ಮಂಗಳೂರು: ನಮ್ಮ ಸಂಸ್ಥೆಯ (ಪಿಎ ಪ್ರಥಮ ದರ್ಜೆ ಕಾಲೇಜು) 768 ವಿದ್ಯಾರ್ಥಿಗಳಲ್ಲಿ 27 ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಶುಲ್ಕವನ್ನು ಯುಯುಸಿಎಂಎಸ್ (ಯುನಿಫೈಡ್ ಯೂನಿವರ್ಸಿಟಿ ಕಾಲೇಜ್ ಮ್ಯಾನೇಜ್‌ಮೆಂಟ್ ಸಿಸ್ಟಮ್) ಮೂಲಕ ಪಾವತಿಸುವಾಗ ಸಮಸ್ಯೆಯನ್ನು ಎದುರಿಸಿರುತ್ತಾರೆ. ಹೊಸ ಶಿಕ್ಷಣ ನೀತಿಯ ಮೊದಲು, ಪರೀಕ್ಷಾ ಶುಲ್ಕಗಳನ್ನು ಕಾಲೇಜಿನ ಕಛೇರಿ ಸಿಬ್ಬಂದಿಗಳ ಮೂಲಕ ಸಂಗ್ರಹಿಸಿ ಅದನ್ನು ನಂತರದಲ್ಲಿ ವಿಶ್ವವಿದ್ಯಾಲಯಕ್ಕೆ ಕಛೇರಿ ಸಿಬ್ಬಂದಿಗಳು ತಲುಪಿಸಲಾಗುತ್ತಿತ್ತು. ಆದರೆ ಹೊಸ ಶಿಕ್ಷಣ ನೀತಿಯ ನಂತರದಲ್ಲಿ ಯುಯುಸಿಎಂಎಸ್ ತಂತ್ರಾಂಶಗಳ ಮೂಲಕ ನೇರವಾಗಿ ವಿದ್ಯಾರ್ಥಿಗಳೇ ಪರೀಕ್ಷಾ ಶುಲ್ಕ ಪಾವತಿಸತಕ್ಕದ್ದು.
ಪ್ರಸಕ್ತ ಸಾಲಿನ ಪರೀಕ್ಷಾ ಶುಲ್ಕ ಪಾವತಿ ಸಮಯದಲ್ಲಿ ನಮ್ಮ ಕಾಲೇಜಿನ 27 ವಿದ್ಯಾರ್ಥಿಗಳ ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಸ್ಟೇಟಸ್ ಅನ್ನು 'INITIATED' ಎಂದು ತೋರಿಸಲಾಗಿದೆ ಮತ್ತು ಅವರ ಬ್ಯಾಂಕ್ ಖಾತೆಯಿಂದ ಮೊತ್ತವನ್ನು ಕಡಿತಗೊಳಿಸಲಾಗಿದೆ. ವಿದ್ಯಾರ್ಥಿಗಳು ಈ ವಿಷಯವನ್ನು ಕಾಲೇಜಿನ ಗಮನಕ್ಕೆ ತಂದಾಗ ಅದನ್ನು ವಿಶ್ವವಿದ್ಯಾಲಯಕ್ಕೆ ತಿಳಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ ವಿವಿಧ ಸಂಸ್ಥೆಗಳ ಸುಮಾರು 3000 ವಿದ್ಯಾರ್ಥಿಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳ ವಿವರಗಳನ್ನು ತಿಳಿಯಲು ವಿಶ್ವವಿದ್ಯಾಲಯವು ಗೂಗಲ್ ಫಾರ್ಮ್ ಅನ್ನು ಪ್ರಸಾರ ಮಾಡಿತ್ತು ಮತ್ತು ಕಾಲೇಜುಗಳು ಫಾರ್ಮ್ ಅನ್ನು ಭರ್ತಿ ಮಾಡಿ ಕೊಟ್ಟಿರುತ್ತಾರೆ.
ನಂತರ, ವಿಶ್ವವಿದ್ಯಾನಿಲಯದ ಅಧಿಕಾರಿಗಳು 28ನೇ ನವೆಂಬರ್ 2024 ರಂದು ನಿಗದಿಪಡಿಸಲಾದ ಆನ್‌ಲೈನ್ ಸಭೆಯಲ್ಲಿ ಎಲ್ಲಾ ಕಾಲೇಜಿನ ಪ್ರಾಂಶುಪಾಲರಿಗೆ, ಮೇಲಿನ ಸಮಸ್ಯೆ ಇರುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಯುಯುಸಿಎಂಎಸ್ ಮೂಲಕ ಇನ್ನೊಮ್ಮೆ ಪಾವತಿಸಬೇಕು ( ಮೊದಲು ಪಾವತಿಯಾದ ಹಣ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಕೆಲವೇ ದಿನಗಳಲ್ಲಿ ಮರು ಜಮಾವಣೆ ಮಾಡಲಾಗುವುದು) ಮತ್ತು ಇನ್ನೊಮ್ಮೆ ಪಾವತಿಸಲು ವಿಫಲರಾದ ವಿದ್ಯಾರ್ಥಿಗಳ ವಿವರ UUCMS ಡೇಟಾದಲ್ಲಿ ಪ್ರತಿಬಿಂಬಿಸದ ಕಾರಣ ಹಾಲ್ ಟಿಕೆಟ್ ಸಮಸ್ಯೆಗಳನ್ನು ಎದುರಿಸಬೇಕಾಗ ಬಹುದು ಎಂದು ನಿರ್ದೇಶಿಸಲಾಗಿತ್ತು.
ವಿಶ್ವವಿದ್ಯಾಲಯದ ನಿರ್ದೇಶನದಂತೆ ಈ ಸೂಚನೆಯನ್ನು ವಿದ್ಯಾರ್ಥಿಗಳಿಗೂ ತಿಳಿಸಲಾಗಿತ್ತು, ಆದರೆ ಮತ್ತೆ ಪರೀಕ್ಷಾ ಶುಲ್ಕ ಪಾವತಿಸುವ ವಿಚಾರವಾಗಿ ಈ ವಿದ್ಯಾರ್ಥಿಗಳಿಂದ ಪ್ರತಿರೋಧ ವ್ಯಕ್ತವಾಗಿತ್ತು. ಇದರಿಂದ ಅತೃಪ್ತರಾದ ಕೆಲವು ವಿದ್ಯಾರ್ಥಿಗಳು ಹಾಗೂ ಪೋಷಕರು ಪರೀಕ್ಷಾಂಗ ಕುಲಸಚಿವರನ್ನು ಭೇಟಿಮಾಡಿ ಚರ್ಚಿಸಿದ್ದರು. ಅದರಿಂದಲೂ ತೃಪ್ತರಾಗದ ಕೆಲ ವಿದ್ಯಾರ್ಥಿಗಳು ಮತ್ತು ಪೋಷಕರು ಈ ವಿಷಯವನ್ನು ಸ್ಪಷ್ಟಪಡಿಸಲು ಕಾಲೇಜು ಅಧಿಕಾರಿಗಳನ್ನು ಸಂಪರ್ಕಿಸಿದರು ಮತ್ತು ಕಾಲೇಜು ಅಧಿಕಾರಿಗಳು ಇದು ಕಾಲೇಜು ವ್ಯವಸ್ಥೆಯಿಂದ ಉಂಟಾಗುವ ಸಮಸ್ಯೆಯಲ್ಲ ಇದು ಸಂಪೂರ್ಣವಾಗಿ ಯುಯುಸಿಎಂಎಸ್ ವ್ಯವಹಾರವಾಗಿದ್ದು, ಇದು ಕರ್ನಾಟಕ ಸರ್ಕಾರದಿಂದ ಪ್ರಾರಂಭಿಸಲ್ಪಟ್ಟಿದೆ ಎಂದು ಸ್ಪಷ್ಟವಾಗಿ ತಿಳಿಸಿರುತ್ತಾರೆ. ಪರೀಕ್ಷಾ ಶುಲ್ಕವನ್ನು ಮತ್ತೊಮ್ಮೆ ಪಾವತಿಸುವಂತೆ ವಿಶ್ವವಿದ್ಯಾನಿಲಯ ಸೂಚಿಸಿರುವ ಬಗ್ಗೆ ಕಾಲೇಜು ಅಧಿಕಾರಿಗಳು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತಿಳಿಸಿದರು.
ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿದ್ದು, ವಿಶ್ವವಿದ್ಯಾಲಯದ ಸೂಚನೆಗಳನ್ನು ಅನುಸರಿಸಿ ವಿದ್ಯಾರ್ಥಿಗಳಿಗೆ ವಿಷಯವನ್ನು ತಿಳಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಇತರ ಎಲ್ಲ ಸಂಸ್ಥೆಗಳಲ್ಲಿಯೂ ಇದನ್ನೇ ಅನುಸರಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ನೇರವಾಗಿ ಯುಯುಸಿಎಂಎಸ್‌ನ ರಾಜ್ಯ ಯೋಜನೆಗಳ ಖಾತೆಗೆ ಪಾವತಿಸುವುದು ಮತ್ತು ವಿಶ್ವವಿದ್ಯಾನಿಲಯಕ್ಕೂ ಹಾಗೂ ಕಾಲೇಜಿಗೆ ಈ ವಿಷಯದಲ್ಲಿ ಯಾವುದೇ ನಿಯಂತ್ರಣವಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು.
ಈ ವಿಷಯದ ಬಗ್ಗೆ ತೃಪ್ತರಾಗದ ನಮ್ಮ ಕಾಲೇಜಿನ 2ನೇ ವರ್ಷದ ಬಿಎಸ್ಸಿ (ಎಫ್‌ಎನ್‌ಡಿ) ವಿದ್ಯಾರ್ಥಿನಿ ಆಯಿಷಾ ಹಫ್ನಾ ಎಂಬುವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕಾಲೇಜು ಅಕ್ರಮವಾಗಿ ಪರೀಕ್ಷಾ ಶುಲ್ಕವನ್ನು ಕೇಳುತ್ತಿದ್ದಾರೆ ಎಂದು ನಮೂದಿಸಿ ದೂರು ದಾಖಲಿಸಿದ್ದು, ದೂರು ದಾಖಲಿಸಿದ ನಂತರ, ವಿದ್ಯಾರ್ಥಿಗಳು ಮತ್ತು ಪೋಷಕರು ಅದೇ ದಿನ ಗೌರವಾನ್ವಿತ ಉಪಕುಲಪತಿಗಳನ್ನು ಭೇಟಿಯಾಗಿದ್ದರು. ಉಪಕುಲಪತಿಯವರು ಅವರ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜಿನ ಅಧಿಕಾರಿಗಳು, ಉಪಕುಲಪತಿಗಳು ಮತ್ತು ರಿಜಿಸ್ಟ್ರಾರ್ (ಮೌಲ್ಯಮಾಪನ) ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ ಹಾಗೂ ಕಾಲೇಜು ಅಧಿಕಾರಿಗಳು ವಿಶ್ವವಿದ್ಯಾನಿಲಯದ ಅಧಿಕಾರಿಗಳೊಂದಿಗೆ ವೈಯಕ್ತಿಕವಾಗಿ ಮತ್ತು ಯುಯುಸಿಎಂಎಸ್‌ಗೆ ಪೋರ್ಟಲ್ ಮೂಲಕ ದೂರುಗಳನ್ನು ಎತ್ತುವ ಮೂಲಕ ನಿಯಮಿತವಾಗಿ ಸಂಪರ್ಕದಲ್ಲಿದ್ದರು.
ಯುಯುಸಿಎಂಎಸ್‌ನ ಮುಖ್ಯ ನಿಯಂತ್ರಣವು ಬೆಂಗಳೂರಿನಲ್ಲಿರುವ ರಾಜ್ಯ ತಂಡದ ಬಳಿ ಇರುವುದರಿಂದ ವಿಶ್ವವಿದ್ಯಾಲಯದ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ನಿರಂತರ ಶ್ರಮಿಸುತ್ತಿದ್ದರು.
ಅಂತಿಮವಾಗಿ, 7ನೇ ಡಿಸೆಂಬರ್ 2024 ರಂದು, ಮಧ್ಯಾಹ್ನ 1.30 ರ ಸುಮಾರಿಗೆ ನಾವು ರಿಜಿಸ್ಟ್ರಾರ್ (ಮೌಲ್ಯಮಾಪನ) ಮತ್ತು ಗೌರವಾನ್ವಿತ ಉಪಕುಲಪತಿಗಳಿಂದ ಮೌಖಿಕ ಸಂವಹನವನ್ನು ಸ್ವೀಕರಿಸಿ ವಿಷಯವನ್ನು ಪರಿಹರಿಸಲಾಗಿದೆ ಮತ್ತು ಕಾಲೇಜಿನ ಸಿಬ್ಬಂದಿಯನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಲು ನಿರ್ದೇಶನ ನೀಡಿದರು. ಅದರಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದರು ಮತ್ತು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಯಿತು. ಪ್ರಾಂಶುಪಾಲರು ದೂರು ನೀಡಿದ್ದ ವಿದ್ಯಾರ್ಥಿನಿಗೆ ದೂರವಾಣಿ ಮೂಲಕ ಸಂಪರ್ಕಿಸಿದರು (ದೂರುದಾರರ ತಂದೆ ಕರೆ ಸ್ವೀಕರಿಸುತ್ತಿದ್ದಂತೆ ವಿಷಯ ತಿಳಿಸಲಾಯಿತು) ಮತ್ತು ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿನಿಗೆ ಕರೆ ಮಾಡಿದಾಗ ಪೋಷಕರು ಜೊತೆಯಲ್ಲಿದ್ದರು ಮತ್ತು ಅವರಿಗೆ ವಿಷಯಗಳನ್ನು ಮನವರಿಕೆ ಮಾಡಿ ಕೊಡಲಾಗಿತ್ತು. ಇದೇ ವೇಳೆಗೆ ವಿದ್ಯಾರ್ಥಿಗಳು ಪೋಷಕರೊಂದಿಗೆ ಈಗಾಗಲೇ ವಿಶ್ವವಿದ್ಯಾನಿಲಯದಲ್ಲಿದ್ದು ವಿಷಯವು ಬಗೆಹರಿದಿದೆ ಎಂದು ತಿಳಿದರು. ಅವರು ಗೌರವಾನ್ವಿತ ಉಪಕುಲಪತಿಗಳನ್ನು ಭೇಟಿ ಮಾಡಿ ಮಾಹಿತಿಯನ್ನು ಪಡಕೊಂಡರು. ಗೌರವಾನ್ವಿತ ಉಪಕುಲಪತಿಗಳು ಅವರಿಗೆ ವಿಷಯ ಪರಿಹರಿಸಲಾಗಿದೆ ಎಂದೂ ಎಲ್ಲಾ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಈ ವಿದ್ಯಾರ್ಥಿಗಳು ಮತ್ತು ಪೋಷಕರು ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗಿದ್ದರು ಮತ್ತು ಪ್ರಾಂಶುಪಾಲರು ಸಹ ಅವರನ್ನು ಮಾತನಾಡಿಸಿದರು ಮತ್ತು ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಆ ಸಮಯದಲ್ಲಿ ಹಾಲ್ ಟಿಕೆಟ್ ಲಭ್ಯವಿಲ್ಲದ ಕಾರಣ ಪರೀಕ್ಷೆಯ ದಿನದಂದು ಹಾಲ್ ಟಿಕೆಟ್ (ಎಲ್ಲಾ 768 ವಿದ್ಯಾರ್ಥಿಗಳಿಗೆ) ಅನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಮತ್ತು ದೂರನ್ನು ಹಿಂಪಡೆಯಬಹುದೆಂದು ಅದರ ಅವಶ್ಯಕತೆ ಇರುವುದಿಲ್ಲವೆಬುದನ್ನು ಪ್ರಾಂಶುಪಾಲರು ಮತ್ತು ಕುಲಪತಿಯವರು ಮನವರಿಕೆ ಮಾಡಿಕೊಟ್ಟರು.
ಪ್ರವೇಶ ಪತ್ರವು ಇಂದಿನ (9ನೇ ಡಿಸೆಂಬರ್ 2024) ಮಧ್ಯಾಹ್ನದಿಂದ ಲಭ್ಯವಿದ್ದು ಇದನ್ನು ಯುಯುಸಿಎಂಎಸ್ ಮೂಲಕ ವಿಶ್ವವಿದ್ಯಾಲಯವು ಸಕ್ರಿಯಗೊಳಿಸಿದೆ. ಪರೀಕ್ಷೆಯ ದಿನದಂದು ಎಲ್ಲಾ 768 ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಂಗ್ರಹಿಸಲು ನಾವು ಈಗಾಗಲೇ ಸಂದೇಶವನ್ನು ಹಂಚಿಕೊಂಡಿದ್ದೇವೆ. ಏಕೆಂದರೆ ಅವರು ಹಾಲ್ ಟಿಕೆಟ್ ಸಂಗ್ರಹಿಸುವ ಸಲುವಾಗಿ ಅಧ್ಯಯನ ಅವಧಿಯ ಮಧ್ಯದಲ್ಲಿ ಕಾಲೇಜಿಗೆ ಪ್ರಯಾಣಿಸಬೇಕಾಗಿಲ್ಲ. ಹಾಗಾಗಿ ಅವರು ತಮ್ಮ ಅಮೂಲ್ಯ ಸಮಯವನ್ನು ಅಧ್ಯಯನಕ್ಕಾಗಿ ಬಳಸಿಕೊಳ್ಳಬಹುದೆಂದು ತಿಳಿಸಲಾಯಿತು.
ಆದರೆ ಇಂದು (9ನೇ ಡಿಸೆಂಬರ್ 2024) ಇ-ಪೇಪರ್ ಒಂದರ ಮೂಲಕ ಆಯಿಶಾ ಹಫ್ನಾ, ಕುಮಾರಿ ರೇಷ್ನಾ ಮಿಸ್ರಿಯಾ, ಪೋಷಕರಾದ ಅಬ್ದುಲ್ ಖಾದರ್ ಮತ್ತು ವಕೀಲ ಶಹೀದ್ ಬದ್ದೂರ್ ಅವರು ಪತ್ರಿಕಾಗೋಷ್ಠಿ ಆಯೋಜಿಸಿ ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿರುದ್ಧ ಆರೋಪಿಸಿದ್ದಾರೆ ಎಂದು ತಿಳಿದು ಆಘಾತಕಾರಿಯಾಗಿದೆ. ಕಾಲೇಜು ಅಧಿಕಾರಿಗಳು ಹಾಲ್ ಟಿಕೆಟ್ ನಿರಾಕರಿಸುತ್ತಿದ್ದಾರೆ ಮತ್ತು ಪ್ರಕರಣವನ್ನು ಹಿಂಪಡೆಯುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಹೊರಿಸಿರುತ್ತಾರೆ ಮತ್ತು ವಿಶ್ವವಿದ್ಯಾನಿಲಯವು ಈಗಾಗಲೇ 7ನೇ ಡಿಸೆಂಬರ್ 2024 ರಂದು ಮಧ್ಯಾಹ್ನ ವಿಷಯವನ್ನು ಪರಿಹರಿಸಿದೆ ಎಂದು ನಾವು ಈ ಮೂಲಕ ತಿಳಿಸುವುದಾಗಿ ಕಾಲೇಜಿನ ಮುಖ್ಯಸ್ಥರು ಹೇಳಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ