ಸಂಸ್ಕೃತಿ ಸಂರಕ್ಷಣೆ, ಮೌಲ್ಯಸಂವರ್ಧನೆ ದಾಸಸಾಹಿತ್ಯದ ಮೂಲಕ ಮಾತ್ರ ಸಾಧ್ಯ: ನ್ಯಾ. ವಿ. ಶ್ರೀಶಾನಂದ

Upayuktha
0

ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯಿಂದ ೬ನೇ ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನ ಸಂಪನ್ನ 



ಬೆಂಗಳೂರು: ಶ್ರೀ ಶ್ರೀಪಾದರಾಜ ಮಠಾಧೀಶರಾದ ಶ್ರೀ ಸುಜಯನಿಧಿತೀರ್ಥ ಶ್ರೀಪಾದಂಗಳವರ ಪೋಷಕರಾಗಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್(ರಿ)ಯು ಶ್ರೀಕೃಷ್ಣ ಸಮೂಹ ವಿದ್ಯಾ ಸಂಸ್ಥೆ ಮತ್ತು ಶ್ರೀ ಶ್ರೀಪಾದರಾಜ ರಿಸರ್ಚ್ ಇಂಟರ್ ನ್ಯಾಷನಲ್ ಫೌಂಡೇಷನ್ ಟ್ರಸ್ಟ್ ಹಾಗೂ ಶ್ರೀ ಪ್ರಸನ್ನವೆಂಕಟ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್ಗಳ ಸಹಯೋಗದಿಂದ ನ. 17 ಮತ್ತು 18 ರಂದು ಶ್ರೀಕೃಷ್ಣ ಸಮೂಹ ವಿದ್ಯಾ ಸಂಸ್ಥೆ ಸಭಾಂಗಣ, ಐಟಿಐ ಲೇಔಟ್, ಪೂರ್ಣಪ್ರಜ್ಞ ವಿದ್ಯಾಪೀಠದ ಹತ್ತಿರ, ಬೆಂಗಳೂರಿನಲ್ಲಿ 6ನೇ ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು.


ಶ್ರೀಮದಾರ್ಯ ಅಕ್ಷೋಭ್ಯ ತೀರ್ಥ ಮೂಲ ಮಹಾಸಂಸ್ಥಾನ ಬಾಳಗಾರು ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ಅಕ್ಷೋಭ್ಯ ರಾಮಪ್ರಿಯತೀರ್ಥ ಶ್ರೀಪಾದಂಗಳವರು ಸಮ್ಮೇಳನದ ಉದ್ಘಾಟನೆ ಮಾತನಾಡುತ್ತಾ, ಭಾರತೀಯ ವೇದ ವಿಜ್ಞಾನ ಪರಂಪರೆಯನ್ನು ಅಲ್ಲಿಯ ಮಹಾನ್ ಚಿಂತನೆಯನ್ನು ಕುರಿತು ಅಧ್ಯಯನ, ಸಂಶೋಧನ ಹಾಗೂ ಪ್ರಸರಣ ಮಾಡುತ್ತಿರುವ ರಾಷ್ಟ್ರೀಯ ವೇದವಿಜ್ಞಾನ ಸಂಸ್ಥೆ. ಮುಳಬಾಗಿಲು ಶ್ರೀಪಾದರಾಜ ಮಠದ ಕೀರ್ತಿಶೇಷ ಪೂಜ್ಯ ಶ್ರೀ ವಿಜ್ಞಾನ ನಿಧಿ ತೀರ್ಥ ಶ್ರೀಪಾದರ ಕನಸಿನ ಕೂಸು. ಈಗಾಗಲೇ ಅನೇಕ ಅಂತಾರಾಷ್ಟ್ರೀಯ ಸಮ್ಮೇಳನ, ಸಮಾವೇಶ ಹಾಗೂ ಕಾರ್ಯಾಗಾರಗಳನ್ನು ನಡೆಸಿ ಅನೇಕ ವಿಜ್ಞಾನಿಗಳನ್ನು, ಧೀಮಂತರನ್ನು, ಚಿಂತಕರನ್ನು ಈ ದಿಸೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ, ನೂರಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿ, ನೂರಾರು ಜನ ಅಧ್ಯಯನಶೀಲರಿಗೆ ಮಾರ್ಗದರ್ಶನ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.


ಅಂತಾರಾಷ್ಟ್ರೀಯ ಖ್ಯಾತಿಯ ಹರಿದಾಸಸಾಹಿತ್ಯ ವಿದ್ವಾಂಸ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಉಪಸ್ಥಿತಿಯಲ್ಲಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿರವರ ಜೀವನ-ಸಾಧನೆಯನ್ನು ಪರಿಚಯಿಸುವ ಡಾ. ಲಕ್ಷ್ಮಿಕಾಂತ ಮೊಹರೀರ ರಚಿಸಿರುವ ‘ಮಹತ್ತನ್ನು ಚಿಂತಿಸು- ಬೃಹತ್ತನ್ನು ಸಾಧಿಸು’ (ತೃತೀಯ ಆವೃತ್ತಿ) ಮತ್ತು6ನೇ ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನದ ಪ್ರಬಂಧ ಸಂಕಲನ, ಕೋಲಾರ ವಾಣಿ ದಿನಪತ್ರಿಕೆ ಹೊರ ತಂದ ವಿಶೇಷ ಪುರವಣಿyನ್ನು ಲೋಕಾರ್ಪಣೆಗೊಳಿಸಲಾಯಿತು.


ಅಮೇರಿಕದ ಯೋಗಸಂಸ್ಕೃತಮ್ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ವಿ. ವೆಂಕಟಕೃಷ್ಣಶಾ ಶಾಸ್ತ್ರಿ, ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ. ವಿ. ಪರಮಶಿವಮೂರ್ತಿ, ಪ್ರಸನ್ನ ವೆಂಕಟ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಡಾ. ಸುಭಾಸ್. ಬಿ. ಕಾಖಂಡಕಿ ಮತ್ತು  ರಾಷ್ಟೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್(ರಿ)ನ ಕಾರ್ಯದರ್ಶಿ ಹೆಚ್.ಬಿ. ಲಕ್ಷ್ಮಿ ನಾರಾಯಣ, ಆಡಳಿತ ಮಂಡಳಿ ನಿರ್ದೇಶಕ ಡಾ ಸುರೇಶ ಪಾಟೀಲ, ಸಹ ನಿರ್ದೇಶಕ ಡಾ ವಾದಿರಾಜು, ಎಚ್ಎಸ್ ಶ್ಯಾಮಾಚಾರ್, ಶ್ರೀಧರ್ ಅವರುಗಳು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.



ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ಈಗಾಗಲೇ 75ಕ್ಕೂ ಹೆಚ್ಚು ಗ್ರಂಥಗಳನ್ನು, ನಲವತ್ತು ಧ್ವನಿಸುರಳಿಗಳನ್ನು ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ನಾಲ್ಕು ಸಹಸ್ರಕ್ಕೂ ಹೆಚ್ಚು ಉಪನ್ಯಾಸ-ಪ್ರವಚನಗಳನ್ನು ನೀಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ. ದಾಸ ಸಾಹಿತ್ಯವನ್ನು ನಾನಾ ರಾಷ್ಟ್ರಗಳಲ್ಲಿ ಪ್ರಭಾವಪೂರ್ಣವಾಗಿ ಪ್ರಸರಿಸಿ, ದಾಸಸಾಹಿತ್ಯವನ್ನು ಅವರು ನಿಜವಾದ ಅರ್ಥದಲ್ಲಿ ವಿಶ್ವಸಾಹಿತ್ಯ ಮಾಡಿದ್ದಾರೆ ಎಂದು ಕೃತಿಕಾರರಾದ ಕಲಬುರ್ಗಿಯ ಡಾ ಲಕ್ಷ್ಮಿಕಾಂತ ಮೊಹರೀರ ತಿಳಿಸಿದರು 


ಸಮ್ಮೇಳನದ ವಿವಿಧ ಅಧಿವೇಶನಗಳು ಡಾ. ಸುಭಾಸ್ ಬಿ ಕಾಖಂಡಕಿ, ಡಾ. ಬಿ.ಎಸ್. ಅನಿಲ್ ಕುಮಾರ್ ಬೊಮ್ಮಘಟ್ಟ, ಪ್ರೊ. ಪವನ್ ಕುಮಾರ್, ಡಾ.ಎ.ಮಾಧವ ಉಡುಪ, ಡಾ. ವೃಂದ ಸಂಗಮ, ಡಾ. ವಾಸುದೇವ ಅಗ್ನಿಹೋತ್ರಿ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಡಾ. ಶೀಲಾದಾಸ್ ಮುಂತಾದವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಸಂಶೋಧಕರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.


ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬೇಲಿಮಠಾಧೀಶರಾದ ನಿ. ಪ್ರ. ಶಿವಾನುಭವ ಚರಮೂರ್ತಿ ಶಿವರುದ್ರಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ, ಪ್ರಸ್ತುತ ಸಂದರ್ಭದಲ್ಲಿ ಈ ಸಮ್ಮೇಳನ ಮಹತ್ವದ್ದಾಗಲಿದೆ. ಮನುಷ್ಯ ಸಂಬಂಧಗಳು ಶಿಥಿಲವಾಗುತ್ತಿರುವ ಬಹಳಷ್ಟು ಜನರನ್ನು ಏಕಾಂಗಿತನ ಕಾಡುತ್ತಿರುವ, ಕುಟುಂಬ ವ್ಯವಸ್ಥೆ ಕುಸಿಯುತ್ತಿರುವ, ನಂಬಿ ಬಂದಿದ್ದ ಪರಂಪರಾಗತ ಮೌಲ್ಯಗಳು ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ಸಂಸ್ಕೃತಿ ಸಂರಕ್ಷಣೆ, ಮೌಲ್ಯಸಂವರ್ಧನೆಯ ಕೆಲಸ ತುರ್ತಾಗಿ ಆಗಬೇಕಿದೆ. ಎಲ್ಲರೂ ಯಾಂತ್ರಿಕ ವ್ಯಾವಹಾರಿಕ ವ್ಯವಸ್ಥೆಯ ಭಾಗವಾಗಿ ಬಹು ರಾಷ್ಟ್ರೀಯ ವ್ಯವಸ್ಥೆ, ಜಾಗತೀಕರಣ, ಮಿತಿಮೀರಿದ ನಾಗರೀಕರಣ, ಕೊಳ್ಳುಬಾಕ ಸಂಸ್ಕೃತಿ, ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂಸ್ಕೃತಿ ಹಾಗೂ ಲೋಕನೀತಿಯ ಸಂರಕ್ಷಣೆ ವಿಶೇಷವಾಗಿ ತುರ್ತಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ದಾಸಸಾಹಿತ್ಯ ಮುಂದಿನ ದಿನಗಳಲ್ಲಿ ಮಹತ್ವದ್ದಾಗಲಿದೆ ಎಂದು ತಮ್ಮ ಸಮಾರೋಪ  ನುಡಿಯಲ್ಲಿ ತಿಳಿಸಿದರು.


ಶ್ರೀಕೃಷ್ಣ ಸಮೂಹ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷಡಾ. ಎಂ. ರುಕ್ಮಾಂಗದ ನಾಯ್ಡು, ಬಿ ಹರಿದಾಸ ಸಾಹಿತ್ಯ ವಿದ್ವಾಂಸ ಡಾ. ಅನಂತಪದ್ಮನಾಭ ರಾವ್, ಯೋಗಸಂಸ್ಕೃತಮ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ವಿ. ವೆಂಕಟಕೃಷ್ಣ ಶಾಸ್ತ್ರಿ, ನಾಡಿನ ಅನೇಕ ಗಣ್ಯರು ಭಾಗವಹಿಸಿದ್ದರು.


ಈ ಸಮ್ಮೇಳನದಲ್ಲಿ ವಿಶೇಷವಾಗಿ ನಾಡಿನ ಪ್ರಖ್ಯಾತ ಹಿರಿಯ ಪತ್ರಕರ್ತ ಎಸ್. ಕೆ. ಶೇಷಚಂದ್ರಿಕಾ ಮತ್ತು ಹರಿದಾಸ ಸಾಹಿತ್ಯಕ್ಕೆ ಸೇವೆ ಸಲ್ಲಿಸಿರುವ ಗೌರವಾನ್ವಿತರಾದ ಹ.ರಾ. ನಾಗರಾಜಾಚಾರ್ಯ, ಅನಂತಪದ್ಮ ನಾಭರಾವ್, ಲಕ್ಷ್ಮಿಕಾಂತ ಮೋಹರೀರ, ನಾ. ಗೀತಾಚಾರ್ಯ, ಎನ್. ಕೆ. ರಾಮಶೇಷನ್ ಇವರುಗಳಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.


ದಾಸವಾಣಿ ಕರ್ನಾಟಕ ನಿರ್ವಾಹಕ ಜಯರಾಜ್ ಕುಲಕರ್ಣೀ ಮತ್ತು ಪದ್ಮ ಎಸ್ ಆಚಾರ್ಯ ನೇತೃತ್ವದಲ್ಲಿ ಅನೇಕ ಭಜನಾ ಮಂಡಲಿಗಳ ಸಾಮೂಹಿಕ ನಾಮಸಂಕೀರ್ತನ ಮತ್ತು ಕೋಲಾಟ ಪ್ರಸ್ತುತ ಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top