ಎನ್‌ಐಎ ತನಿಖಾ ತಂಡವನ್ನು ಅಭಿನಂದಿಸಿದ ಸಂಸದ ಕ್ಯಾ. ಚೌಟ
ಮಂಗಳೂರು: ಬಿಜೆಪಿ ಕಾರ್ಯಕರ್ತ ಸುಳ್ಯದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳ ಪೈಕಿ ಒಬ್ಬನಾದ ಬಂಟ್ವಾಳ ತಾಲೂಕಿನ ಕೊಡಾಜೆ ಮೊಹಮ್ಮದ್ ಶರೀಫ್‌ನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿರುವುದಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕ್ಯಾ. ಚೌಟ ಅವರು, ದೇಶವನ್ನೇ ಬೆಚ್ಚಿಬೀಳಿಸಿದ್ದ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗಳ ಪೈಕಿ ಒಬ್ಬನಾದ ಕೊಡಾಜೆ ಮೊಹಮ್ಮದ್ ಶರೀಫ್‌ನನ್ನು ಬಂಧಿಸುವಲ್ಲಿ ಎನ್‌ಐಎ ಅಧಿಕಾರಿಗಳು ಯಶಸ್ವಿಯಾಗಿರುವುದರಿಂದ ಈ ಪ್ರಕರಣದ ತನಿಖೆಗೆ ಇದೀಗ ದೊಡ್ಡ ಗೆಲುವು ಸಿಕ್ಕಿದಂತಾಗಿದೆ ಎಂದಿದ್ದಾರೆ.
ಬಂಧಿತ ಮೊಹಮ್ಮದ್ ಶರೀಫ್ ನಿಷೇಧಿತ ಪಿಎಫ್‌ಐ ಸಂಘಟನೆಯ ರಾಜ್ಯ ಪದಾಧಿಕಾರಿಯಾಗಿದ್ದು, ಈತನ ವಿರುದ್ಧ ದಕ್ಷಿಣ ಕನ್ನಡ ಸೇರಿ ಕರಾವಳಿ ಭಾಗದಲ್ಲಿ ಸಮಾಜಘಾತುಕ ಕೃತ್ಯಗಳ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪವಿದೆ. ಪ್ರವೀಣ್ ಹತ್ಯೆಯಲ್ಲಿಯೂ ಉಳಿದ ಆರೋಪಿಗಳ ಜತೆ ಶಾಮೀಲಾಗಿದ್ದ ಈತ ಘಟನೆ ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಆದರೆ, ಬಹ್ರೇನ್‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಾದರೆ ಶರೀಫ್‌ನನ್ನು ಎನ್‌ಐಎ ಟೀಂ ರೆಡ್‌ಹ್ಯಾಂಡ್ ಆಗಿ ಬಂಧಿಸಿರುವುದು ನಿಜಕ್ಕೂ ಈ ಪ್ರಕರಣದ ತನಿಖೆಗೆ ಸಂದ ಗೆಲುವು.
ಈ ನಿಟ್ಟಿನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಕಳೆದ ಎರಡೂವರೆ ವರ್ಷಗಳಿಂದ ವಿವಿಧ ಆಯಾಮಗಳಲ್ಲಿ ಹೆಚ್ಚಿನ ಮುತುವರ್ಜಿಯಿಂದ ತನಿಖೆ ನಡೆಸುತ್ತಿರುವ ಇಡೀ ಎನ್‌ಐಎ ಅಧಿಕಾರಿಗಳ ತಂಡವನ್ನು ಅಭಿನಂದಿಸುವುದಾಗಿ ಕ್ಯಾ. ಚೌಟ ಇದೇ ವೇಳೆ ತಿಳಿಸಿದ್ದಾರೆ.
ನವ ಭಾರತವನ್ನು ಮುನ್ನಡೆಸುವ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ ದೇಶದ್ರೋಹಿಗಳ ವಿರುದ್ದ ಶೂನ್ಯ ಸಹಿಷ್ಣುತೆ ಹೊಂದಿದ್ದು, ತಪ್ಪಿತಸ್ಥರರಿಗೆ ಕಠಿಣ ಶಿಕ್ಷೆ ಶತ ಸಿದ್ದ. ಕರಾವಳಿ ಸೇರಿದಂತೆ ದೇಶದಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪಾತಕಿಗಳು ಎಷ್ಟೇ ವರ್ಷಗಳು, ಎಲ್ಲೇ ಅಡಗಿ ಕುಳಿತಿದ್ದರೂ ಅಂಥಹ ದೇಶದ್ರೋಹಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಎನ್‌ಐಎನಂಥಹ ನಮ್ಮ ತನಿಖಾ ವ್ಯವಸ್ಥೆ ಬಲಿಷ್ಠವಾಗಿದೆ. ಈ ಹಿನ್ನಲೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಇನ್ನು ಕೂಡ ತಲೆಮರೆಸಿಕೊಂಡಿರುವ ಕೆಲವು ಆರೋಪಿಗಳನ್ನು ಎನ್‌ಐಎ ತಂಡ ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ತಮಗಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.
ಕರ್ನಾಟಕದಲ್ಲಿ ಒಲೈಕೆ ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರವು ಡಿಜೆಹಳ್ಳಿ, ಹುಬ್ಬಳ್ಳಿ ಗಲಭೆಯಂತಹ ಸುಮಾರು 175 ಸಮಾಜಘಾತುಕ ಸಂಚಿನ ಪ್ರಕರಣಗಳನ್ನು ಕೈಬಿಡುವ ಪ್ರಯತ್ನ ಮಾಡಿದೆ. ಇಂಥಹ ಪರಿಸ್ಥಿತಿಯಲ್ಲಿ ಪ್ರವೀಣ್ ಹತ್ಯೆ ಕೇಸ್ ಎನ್‌ಐಎ ಸಂಸ್ಥೆಗೆ ವಹಿಸಿರುವುದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು. ಇಲ್ಲದೆ ಹೋಗಿದ್ದರೆ ಈ ಹತ್ಯೆ ಕೇಸ್‌ನ್ನು ಕೂಡ ಕಾಂಗ್ರೆಸ್ ಸರ್ಕಾರ ಮುಚ್ಚಿ ಹೋಗುತ್ತಿತ್ತು. ಹೀಗಿರುವಾಗ, ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಎನ್‌ಐಎ ತನಿಖೆಯಿಂದ ನ್ಯಾಯ ದೊರೆಯಲಿದೆ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.
ಕೊಡಾಜೆ ಮೊಹಮ್ಮದ್ ಶರೀಫ್ ಕೈವಾಡ
ಬಿಜೆಪಿ ಯುವಮೋರ್ಚಾ ಮುಖಂಡನಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು 2022ರ ಜು. 22ರಂದು ಸುಳ್ಯದ ಬೆಳ್ಳಾರೆಯಲ್ಲಿ ಪಿಎಎಫ್‌ಐ ಸಂಘಟನೆ ಸದಸ್ಯರು ಬರ್ಬರವಾಗಿ ಹತ್ಯೆ ಮಾಡಿದ್ದರು. ಆಗಸ್ಟ್ 4ರಂದು ಈ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದ್ದು, ಇಲ್ಲಿವರೆಗೆ 20 ಮಂದಿಯನ್ನು ಬಂಧಿಸಿದೆ. ಈಗ ಬಂಧಿತ ಕೊಡಾಜೆ ಮೊಹಮ್ಮದ್ ಕೂಡ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ತಂಡದ ಸದಸ್ಯರಿಗೆ ನೀಡಲಾಗಿದ್ದ ಶಸ್ತ್ರಾಸ್ತ್ರ ತರಬೇತಿಯಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ಎನ್‌ಐಎ ಲುಕ್‌ಔಟ್ ನೋಟಿಸ್ ಕೂಡ ಜಾರಿಗೊಳಿಸಿತ್ತು.
ಮಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪನೆಗೆ ಶಕ್ತಿಮೀರಿ ಪ್ರಯತ್ನ: ಕ್ಯಾ.ಚೌಟ
ಎನ್‌ಐಎ ತನಿಖಾ ತಂಡದಿಂದಾಗಿ ಪ್ರವೀಣ್ ನೆಟ್ಟಾರು ಪ್ರಕರಣ ಭೇದಿಸಿ 20 ಮಂದಿ ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟುವುದಕ್ಕೆ ಸಾಧ್ಯವಾಗಿದೆ. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ರಕ್ಷಣೆ ದೊರೆಯಬೇಕಾದರೆ ಕರಾವಳಿಯಲ್ಲಿ ಸ್ಲೀಪರ್ ಸೆಲ್‌ನಂತೆ ಇರುವ ದೇಶದ್ರೋಹಿಗಳ ಕೃತ್ಯ ಮಟ್ಟ ಹಾಕುವುದಕ್ಕೆ ಕರಾವಳಿಗೆ ಸದಾ ಎನ್‌ಐಎ ಸಂಸ್ಥೆಯ ಬಲಬೇಕಿದೆ. ನಮ್ಮ ಕಾರ್ಯಕರ್ತರನ್ನು ಹತ್ಯೆ ಮಾಡಿ ದಕ್ಷಿಣ ಕನ್ನಡ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಕಟ್ಟುವ ಮೂಲಕ ಅಭಿವೃದ್ಧಿಯನ್ನು ಹಳಿತಪ್ಪಿಸಲು ನೋಡುತ್ತಿರುವ ದುಷ್ಟ ಶಕ್ತಿಗಳ ನಿಯಂತ್ರಿಸಬೇಕಿದೆ. ಈ ಹಿನ್ನಲೆಯಲ್ಲಿ ಮಂಗಳೂರನ್ನು ಕೇಂದ್ರೀಕರಿಸಿ ಈ ಭಾಗದಲ್ಲಿ ಎನ್‌ಐಎ ಘಟಕ ಸ್ಥಾಪಿಸಬೇಕೆಂದು ಮತ್ತೊಮ್ಮೆ ಆಗ್ರಹಿಸುತ್ತಿದ್ದೇನೆ. ಸ್ಲೀಪರ್ ಸೆಲ್‌ಗಳಿಗೆ ಕುಮ್ಮಕ್ಕು-ಉತ್ತೇಜನ ನೀಡುತ್ತಿರುವ ಡ್ರಗ್ಸ್ ಮಾಫಿಯಾವನ್ನೂ ಬೇರುಸಮೇತ ಕಿತ್ತೆಸೆಯುವುದಕ್ಕೆ ಮಂಗಳೂರಿನಲ್ಲಿ ಆದಷ್ಟು ಬೇಗ ಎನ್‌ಐಎ ಘಟಕ ಸ್ಥಾಪನೆಯಾಗಬೇಕು. ಈ ಸಂಬಂಧ ಸಂಸದನಾಗಿ ನಾನು ಕೂಡ ಶಕ್ತಿಮೀರಿ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಕ್ಯಾ. ಚೌಟ ಇದೇ ಸಂದರ್ಭ ಭರವಸೆ ನೀಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ