'ಪರಿಸರ ಹಾಗೂ ಆರೋಗ್ಯಕ್ಕೆ ಪೂರಕವಾಗುವ ಕೃಷಿಯ ಬಗ್ಗೆ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಬೇಕು'

Upayuktha
0

 


ಮೂಡುಬಿದಿರೆ: ನಮ್ಮ ಮಕ್ಕಳು ವಿದ್ಯೆ ಕಲಿತು ಒಳ್ಳೆಯ ಉದ್ಯೋಗ ದೊರಕಿಸಿಕೊಳ್ಳುವುದು ತಪ್ಪಲ್ಲ. ಅದರ ಜೊತೆಗೆ ಅವರಲ್ಲಿ ಕೃಷಿಯ ಬಗ್ಗೆ ಆಸಕ್ತಿಯನ್ನು ಬೆಳೆಸಿ ಅದನ್ನೊಂದು ಹವ್ಯಾಸವನ್ನಾಗಿ ಮಾಡಿಕೊಳ್ಳುವಂತೆ ಅವರಿಗೆ ಪ್ರೇರಣೆ ನೀಡುವುದರಿಂದ  ಒಳ್ಳೆಯ ಪರಿಸರ ನಿರ್ಮಾಣಕ್ಕೆ ಮಹತ್ತರ ಕೊಡುಗೆ ಸಲ್ಲಿಸಿದಂತಾಗುತ್ತದೆ ಮತ್ತು ನಮ್ಮ ಆರೋಗ್ಯ ಸುಧಾರಣೆಗೂ ಇದು ನೆರವಾಗಬಲ್ಲುದು ಎಂಬುದಾಗಿ ಸ್ಥಳೀಯ ಮಯೂರಿ ಜವುಳಿ ಮಳಿಗೆಯ ಮಾಲಕರು ಹಾಗೂ ಸ್ವತಃ ಪ್ರಗತಿಪರ ಸಾವಯವ ಕೃಷಿಕರಾಗಿಯೂ ಗುರುತಿಸಿಕೊಂಡಿರುವ  ರಾಜೇಂದ್ರ ಕುಮಾರ್ ಅವರು ತಿಳಿಸಿದರು.


ಸಮಾಜ ಮಂದಿರದಲ್ಲಿ ನ. 30ರಂದು ನಡೆದ  ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಇದರ ನವೆಂಬರ್ ತಿಂಗಳ ಮಾಸಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.


ಹಿರಿಯರಿಂದ ಬಂದ ಕೃಷಿಯನ್ನು ಮುಂದುವರಿಸಿಕೊಂಡು ಹೋಗುವುದೇ ಒಂದು ಸವಾಲಾಗಿರುವ ಈ ಕಾಲಘಟ್ಟದಲ್ಲಿ ನಮ್ಮ ನಮ್ಮ ವೃತ್ತಿಯ ಜೊತೆ ಕೃಷಿಯನ್ನೂ ಜೋಡಿಸಿಕೊಂಡು ಇದಕ್ಕೆ ಪೂರಕವಾಗಿ ಕನಿಷ್ಠ ಒಂದು ಹಸುವನ್ನಾದರೂ ಸಾಕುವುದರಿಂದ ಕೃಷಿಯಲ್ಲಿ ಖುಷಿಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದರು. 


ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ.) ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಎಸ್.ಪಿ.ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಯಾವುದೇ ಲಾಭದ ಉದ್ದೇಶವಿಲ್ಲದೆ ಕೃಷಿಕರಿಗಾಗಿ ಪ್ರತಿಷ್ಠಾನ ಹಮ್ಮಿಕೊಂಡಿರುವ ಕಾರ್ಯಗಳ ಬಗ್ಗೆ ವಿವರಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಂಗಳೂರಿನ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಅವರು “ಅಡಿಕೆ ಮರಕ್ಕೆ ತಗಲುವ ರೋಗಗಳ ಬಗ್ಗೆ ವಿಶೇಷ ಪರಿಹಾರ” ಎಂಬ ಬಗ್ಗೆ ಉಪನ್ಯಾಸ ನೀಡಿ ರೈತರೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಪರಿಹಾರಗಳನ್ನು ಸೂಚಿಸಿದರು.


ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ವಿಭಾಗದ ಪ್ರಾಧ್ಯಾಪಕ ಡಾ. ರಾಹುಲ್ ಪಾಠಕ್ ಅವರು ಡಿ.10ರಿಂದ 16ರ ತನಕ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ವಿರಾಸತ್ ಜೊತೆಗೆ ನಡೆಯಲಿರುವ ಕೃಷಿ ಸಿರಿ ಹಾಗೂ  ರೈತರ ಕೃಷಿ ಸಂತೆಯ ಬಗ್ಗೆಯೂ ವಿವರಗಳನ್ನಿತ್ತರು. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕೂಡಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರಾಜೇಂದ್ರ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.


ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಬಿ.ಅಭಯ ಕುಮಾರ್ ಅಧ್ಯಕ್ಷತೆ ವಹಿಸಿದ್ದು ಕಾರ್ಯದರ್ಶಿ ಹರೀಶ್ ಕೋಟ್ಯಾನ್ ವರದಿ ವಾಚಿಸಿದರು. ಗುಣಪಾಲ ಮುದ್ಯ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ರಾಜವರ್ಮ ಬೈಲಂಗಡಿ ವಂದಿಸಿದರು.                         


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top