್ಯೆಯು ನನಗೆ ಮಂದವಾದದ್ದಾಗಿದೆ ಮತ್ತು ಇದು ಶುಭಕರವಾದ ಶಕುನವಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಟೀಕಿಸಿದೆ. "ಇಲ್ಲ", ಅವರು ಉತ್ತರಿಸಿದರು, "ಇದು ತುಂಬಾ ಆಸಕ್ತಿದಾಯಕ ಸಂಖ್ಯೆಯಾಗಿದೆ; ಇದು ಎರಡು ಘನಗಳ ಮೊತ್ತವನ್ನು ಎರಡು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಬಹುದಾದ ಚಿಕ್ಕ ಸಂಖ್ಯೆಯಾಗಿದೆ." ಎಂದರು.
ಆ ಎರಡು ವಿಭಿನ್ನ ರೀತಿಗಳೆಂದರೆ ; ಒಂದರ ಘನ ಮತ್ತು ಹನ್ನೆರಡರ ಘನಗಳ ಮೊತ್ತ 1729 ಆಗುತ್ತದೆ. ಇನ್ನೊಂದು ರೀತಿಯೆಂದರೆ ಒಂಭತ್ತರ ಘನ ಮತ್ತು ಹತ್ತರ ಘನಗಳ ಮೊತ್ತ 1729 ಆಗುತ್ತದೆ. ಹಾರ್ಡಿಯವರು ಹೇಳುವಂತೆ "ಪ್ರತಿ ಧನಾತ್ಮಕ ಪೂರ್ಣಾಂಕವು ರಾಮಾನುಜನ್ ಅವರ ವೈಯಕ್ತಿಕ ಸ್ನೇಹಿತರಲ್ಲಿ ಒಬ್ಬರಾಗಿದ್ದರು." ಎಂದಿದ್ದಾರೆ. ಗಣಿತ ಲೋಕಕ್ಕೆ ಶ್ರೀನಿವಾಸ ರಾಮಾನುಜನ್ ಕೊಡುಗೆಗಳು ಅಪಾರವಾಗಿವೆ.
ಸಂಖ್ಯಾ ಸಿದ್ಧಾಂತದಲ್ಲಿ ಅವರ ಕೆಲಸವನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ ಮತ್ತು ಅವರು ಸಂಖ್ಯೆಗಳ ವಿಭಜನಾ ಕಾರ್ಯದಲ್ಲಿ ( Partition function ) ಪ್ರಗತಿ ಸಾಧಿಸಿದರು. ರಾಮಾನುಜನ್ ಅವರು ಮುಂದುವರಿದ ಭಿನ್ನರಾಶಿಗಳ (continued fractions) ಪಾಂಡಿತ್ಯಕ್ಕಾಗಿ ಗುರುತಿಸಲ್ಪಟ್ಟರು.
ರಾಮಾನುಜನ್ ಅವರ ಪ್ರತಿಭೆಯನ್ನು ಗಣಿತಜ್ಞರು 18 ಮತ್ತು 19ನೇ ಶತಮಾನದ ಯೂಲರ್ ಮತ್ತು ಜಾಕೋಬಿಗೆ ಸಮಾನಾಗಿ ಪರಿಗಣಿಸಲಾಗಿದೆ. ಗಣಿತವನ್ನೇ ತನ್ನ ಜೀವಿತದ ಕೊನೆಯವರೆಗೂ ಉಸಿರಲ್ಲಿ ಉಸಿರಾಗಿ ಉಸಿರಾಡಿದ ಸರ್ವ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ರ ಕೊಡುಗೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬನ್ನಿ ಗಣಿತವನ್ನು ಮಕ್ಕಳಿಂದ ಹಿಡಿದು ಹಿರಿಯರಾದಿಯಾಗಿ ಎಲ್ಲರೂ ಇಚ್ಚೆಪಟ್ಟು ಕಲಿಯೋಣ.
-ಕೆ. ಎನ್. ಚಿದಾನಂದ . ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ