ಭಾರತೀಯರಿಗೆ ಸಂಸ್ಕೃತ ಭಾಷೆ ಎಂದರೆ ಇಂದೂ ಆದರವಿದೆ. ಜನಮಾನಸದಲ್ಲಿ ಅದಕ್ಕೊಂದು ಗೌರವವಿದೆ. ಅದನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಿ ತಿರಸ್ಕರಿಸುವವರು ಕೂಡ ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಗಳಲ್ಲಿ ಅದಕ್ಕಿರುವ ಮಹತ್ವವನ್ನು ಅಲ್ಲಗಳೆಯಲಾರರು.
ದೇಶದ ಯಾವುದೇ ಪ್ರದೇಶದ, ಯಾವುದೇ ಭಾಷೆಯ ಜನರಿಗೆ ಸಂಸ್ಕೃತ ಪದಗಳ ಕುರಿತು ಹೆಚ್ಚೇನೂ ಹೇಳಬೇಕಾಗಿಲ್ಲ. ಏಕೆಂದರೆ ಅವರಾಡುವ ಭಾಷೆಯ ಸುಮಾರು ಶೇ.70 ಕ್ಕೂ ಹೆಚ್ಚು ಶಬ್ದಗಳು ಸಂಸ್ಕೃತ ಮೂಲದವುಗಳು.
ಭಾರತದಲ್ಲಿರುವ ಪ್ರಮುಖ ಆಡುಭಾಷೆಗಳಿಗೆ ಸಂಸ್ಕೃತವೇ ಆಧಾರಶಿಲೆ. ಆಸೇತು ಹಿಮಾಚಲ ಎಂದರೆ ಉತ್ತರದ ಹಿಮಾಲಯದ ತುದಿ ಕಾಶ್ಮೀರದಿಂದ ದಕ್ಷಿಣದ ಸಾಗರ ತುದಿ ಕನ್ಯಾಕುಮಾರಿ, ಪಶ್ಚಿಮ ಸಿಂಧು ಸಾಗರದಿಂದ ದೂರದ ಪೂರ್ವದ ಅರುಣಾಚಲ ಪ್ರದೇಶದ ದೀಬ್ರುಗಡವರೆಗೂ ಎಲ್ಲ ಭಾರತೀಯರೂ ಸಾಂಸ್ಕೃತಿಕವಾಗಿ ಒಂದೇ ಆಗಿದ್ದಾರೆ. ಹೀಗೆ ಅವರನ್ನು ಬೆಸೆದಿದ್ದು, ಪೂರ್ವ ಕಾಲದಲ್ಲಿ ಸಂಸ್ಕೃತ ಭಾಷೆ. ನಂತರ ಅದರ ಪ್ರಭಾವದಿಂದ ಜನಿಸಿದ ಪ್ರಾಂತೀಯ ಭಾಷೆಗಳು. ಸಂಸ್ಕೃತದ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳು. ಕಾಶಿಯಿಂದ ರಾಮೇಶ್ವರ, ದ್ವಾರಕೆಯಿಂದ ಕಾಮಾಖ್ಯಾವರೆಗಿನ ತೀರ್ಥಯಾತ್ರೆಗಳು, ಇಂದಿನ ಇರಾನದ ತುದಿ ಅಫಘಾನಿಸ್ತಾನದಿಂದ ಬರ್ಮಾವರೆಗಿನ ಅಂದಿನ ಭಾರತ ಉಪಖಂಡವು ಸಾಂಸ್ಕೃತಿಕವಾಗಿ ಒಂದೇ ಧಾರೆಯಲ್ಲಿ ಬೆಸೆದುಕೊಂಡಿತ್ತು. ಅದಕ್ಕೆ ಪ್ರಮುಖ ಕಾರಣ ಸಂಸ್ಕೃತ ಭಾಷೆ.
ಭಾರತದಲ್ಲಿ ಸಂಸ್ಕೃತ ಭಾಷೆಯ ಓದು ಅಧ್ಯಯನಗಳು ಇಂದಿಗೂ ಎಂದಿನಂತೆ ಸಾಗಿವೆ. ಸಾವಿರಾರು ವರ್ಷಗಳ ಹಿಂದೆಯೂ ಸಂಸ್ಕೃತ ಭಾಷೆ ಜನರಾಡುವ ಭಾಷೆಯಾಗಿತ್ತು. ಹತ್ತನೇ ಶತಮಾನದ ಹೊತ್ತಿಗೆ ಸಂಸ್ಕೃತ ಭಾರತ ಉಪಖಂಡವಷ್ಟೇ ಅಲ್ಲ ದಕ್ಷಿಣ ಏಶಿಯದ ದೂರದ ದೇಶಗಳಲ್ಲೂ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿತ್ತು. ಕ್ರಮೇಣ ಪ್ರಾಕೃತ ಮತ್ತು ಪ್ರಾಂತೀಯ ಭಾಷೆಗಳು ಬೆಳೆದರೂ, ಸಂಸ್ಕೃತದ ಸ್ಥಾನಮಾನಕ್ಕೇನೂ ಚ್ಯುತಿಯುಂಟಾಗಿರಲಿಲ್ಲ. ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಹರಡಿಕೊಂಡಿದ್ದ ಗುರುಕುಲಗಳು ಸಂಸ್ಕೃತ ಭಾಷೆಯಲ್ಲೇ ಭಾಷೆ, ವಿಜ್ಞಾನ, ಗಣಿತ ಹಾಗೂ ಶಾಸ್ತ್ರಗಳನ್ನು ಬೋಧಿಸುತ್ತಿದ್ದವು. ವಿದೇಶಗಳಿಂದಲೂ ವಿದ್ಯಾರ್ಥಿಗಳು ಕಲಿಯಲು ಬರುತ್ತಿದ್ದರು.
ಭಾರತ ಉಪಖಂಡದಲ್ಲಿ ಪ್ರಾಚೀನ ಕಾಲದಿಂದಲೂ ಮೊಘಲ್ ದೊರೆಗಳ ಕಾಲದವರೆಗೂ ಇದು ರೂಢಿಯಲ್ಲಿತ್ತು. ಯಾವಾಗ ಬ್ರಿಟಿಷ್ ಕಾಲದಲ್ಲಿ ಮೆಕಾಲೆ ಪ್ರಣೀತ ಇಂಗ್ಲೀಷ್ ಶಿಕ್ಷಣ ಪದ್ಧತಿಯ ಶಾಲೆಗಳು ಆರಂಭವಾದವೋ ಅಂದಿಗೆ ಗುರುಕುಲಗಳೂ, ಆಶ್ರಮಗಳೂ, ಪಾಠಶಾಲೆಗಳೂ ನಿಂತುಹೋದವು. ರಾಜರ, ಸಂಸ್ಥಾನಿಕರ, ಸ್ಥಳೀಯ ಆಡಳಿತಗಾರರ ಆಶ್ರಯವೂ ಸ್ಥಗಿತಗೊಂಡಿತು. ಅಂದಿನಿಂದ ಸಂಸ್ಕೃತ ಭಾಷೆ ಜನರಿಂದ ದೂರ ಸರಿಯತೊಡಗಿತು.
ಇಂಗ್ಲೀಷ್ ಉದ್ಯೋಗದ ಭಾಷೆಯಾಗಿ ಸ್ಥಾಪಿತವಾದದ್ದೂ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂಸ್ಕೃತ ಭಾಷೆಯನ್ನು ಉದ್ದೇಶಪೂರ್ವಕವಾಗಿ ತುಳಿದಿದ್ದೂ ಇದಕ್ಕೆ ಕಾರಣವಾಗಿತ್ತು.
ಸಂಸ್ಕೃತವು ಕೇವಲ ಅಧ್ಯಾತ್ಮದ, ಮಂತ್ರಗಳು ಹಾಗೂ ಪೂಜೆ, ಅರ್ಚನೆಯ ಭಾಷೆ ಎಂದು ತಪ್ಪು ತಿಳಿದುಕೊಂಡಿದ್ದರು ಅವರು. ಖಗೋಳ ಶಾಸ್ತ್ರ, ಗಣಿತ, ವೈದ್ಯಶಾಸ್ತ್ರ, ಲೋಹ ವಿಜ್ಞಾನ, ಜೀವಶಾಸ್ತ್ರ, ತತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಅದು ಸಾಧಿಸಿದ ವಿಕ್ರಮವನ್ನು ವಿರೋಧಿಗಳು ಅರಿಯದೇ ಹೋದರು.
ವಸಾಹತುಶಾಹಿ ಶಿಕ್ಷಣ ನೀತಿ ಸ್ವಾತಂತ್ರಾನಂತರವೂ ಮುಂದುವರೆದಿದ್ದರಿಂದ ಸಂಸ್ಕೃತದ ಬಳಕೆ ನಿಜಕ್ಕೂ ಶೋಚನೀಯ ವಾಗತೊಡಗಿತು.
ಕೊಲಂಬಿಯ ವಿಶ್ವವಿದ್ಯಾಲಯದ ಅಧ್ಯಾಪಕ ಡಾ. ಶೆಲ್ಡಾನ್ ಪೋಲಾಕ್ ಕೆಲ ವರ್ಷಗಳ ಹಿಂದೆ ಡೆತ್ ಆಫ್ ಸಂಸ್ಕೃತ ಎಂಬ ತನ್ನ ಪ್ರಬಂಧದಲ್ಲಿ ಮಂಡಿಸಿದ ವಿಚಾರಗಳನ್ನು ಹಲವು ಭಾರತೀಯ ಚಿಂತಕರು ಒಪ್ಪಲಿಲ್ಲ. ಸಂಸ್ಕೃತ ಮೃತಭಾಷೆ ಎಂದು ಹಲವರು ಗುಲ್ಲೆಬ್ಬಿಸಿ ಅದನ್ನು ಜನಮಾನಸದಿಂದ ದೂರ ಮಾಡಲು ಯತ್ನಿಸಿದರೂ, ಅದು ಶಾಲೆ, ಕಾಲೇಜು, ಪಾಠಶಾಲೆಗಳಲ್ಲಿ ಇನ್ನೂ ಬೆಳೆದುಕೊಂಡೇ ಬಂದಿತು. ಸಂಸ್ಕೃತವನ್ನು ವಿರೋಧಿಸುವವರು ಒಂದು ಮಾತು ನೆನಪಿಡಬೇಕು, ಅದೆಂದರೆ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಿಗೆ ಸಂಸ್ಕೃತಕ್ಕಿಂತ ಇಂಗ್ಲೀಷ್‌ನಿಂದಲೇ ಹೆಚ್ಚು ಅಪಾಯವಿದೆ. ಈ ಮಾತನ್ನು ಮರೆಯಬಾರದು.
ಸಂಸ್ಕೃತ ಭಾಷೆಯು ಇಂದು ಭಾರತದ ಸಾಂಸ್ಕೃತಿಕ ಐಕ್ಯತೆಗಾಗಿ ಪೂರಕ ಶಕ್ತಿಯಾಗುವ ಸಾಮರ್ಥ್ಯ ಹೊಂದಿದೆ. ಪ್ರಾಂತೀಯ ಭಾಷೆಗಳ ಜೊತೆಗೆ ಅದು ತನ್ನ ಆಧಾರ ಶಿಲೆಯ ಸ್ಥಾನಮಾನವನ್ನು ಭದ್ರಪಡಿಸಿಕೊಳ್ಳಬೇಕಾಗಿದೆ. ದೇಶದ ಯಾವ ಭಾಷೆಯಲ್ಲಾದರೂ ಹೊಸ ಶಬ್ದ ಟಂಕಿಸಲು ಸಂಸ್ಕೃತ ಜ್ಞಾನ ಅತ್ಯವಶ್ಯಕ. ಎಂದಿಗೆ ಅದು ಶ್ರೀಸಾಮಾನ್ಯನ ಭಾಷೆಯಾಗುವುದೋ ಆಗಲೇ ಅದರ ಸಾಮರ್ಥ್ಯವು ಅರಿವಿಗೆ ಬಂದೀತು.
ನಮ್ಮ ನರನಾಡಿಗಳಲ್ಲಿ ಪ್ರವಹಿಸುವ ಸಮೃದ್ಧ ಸಂಸ್ಕೃತಿಯ ಪ್ರತೀಕವೇ ಸಂಸ್ಕೃತ ಭಾಷೆ. ಈ ಭಾಷೆಯನ್ನು ನಾವು ಕಳೆದುಕೊಂಡರೆ ಅದರಲ್ಲಿ ಜೀವಂತವಾಗಿರುವ ಒಂದು ಸಮೃದ್ಧ ಪರಂಪರೆಯನ್ನೇ ಕಳೆದುಕೊಂಡಂತಾಗುವುದು. ಭಾರತ ಎಂಬ ಅಸ್ಮಿತೆಯೇ ದೂರವಾಗುವುದು.
ನಾವೆಲ್ಲ ಭಾರತೀಯರು, ವಿಶೇಷವಾಗಿ ಕನ್ನಡಿಗರು ಸಂಸ್ಕೃತ ಭಾಷೆ ಕಲಿಕೆಯನ್ನು ಮರೆತರೆ ಐದು ಸಾವಿರ ವರ್ಷಗಳಿಂದಲೂ ಅವಿಚ್ಛಿನ್ನವಾಗಿ ಹರಿದು ಬರುತ್ತಿರುವ ನಮ್ಮ ಪರಂಪರೆಗೆ ನಾವೇ ದ್ರೋಹ ಬಗೆದಂತಾಗುವುದು.
ಇದೀಗ ಸಂಸ್ಕೃತ ಭಾಷೆ ಕಲಿಯಲು ಹಲವು ಮಾರ್ಗಗಳಿವೆ. ಸಂಸ್ಕೃತ ಭಾರತೀ ಸೇರಿದಂತೆ ಆಸಕ್ತರಿಗೆ ಸಂಸ್ಕೃತ ಭಾಷೆ ಕಲಿಸಲು ಕಲಿಸಲು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ವಿಭಿನ್ನ ಐಐಟಿಗಳು ಹೀಗೆ ಹತ್ತು ಹಲವು ಸಂಸ್ಥೆಗಳೂ, ವಿಶ್ವವಿದ್ಯಾಲಯಗಳೂ ಅನೇಕ ಕೋರ್ಸುಗಳನ್ನು ಆನ್‌ಲೈನ್ ಮೂಲಕ ನಡೆಸುತ್ತಿವೆ. ಸಂಸ್ಕೃತವನ್ನು ಇಂದು ಮನೆಯಲ್ಲಿ ಕುಳಿತೇ ಕಲಿಯಬಹುದಾಗಿದೆ.
ಉದ್ಯೋಗ ಮಾಡುತ್ತ ಬಿಡುವಿನ ಸಮಯದಲ್ಲಿ ಸಂಸ್ಕೃತ ಶಿಕ್ಷಣ ಪಡೆಯಬಹುದಾಗಿದೆ. ಆ ದಿಶೆಯಲ್ಲಿ ಇದೀಗ ಸಂಸ್ಕೃತ ಭಾರತೀ ಭಗವದ್ಗೀತೆ ಮೂಲಕ ಸಂಸ್ಕೃತ ಭಾಷೆ ಪ್ರಸಾರ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
ಸಂಸ್ಕೃತ ಭಾರತೀ ಸಾಧನೆ
ಜಾತಿ ಮತ ಪಂಥಗಳ ಭೇದವಿಲ್ಲದೇ ಸಂಸ್ಕೃತ ಭಾಷೆಯನ್ನು ಮನೆ ಮನೆಗೆ ತಲುಪಿಸಿ, ಸಂಸ್ಕೃತವನ್ನು ಜನರ ಆಡುಭಾಷೆಯನ್ನಾಗಿ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಸಂಸ್ಕೃತ ಭಾರತೀ ಒಂದು ಅಖಿಲ ಭಾರತೀಯ ಸಂಘಟನೆ. ದೇಶದ ಐದು ಸಾವಿರ ಪ್ರದೇಶಗಳು ಮತ್ತು 49 ದೇಶಗಳಲ್ಲಿ ತನ್ನ ಚಟುವಟಿಕೆಯನ್ನು ಹೊಂದಿದೆ. ಸುಮಾರು ಇಪ್ಪತ್ತು ಸಾವಿರ ಕಾರ್ಯಕರ್ತರು ಸಂಸ್ಕೃತದೊಂದಿಗೆ ತಮ್ಮನ್ನು ಜೋಡಿಸಿಕೊಂಡಿದ್ದು ಒಂದೂವರೆ ಲಕ್ಷ ಸಂಸ್ಕೃತ ಶಿಕ್ಷಕರ ಬೃಹತ್ ತಂಡವಿದೆ. ಕರ್ನಾಟಕದ ಮತ್ತೂರು ಸೇರಿ ಒಟ್ಟು ಎಂಟು ಸಂಸ್ಕೃತ ಗ್ರಾಮಗಳಿದ್ದು, ಸಂಸ್ಕೃತ ಸಂಭಾಷಣೆ ನಡೆಸುವ ಆರು ಸಾವಿರಕೂ ಹೆಚ್ಚು ಮನೆಗಳಿವೆ.
ಸಂಸ್ಕೃತ ವಿಕಿಪೀಡಿಯ, 13 ಭಾಷೆಗಳಲ್ಲಿ ಅಂಚೆ ಮೂಲಕ ಸಂಸ್ಕೃತ ಶಿಕ್ಷಣ, 350 ಕ್ಕೂ ಹೆಚ್ಚು ಪ್ರಕಾಶಿತ ಪುಸ್ತಕಗಳು ಹೀಗೆ ಈ ಸಂಸ್ಥೆ ಹತ್ತಾರು ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಸಂಸ್ಕೃತ ಭಾಷೆಯ ಶಿಕ್ಷಣ ಮತ್ತು ಪ್ರಸಾರಕ್ಕಾಗಿ ಸಂಸ್ಥೆ ಹತ್ತು ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಅಲ್ಲಲ್ಲಿ ಆಸಕ್ತರಿಗಾಗಿ ಏರ್ಪಡಿಸುತ್ತಿದ್ದು ಇದೊಂದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ಪ್ರತಿ ರವಿವಾರ ಸಂಸ್ಕೃತ ಬಾಲ ಕೇಂದ್ರಗಳು, ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಚೈತ್ರ ಸಂಸ್ಕೃತಮ್ ಎಂಬ ಕಾರ್ಯಕ್ರಮವೂ ನಡೆಯುತ್ತಲಿದೆ. ಇದಲ್ಲದೇ ಸರಳ ಸಂಸ್ಕೃತ ಪರೀಕ್ಷೆ, ಶಿಕ್ಷಕ ಪ್ರಶಿಕ್ಷಣ ವರ್ಗಗಳು, ಕಾಶೀ ಮತ್ತು ದೆಹಲಿಯಲ್ಲಿ ಸಂವಾದ ಶಾಲೆಗಳನ್ನು ನಡೆಸುತ್ತಿದೆ. ಸಂಸ್ಕೃತ ಭಾಷೆಯನ್ನು ಭಾರತದ ಮುಖ್ಯವಾಹಿನಿಗೆ ತರುವುದರ ಮೂಲಕ ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಪ್ರೋತ್ಸಾಹ ನೀಡುವುದು ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ.
ಗೀತಾಮೃತಮ್: ಏಕಕಂಠದಿಂದ 1008 ಸಾಮೂಹಿಕ ಗೀತಾ ಪಠಣ
ಸಂಸ್ಕೃತ ಭಾರತೀ ಉತ್ತರ ಕರ್ನಾಟಕ ಪ್ರಾಂತವು ಇದೇ ಡಿಸೆಂಬರ್ 15 ರಂದು ಗೀತಾ ಜಯಂತಿ ಅಂಗವಾಗಿ 1008 ಕಂಠಗಳಿಂದ ಏಕಕಾಲಕ್ಕೆ ಭಗವದ್ಗೀತಾ ಸಾಮೂಹಿಕ ಪಠಣ ಮೊದಲಾದ ಕಾರ್ಯಕ್ರಮಗಳನ್ನು ಗೀತಾಮೃತಮ್ ಎಂಬ ಹೆಸರಿನಿಂದ ಏರ್ಪಡಿಸಿದೆ.
ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರ ಪಕ್ಕದಲ್ಲಿ ಇರುವ ಕರ್ನಾಟಕ ಜಿಮಖಾನಾ ಅಸೋಸಿಯೇಷನ್ ಮೈದಾನದಲ್ಲಿ ಅಂದು ಮಧ್ಯಾಹ್ನ ಮೂರು ಗಂಟೆಗೆ ವಸ್ತು ಪ್ರದರ್ಶಿನಿ ಉದ್ಘಾಟನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಉಪನ್ಯಾಸಗಳು, ರೂಪಕಗಳು, ಗೀತೆಯ 18 ಅಧ್ಯಾಯಗಳನ್ನು ಕಂಠಸ್ಥ ಮಾಡಿರುವ ಸಾಧಕರಿಗೆ ಸನ್ಮಾನ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಈ ಕಾರ್ಯಕ್ರಮದ ಆಕರ್ಷಣೆಗಳಾಗಿವೆ.
ವೇದಿಕೆಯ ಮೇಲೆ ಭಗವದ್ಗೀತೆಯ 12 ಮತ್ತು 15 ನೇ ಅಧ್ಯಾಯಗಳನ್ನು 1008 ಕ್ಕೂ ಹೆಚ್ಚು ಜನರು ಸಾಮೂಹಿಕ ಪಠಣ ಮಾಡಲಿದ್ದಾರೆ. ಸಮಾವೇಶದಲ್ಲಿ ಅಂದಾಜು ನಾಲ್ಕು ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಈಗಲೂ ಈ ಗೀತಾ ಪಠಣದಲ್ಲಿ ಭಾಗವಹಿಸಲು ಇಚ್ಛಿಸುವವರು 9481486255, 08362004829 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ